Monday, 9 September 2024

ಬಸವ ಮೂಲ, ಸನಾತನ ಶೈವ ಮೂಲ!

 


"ಷಣ್ಮುಖನಿಗೆ ಪ್ರಸಾದ ಕೊಡುವುದನ್ನು ಮರೆತ ವೃಷಭನೆನ್ನುವ ಗಣನನ್ನು ಶಿವನು ಬಸವನಾಗಿ ಭೂಮಿಯಲ್ಲಿ ಜನಿಸಿ ಶಿವಭಕ್ತ ಜಂಗಮರಿಗೆ ಪ್ರಸಾದ ವಿನಿಯೋಗಿಸಿ ಪ್ರಾಯಶ್ಚಿತ್ತ ಮಾಡಿಕೊಂಡು ಕೈಲಾಸಕ್ಕೆ ಹಿಂತಿರುಗು ಎಂದು ಶಪಿಸುತ್ತಾನೆ. ಹೀಗೆ ವೃಷಭನು ಬಸವನಾಗಿ ಬಾಗೇವಾಡಿ ಅಗ್ರಹಾರದ (ಸಂದಣಿಪ ವಿಪ್ರಸಂತಾನದಿಂಡಿದಿಡಿರ್ಪ, ಶಿವಪುರಾಣಾಗಮಕುಲಂಗಳಿಂದೆಸೆದಿರ್ಪ ಶಿವಶಾಸ್ತ್ರಘೋಷ ಸಂಗೀತದಿಂದಿಡಿದಿರ್ಪ ಅಗ್ರೇಶ್ವರಂ ಕಮ್ಮೆ ಕುಲದಿಂದೆ ಮೆರೆದಿರ್ಪ ವಿಪ್ರನಿರ್ಪಂ ಮಾದಿರಾಜ) ಮಾದಿರಾಜನ ಪತ್ನಿ ಮಾದಲಾಂಬೆಯ ಗರ್ಭದಲ್ಲಿ ಜನ್ಮವೆತ್ತಿ ಜಂಗಮ ಸೇವೆ ಕೈಗೊಂಡು ಪ್ರಾಯಶ್ಚಿತ್ತಕ್ಕೆ ಅನುವಾದನು" ಎಂಬುದು ’ಬಸವರಾಜ ದೇವರ ರಗಳೆ’ಯ ಸಂಕ್ಷಿಪ್ತ ಬಸವಮೂಲ.


ಬಸವನಂತೆಯೇ ರೇಣುಕ, ನಂಬಿಯಣ್ಣ, ಮಹಾದೇವಿಯಕ್ಕರೂ ಶಾಪಗ್ರಸ್ತರಾಗಿ ಭೂಲೋಕದಲ್ಲಿ ಜನ್ಮವೆತ್ತಿದರು ಎಂಬ ಪೌರಾಣಿಕ ಕತೆಗಳು ಈ ರಗಳೆಯಂತೆಯೇ ರಚಿತಗೊಂಡಿವೆ. ಈ ರಗಳೆಯು ಸಾಹಿತ್ಯಕ ಅಂಶಗಳಿಂದ ಮಹತ್ವದ್ದೆನ್ನಿಸಬಹುದೇ ಹೊರತು ಕಥನದಿಂದಲ್ಲ. ಇದರ ಕಥನವು ಅತ್ಯಂತ ಕಾಲ್ಪನಿಕವೂ ರೋಚಕವೂ ಮತ್ತು ಪವಾಡ ಮಹಿಮೆಯನ್ನೂ ಒಳಗೊಂಡ ಭಾರತದ ಅನೇಕ ಪುರಾಣ ಪುಣ್ಯಕತೆಗಳಂತೆಯೇ ಇದೆ. ಅದಲ್ಲದೆ ಈ ರಗಳೆಯ ಸಾಹಿತ್ಯಿಕ ತಂತ್ರವು ಭೋಗಣ್ಣ, ನಂಬಿಯಣ್ಣ, ಮಹಾದೇವಿಯಕ್ಕನ ಪುರಾಣಗಳಲ್ಲಿಯೂ ಕಾಣುವುದರಿಂದ ಇಂತಹ ಕಥಾತಂತ್ರವು ಅಂದಿನ ಕಾಲದಲ್ಲಿ ಮೇಲ್ಪಂಕ್ತಿಯಾಗಿತ್ತೆನಿಸುತ್ತದೆ. ಹಾಗೆ ನೋಡಿದರೆ ಈ ರೀತಿಯ ಕಥಾ ತಂತ್ರ ಮಾದರಿಯು ಇತ್ತೀಚಿನವರೆಗಿನ ಪುರಾಣ ಹರಿಕಥೆಗಳಲ್ಲದೆ ಪೌರಾಣಿಕ ನಾಟಕ ಸಿನೆಮಾಗಳಲ್ಲಿಯೂ ಕಾಣಬಹುದು. ಅಂತಹ ಒಂದು ಜನಪ್ರಿಯ ಮಾದರಿಯನ್ನು ಹರಿಹರ ಸೃಷ್ಟಿಸಿದ್ದಾನೆ. ಅಥವಾ ಆಗಲೇ ಜಾರಿಯಿದ್ದ ಒಂದು ಸಿದ್ಧ ಮಾದರಿಯನ್ನು ರಗಳೆಯ ತಂತ್ರಕ್ಕೆ ಅಳವಡಿಸಿಕೊಂಡಿದ್ದಾನೆ. 


ಬಿ. ಎಲ್. ರೈಸ್ ಅವರ ಮೈಸೂರು ಗೆಜೆಟಿಯರ್ ಪ್ರಕಾರ "ಬಸವಣ್ಣ ಆರಾಧ್ಯನೊಬ್ಬನ ಮಗ. ಬಿಜ್ಜಳನ ಮಹಾಮಂತ್ರಿಯ ಮಗಳನ್ನು ಮದುವೆಯಾಗಿ ಮಂತ್ರಿಯ ಅಳಿಯನೆನಿಸಿಕೊಂಡಿದ್ದನು. ಅವನ ಸೋದರಿ ಪದ್ಮಾವತಿ ಓರ್ವ ಅನುಪಮ ಸುಂದರಿ. ಆಕೆಯನ್ನು ಮೋಹಿಸಿ ಮದುವೆಯಾದ ಬಿಜ್ಜಳ ಬಸವಣ್ಣನನ್ನು ತನ್ನ ಮಹಾಮಂತ್ರಿಯಾಗಿಸಿ ಕಾಲಾಂತರದಲ್ಲಿ ದಂಡನಾಯಕನನ್ನಾಗಿಯೂ ಮಾಡಿಕೊಂಡಿದ್ದನು. ಸುಂದರ ಹೆಂಡತಿಯ ಮೋಹದಲ್ಲಿ ಬಿಜ್ಜಳನು ಮೈಮರೆತಿರುವಾಗ ಎಲ್ಲಾ ಆಡಳಿತವನ್ನು ವಹಿಸಿಕೊಂಡಿದ್ದ ಬಸವಣ್ಣನು ಹಳೆಯ ಅಧಿಕಾರಿಗಳನ್ನು ತೆಗೆದು ತನ್ನ ನಿಷ್ಠರನ್ನು ಆಯಕಟ್ಟಿನ ಜಾಗಗಳಲ್ಲಿ ಕೂರಿಸಿದನು. ಅದಲ್ಲದೆ ತನ್ನ ಅಳಿಯ ಯುವ ರಾಜಕುಮಾರನನ್ನು ತನ್ನ ಪಂಥದ ಶ್ರದ್ಧಾಳುವಾಗಿ ಮಾರ್ಪಾಡಿಸಿ ಅಧಿಕಾರವನ್ನು ಮತ್ತಷ್ಟು ಕೈವಶಮಾಡಿಕೊಂಡಿದ್ದನು. ಬಿಜ್ಜಳನಿಗೆ ಇದೆಲ್ಲವೂ ಅರಿವಾಗಿ ಬಸವನನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಲು ಯತ್ನಿಸಿದನು. ಆದರೆ ಬಸವಣ್ಣನಿಗಿದ್ದ ಬೆಂಬಲವನ್ನು ಗ್ರಹಿಸಿ ಅವನನ್ನು ದಂಡನಾಯಕ ಪದವಿಯಿಂದ ತೆಗೆದು ಕೇವಲ ಮಂತ್ರಿಸ್ಥಾನಕ್ಕೆ ಸೀಮಿತಗೊಳಿಸಿದನು. ಮುಂದೆ ಬಸವಣ್ಣನು ಬಿಜ್ಜಳನನ್ನು ಕೊಲ್ಲಿಸಿದನು. ಬಿಜ್ಜಳನ ಹಿರಿಯ ಮಗನು ತನ್ನ ತಂದೆಯ ಕೊಲೆಯ ಸೇಡು ತೀರಿಸಿಕೊಳ್ಳಲು ಬಸವಣ್ಣನನ್ನು ಬೆಂಬತ್ತಿ ಬಂದಾಗ ಬಸವಣ್ಣನು ಆತ್ಮಹತ್ಯೆ ಮಾಡಿಕೊಂಡನು. ಆದರೆ ಲಿಂಗಾಯತರ ಬಸವ ಪುರಾಣವು ಅವನು ಕೂಡಲಸಂಗಮದ ಲಿಂಗದಲ್ಲಿ ಐಕ್ಯನಾಗಿ ಮಾಯವಾದನು ಎನ್ನುತ್ತದೆ" ಎಂದು ಜೈನರ ಬಿಜ್ಜಳಾಂಕ ಕಾವ್ಯ / ಬಿಜ್ಜಳರಾಯ ಚರಿತ ಮತ್ತು ಬಸವ ಪುರಾಣಗಳ ಆಧಾರದಲ್ಲಿ ರೈಸ್ ಅವರು ದಾಖಲಿಸಿದ್ದಾರೆ. (ಪುಟ ೩೩೨, ಮೈಸೂರು ಗೆಜೆಟಿಯರ್, V.1) ರೈಸ್ ಅವರು ಬಸವಣ್ಣನನ್ನು ಓರ್ವ ಆರಾಧ್ಯನ ಮಗ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಪುರಾಣಗಳ ಮತ್ತು ಮೌಖಿಕ ಇತಿಹಾಸದ ಹಿನ್ನೆಲೆಯ ಈ ಗೆಜೆಟಿಯರ್ ಸಂಕಥನದಲ್ಲಿ ಬಸವಣ್ಣನು "ಆರಾಧ್ಯ"ನಾಗಿದ್ದನು ಎಂಬುದು ಮತ್ತು "ದಂಡನಾಯಕ"ನಾಗಿದ್ದನು ಎಂಬುದು ಗಮನಿಸಬೇಕಾದ ಅಂಶ. ಈ ಆರಾಧ್ಯರೇ ಲಿಂಗಿ ಬ್ರಾಹ್ಮಣರು, ಜಂಗಮರು ಎಂದು ಪ್ರೊ. ಎಂ ಎಂ. ಕಲಬುರ್ಗಿಯವರು ಒತ್ತಿ ಒತ್ತಿ ಪ್ರತಿಪಾದಿಸಿದ್ದಾರೆ ಎಂಬುದು ಇನ್ನೂ ವಿಶೇಷವಾಗಿ ಗಮನಿಸಬೇಕಾದ ಅಂಶ.


ಉತ್ಖನನ ತಜ್ಞರಾದ ಜೆ. ಎಫ್. ಫ್ಲೀಟ್ ಅವರು ೧೮೯೯ ರಲ್ಲಿ ಭಾರತದ ಇತರೆ ಪ್ರದೇಶಗಳಿಗಿಂತ ಕರ್ನಾಟಕವು ಹೆಚ್ಚಿನ ಸಂಖ್ಯೆಯ ಶಿಲಾಶಾಸನಗಳನ್ನು ಹೊಂದಿದೆ. ಇಲ್ಲಿನ ಉತ್ಖನನವು ಅತ್ಯಂತ ಆಶಾದಾಯಕವಾಗಿದೆ ಎಂದಿದ್ದಾರೆ. ಅದನ್ನು ಪುಷ್ಟೀಕರಿಸುವಂತೆ ಆ ಕಾಲಘಟ್ಟದಲ್ಲಿ ೨೬ ಸಾವಿರ ಶಾಸನಗಳು ಕರ್ನಾಟಕದಲ್ಲಿ ಸಿಕ್ಕಿದ್ದವು. ಆದರೆ ಇವುಗಳಲ್ಲಿ ಒಂದೇ ಒಂದು ಶಾಸನ ಬಸವಣ್ಣ ಅಥವಾ ಮತ್ಯಾವುದೇ ಶರಣರ ಕುರಿತು ಸಿಕ್ಕಿರಲಿಲ್ಲ. ಹಾಗಾಗಿ ಬಸವಣ್ಣನೆಂಬ ವ್ಯಕ್ತಿ ಕಾಲ್ಪನಿಕ ವ್ಯಕ್ತಿ ಎನಿಸಿತ್ತು. ಕೆಲವು ವಿದ್ವಾಂಸರು ಬಿಜ್ಜಳನ ಮಂತ್ರಿಯಾಗಿದ್ದ ಕಾಸಪ್ಪಯ್ಯನೇ ಬಸವಣ್ಣ ಎಂಬುವ ವಾದವನ್ನೂ ಮಂಡಿಸಿದ್ದರು. ಆದರೆ ಕಾಸಪ್ಪಯ್ಯ ಅತ್ಯಂತ ಕ್ರೂರಿಯಾಗಿದ್ದನು. ಇನ್ನು ಕೆಲವರು ಬಸವಣ್ಣನು ನಾಥಪಂಥದ ಅನುಯಾಯಿ ಎಂದೂ ಅನುಮಾನಿಸಿದ್ದರು. ಆದರೆ ಇವೆಲ್ಲವೂ ಊಹಾತ್ಮಕ ಸಂಕಥನಗಳೇ ಹೊರತು ಯಾವುದೇ ಆಧಾರಯುಕ್ತ ಸಂಶೋಧನೆಗಳೆನಿಸಿಕೊಳ್ಳಲು ಅರ್ಹವಾದವುಗಳಲ್ಲ. ಅದಕ್ಕೆ ಯಾವುದಾದರೂ ಒಂದು ಪೂರಕ ಶಾಸನದ ಪುರಾವೆಯ ಬಲ ಬೇಕಿತ್ತು. ಹಾಗಿದ್ದಾಗ ಆ ಎಲ್ಲಾ ಊಹಾಪೋಹಗಳಿಗೆ ತೆರೆಯೆಳೆದಂತೆ ಬಸವಣ್ಣನ ಕುರಿತು ೧೯೨೮ ರಲ್ಲಿ ಫ.ಗು. ಹಳಕಟ್ಟಿಯವರು ಕ್ರಿ. ಶ. ೧೨೬೦ ರ ಅರ್ಜುನವಾಡದ ಶಿಲಾಶಾಸನವನ್ನು ಬೆಳಕಿಗೆ ತಂದರು.


ಈ ಶಾಸನದ ಪ್ರಕಾರ "ಬಾಗೇವಾಡಿಯಲ್ಲಿ ಮಾದರಸ ಮತ್ತು ಮಾದಲಾಂಬಿಕೆಯರ ಮಗನಾಗಿ ಬಸವ ಉರ್ಫ್ ಸಂಗನಬಸವನು ಜನಿಸಿದ್ದನು. ಇವನ ತಂದೆಯು ಬಾಗೇವಾಡಿಯ ’ಪುರವರಧೀಶ್ವರ’ನಾಗಿದ್ದನೆಂದು ತಿಳಿದುಬರುವುದಲ್ಲದೇ ಇದೇ ರೀತಿಯಲ್ಲಿ ಬಸವಣ್ಣನ ಅಣ್ಣ ಹಾಲಬಸವಿದೇವನು ಕವಿಳಾಸ(ಪುರ)ದ ಪುರವರಧೀಶ್ವರನಾಗಿದ್ದನೆಂದೂ ತಿಳಿದುಬರುತ್ತದೆ. ಹಾಲಬಸವಿದೇವನನ್ನು ಮಾನವದೇವ, ಯತಿರಾಯ ಮತ್ತು ಮಹಾಮಾಹೇಶ್ವರ ಎಂದೆಲ್ಲಾ ಎನ್ನಲಾಗಿದೆ" ಎಂದು ಅರ್ಜುನವಾಡದ ಶಿಲಾಶಾಸನದ ವಿವರಗಳನ್ನು ಸಂಶೋಧಕರಾದ ಕೆ. ಈಶ್ವರನ್ ಅವರು ಸಂಕ್ಷಿಪ್ತವಾಗಿ ತಮ್ಮ Speaking Of Basava: Lingayat Religion And Culture In South Asia, By K. Ishwaran (Chapter - Inscriptions) ಕೃತಿಯಲ್ಲಿ ವಿವರಿಸಿದ್ದಾರೆ.


ಇಲ್ಲಿ ಬಸವಣ್ಣನ ಅಣ್ಣನನ್ನು "ಮಹಾಮಾಹೇಶ್ವರ" ಎಂದಿರುವುದು ಗಮನಿಸಬೇಕಾದ ಸಂಗತಿ!


ಇನ್ನು ಕನ್ನಡ ಸಂಸ್ಕೃತಿ ಇಲಾಖೆಯು ಪ್ರಕಟಿಸಿರುವ ’ಮಧುರಚೆನ್ನರ ಲೇಖನಗಳು, ಸಂ. ಗುರುಲಿಂಗ ಕಾಪಸೆ’ ಕೃತಿಯಲ್ಲಿ ಅರ್ಜುನವಾಡ ಶಿಲಾಶಾಸನದ ಪೂರ್ಣಪಾಠವನ್ನು ಕೊಟ್ಟಿದ್ದಾರೆ. ಆಸಕ್ತರು ಗಮನಿಸಬಹುದು. ಅದೇ ರೀತಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ’ಶಾಸನ ಸಂಗ್ರಹ, ಸಂ. ಎ.ಎಮ್. ಅಣ್ಣೀಗೇರಿ’ ಕೃತಿಯಲ್ಲಿ ಸಹ ಈ ಶಾಸನದ ಪೂರ್ಣಪಾಠವಿದೆ.


ಇರಲಿ, ಇಲ್ಲಿ ಬಸವಣ್ಣನ ಪರಿವಾರದ ಕುರಿತಾದ ಬಹುಮುಖ್ಯ ಸಾಲುಗಳು ಹೀಗಿವೆ:


"ಸಂಗನ ಬಸವನ ಅಗ್ರ* 

*ಂಗೈಕ್ಯಂ ದೇವರಾಜಮುನಿಪನ ತನಯಂ|

ಜಂಗಮ ಪರಸುಂ ***ರ

ಸಂಗಂ ಪ್ರಿಯಸುತನೆನಿಪ್ಪ ಕಲಿದೇವರಸಂ||"


ಇಲ್ಲಿ * ಇರುವ ಅಕ್ಷರಗಳು ಲುಪ್ತಗೊಂಡಿರುವುದರಿಂದ ಅನೇಕ ವಿದ್ವಾಂಸರು ಸಹಮತದಿಂದ ಕೆಳಗಿನಂತೆ ಲುಪ್ತ ಅಕ್ಷರಗಳನ್ನು ತುಂಬಿದ್ದಾರೆ:


"ಸಂಗನ ಬಸವನ ಅಗ್ರಜ ಲಿಂಗೈಕ್ಯಂ ದೇವರಾಜಮುನಿಪನ ತನಯಂ|

ಜಂಗಮ ಪರಸುಂ ಕಾವ(ಬಸವ)ರ 

ಸಂಗಂ ಪ್ರಿಯಸುತನೆನಿಪ್ಪ ಕಲಿದೇವರಸಂ||


ಕಲಿದೇವಮುನಿಪನಾತ್ಮಜ

ಸಲೆ ಮೂಜಗದೊಳಗೆ ಮೆರೆದ ಮಾನವದೇವಂ|

ಗೆಲಿದಂ ಅಶನ ಬೆಸೆನವ

ಛಲರಧಿಕಂ ಹಾಲಬಸವಿದೇವ ಮುನೀಶಂ||"


ಇಲ್ಲಿ ಲುಪ್ತವಿರದೆ ಸ್ಪಷ್ಟವಾಗಿರುವ "ಜಂಗಮ ಪರುಸ" ಎಂಬುದು ಗಮನಿಸಬೇಕಾದ ಸಂಗತಿ!


ಈ ಶಾಸನದ ಪ್ರಕಾರ ಬಸವಣ್ಣ ಓರ್ವ ಜಂಗಮನೆನಿಸಿಕೊಳ್ಳುತ್ತಾನೆ. ಅದನ್ನು ಅನುಮೋದಿಸುವಂತೆ ಮಹಾಮಾಹೇಶ್ವರ ಎಂಬ ಪದವೂ ಇದೆ. ಈ ಮಹಾಮಾಹೇಶ್ವರ (ವೀರ ಮಾಹೇಶ್ವರ, ಪರಮ ಮಾಹೇಶ್ವರ) ಪದಗಳು ಕಾಳಾಮುಖರನ್ನು ಗುರುತಿಸುತ್ತಿದ್ದ ಪದಗಳಲ್ಲದೇ ಶರಣರು ಸಹ ಮಾಹೇಶ್ವರ ಪದವನ್ನು ೫೨೫ ಕಡೆ ೩೫೫ ವಚನಗಳಲ್ಲಿ ಬಳಸಿದ್ದಾರೆ. ಕಾಳಾಮುಖರು ವೀರಮಾಹೇಶ್ವರರೆಂದೂ ಜಂಗಮರೆಂದೂ ಗುರುತಿಸಿಕೊಂಡಿದ್ದರು.


ಹಾಗಿದ್ದರೆ ಬಸವಣ್ಣನು ಜಂಗಮ ಎನ್ನಲು ಇದೊಂದೇ ಶಾಸನವೇ ಆಧಾರವೇ? ಇದಕ್ಕೆ ಸಂಬಂಧಿಸಿದಂತೆ ಬೇರೇನಾದರೂ ಪುರಾವೆಗಳಿವೆಯೇ ಎಂದು ನೋಡಿದಾಗ ಸಿಗುವುದು ಮುನವಳ್ಳಿಯ ಶಾಸನ. ಕಾಳಾಮುಖರ ಕುರಿತು ಸಾಕಷ್ಟು ಸಂಶೋಧನೆ ಮಾಡಿರುವ ಡೇವಿಡ್ ಲೊರೆಂಜನ್ ತಮ್ಮ ಕಾಳಾಮುಖರ ಕುರಿತಾದ ಕೃತಿಯಲ್ಲಿ ಈ ಶಾಸನದ ಬಗ್ಗೆ ದಾಖಲಿಸಿದ್ದಾರೆ. ಈಗ ಆ ಶಾಸನ ಬಸವಣ್ಣನಿಗೆ ಹೇಗೆ ಸಂಬಂಧಿಸುತ್ತದೆ ಎಂದು ನೋಡೋಣ.


ಕ್ರಿ.ಶ. ೧೨೫೨ ರ ಜಗದೀಶ್ವರ ದೇವರ ಕುರಿತಾದ ಶಾಸನವು ಕಾಳಾಮುಖರ ಸರ್ವೇಶ್ವರ ಯತಿಯ ಮಗ ಕ್ರಿಯಾಶಕ್ತಿಯ ಮಗನಾದ ಸೋಮೇಶ್ವರನನ್ನು ಕೊಂಡಾಡಿ ಉಂಬಳಿ ದಾನವನ್ನು ಕೊಟ್ಟ ಶಾಸನವಾಗಿದೆ. ಇದನ್ನು ಕೊಟ್ಟವರು "ಶ್ರೀಪತು ಪರಮಮಾಹೇಶ್ವರ ದಂಣನಾಯಕ ಬಸವಿದೇವನ ಮುದ್ದು ಶ್ರೀ ಕಲಿದೇವರ ದಾಸ ಬೊಮ್ಮರಸ" ಎಂದಿದೆ. ಇದೇ ರೀತಿ ಅರ್ಜುನವಾಡದ ಶಾಸನದಲ್ಲಿಯೂ ಬಸವಣದಂಣನಾಯಕ ಅಲ್ಲದೆ ಬಸವಿದೇವ ಪದವೂ ಇದೆ. ಹಾಗಾಗಿ ಇವೆರಡೂ ಶಾಸನಗಳು ಬಸವಣ್ಣನನ್ನು ಕುರಿತಾಗಿದೆ ಎಂದು ’ಕನ್ನಡ ಶಾಸನ ಸಾಹಿತ್ಯ’ (ಸಂ ಎಂ.ಎಂ. ಕಲ್ಬುರ್ಗಿ, ಪ್ರಕಾಶನ ಚೇತನಾ ಬುಕ್ ಹೌಸ್) ಕೃತಿಯಲ್ಲಿನ ಅಧ್ಯಾಯವಾದ ’ಅರ್ಜುನವಾಡ ಶಾಸನದ ತ್ರುಟಿತಪದ್ಯ’ ಪುಟ ೨೭೦ ರಿಂದ ೨೭೭ ರಲ್ಲಿದೆ.

ಹಾಗಿದ್ದಾಗ ಬಸವಣ್ಣ ನಿಸ್ಸಂಶಯವಾಗಿ ಕಾಳಾಮುಖ ಪರಂಪರೆಯ ಜಂಗಮನೆನ್ನಬಹುದು.

(ಮುಂದುವರಿಯುವುದು)

ರವಿ ಹಂಜ

No comments:

Post a Comment

ಬಸವ ಮೂಲ, ಸನಾತನ ಶೈವ ಮೂಲ!

  "ಷಣ್ಮುಖನಿಗೆ ಪ್ರಸಾದ ಕೊಡುವುದನ್ನು ಮರೆತ ವೃಷಭನೆನ್ನುವ ಗಣನನ್ನು ಶಿವನು ಬಸವನಾಗಿ ಭೂಮಿಯಲ್ಲಿ ಜನಿಸಿ ಶಿವಭಕ್ತ ಜಂಗಮರಿಗೆ ಪ್ರಸಾದ ವಿನಿಯೋಗಿಸಿ ಪ್ರಾಯಶ್ಚಿತ್ತ...