Monday, 9 September 2024

ಬಸವ ಮೂಲ, ಸನಾತನ ಶೈವ ಮೂಲ!

 


"ಷಣ್ಮುಖನಿಗೆ ಪ್ರಸಾದ ಕೊಡುವುದನ್ನು ಮರೆತ ವೃಷಭನೆನ್ನುವ ಗಣನನ್ನು ಶಿವನು ಬಸವನಾಗಿ ಭೂಮಿಯಲ್ಲಿ ಜನಿಸಿ ಶಿವಭಕ್ತ ಜಂಗಮರಿಗೆ ಪ್ರಸಾದ ವಿನಿಯೋಗಿಸಿ ಪ್ರಾಯಶ್ಚಿತ್ತ ಮಾಡಿಕೊಂಡು ಕೈಲಾಸಕ್ಕೆ ಹಿಂತಿರುಗು ಎಂದು ಶಪಿಸುತ್ತಾನೆ. ಹೀಗೆ ವೃಷಭನು ಬಸವನಾಗಿ ಬಾಗೇವಾಡಿ ಅಗ್ರಹಾರದ (ಸಂದಣಿಪ ವಿಪ್ರಸಂತಾನದಿಂಡಿದಿಡಿರ್ಪ, ಶಿವಪುರಾಣಾಗಮಕುಲಂಗಳಿಂದೆಸೆದಿರ್ಪ ಶಿವಶಾಸ್ತ್ರಘೋಷ ಸಂಗೀತದಿಂದಿಡಿದಿರ್ಪ ಅಗ್ರೇಶ್ವರಂ ಕಮ್ಮೆ ಕುಲದಿಂದೆ ಮೆರೆದಿರ್ಪ ವಿಪ್ರನಿರ್ಪಂ ಮಾದಿರಾಜ) ಮಾದಿರಾಜನ ಪತ್ನಿ ಮಾದಲಾಂಬೆಯ ಗರ್ಭದಲ್ಲಿ ಜನ್ಮವೆತ್ತಿ ಜಂಗಮ ಸೇವೆ ಕೈಗೊಂಡು ಪ್ರಾಯಶ್ಚಿತ್ತಕ್ಕೆ ಅನುವಾದನು" ಎಂಬುದು ’ಬಸವರಾಜ ದೇವರ ರಗಳೆ’ಯ ಸಂಕ್ಷಿಪ್ತ ಬಸವಮೂಲ.


ಬಸವನಂತೆಯೇ ರೇಣುಕ, ನಂಬಿಯಣ್ಣ, ಮಹಾದೇವಿಯಕ್ಕರೂ ಶಾಪಗ್ರಸ್ತರಾಗಿ ಭೂಲೋಕದಲ್ಲಿ ಜನ್ಮವೆತ್ತಿದರು ಎಂಬ ಪೌರಾಣಿಕ ಕತೆಗಳು ಈ ರಗಳೆಯಂತೆಯೇ ರಚಿತಗೊಂಡಿವೆ. ಈ ರಗಳೆಯು ಸಾಹಿತ್ಯಕ ಅಂಶಗಳಿಂದ ಮಹತ್ವದ್ದೆನ್ನಿಸಬಹುದೇ ಹೊರತು ಕಥನದಿಂದಲ್ಲ. ಇದರ ಕಥನವು ಅತ್ಯಂತ ಕಾಲ್ಪನಿಕವೂ ರೋಚಕವೂ ಮತ್ತು ಪವಾಡ ಮಹಿಮೆಯನ್ನೂ ಒಳಗೊಂಡ ಭಾರತದ ಅನೇಕ ಪುರಾಣ ಪುಣ್ಯಕತೆಗಳಂತೆಯೇ ಇದೆ. ಅದಲ್ಲದೆ ಈ ರಗಳೆಯ ಸಾಹಿತ್ಯಿಕ ತಂತ್ರವು ಭೋಗಣ್ಣ, ನಂಬಿಯಣ್ಣ, ಮಹಾದೇವಿಯಕ್ಕನ ಪುರಾಣಗಳಲ್ಲಿಯೂ ಕಾಣುವುದರಿಂದ ಇಂತಹ ಕಥಾತಂತ್ರವು ಅಂದಿನ ಕಾಲದಲ್ಲಿ ಮೇಲ್ಪಂಕ್ತಿಯಾಗಿತ್ತೆನಿಸುತ್ತದೆ. ಹಾಗೆ ನೋಡಿದರೆ ಈ ರೀತಿಯ ಕಥಾ ತಂತ್ರ ಮಾದರಿಯು ಇತ್ತೀಚಿನವರೆಗಿನ ಪುರಾಣ ಹರಿಕಥೆಗಳಲ್ಲದೆ ಪೌರಾಣಿಕ ನಾಟಕ ಸಿನೆಮಾಗಳಲ್ಲಿಯೂ ಕಾಣಬಹುದು. ಅಂತಹ ಒಂದು ಜನಪ್ರಿಯ ಮಾದರಿಯನ್ನು ಹರಿಹರ ಸೃಷ್ಟಿಸಿದ್ದಾನೆ. ಅಥವಾ ಆಗಲೇ ಜಾರಿಯಿದ್ದ ಒಂದು ಸಿದ್ಧ ಮಾದರಿಯನ್ನು ರಗಳೆಯ ತಂತ್ರಕ್ಕೆ ಅಳವಡಿಸಿಕೊಂಡಿದ್ದಾನೆ. 


ಬಿ. ಎಲ್. ರೈಸ್ ಅವರ ಮೈಸೂರು ಗೆಜೆಟಿಯರ್ ಪ್ರಕಾರ "ಬಸವಣ್ಣ ಆರಾಧ್ಯನೊಬ್ಬನ ಮಗ. ಬಿಜ್ಜಳನ ಮಹಾಮಂತ್ರಿಯ ಮಗಳನ್ನು ಮದುವೆಯಾಗಿ ಮಂತ್ರಿಯ ಅಳಿಯನೆನಿಸಿಕೊಂಡಿದ್ದನು. ಅವನ ಸೋದರಿ ಪದ್ಮಾವತಿ ಓರ್ವ ಅನುಪಮ ಸುಂದರಿ. ಆಕೆಯನ್ನು ಮೋಹಿಸಿ ಮದುವೆಯಾದ ಬಿಜ್ಜಳ ಬಸವಣ್ಣನನ್ನು ತನ್ನ ಮಹಾಮಂತ್ರಿಯಾಗಿಸಿ ಕಾಲಾಂತರದಲ್ಲಿ ದಂಡನಾಯಕನನ್ನಾಗಿಯೂ ಮಾಡಿಕೊಂಡಿದ್ದನು. ಸುಂದರ ಹೆಂಡತಿಯ ಮೋಹದಲ್ಲಿ ಬಿಜ್ಜಳನು ಮೈಮರೆತಿರುವಾಗ ಎಲ್ಲಾ ಆಡಳಿತವನ್ನು ವಹಿಸಿಕೊಂಡಿದ್ದ ಬಸವಣ್ಣನು ಹಳೆಯ ಅಧಿಕಾರಿಗಳನ್ನು ತೆಗೆದು ತನ್ನ ನಿಷ್ಠರನ್ನು ಆಯಕಟ್ಟಿನ ಜಾಗಗಳಲ್ಲಿ ಕೂರಿಸಿದನು. ಅದಲ್ಲದೆ ತನ್ನ ಅಳಿಯ ಯುವ ರಾಜಕುಮಾರನನ್ನು ತನ್ನ ಪಂಥದ ಶ್ರದ್ಧಾಳುವಾಗಿ ಮಾರ್ಪಾಡಿಸಿ ಅಧಿಕಾರವನ್ನು ಮತ್ತಷ್ಟು ಕೈವಶಮಾಡಿಕೊಂಡಿದ್ದನು. ಬಿಜ್ಜಳನಿಗೆ ಇದೆಲ್ಲವೂ ಅರಿವಾಗಿ ಬಸವನನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಲು ಯತ್ನಿಸಿದನು. ಆದರೆ ಬಸವಣ್ಣನಿಗಿದ್ದ ಬೆಂಬಲವನ್ನು ಗ್ರಹಿಸಿ ಅವನನ್ನು ದಂಡನಾಯಕ ಪದವಿಯಿಂದ ತೆಗೆದು ಕೇವಲ ಮಂತ್ರಿಸ್ಥಾನಕ್ಕೆ ಸೀಮಿತಗೊಳಿಸಿದನು. ಮುಂದೆ ಬಸವಣ್ಣನು ಬಿಜ್ಜಳನನ್ನು ಕೊಲ್ಲಿಸಿದನು. ಬಿಜ್ಜಳನ ಹಿರಿಯ ಮಗನು ತನ್ನ ತಂದೆಯ ಕೊಲೆಯ ಸೇಡು ತೀರಿಸಿಕೊಳ್ಳಲು ಬಸವಣ್ಣನನ್ನು ಬೆಂಬತ್ತಿ ಬಂದಾಗ ಬಸವಣ್ಣನು ಆತ್ಮಹತ್ಯೆ ಮಾಡಿಕೊಂಡನು. ಆದರೆ ಲಿಂಗಾಯತರ ಬಸವ ಪುರಾಣವು ಅವನು ಕೂಡಲಸಂಗಮದ ಲಿಂಗದಲ್ಲಿ ಐಕ್ಯನಾಗಿ ಮಾಯವಾದನು ಎನ್ನುತ್ತದೆ" ಎಂದು ಜೈನರ ಬಿಜ್ಜಳಾಂಕ ಕಾವ್ಯ / ಬಿಜ್ಜಳರಾಯ ಚರಿತ ಮತ್ತು ಬಸವ ಪುರಾಣಗಳ ಆಧಾರದಲ್ಲಿ ರೈಸ್ ಅವರು ದಾಖಲಿಸಿದ್ದಾರೆ. (ಪುಟ ೩೩೨, ಮೈಸೂರು ಗೆಜೆಟಿಯರ್, V.1) ರೈಸ್ ಅವರು ಬಸವಣ್ಣನನ್ನು ಓರ್ವ ಆರಾಧ್ಯನ ಮಗ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಪುರಾಣಗಳ ಮತ್ತು ಮೌಖಿಕ ಇತಿಹಾಸದ ಹಿನ್ನೆಲೆಯ ಈ ಗೆಜೆಟಿಯರ್ ಸಂಕಥನದಲ್ಲಿ ಬಸವಣ್ಣನು "ಆರಾಧ್ಯ"ನಾಗಿದ್ದನು ಎಂಬುದು ಮತ್ತು "ದಂಡನಾಯಕ"ನಾಗಿದ್ದನು ಎಂಬುದು ಗಮನಿಸಬೇಕಾದ ಅಂಶ. ಈ ಆರಾಧ್ಯರೇ ಲಿಂಗಿ ಬ್ರಾಹ್ಮಣರು, ಜಂಗಮರು ಎಂದು ಪ್ರೊ. ಎಂ ಎಂ. ಕಲಬುರ್ಗಿಯವರು ಒತ್ತಿ ಒತ್ತಿ ಪ್ರತಿಪಾದಿಸಿದ್ದಾರೆ ಎಂಬುದು ಇನ್ನೂ ವಿಶೇಷವಾಗಿ ಗಮನಿಸಬೇಕಾದ ಅಂಶ.


ಉತ್ಖನನ ತಜ್ಞರಾದ ಜೆ. ಎಫ್. ಫ್ಲೀಟ್ ಅವರು ೧೮೯೯ ರಲ್ಲಿ ಭಾರತದ ಇತರೆ ಪ್ರದೇಶಗಳಿಗಿಂತ ಕರ್ನಾಟಕವು ಹೆಚ್ಚಿನ ಸಂಖ್ಯೆಯ ಶಿಲಾಶಾಸನಗಳನ್ನು ಹೊಂದಿದೆ. ಇಲ್ಲಿನ ಉತ್ಖನನವು ಅತ್ಯಂತ ಆಶಾದಾಯಕವಾಗಿದೆ ಎಂದಿದ್ದಾರೆ. ಅದನ್ನು ಪುಷ್ಟೀಕರಿಸುವಂತೆ ಆ ಕಾಲಘಟ್ಟದಲ್ಲಿ ೨೬ ಸಾವಿರ ಶಾಸನಗಳು ಕರ್ನಾಟಕದಲ್ಲಿ ಸಿಕ್ಕಿದ್ದವು. ಆದರೆ ಇವುಗಳಲ್ಲಿ ಒಂದೇ ಒಂದು ಶಾಸನ ಬಸವಣ್ಣ ಅಥವಾ ಮತ್ಯಾವುದೇ ಶರಣರ ಕುರಿತು ಸಿಕ್ಕಿರಲಿಲ್ಲ. ಹಾಗಾಗಿ ಬಸವಣ್ಣನೆಂಬ ವ್ಯಕ್ತಿ ಕಾಲ್ಪನಿಕ ವ್ಯಕ್ತಿ ಎನಿಸಿತ್ತು. ಕೆಲವು ವಿದ್ವಾಂಸರು ಬಿಜ್ಜಳನ ಮಂತ್ರಿಯಾಗಿದ್ದ ಕಾಸಪ್ಪಯ್ಯನೇ ಬಸವಣ್ಣ ಎಂಬುವ ವಾದವನ್ನೂ ಮಂಡಿಸಿದ್ದರು. ಆದರೆ ಕಾಸಪ್ಪಯ್ಯ ಅತ್ಯಂತ ಕ್ರೂರಿಯಾಗಿದ್ದನು. ಇನ್ನು ಕೆಲವರು ಬಸವಣ್ಣನು ನಾಥಪಂಥದ ಅನುಯಾಯಿ ಎಂದೂ ಅನುಮಾನಿಸಿದ್ದರು. ಆದರೆ ಇವೆಲ್ಲವೂ ಊಹಾತ್ಮಕ ಸಂಕಥನಗಳೇ ಹೊರತು ಯಾವುದೇ ಆಧಾರಯುಕ್ತ ಸಂಶೋಧನೆಗಳೆನಿಸಿಕೊಳ್ಳಲು ಅರ್ಹವಾದವುಗಳಲ್ಲ. ಅದಕ್ಕೆ ಯಾವುದಾದರೂ ಒಂದು ಪೂರಕ ಶಾಸನದ ಪುರಾವೆಯ ಬಲ ಬೇಕಿತ್ತು. ಹಾಗಿದ್ದಾಗ ಆ ಎಲ್ಲಾ ಊಹಾಪೋಹಗಳಿಗೆ ತೆರೆಯೆಳೆದಂತೆ ಬಸವಣ್ಣನ ಕುರಿತು ೧೯೨೮ ರಲ್ಲಿ ಫ.ಗು. ಹಳಕಟ್ಟಿಯವರು ಕ್ರಿ. ಶ. ೧೨೬೦ ರ ಅರ್ಜುನವಾಡದ ಶಿಲಾಶಾಸನವನ್ನು ಬೆಳಕಿಗೆ ತಂದರು.


ಈ ಶಾಸನದ ಪ್ರಕಾರ "ಬಾಗೇವಾಡಿಯಲ್ಲಿ ಮಾದರಸ ಮತ್ತು ಮಾದಲಾಂಬಿಕೆಯರ ಮಗನಾಗಿ ಬಸವ ಉರ್ಫ್ ಸಂಗನಬಸವನು ಜನಿಸಿದ್ದನು. ಇವನ ತಂದೆಯು ಬಾಗೇವಾಡಿಯ ’ಪುರವರಧೀಶ್ವರ’ನಾಗಿದ್ದನೆಂದು ತಿಳಿದುಬರುವುದಲ್ಲದೇ ಇದೇ ರೀತಿಯಲ್ಲಿ ಬಸವಣ್ಣನ ಅಣ್ಣ ಹಾಲಬಸವಿದೇವನು ಕವಿಳಾಸ(ಪುರ)ದ ಪುರವರಧೀಶ್ವರನಾಗಿದ್ದನೆಂದೂ ತಿಳಿದುಬರುತ್ತದೆ. ಹಾಲಬಸವಿದೇವನನ್ನು ಮಾನವದೇವ, ಯತಿರಾಯ ಮತ್ತು ಮಹಾಮಾಹೇಶ್ವರ ಎಂದೆಲ್ಲಾ ಎನ್ನಲಾಗಿದೆ" ಎಂದು ಅರ್ಜುನವಾಡದ ಶಿಲಾಶಾಸನದ ವಿವರಗಳನ್ನು ಸಂಶೋಧಕರಾದ ಕೆ. ಈಶ್ವರನ್ ಅವರು ಸಂಕ್ಷಿಪ್ತವಾಗಿ ತಮ್ಮ Speaking Of Basava: Lingayat Religion And Culture In South Asia, By K. Ishwaran (Chapter - Inscriptions) ಕೃತಿಯಲ್ಲಿ ವಿವರಿಸಿದ್ದಾರೆ.


ಇಲ್ಲಿ ಬಸವಣ್ಣನ ಅಣ್ಣನನ್ನು "ಮಹಾಮಾಹೇಶ್ವರ" ಎಂದಿರುವುದು ಗಮನಿಸಬೇಕಾದ ಸಂಗತಿ!


ಇನ್ನು ಕನ್ನಡ ಸಂಸ್ಕೃತಿ ಇಲಾಖೆಯು ಪ್ರಕಟಿಸಿರುವ ’ಮಧುರಚೆನ್ನರ ಲೇಖನಗಳು, ಸಂ. ಗುರುಲಿಂಗ ಕಾಪಸೆ’ ಕೃತಿಯಲ್ಲಿ ಅರ್ಜುನವಾಡ ಶಿಲಾಶಾಸನದ ಪೂರ್ಣಪಾಠವನ್ನು ಕೊಟ್ಟಿದ್ದಾರೆ. ಆಸಕ್ತರು ಗಮನಿಸಬಹುದು. ಅದೇ ರೀತಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ’ಶಾಸನ ಸಂಗ್ರಹ, ಸಂ. ಎ.ಎಮ್. ಅಣ್ಣೀಗೇರಿ’ ಕೃತಿಯಲ್ಲಿ ಸಹ ಈ ಶಾಸನದ ಪೂರ್ಣಪಾಠವಿದೆ.


ಇರಲಿ, ಇಲ್ಲಿ ಬಸವಣ್ಣನ ಪರಿವಾರದ ಕುರಿತಾದ ಬಹುಮುಖ್ಯ ಸಾಲುಗಳು ಹೀಗಿವೆ:


"ಸಂಗನ ಬಸವನ ಅಗ್ರ* 

*ಂಗೈಕ್ಯಂ ದೇವರಾಜಮುನಿಪನ ತನಯಂ|

ಜಂಗಮ ಪರಸುಂ ***ರ

ಸಂಗಂ ಪ್ರಿಯಸುತನೆನಿಪ್ಪ ಕಲಿದೇವರಸಂ||"


ಇಲ್ಲಿ * ಇರುವ ಅಕ್ಷರಗಳು ಲುಪ್ತಗೊಂಡಿರುವುದರಿಂದ ಅನೇಕ ವಿದ್ವಾಂಸರು ಸಹಮತದಿಂದ ಕೆಳಗಿನಂತೆ ಲುಪ್ತ ಅಕ್ಷರಗಳನ್ನು ತುಂಬಿದ್ದಾರೆ:


"ಸಂಗನ ಬಸವನ ಅಗ್ರಜ ಲಿಂಗೈಕ್ಯಂ ದೇವರಾಜಮುನಿಪನ ತನಯಂ|

ಜಂಗಮ ಪರಸುಂ ಕಾವ(ಬಸವ)ರ 

ಸಂಗಂ ಪ್ರಿಯಸುತನೆನಿಪ್ಪ ಕಲಿದೇವರಸಂ||


ಕಲಿದೇವಮುನಿಪನಾತ್ಮಜ

ಸಲೆ ಮೂಜಗದೊಳಗೆ ಮೆರೆದ ಮಾನವದೇವಂ|

ಗೆಲಿದಂ ಅಶನ ಬೆಸೆನವ

ಛಲರಧಿಕಂ ಹಾಲಬಸವಿದೇವ ಮುನೀಶಂ||"


ಇಲ್ಲಿ ಲುಪ್ತವಿರದೆ ಸ್ಪಷ್ಟವಾಗಿರುವ "ಜಂಗಮ ಪರುಸ" ಎಂಬುದು ಗಮನಿಸಬೇಕಾದ ಸಂಗತಿ!


ಈ ಶಾಸನದ ಪ್ರಕಾರ ಬಸವಣ್ಣ ಓರ್ವ ಜಂಗಮನೆನಿಸಿಕೊಳ್ಳುತ್ತಾನೆ. ಅದನ್ನು ಅನುಮೋದಿಸುವಂತೆ ಮಹಾಮಾಹೇಶ್ವರ ಎಂಬ ಪದವೂ ಇದೆ. ಈ ಮಹಾಮಾಹೇಶ್ವರ (ವೀರ ಮಾಹೇಶ್ವರ, ಪರಮ ಮಾಹೇಶ್ವರ) ಪದಗಳು ಕಾಳಾಮುಖರನ್ನು ಗುರುತಿಸುತ್ತಿದ್ದ ಪದಗಳಲ್ಲದೇ ಶರಣರು ಸಹ ಮಾಹೇಶ್ವರ ಪದವನ್ನು ೫೨೫ ಕಡೆ ೩೫೫ ವಚನಗಳಲ್ಲಿ ಬಳಸಿದ್ದಾರೆ. ಕಾಳಾಮುಖರು ವೀರಮಾಹೇಶ್ವರರೆಂದೂ ಜಂಗಮರೆಂದೂ ಗುರುತಿಸಿಕೊಂಡಿದ್ದರು.


ಹಾಗಿದ್ದರೆ ಬಸವಣ್ಣನು ಜಂಗಮ ಎನ್ನಲು ಇದೊಂದೇ ಶಾಸನವೇ ಆಧಾರವೇ? ಇದಕ್ಕೆ ಸಂಬಂಧಿಸಿದಂತೆ ಬೇರೇನಾದರೂ ಪುರಾವೆಗಳಿವೆಯೇ ಎಂದು ನೋಡಿದಾಗ ಸಿಗುವುದು ಮುನವಳ್ಳಿಯ ಶಾಸನ. ಕಾಳಾಮುಖರ ಕುರಿತು ಸಾಕಷ್ಟು ಸಂಶೋಧನೆ ಮಾಡಿರುವ ಡೇವಿಡ್ ಲೊರೆಂಜನ್ ತಮ್ಮ ಕಾಳಾಮುಖರ ಕುರಿತಾದ ಕೃತಿಯಲ್ಲಿ ಈ ಶಾಸನದ ಬಗ್ಗೆ ದಾಖಲಿಸಿದ್ದಾರೆ. ಈಗ ಆ ಶಾಸನ ಬಸವಣ್ಣನಿಗೆ ಹೇಗೆ ಸಂಬಂಧಿಸುತ್ತದೆ ಎಂದು ನೋಡೋಣ.


ಕ್ರಿ.ಶ. ೧೨೫೨ ರ ಜಗದೀಶ್ವರ ದೇವರ ಕುರಿತಾದ ಶಾಸನವು ಕಾಳಾಮುಖರ ಸರ್ವೇಶ್ವರ ಯತಿಯ ಮಗ ಕ್ರಿಯಾಶಕ್ತಿಯ ಮಗನಾದ ಸೋಮೇಶ್ವರನನ್ನು ಕೊಂಡಾಡಿ ಉಂಬಳಿ ದಾನವನ್ನು ಕೊಟ್ಟ ಶಾಸನವಾಗಿದೆ. ಇದನ್ನು ಕೊಟ್ಟವರು "ಶ್ರೀಪತು ಪರಮಮಾಹೇಶ್ವರ ದಂಣನಾಯಕ ಬಸವಿದೇವನ ಮುದ್ದು ಶ್ರೀ ಕಲಿದೇವರ ದಾಸ ಬೊಮ್ಮರಸ" ಎಂದಿದೆ. ಇದೇ ರೀತಿ ಅರ್ಜುನವಾಡದ ಶಾಸನದಲ್ಲಿಯೂ ಬಸವಣದಂಣನಾಯಕ ಅಲ್ಲದೆ ಬಸವಿದೇವ ಪದವೂ ಇದೆ. ಹಾಗಾಗಿ ಇವೆರಡೂ ಶಾಸನಗಳು ಬಸವಣ್ಣನನ್ನು ಕುರಿತಾಗಿದೆ ಎಂದು ’ಕನ್ನಡ ಶಾಸನ ಸಾಹಿತ್ಯ’ (ಸಂ ಎಂ.ಎಂ. ಕಲ್ಬುರ್ಗಿ, ಪ್ರಕಾಶನ ಚೇತನಾ ಬುಕ್ ಹೌಸ್) ಕೃತಿಯಲ್ಲಿನ ಅಧ್ಯಾಯವಾದ ’ಅರ್ಜುನವಾಡ ಶಾಸನದ ತ್ರುಟಿತಪದ್ಯ’ ಪುಟ ೨೭೦ ರಿಂದ ೨೭೭ ರಲ್ಲಿದೆ.

ಹಾಗಿದ್ದಾಗ ಬಸವಣ್ಣ ನಿಸ್ಸಂಶಯವಾಗಿ ಕಾಳಾಮುಖ ಪರಂಪರೆಯ ಜಂಗಮನೆನ್ನಬಹುದು.

(ಮುಂದುವರಿಯುವುದು)

ರವಿ ಹಂಜ

Tuesday, 27 August 2024

ಕೇವಲ ಮುಖಪುಟ ನೋಡಿ ವೀರಾವೇಶವೇ ?

 


ಷಟಸ್ಥಲ ಸಿದ್ಧಾಂತದ ಪ್ರತಿಪಾದಕರಾದ ಚೆನ್ನಬಸವಣ್ಣನ ಹುಟ್ಟಿನ ಬಗ್ಗೆ ಪ್ರೊ. ಎಂ. ಎಂ. ಕಲಬುರ್ಗಿಯವರು ಸಂಶೋಧನೆ ನಡೆಸಿ, "ಚೆನ್ನಬಸವಣ್ಣನು ಬಸವಣ್ಣನವರ ಸೋದರಿ ಅಕ್ಕನಾಗಮ್ಮ ಮತ್ತು ಡೋಹರ ಕಕ್ಕಯ್ಯನಿಗೆ ಹುಟ್ಟಿದವನು" ಎಂದು ಓರ್ವ ವಿರಕ್ತ ಪೀಠಾಧಿಪತಿಗಳಿಗೆ ತಿಳಿಸಿದರು. ವಿರಕ್ತರು, "ಓಹ್, ಹಾಗಿದ್ದರೆ ಈ ವಿಚಾರವನ್ನು ಏಕೆ ಎಲ್ಲಿಯೂ ದಾಖಲಿಸಿಲ್ಲ?" ಎಂದದ್ದಕ್ಕೆ, ಕೆಳಜಾತಿಯ ಕಕ್ಕಯ್ಯನನ್ನು ಆಕ್ಕನಾಗಮ್ಮ ಮದುವೆಯಾಗಿದ್ದಳು ಎಂದರೆ ಅದು ಅವಮಾನಕಾರವೆಂದು ಬಗೆದು ಅದನ್ನು ಮುಚ್ಚಿಡಲಾಗಿದೆ ಎಂಬುದು ಕಲಬುರ್ಗಿಯವರ ರೋಚಕ ಸಂಶೋಧನೆಯಾಗಿತ್ತು. 


ಸರಿ, ಅದಕ್ಕೆ ಆಧಾರವೇನು ಎಂದದ್ದಕ್ಕೆ ಕೆಲವು ಪುರಾಣಗಳಲ್ಲಿ ಚೆನ್ನಬಸವಣ್ಣನು ಕಕ್ಕಯ್ಯನ "ಪ್ರಸಾದದಿಂದ" ಹುಟ್ಟಿದನು ಎಂದಿದೆ. ವಾಚ್ಯವಾಗಿ ಹೇಳಲಾಗದ್ದನ್ನು ಪುರಾಣಗಳಲ್ಲಿ ಹೀಗೆ ಸೂಚ್ಯವಾಗಿ ಹೇಳಲಾಗಿದೆ ಎಂಬುದು ಅವರ ಪುರಾವೆಯಾಗಿತ್ತು.


ಅವರ ನವರಸ-ಸಂಶೋಧನೆಯಿಂದ ರೋಮಾಂಚನಗೊಂಡ ವಿರಕ್ತ ಮಹಾಸ್ವಾಮಿಗಳು ೨೬-೧೦-೧೯೮೦ರ ಕಾರ್ಯಕರ್ತರ ಮಹಾಸಭೆಯಲ್ಲಿ, "ಚೆನ್ನಬಸವಣ್ಣನು ಡೋಹರ ಕಕ್ಕಯ್ಯನ ಮಗ. ಈ ಜನ್ಮರಹಸ್ಯವನ್ನು ನಾಡಿನ ಖ್ಯಾತ ಸಂಶೋಧಕರು ಕಂಡುಹಿಡಿದಿದ್ದಾರೆ" ಎಂದು ಘೋಷಣೆ ಮಾಡಿದ್ದರು.


ಇದೇ ತರ್ಕವನ್ನು "ನಿನ್ನ ಪ್ರಸಾದ ನಾನಯ್ಯ" ಎಂಬ ವಚನ ವಿನಯದ ಮಾತಿಗೆ ಅನ್ವಯಿಸಿದರೆ ಆಗುವ ಅನರ್ಥ ಎಂತಹದ್ದಿರಬಹುದು?!?! ಖುದ್ದು ಚನ್ನಬಸವಣ್ಣನೇ ನಾನು ನಿಮ್ಮ ಪ್ರಸಾದ ಎಂದು ಬಸವಣ್ಣನ ಕುರಿತು ಕೆಳಗಿನ ವಚನದಲ್ಲಿ ಹೇಳಿದ್ದಾನೆ. 


"ಧರೆಯಾಕಾಶವಿಲ್ಲದಂದು, ಅನಲ ಪವನ ಜಲ ಕೂರ್ಮರಿಲ್ಲದಂದು,

ಚಂದ್ರಸೂರ್ಯರೆಂಬವರು ಕಳೆದೋರದಂದು,

ಆತ್ಮಸ್ಥಲ ಅನುಭಾವಕ್ಕೆ ಬಾರದಂದು,

ನಿತ್ಯನಿಜಲಿಂಗವ ಬಲ್ಲರಾರಯ್ಯ ನೀವಲ್ಲದೆ ?

ಮಹಾಘನಕ್ಕೆ ಘನವಾಹನವಾಗಿ, ಅಗಮ್ಯಸ್ಥಾನದಲ್ಲಿ ನಿಂದು

ಭರಿತರಾಗಿರಬಲ್ಲರಾರಯ್ಯಾ ನೀವಲ್ಲದೆ ?

ನಿಮ್ಮ ಒಕ್ಕು ಮಿಕ್ಕ ಶೇಷಪ್ರಸಾದದ ಕಾರುಣ್ಯದ ಶಿಶುವಾಗಿ ಒಡಲೊಳಗೆ ಇದ್ದಲ್ಲಿ

ವಿಭೂತಿ ಪಟ್ಟವ ಕಟ್ಟಿ, ಹಸ್ತಮಸ್ತಕಸಂಯೋಗವ ಮಾಡಿ

ಎನ್ನನುಳುಹಿದರಾರಯ್ಯ ನೀವಲ್ಲದೆ ?

ಕೂಡಲಚೆನ್ನಸಂಗಮದೇವರ ಸಾಕ್ಷಿಯಾಗಿ

ನಾನು ನಿಮ್ಮ ಕರುಣದ ಕಂದನೆಂಬುದ ಮೂರುಲೋಕ ಬಲ್ಲುದು ಕಾಣಾ ಸಂಗನಬಸವಣ್ಣ"


ಇಲ್ಲಿ ಡಾ: ಎಂ.ಎಂ. ಕಲಬುರ್ಗಿಯವರ ಸಂಶೋಧನಾ "ಪ್ರಸಾದ"ದ ತರ್ಕವನ್ನು ಅನ್ವಯಿಸಿದರೆ ಆಗುವ ಅಧ್ವಾನವನ್ನು ಯೋಚಿಸಿದರೆ....ಓಂ ಶ್ರೀ ಗುರು ಬಸವಲಿಂಗಾಯ ನಮಃ!

***

ಇನ್ನು ವೀರಶೈವ ಪದವನ್ನು ವಚನಗಳಲ್ಲಿ ತುರುಕಲಾಗಿದೆ ಎನ್ನುವವರು ಪ್ರಮುಖವಾಗಿ ಖ್ಯಾತ ಸಂಶೋಧಕರಾದ ಎಂ.ಎಂ. ಕಲ್ಬುರ್ಗಿಯವರ ಕಡೆಯೇ ಬೆರಳು ತೋರುತ್ತಾರೆ. ಅದಕ್ಕೆ ತಕ್ಕಂತೆ ಪ್ರೊ. ಕಲ್ಬುರ್ಗಿಯವರು ವೀರಶೈವ ಎಂಬ ಪದಬಳಕೆಯಾಗಿರುವ ಬಸವ, ಅಲ್ಲಮ, ಅಕ್ಕನ ವಚನಗಳನ್ನು ಪ್ರಕ್ಷೇಪ ವಚನಗಳೆಂದು ತಿರಸ್ಕರಿಸುತ್ತಾರೆ (ಅವರ ಪೂರ್ವೋಕ್ತ ಕೃತಿ, ಪುಟ ೧೪). ಆದರೆ ಅವು ಏಕೆ ಪ್ರಕ್ಷೇಪ ಎನ್ನಲು ಸಮರ್ಥ ಕಾರಣಗಳನ್ನು ಕೊಡುವುದಿಲ್ಲ. ಆದಲ್ಲದೆ ಲಿಂಗಾಯತ ಎಂಬ ಪದ ಬಳಕೆಯ ವಚನಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವುದಕ್ಕೆ ಸಹ ಅವರು ಯಾವುದೇ ಸಮಜಾಯಿಷಿ ಕೊಟ್ಟಿಲ್ಲ. 


ಆದರೆ ಹೀಗಿದ್ದೂ ವೀರಶೈವ ಎಂದಿರುವ ಎಲ್ಲಾ ಪ್ರಕ್ಷಿಪ್ತ ವಚನಗಳನ್ನು ಇವರ ಸಂಪಾದಕತ್ವದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗಿದೆ....ಓಂ ಶ್ರೀ ಗುರು ಬಸವಲಿಂಗಾಯ ನಮಃ!

***

ಪ್ರೊ. ಕಲ್ಬುರ್ಗಿಯವರ ಕೃತಿ "ಲಿಂಗಾಯತ ಸ್ವತಂತ್ರ ಧರ್ಮ"ದಲ್ಲಿನ ’ವೀರಶೈವ ಇತಿಹಾಸ ಮತ್ತು ಭೂಗೋಲ’ ಎಂಬ ಅಧ್ಯಾಯದಲ್ಲಿ "ಹದಿಮೂರನೇ ಶತಮಾನದ ಪಾಲ್ಕುರಿಕೆ ಸೋಮನಾಥನ ತೆಲುಗು ಭಾಷೆಯಲ್ಲಿರುವ ’ಬಸವಪುರಾಣ’ದಲ್ಲಿ ಲಿಂಗವಂತ, ವೀರಮಾಹೇಶ್ವರ ಪದಗಳಿವೆಯಾದರೂ ವೀರಶೈವ ಪದ ಕಂಡುಬರುವುದಿಲ್ಲ" ಎನ್ನುತ್ತಾ "ಬಸವಪುರಾಣವನ್ನು ಕನ್ನಡಕ್ಕೆ ಅನುವಾದಿಸಿದ ಭೀಮಕವಿಯು (ಕ್ರಿ. ಶ. ೧೩೬೮) ಕೆಲವೊಮ್ಮೆ ಅಲ್ಲಿಯ ವೀರಮಾಹೇಶ್ವರ ಪದಕ್ಕೆ ಬದಲು ಇಲ್ಲಿ ವೀರಶೈವ ಪದವನ್ನು ಬಳಸಿದ್ದಾನೆ. ಕನ್ನಡದಲ್ಲಿ ವೀರಶೈವ ಪದ ಕಂಡುಬರುವುದು ಇದೇ ಮೊದಲು. ಹಾಗಾಗಿ ವೀರಶೈವ ಪದ ಪಾಲ್ಕುರಿಕೆ ಸೋಮೇಶನ ತೆಲುಗು ಬಸವಪುರಾಣಮು ಮತ್ತು ಭೀಮಕವಿಯ ಕನ್ನಡ ಬಸವಪುರಾಣದ ಮಧ್ಯದ ಕಾಲಾವದಿಯಲ್ಲಿ ಹುಟ್ಟಿದೆಯೆಂದು ಸ್ಪಷ್ಟವಾಗಿ ಹೇಳಬಹುದು" ಎನ್ನುತ್ತಾರೆಯೇ ಹೊರತು ಇದರಲ್ಲಿ ಲಿಂಗಾಯತ ಪದವೂ ಇಲ್ಲದ್ದನ್ನು ಮಾತ್ರ ಅವರು ಹೇಳುವುದಿಲ್ಲ.  ಹಾಗೆಯೇ ಮುಂದುವರಿಯುತ್ತ ಪ್ರೊ. ಕಲ್ಬುರ್ಗಿಯವರು "ಈ ಸಂದರ್ಭದಲ್ಲಿ ’ಆಂಧ್ರಪ್ರದೇಶದ ವೀರಶೈವ’ ವಿಷಯವನ್ನು ಕುರಿತ ಪಿಹೆಚ್ಡಿ ಪ್ರಬಂಧದಲ್ಲಿ ಹೇಳಲಾಗಿರುವ ’ Palakuriki Somanatha was the earliest to use word Virashaiva in Andhra. In his Chaturveda Saram, Somanatha describes lord Hari as Virashaiva, because the latter performed certain heroic deeds, such as offering his own eyes to Shiva, as a token of deep devotion. In Basava Puranam however, he appears to have give deeper meaning to Virashaiva, though the word was not actually used. (Virashaiva in Andhra, K. Lalitamba p 2)' ಅಭಿಪ್ರಾಯವನ್ನು ಅವಶ್ಯ ಗಮನಿಸಬೇಕು" ಎನ್ನುತ್ತಾರೆ.


ಆದರೆ ಈ ಮೇಲಿನ ಪಿಹೆಚ್ಡಿ ಉದಾರಹಣೆಯಲ್ಲೇ "ಪಾಲ್ಕುರಿಕಿ ಸೋಮನಾಥನು ತನ್ನ ’ಚಾತುರ್ವೇದ ಸಾರಂ’ ಕೃತಿಯಲ್ಲಿ ವೀರಶೈವ ಪದವನ್ನು ಆಂಧ್ರದಲ್ಲಿ ಪ್ರಪ್ರಥಮವಾಗಿ ಬಳಸಿದ್ದಾನೆ. ಬಸವಪುರಾಣದಲ್ಲಿ ವೀರಶೈವ ಪದವನ್ನು ಬಳಸದಿದ್ದರೂ ಅದನ್ನು ಇನ್ನಷ್ಟು ಗಾಢವಾಗಿಸಿದ್ದಾನೆ ಎನ್ನುವ ಲಲಿತಾಂಬ ಅವರ ಇಂಗ್ಲಿಷ್ ಒಕ್ಕಣೆಯನ್ನು ಅರಿಯುವಷ್ಟು ಇಂಗ್ಲಿಷ್ ಪ್ರೌಢಿಮೆ ಪ್ರೊ. ಕಲ್ಬುರ್ಗಿಯವರಿಗೆ ಇರಲಿಲ್ಲವೇ?! ಇದ್ದರೆ ಈ ಒಕ್ಕಣೆಯನ್ನು ಬಿಟ್ಟು ಉಳಿದದ್ದನ್ನು ಏಕೆ ಹೆಕ್ಕಿಕೊಂಡರು....ಓಂ ಶ್ರೀ ಗುರು ಬಸವಲಿಂಗಾಯ ನಮಃ!

***

ಇಂತಹ ಅವಘಡಗಳ ಸಾಲು ಸಾಲು ಸಾಧನೆಗಳು ಪ್ರೊಫೆಸರರ ತೆಕ್ಕೆಯಲ್ಲಿವೆ. ಇಂತಹ ಸಂಶೋಧಕರನ್ನೇ ಇಂದಿನ ರಾಜಕಾರಣಪ್ರೀತ ಆಧುನಿಕ ಲಿಂಗಾಯತ ಧರ್ಮದ ಹೋರಾಟಗಾರರು ತಮ್ಮ "ಸಂಶೋಧನಾ ಲಾಂಛನ"ವಾಗಿರಿಸಿಕೊಂಡು ಅವರ "ಪ್ರಸಾದ"ದ ಸಿದ್ಧಮಾದರಿ ಸಂಶೋಧನೆಯಲ್ಲಿ ವಚನಗಳನ್ನು ಗೆರೆ ಕೆರೆ ದರ್ಗಾ ಮುರ್ಗಾ ಚರ್ಗಾ ಜಮಾಖರ್ಚುದಾರರು, ಕಮ್ಯೂನಿಸ್ಟರು, ಉದಾರಿಗಳು, ವಾಟ್ಸಾಪಿವೀರರು ತಮ್ಮ ತಮ್ಮ ಮೂಗಿನ ನೇರಕ್ಕೆ ಸಿದ್ಧಾಂತಕ್ಕೆ ವಚನಗಳನ್ನು ವ್ಯಾಖ್ಯಾನಿಸಿ/ಸಮೀಕರಿಸಿ ಮಾಡಿರುವ ಅಧ್ವಾನಗಳು, ಜಗದಗಲ ಮುಗಿಲಗಲ........ಓಂ ಶ್ರೀ ಗುರು ಬಸವಲಿಂಗಾಯ ನಮಃ!


ಇನ್ನು ಅಂದು ಇವರ ಸಂಶೋಧನೆ ನಂಬಿ ಭೀಷಣ-ಭಾಷಣ ಮಾಡಿದ್ದ ವಿರಕ್ತರ ಮುಂತಲೆಗಳು ತಮ್ಮ ಹೆಸರಿನ ಹಿಂದಿರುತ್ತಿದ್ದ ಶ್ರೀ ಮ.ನಿ.ಪ್ರ. ಕ್ಕೆ ತಿಲಾಂಜಲಿಯಿಟ್ಟು ಮಾತೃ ಹೃದಯಿ, ರೈತ ಋಣಿ, ವಿದ್ಯಾಗಣಿ, ಕಲ್ಯಾಣಕಣ್ಮಣಿ, ರಂಗಜಂಗಮ,  ಮುಂತಾದ ಚಿಂತಕ ಬೆಡಗಿನ ಬಿರುದುಗಳೊಂದಿಗೆ ಕಲಬುರ್ಗಿ-ಸಂಶೋಧನಾ ಪರಂಪರೆಯ ಕಮ್ಯೂನಿಸ್ಟ್ ಪ್ರೊಫೆಸರರುಗಳು ಪೊಡಮಟ್ಟ ಗೌರವ "ಡಾ" ಇಟ್ಟುಕೊಂಡು ತಮ್ಮ ಅನುರಕ್ತಿಯನ್ನು ಮೆರೆಯುತ್ತಿರುವುದು....ಓಂ ಶ್ರೀ ಗುರು ಬಸವಲಿಂಗಾಯ ನಮಃ!


ಪ್ರಚಲಿತ "ವಚನ ದರ್ಶನ" ಕೃತಿಯ ಹಿನ್ನೆಲೆಯಲ್ಲಿ ಕೇವಲ ಮುಖಪುಟ ನೋಡಿ ವೀರಾವೇಶ ಮೆರೆಯುತ್ತಿರುವ ಇವರ ನಡೆ ಹಾಸ್ಯಾಸ್ಪದ. ಇವರ ವಚನ ವ್ಯಾಖ್ಯಾನ ಮಾತ್ರವೇ ಸರಿ. ಉಳಿದವರದು ತಪ್ಪು ಎಂದು ಫರ್ಮಾನು ಹೊರಡಿಸಿದ್ದಾರೆ. ಅಷ್ಟರ ಮಟ್ಟಿಗೆ ವಚನ ಸಾಹಿತ್ಯದ ಮೇಲೆ ಕಮ್ಯುನಿಸ್ಟರ ಹಕ್ಕೊತ್ತಾಯವಾಗಿದೆ.  ಈ ಹಿನ್ನೆಲೆಯಲ್ಲಿ ಓರ್ವ ವಾಟ್ಸಾಪಿ ವೀರರು ವಚನದರ್ಶನದ ಗೌರವ ಸಂಪಾದಕರಿಗೆ ಕೇಳಿದ ವಚನ ಹೀಗಿತ್ತು.

"ಕಟ್ಟಿದ ಲಿಂಗವ ಕಿರಿದು ಮಾಡಿ,

ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ!

ಇಂತಪ್ಪ ಲೊಟ್ಟಿಮೂಳರ ಕಂಡರೆ

ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು

ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ"


ಇಂದು ತಾಯಂದಿರು ತಮ್ಮ ಪ್ರಾಥಮಿಕ ಶಾಲೆಯಲ್ಲಿರುವ ಮಕ್ಕಳಿಗೆ ಟಿವಿ ನೋಡಬೇಡ, ಮೊಬೈಲ್ ಮುಟ್ಟಬೇಡ, ಕಂಪ್ಯೂಟರ್ ಗೇಮ್ ಆಡಬೇಡ. ಕೇವಲ ಪುಸ್ತಕಗಳನ್ನು ಓದು. ಹೋಂ ವರ್ಕ್ ಮಾಡು. ಇಲ್ಲದಿದ್ದರೆ ಹೊಡೆಯುತ್ತೇನೆ ಎನ್ನುವುದರ ಹಿಂದಿನ ಉದ್ದೇಶವೇ ಈ ವಚನದ ಹಿಂದಿನ ಉದ್ದೇಶ ಸಹ. ಲಿಂಗವೆಂದು ಕಲ್ಲು ಕಟ್ಟಿಕೊಂಡು ಬಂದವರನ್ನೆಲ್ಲ ಅನುಭವ ಮಂಟಪಕ್ಕೆ ಸೇರಿಸಿಕೊಂಡ ಬಸವಣ್ಣ, ಬೇರೆಲ್ಲ ಬಿಟ್ಟು ಮೊದಲು ಲಿಂಗಪೂಜೆಯಲ್ಲಿ ಸಾಧನೆ ಮಾಡಿ ಎಂಬ ಉದ್ದೇಶವನ್ನು ಅಂಬಿಗರ ಚೌಡಯ್ಯ ಹೀಗೆ ವಾಚ್ಯವಾಗಿ ಹೇಳಿದ್ದಾನೆ.  ಇದನ್ನು ಕಮ್ಯುನಿಸ್ಟ್ ಪ್ರಣೀತರು ಮೂರ್ತಿಪೂಜೆ, ದೇವಾಲಯಗಳನ್ನು ಶರಣರು ಬಹಿಷ್ಕರಿಸಿದ್ದರು ಎಂಬ ತಮ್ಮ ಸಿದ್ಧಾಂತದ ಪುರಾವೆಯಾಗಿ ಬಳಸುತ್ತಾರೆ.


ಇವರ ವಾದವನ್ನು ಒಪ್ಪುವುದಾದರೆ ಶ್ರೀಶೈಲ ಬೆಟ್ಟದ ಲಿಂಗವ ಹಿರಿದು ಮಾಡಿದ ಅಕ್ಕಮಹಾದೇವಿ, ನದಿ ಸಂಗಮದ, ಗುಹೆಯಲ್ಲಿನ ಸ್ಥಾವರದ ಲಿಂಗಗಳ ಅಂಕಿತ ಮಾಡಿಕೊಂಡ ಬಸವಣ್ಣ, ಅಲ್ಲಮರ ನಡೆಗೆ ಇದನ್ನು ಅನ್ವಯಿಸಿದರೆ ಆಗುವ ಅಧ್ವಾನ.........ಓಂ ಶ್ರೀ ಗುರು ಬಸವಲಿಂಗಾಯ ನಮಃ!


ಅಂದ ಹಾಗೆ ಬಸವಾದಿ ಪ್ರಮಥರು ಬೋಧಿಸಿದ/ ಧ್ಯಾನಿಸಿದ/ಸಾಧಿಸಿದ ಮಂತ್ರ, ಓಂ ನಮಃ ಶಿವಾಯ ಎಂಬ ಷಡಕ್ಷರಿ ಅಥವಾ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರ! 


ಈ ಮೂಲಮಂತ್ರವನ್ನೇ ಮೂಲೋಚ್ಚಾಟನೆ ಮಾಡಿ ರಾಜಕಾರಣಕ್ಕಾಗಿ ಬಸವರಾಜಕಾರಣವ್ಹಿಡಿದು "ಪ್ರಸಾದೀ"ಕರಣ ತಂತ್ರ ಬಳಸಿ ಸಾಮಾಜಿಕ ಲಾಭಕ್ಕಾಗಿ ಓಂ ಗುರು ಬಸವಲಿಂಗಾಯ ನಮಃ ಎಂದು ಘೋಷಿಸುತ್ತ ಮತ್ತೊಂದು ಮಗದೊಂದಕ್ಕೆ ಮಾಡುತ್ತಿರುವ ಕುರುಹಿನ ಹೆಡ್ಡರಿಂದ ಅರುಹಿನ ಲಿಂಗಾಯತವನ್ನು ಕಾಪಾಡಬೇಕಿದೆ.


ಆರುಹ ಪೂಜಿಸಲೆಂದು ಕುರುಹ ಕೊಟ್ಟೆಡೆ 

ಅರುಹ ಮರೆತು ಕುರುಹ ಪೂಜಿಸುವ 

ಹೆಡ್ಡರಾ ನೋಡಾ ಗುಹೇಶ್ವರ!!


ವಿ. ಸೂ: ಪ್ರೊ ಎಂ. ಎಂ. ಕಲಬುರ್ಗಿಯವರ "ಪ್ರಸಾದ" ಸಂಶೋಧನೆಯ ವಿಚಾರದ ಪುರಾವೆ ಮತ್ತು ಹೆಚ್ಚಿನ ಮಾಹಿತಿಗೆ ಆಸಕ್ತರು ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಜಗದ್ಗುರುಗಳ ರಜತ ಮಹೋತ್ಸವದ ಸ್ಮರಣ ಸಂಚಿಕೆಯಾದ "ಚಿನ್ಮೂಲಾದ್ರಿ ಚೇತನ"ದಲ್ಲಿನ ಎಲ್. ಬಸವರಾಜು ಅವರ ಲೇಖನವನ್ನು ಪರಾಂಭರಿಸಬಹುದು. ಅಲ್ಲದೇ ಈ ರಜತ ಮಹೋತ್ಸವದ ಸಮಾರಂಭದಲ್ಲಿ ಹಾಜರಿದ್ದ ಪ್ರೊಫೆಸರರಿಗೆ ಅವರ ಸಂಶೋಧನೆಗಾಗಿ ಭಕ್ತರು "ತಕ್ಕ" ಉಡುಗೊರೆ ನೀಡಿದ್ದ ಐತಿಹಾಸಿಕ ಸತ್ಯದ ಬಗ್ಗೆ ತಮ್ಮ ಹಿರಿತಲೆಗಳನ್ನು ಪ್ರಶ್ನಿಸಬಹುದು.

-ರವಿ ಹಂಜ್

ವಿಶ್ವವಾಣಿ, ೨೮ ಆಗಸ್ಟ ೨೦೨೪

ಬಸವ ಮೂಲ, ಸನಾತನ ಶೈವ ಮೂಲ!

  "ಷಣ್ಮುಖನಿಗೆ ಪ್ರಸಾದ ಕೊಡುವುದನ್ನು ಮರೆತ ವೃಷಭನೆನ್ನುವ ಗಣನನ್ನು ಶಿವನು ಬಸವನಾಗಿ ಭೂಮಿಯಲ್ಲಿ ಜನಿಸಿ ಶಿವಭಕ್ತ ಜಂಗಮರಿಗೆ ಪ್ರಸಾದ ವಿನಿಯೋಗಿಸಿ ಪ್ರಾಯಶ್ಚಿತ್ತ...