Monday 9 September 2024

ಬಸವ ಮೂಲ, ಸನಾತನ ಶೈವ ಮೂಲ!

 


"ಷಣ್ಮುಖನಿಗೆ ಪ್ರಸಾದ ಕೊಡುವುದನ್ನು ಮರೆತ ವೃಷಭನೆನ್ನುವ ಗಣನನ್ನು ಶಿವನು ಬಸವನಾಗಿ ಭೂಮಿಯಲ್ಲಿ ಜನಿಸಿ ಶಿವಭಕ್ತ ಜಂಗಮರಿಗೆ ಪ್ರಸಾದ ವಿನಿಯೋಗಿಸಿ ಪ್ರಾಯಶ್ಚಿತ್ತ ಮಾಡಿಕೊಂಡು ಕೈಲಾಸಕ್ಕೆ ಹಿಂತಿರುಗು ಎಂದು ಶಪಿಸುತ್ತಾನೆ. ಹೀಗೆ ವೃಷಭನು ಬಸವನಾಗಿ ಬಾಗೇವಾಡಿ ಅಗ್ರಹಾರದ (ಸಂದಣಿಪ ವಿಪ್ರಸಂತಾನದಿಂಡಿದಿಡಿರ್ಪ, ಶಿವಪುರಾಣಾಗಮಕುಲಂಗಳಿಂದೆಸೆದಿರ್ಪ ಶಿವಶಾಸ್ತ್ರಘೋಷ ಸಂಗೀತದಿಂದಿಡಿದಿರ್ಪ ಅಗ್ರೇಶ್ವರಂ ಕಮ್ಮೆ ಕುಲದಿಂದೆ ಮೆರೆದಿರ್ಪ ವಿಪ್ರನಿರ್ಪಂ ಮಾದಿರಾಜ) ಮಾದಿರಾಜನ ಪತ್ನಿ ಮಾದಲಾಂಬೆಯ ಗರ್ಭದಲ್ಲಿ ಜನ್ಮವೆತ್ತಿ ಜಂಗಮ ಸೇವೆ ಕೈಗೊಂಡು ಪ್ರಾಯಶ್ಚಿತ್ತಕ್ಕೆ ಅನುವಾದನು" ಎಂಬುದು ’ಬಸವರಾಜ ದೇವರ ರಗಳೆ’ಯ ಸಂಕ್ಷಿಪ್ತ ಬಸವಮೂಲ.


ಬಸವನಂತೆಯೇ ರೇಣುಕ, ನಂಬಿಯಣ್ಣ, ಮಹಾದೇವಿಯಕ್ಕರೂ ಶಾಪಗ್ರಸ್ತರಾಗಿ ಭೂಲೋಕದಲ್ಲಿ ಜನ್ಮವೆತ್ತಿದರು ಎಂಬ ಪೌರಾಣಿಕ ಕತೆಗಳು ಈ ರಗಳೆಯಂತೆಯೇ ರಚಿತಗೊಂಡಿವೆ. ಈ ರಗಳೆಯು ಸಾಹಿತ್ಯಕ ಅಂಶಗಳಿಂದ ಮಹತ್ವದ್ದೆನ್ನಿಸಬಹುದೇ ಹೊರತು ಕಥನದಿಂದಲ್ಲ. ಇದರ ಕಥನವು ಅತ್ಯಂತ ಕಾಲ್ಪನಿಕವೂ ರೋಚಕವೂ ಮತ್ತು ಪವಾಡ ಮಹಿಮೆಯನ್ನೂ ಒಳಗೊಂಡ ಭಾರತದ ಅನೇಕ ಪುರಾಣ ಪುಣ್ಯಕತೆಗಳಂತೆಯೇ ಇದೆ. ಅದಲ್ಲದೆ ಈ ರಗಳೆಯ ಸಾಹಿತ್ಯಿಕ ತಂತ್ರವು ಭೋಗಣ್ಣ, ನಂಬಿಯಣ್ಣ, ಮಹಾದೇವಿಯಕ್ಕನ ಪುರಾಣಗಳಲ್ಲಿಯೂ ಕಾಣುವುದರಿಂದ ಇಂತಹ ಕಥಾತಂತ್ರವು ಅಂದಿನ ಕಾಲದಲ್ಲಿ ಮೇಲ್ಪಂಕ್ತಿಯಾಗಿತ್ತೆನಿಸುತ್ತದೆ. ಹಾಗೆ ನೋಡಿದರೆ ಈ ರೀತಿಯ ಕಥಾ ತಂತ್ರ ಮಾದರಿಯು ಇತ್ತೀಚಿನವರೆಗಿನ ಪುರಾಣ ಹರಿಕಥೆಗಳಲ್ಲದೆ ಪೌರಾಣಿಕ ನಾಟಕ ಸಿನೆಮಾಗಳಲ್ಲಿಯೂ ಕಾಣಬಹುದು. ಅಂತಹ ಒಂದು ಜನಪ್ರಿಯ ಮಾದರಿಯನ್ನು ಹರಿಹರ ಸೃಷ್ಟಿಸಿದ್ದಾನೆ. ಅಥವಾ ಆಗಲೇ ಜಾರಿಯಿದ್ದ ಒಂದು ಸಿದ್ಧ ಮಾದರಿಯನ್ನು ರಗಳೆಯ ತಂತ್ರಕ್ಕೆ ಅಳವಡಿಸಿಕೊಂಡಿದ್ದಾನೆ. 


ಬಿ. ಎಲ್. ರೈಸ್ ಅವರ ಮೈಸೂರು ಗೆಜೆಟಿಯರ್ ಪ್ರಕಾರ "ಬಸವಣ್ಣ ಆರಾಧ್ಯನೊಬ್ಬನ ಮಗ. ಬಿಜ್ಜಳನ ಮಹಾಮಂತ್ರಿಯ ಮಗಳನ್ನು ಮದುವೆಯಾಗಿ ಮಂತ್ರಿಯ ಅಳಿಯನೆನಿಸಿಕೊಂಡಿದ್ದನು. ಅವನ ಸೋದರಿ ಪದ್ಮಾವತಿ ಓರ್ವ ಅನುಪಮ ಸುಂದರಿ. ಆಕೆಯನ್ನು ಮೋಹಿಸಿ ಮದುವೆಯಾದ ಬಿಜ್ಜಳ ಬಸವಣ್ಣನನ್ನು ತನ್ನ ಮಹಾಮಂತ್ರಿಯಾಗಿಸಿ ಕಾಲಾಂತರದಲ್ಲಿ ದಂಡನಾಯಕನನ್ನಾಗಿಯೂ ಮಾಡಿಕೊಂಡಿದ್ದನು. ಸುಂದರ ಹೆಂಡತಿಯ ಮೋಹದಲ್ಲಿ ಬಿಜ್ಜಳನು ಮೈಮರೆತಿರುವಾಗ ಎಲ್ಲಾ ಆಡಳಿತವನ್ನು ವಹಿಸಿಕೊಂಡಿದ್ದ ಬಸವಣ್ಣನು ಹಳೆಯ ಅಧಿಕಾರಿಗಳನ್ನು ತೆಗೆದು ತನ್ನ ನಿಷ್ಠರನ್ನು ಆಯಕಟ್ಟಿನ ಜಾಗಗಳಲ್ಲಿ ಕೂರಿಸಿದನು. ಅದಲ್ಲದೆ ತನ್ನ ಅಳಿಯ ಯುವ ರಾಜಕುಮಾರನನ್ನು ತನ್ನ ಪಂಥದ ಶ್ರದ್ಧಾಳುವಾಗಿ ಮಾರ್ಪಾಡಿಸಿ ಅಧಿಕಾರವನ್ನು ಮತ್ತಷ್ಟು ಕೈವಶಮಾಡಿಕೊಂಡಿದ್ದನು. ಬಿಜ್ಜಳನಿಗೆ ಇದೆಲ್ಲವೂ ಅರಿವಾಗಿ ಬಸವನನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಲು ಯತ್ನಿಸಿದನು. ಆದರೆ ಬಸವಣ್ಣನಿಗಿದ್ದ ಬೆಂಬಲವನ್ನು ಗ್ರಹಿಸಿ ಅವನನ್ನು ದಂಡನಾಯಕ ಪದವಿಯಿಂದ ತೆಗೆದು ಕೇವಲ ಮಂತ್ರಿಸ್ಥಾನಕ್ಕೆ ಸೀಮಿತಗೊಳಿಸಿದನು. ಮುಂದೆ ಬಸವಣ್ಣನು ಬಿಜ್ಜಳನನ್ನು ಕೊಲ್ಲಿಸಿದನು. ಬಿಜ್ಜಳನ ಹಿರಿಯ ಮಗನು ತನ್ನ ತಂದೆಯ ಕೊಲೆಯ ಸೇಡು ತೀರಿಸಿಕೊಳ್ಳಲು ಬಸವಣ್ಣನನ್ನು ಬೆಂಬತ್ತಿ ಬಂದಾಗ ಬಸವಣ್ಣನು ಆತ್ಮಹತ್ಯೆ ಮಾಡಿಕೊಂಡನು. ಆದರೆ ಲಿಂಗಾಯತರ ಬಸವ ಪುರಾಣವು ಅವನು ಕೂಡಲಸಂಗಮದ ಲಿಂಗದಲ್ಲಿ ಐಕ್ಯನಾಗಿ ಮಾಯವಾದನು ಎನ್ನುತ್ತದೆ" ಎಂದು ಜೈನರ ಬಿಜ್ಜಳಾಂಕ ಕಾವ್ಯ / ಬಿಜ್ಜಳರಾಯ ಚರಿತ ಮತ್ತು ಬಸವ ಪುರಾಣಗಳ ಆಧಾರದಲ್ಲಿ ರೈಸ್ ಅವರು ದಾಖಲಿಸಿದ್ದಾರೆ. (ಪುಟ ೩೩೨, ಮೈಸೂರು ಗೆಜೆಟಿಯರ್, V.1) ರೈಸ್ ಅವರು ಬಸವಣ್ಣನನ್ನು ಓರ್ವ ಆರಾಧ್ಯನ ಮಗ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಪುರಾಣಗಳ ಮತ್ತು ಮೌಖಿಕ ಇತಿಹಾಸದ ಹಿನ್ನೆಲೆಯ ಈ ಗೆಜೆಟಿಯರ್ ಸಂಕಥನದಲ್ಲಿ ಬಸವಣ್ಣನು "ಆರಾಧ್ಯ"ನಾಗಿದ್ದನು ಎಂಬುದು ಮತ್ತು "ದಂಡನಾಯಕ"ನಾಗಿದ್ದನು ಎಂಬುದು ಗಮನಿಸಬೇಕಾದ ಅಂಶ. ಈ ಆರಾಧ್ಯರೇ ಲಿಂಗಿ ಬ್ರಾಹ್ಮಣರು, ಜಂಗಮರು ಎಂದು ಪ್ರೊ. ಎಂ ಎಂ. ಕಲಬುರ್ಗಿಯವರು ಒತ್ತಿ ಒತ್ತಿ ಪ್ರತಿಪಾದಿಸಿದ್ದಾರೆ ಎಂಬುದು ಇನ್ನೂ ವಿಶೇಷವಾಗಿ ಗಮನಿಸಬೇಕಾದ ಅಂಶ.


ಉತ್ಖನನ ತಜ್ಞರಾದ ಜೆ. ಎಫ್. ಫ್ಲೀಟ್ ಅವರು ೧೮೯೯ ರಲ್ಲಿ ಭಾರತದ ಇತರೆ ಪ್ರದೇಶಗಳಿಗಿಂತ ಕರ್ನಾಟಕವು ಹೆಚ್ಚಿನ ಸಂಖ್ಯೆಯ ಶಿಲಾಶಾಸನಗಳನ್ನು ಹೊಂದಿದೆ. ಇಲ್ಲಿನ ಉತ್ಖನನವು ಅತ್ಯಂತ ಆಶಾದಾಯಕವಾಗಿದೆ ಎಂದಿದ್ದಾರೆ. ಅದನ್ನು ಪುಷ್ಟೀಕರಿಸುವಂತೆ ಆ ಕಾಲಘಟ್ಟದಲ್ಲಿ ೨೬ ಸಾವಿರ ಶಾಸನಗಳು ಕರ್ನಾಟಕದಲ್ಲಿ ಸಿಕ್ಕಿದ್ದವು. ಆದರೆ ಇವುಗಳಲ್ಲಿ ಒಂದೇ ಒಂದು ಶಾಸನ ಬಸವಣ್ಣ ಅಥವಾ ಮತ್ಯಾವುದೇ ಶರಣರ ಕುರಿತು ಸಿಕ್ಕಿರಲಿಲ್ಲ. ಹಾಗಾಗಿ ಬಸವಣ್ಣನೆಂಬ ವ್ಯಕ್ತಿ ಕಾಲ್ಪನಿಕ ವ್ಯಕ್ತಿ ಎನಿಸಿತ್ತು. ಕೆಲವು ವಿದ್ವಾಂಸರು ಬಿಜ್ಜಳನ ಮಂತ್ರಿಯಾಗಿದ್ದ ಕಾಸಪ್ಪಯ್ಯನೇ ಬಸವಣ್ಣ ಎಂಬುವ ವಾದವನ್ನೂ ಮಂಡಿಸಿದ್ದರು. ಆದರೆ ಕಾಸಪ್ಪಯ್ಯ ಅತ್ಯಂತ ಕ್ರೂರಿಯಾಗಿದ್ದನು. ಇನ್ನು ಕೆಲವರು ಬಸವಣ್ಣನು ನಾಥಪಂಥದ ಅನುಯಾಯಿ ಎಂದೂ ಅನುಮಾನಿಸಿದ್ದರು. ಆದರೆ ಇವೆಲ್ಲವೂ ಊಹಾತ್ಮಕ ಸಂಕಥನಗಳೇ ಹೊರತು ಯಾವುದೇ ಆಧಾರಯುಕ್ತ ಸಂಶೋಧನೆಗಳೆನಿಸಿಕೊಳ್ಳಲು ಅರ್ಹವಾದವುಗಳಲ್ಲ. ಅದಕ್ಕೆ ಯಾವುದಾದರೂ ಒಂದು ಪೂರಕ ಶಾಸನದ ಪುರಾವೆಯ ಬಲ ಬೇಕಿತ್ತು. ಹಾಗಿದ್ದಾಗ ಆ ಎಲ್ಲಾ ಊಹಾಪೋಹಗಳಿಗೆ ತೆರೆಯೆಳೆದಂತೆ ಬಸವಣ್ಣನ ಕುರಿತು ೧೯೨೮ ರಲ್ಲಿ ಫ.ಗು. ಹಳಕಟ್ಟಿಯವರು ಕ್ರಿ. ಶ. ೧೨೬೦ ರ ಅರ್ಜುನವಾಡದ ಶಿಲಾಶಾಸನವನ್ನು ಬೆಳಕಿಗೆ ತಂದರು.


ಈ ಶಾಸನದ ಪ್ರಕಾರ "ಬಾಗೇವಾಡಿಯಲ್ಲಿ ಮಾದರಸ ಮತ್ತು ಮಾದಲಾಂಬಿಕೆಯರ ಮಗನಾಗಿ ಬಸವ ಉರ್ಫ್ ಸಂಗನಬಸವನು ಜನಿಸಿದ್ದನು. ಇವನ ತಂದೆಯು ಬಾಗೇವಾಡಿಯ ’ಪುರವರಧೀಶ್ವರ’ನಾಗಿದ್ದನೆಂದು ತಿಳಿದುಬರುವುದಲ್ಲದೇ ಇದೇ ರೀತಿಯಲ್ಲಿ ಬಸವಣ್ಣನ ಅಣ್ಣ ಹಾಲಬಸವಿದೇವನು ಕವಿಳಾಸ(ಪುರ)ದ ಪುರವರಧೀಶ್ವರನಾಗಿದ್ದನೆಂದೂ ತಿಳಿದುಬರುತ್ತದೆ. ಹಾಲಬಸವಿದೇವನನ್ನು ಮಾನವದೇವ, ಯತಿರಾಯ ಮತ್ತು ಮಹಾಮಾಹೇಶ್ವರ ಎಂದೆಲ್ಲಾ ಎನ್ನಲಾಗಿದೆ" ಎಂದು ಅರ್ಜುನವಾಡದ ಶಿಲಾಶಾಸನದ ವಿವರಗಳನ್ನು ಸಂಶೋಧಕರಾದ ಕೆ. ಈಶ್ವರನ್ ಅವರು ಸಂಕ್ಷಿಪ್ತವಾಗಿ ತಮ್ಮ Speaking Of Basava: Lingayat Religion And Culture In South Asia, By K. Ishwaran (Chapter - Inscriptions) ಕೃತಿಯಲ್ಲಿ ವಿವರಿಸಿದ್ದಾರೆ.


ಇಲ್ಲಿ ಬಸವಣ್ಣನ ಅಣ್ಣನನ್ನು "ಮಹಾಮಾಹೇಶ್ವರ" ಎಂದಿರುವುದು ಗಮನಿಸಬೇಕಾದ ಸಂಗತಿ!


ಇನ್ನು ಕನ್ನಡ ಸಂಸ್ಕೃತಿ ಇಲಾಖೆಯು ಪ್ರಕಟಿಸಿರುವ ’ಮಧುರಚೆನ್ನರ ಲೇಖನಗಳು, ಸಂ. ಗುರುಲಿಂಗ ಕಾಪಸೆ’ ಕೃತಿಯಲ್ಲಿ ಅರ್ಜುನವಾಡ ಶಿಲಾಶಾಸನದ ಪೂರ್ಣಪಾಠವನ್ನು ಕೊಟ್ಟಿದ್ದಾರೆ. ಆಸಕ್ತರು ಗಮನಿಸಬಹುದು. ಅದೇ ರೀತಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ’ಶಾಸನ ಸಂಗ್ರಹ, ಸಂ. ಎ.ಎಮ್. ಅಣ್ಣೀಗೇರಿ’ ಕೃತಿಯಲ್ಲಿ ಸಹ ಈ ಶಾಸನದ ಪೂರ್ಣಪಾಠವಿದೆ.


ಇರಲಿ, ಇಲ್ಲಿ ಬಸವಣ್ಣನ ಪರಿವಾರದ ಕುರಿತಾದ ಬಹುಮುಖ್ಯ ಸಾಲುಗಳು ಹೀಗಿವೆ:


"ಸಂಗನ ಬಸವನ ಅಗ್ರ* 

*ಂಗೈಕ್ಯಂ ದೇವರಾಜಮುನಿಪನ ತನಯಂ|

ಜಂಗಮ ಪರಸುಂ ***ರ

ಸಂಗಂ ಪ್ರಿಯಸುತನೆನಿಪ್ಪ ಕಲಿದೇವರಸಂ||"


ಇಲ್ಲಿ * ಇರುವ ಅಕ್ಷರಗಳು ಲುಪ್ತಗೊಂಡಿರುವುದರಿಂದ ಅನೇಕ ವಿದ್ವಾಂಸರು ಸಹಮತದಿಂದ ಕೆಳಗಿನಂತೆ ಲುಪ್ತ ಅಕ್ಷರಗಳನ್ನು ತುಂಬಿದ್ದಾರೆ:


"ಸಂಗನ ಬಸವನ ಅಗ್ರಜ ಲಿಂಗೈಕ್ಯಂ ದೇವರಾಜಮುನಿಪನ ತನಯಂ|

ಜಂಗಮ ಪರಸುಂ ಕಾವ(ಬಸವ)ರ 

ಸಂಗಂ ಪ್ರಿಯಸುತನೆನಿಪ್ಪ ಕಲಿದೇವರಸಂ||


ಕಲಿದೇವಮುನಿಪನಾತ್ಮಜ

ಸಲೆ ಮೂಜಗದೊಳಗೆ ಮೆರೆದ ಮಾನವದೇವಂ|

ಗೆಲಿದಂ ಅಶನ ಬೆಸೆನವ

ಛಲರಧಿಕಂ ಹಾಲಬಸವಿದೇವ ಮುನೀಶಂ||"


ಇಲ್ಲಿ ಲುಪ್ತವಿರದೆ ಸ್ಪಷ್ಟವಾಗಿರುವ "ಜಂಗಮ ಪರುಸ" ಎಂಬುದು ಗಮನಿಸಬೇಕಾದ ಸಂಗತಿ!


ಈ ಶಾಸನದ ಪ್ರಕಾರ ಬಸವಣ್ಣ ಓರ್ವ ಜಂಗಮನೆನಿಸಿಕೊಳ್ಳುತ್ತಾನೆ. ಅದನ್ನು ಅನುಮೋದಿಸುವಂತೆ ಮಹಾಮಾಹೇಶ್ವರ ಎಂಬ ಪದವೂ ಇದೆ. ಈ ಮಹಾಮಾಹೇಶ್ವರ (ವೀರ ಮಾಹೇಶ್ವರ, ಪರಮ ಮಾಹೇಶ್ವರ) ಪದಗಳು ಕಾಳಾಮುಖರನ್ನು ಗುರುತಿಸುತ್ತಿದ್ದ ಪದಗಳಲ್ಲದೇ ಶರಣರು ಸಹ ಮಾಹೇಶ್ವರ ಪದವನ್ನು ೫೨೫ ಕಡೆ ೩೫೫ ವಚನಗಳಲ್ಲಿ ಬಳಸಿದ್ದಾರೆ. ಕಾಳಾಮುಖರು ವೀರಮಾಹೇಶ್ವರರೆಂದೂ ಜಂಗಮರೆಂದೂ ಗುರುತಿಸಿಕೊಂಡಿದ್ದರು.


ಹಾಗಿದ್ದರೆ ಬಸವಣ್ಣನು ಜಂಗಮ ಎನ್ನಲು ಇದೊಂದೇ ಶಾಸನವೇ ಆಧಾರವೇ? ಇದಕ್ಕೆ ಸಂಬಂಧಿಸಿದಂತೆ ಬೇರೇನಾದರೂ ಪುರಾವೆಗಳಿವೆಯೇ ಎಂದು ನೋಡಿದಾಗ ಸಿಗುವುದು ಮುನವಳ್ಳಿಯ ಶಾಸನ. ಕಾಳಾಮುಖರ ಕುರಿತು ಸಾಕಷ್ಟು ಸಂಶೋಧನೆ ಮಾಡಿರುವ ಡೇವಿಡ್ ಲೊರೆಂಜನ್ ತಮ್ಮ ಕಾಳಾಮುಖರ ಕುರಿತಾದ ಕೃತಿಯಲ್ಲಿ ಈ ಶಾಸನದ ಬಗ್ಗೆ ದಾಖಲಿಸಿದ್ದಾರೆ. ಈಗ ಆ ಶಾಸನ ಬಸವಣ್ಣನಿಗೆ ಹೇಗೆ ಸಂಬಂಧಿಸುತ್ತದೆ ಎಂದು ನೋಡೋಣ.


ಕ್ರಿ.ಶ. ೧೨೫೨ ರ ಜಗದೀಶ್ವರ ದೇವರ ಕುರಿತಾದ ಶಾಸನವು ಕಾಳಾಮುಖರ ಸರ್ವೇಶ್ವರ ಯತಿಯ ಮಗ ಕ್ರಿಯಾಶಕ್ತಿಯ ಮಗನಾದ ಸೋಮೇಶ್ವರನನ್ನು ಕೊಂಡಾಡಿ ಉಂಬಳಿ ದಾನವನ್ನು ಕೊಟ್ಟ ಶಾಸನವಾಗಿದೆ. ಇದನ್ನು ಕೊಟ್ಟವರು "ಶ್ರೀಪತು ಪರಮಮಾಹೇಶ್ವರ ದಂಣನಾಯಕ ಬಸವಿದೇವನ ಮುದ್ದು ಶ್ರೀ ಕಲಿದೇವರ ದಾಸ ಬೊಮ್ಮರಸ" ಎಂದಿದೆ. ಇದೇ ರೀತಿ ಅರ್ಜುನವಾಡದ ಶಾಸನದಲ್ಲಿಯೂ ಬಸವಣದಂಣನಾಯಕ ಅಲ್ಲದೆ ಬಸವಿದೇವ ಪದವೂ ಇದೆ. ಹಾಗಾಗಿ ಇವೆರಡೂ ಶಾಸನಗಳು ಬಸವಣ್ಣನನ್ನು ಕುರಿತಾಗಿದೆ ಎಂದು ’ಕನ್ನಡ ಶಾಸನ ಸಾಹಿತ್ಯ’ (ಸಂ ಎಂ.ಎಂ. ಕಲ್ಬುರ್ಗಿ, ಪ್ರಕಾಶನ ಚೇತನಾ ಬುಕ್ ಹೌಸ್) ಕೃತಿಯಲ್ಲಿನ ಅಧ್ಯಾಯವಾದ ’ಅರ್ಜುನವಾಡ ಶಾಸನದ ತ್ರುಟಿತಪದ್ಯ’ ಪುಟ ೨೭೦ ರಿಂದ ೨೭೭ ರಲ್ಲಿದೆ.

ಹಾಗಿದ್ದಾಗ ಬಸವಣ್ಣ ನಿಸ್ಸಂಶಯವಾಗಿ ಕಾಳಾಮುಖ ಪರಂಪರೆಯ ಜಂಗಮನೆನ್ನಬಹುದು.

(ಮುಂದುವರಿಯುವುದು)

ರವಿ ಹಂಜ

Tuesday 27 August 2024

ಕೇವಲ ಮುಖಪುಟ ನೋಡಿ ವೀರಾವೇಶವೇ ?

 


ಷಟಸ್ಥಲ ಸಿದ್ಧಾಂತದ ಪ್ರತಿಪಾದಕರಾದ ಚೆನ್ನಬಸವಣ್ಣನ ಹುಟ್ಟಿನ ಬಗ್ಗೆ ಪ್ರೊ. ಎಂ. ಎಂ. ಕಲಬುರ್ಗಿಯವರು ಸಂಶೋಧನೆ ನಡೆಸಿ, "ಚೆನ್ನಬಸವಣ್ಣನು ಬಸವಣ್ಣನವರ ಸೋದರಿ ಅಕ್ಕನಾಗಮ್ಮ ಮತ್ತು ಡೋಹರ ಕಕ್ಕಯ್ಯನಿಗೆ ಹುಟ್ಟಿದವನು" ಎಂದು ಓರ್ವ ವಿರಕ್ತ ಪೀಠಾಧಿಪತಿಗಳಿಗೆ ತಿಳಿಸಿದರು. ವಿರಕ್ತರು, "ಓಹ್, ಹಾಗಿದ್ದರೆ ಈ ವಿಚಾರವನ್ನು ಏಕೆ ಎಲ್ಲಿಯೂ ದಾಖಲಿಸಿಲ್ಲ?" ಎಂದದ್ದಕ್ಕೆ, ಕೆಳಜಾತಿಯ ಕಕ್ಕಯ್ಯನನ್ನು ಆಕ್ಕನಾಗಮ್ಮ ಮದುವೆಯಾಗಿದ್ದಳು ಎಂದರೆ ಅದು ಅವಮಾನಕಾರವೆಂದು ಬಗೆದು ಅದನ್ನು ಮುಚ್ಚಿಡಲಾಗಿದೆ ಎಂಬುದು ಕಲಬುರ್ಗಿಯವರ ರೋಚಕ ಸಂಶೋಧನೆಯಾಗಿತ್ತು. 


ಸರಿ, ಅದಕ್ಕೆ ಆಧಾರವೇನು ಎಂದದ್ದಕ್ಕೆ ಕೆಲವು ಪುರಾಣಗಳಲ್ಲಿ ಚೆನ್ನಬಸವಣ್ಣನು ಕಕ್ಕಯ್ಯನ "ಪ್ರಸಾದದಿಂದ" ಹುಟ್ಟಿದನು ಎಂದಿದೆ. ವಾಚ್ಯವಾಗಿ ಹೇಳಲಾಗದ್ದನ್ನು ಪುರಾಣಗಳಲ್ಲಿ ಹೀಗೆ ಸೂಚ್ಯವಾಗಿ ಹೇಳಲಾಗಿದೆ ಎಂಬುದು ಅವರ ಪುರಾವೆಯಾಗಿತ್ತು.


ಅವರ ನವರಸ-ಸಂಶೋಧನೆಯಿಂದ ರೋಮಾಂಚನಗೊಂಡ ವಿರಕ್ತ ಮಹಾಸ್ವಾಮಿಗಳು ೨೬-೧೦-೧೯೮೦ರ ಕಾರ್ಯಕರ್ತರ ಮಹಾಸಭೆಯಲ್ಲಿ, "ಚೆನ್ನಬಸವಣ್ಣನು ಡೋಹರ ಕಕ್ಕಯ್ಯನ ಮಗ. ಈ ಜನ್ಮರಹಸ್ಯವನ್ನು ನಾಡಿನ ಖ್ಯಾತ ಸಂಶೋಧಕರು ಕಂಡುಹಿಡಿದಿದ್ದಾರೆ" ಎಂದು ಘೋಷಣೆ ಮಾಡಿದ್ದರು.


ಇದೇ ತರ್ಕವನ್ನು "ನಿನ್ನ ಪ್ರಸಾದ ನಾನಯ್ಯ" ಎಂಬ ವಚನ ವಿನಯದ ಮಾತಿಗೆ ಅನ್ವಯಿಸಿದರೆ ಆಗುವ ಅನರ್ಥ ಎಂತಹದ್ದಿರಬಹುದು?!?! ಖುದ್ದು ಚನ್ನಬಸವಣ್ಣನೇ ನಾನು ನಿಮ್ಮ ಪ್ರಸಾದ ಎಂದು ಬಸವಣ್ಣನ ಕುರಿತು ಕೆಳಗಿನ ವಚನದಲ್ಲಿ ಹೇಳಿದ್ದಾನೆ. 


"ಧರೆಯಾಕಾಶವಿಲ್ಲದಂದು, ಅನಲ ಪವನ ಜಲ ಕೂರ್ಮರಿಲ್ಲದಂದು,

ಚಂದ್ರಸೂರ್ಯರೆಂಬವರು ಕಳೆದೋರದಂದು,

ಆತ್ಮಸ್ಥಲ ಅನುಭಾವಕ್ಕೆ ಬಾರದಂದು,

ನಿತ್ಯನಿಜಲಿಂಗವ ಬಲ್ಲರಾರಯ್ಯ ನೀವಲ್ಲದೆ ?

ಮಹಾಘನಕ್ಕೆ ಘನವಾಹನವಾಗಿ, ಅಗಮ್ಯಸ್ಥಾನದಲ್ಲಿ ನಿಂದು

ಭರಿತರಾಗಿರಬಲ್ಲರಾರಯ್ಯಾ ನೀವಲ್ಲದೆ ?

ನಿಮ್ಮ ಒಕ್ಕು ಮಿಕ್ಕ ಶೇಷಪ್ರಸಾದದ ಕಾರುಣ್ಯದ ಶಿಶುವಾಗಿ ಒಡಲೊಳಗೆ ಇದ್ದಲ್ಲಿ

ವಿಭೂತಿ ಪಟ್ಟವ ಕಟ್ಟಿ, ಹಸ್ತಮಸ್ತಕಸಂಯೋಗವ ಮಾಡಿ

ಎನ್ನನುಳುಹಿದರಾರಯ್ಯ ನೀವಲ್ಲದೆ ?

ಕೂಡಲಚೆನ್ನಸಂಗಮದೇವರ ಸಾಕ್ಷಿಯಾಗಿ

ನಾನು ನಿಮ್ಮ ಕರುಣದ ಕಂದನೆಂಬುದ ಮೂರುಲೋಕ ಬಲ್ಲುದು ಕಾಣಾ ಸಂಗನಬಸವಣ್ಣ"


ಇಲ್ಲಿ ಡಾ: ಎಂ.ಎಂ. ಕಲಬುರ್ಗಿಯವರ ಸಂಶೋಧನಾ "ಪ್ರಸಾದ"ದ ತರ್ಕವನ್ನು ಅನ್ವಯಿಸಿದರೆ ಆಗುವ ಅಧ್ವಾನವನ್ನು ಯೋಚಿಸಿದರೆ....ಓಂ ಶ್ರೀ ಗುರು ಬಸವಲಿಂಗಾಯ ನಮಃ!

***

ಇನ್ನು ವೀರಶೈವ ಪದವನ್ನು ವಚನಗಳಲ್ಲಿ ತುರುಕಲಾಗಿದೆ ಎನ್ನುವವರು ಪ್ರಮುಖವಾಗಿ ಖ್ಯಾತ ಸಂಶೋಧಕರಾದ ಎಂ.ಎಂ. ಕಲ್ಬುರ್ಗಿಯವರ ಕಡೆಯೇ ಬೆರಳು ತೋರುತ್ತಾರೆ. ಅದಕ್ಕೆ ತಕ್ಕಂತೆ ಪ್ರೊ. ಕಲ್ಬುರ್ಗಿಯವರು ವೀರಶೈವ ಎಂಬ ಪದಬಳಕೆಯಾಗಿರುವ ಬಸವ, ಅಲ್ಲಮ, ಅಕ್ಕನ ವಚನಗಳನ್ನು ಪ್ರಕ್ಷೇಪ ವಚನಗಳೆಂದು ತಿರಸ್ಕರಿಸುತ್ತಾರೆ (ಅವರ ಪೂರ್ವೋಕ್ತ ಕೃತಿ, ಪುಟ ೧೪). ಆದರೆ ಅವು ಏಕೆ ಪ್ರಕ್ಷೇಪ ಎನ್ನಲು ಸಮರ್ಥ ಕಾರಣಗಳನ್ನು ಕೊಡುವುದಿಲ್ಲ. ಆದಲ್ಲದೆ ಲಿಂಗಾಯತ ಎಂಬ ಪದ ಬಳಕೆಯ ವಚನಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವುದಕ್ಕೆ ಸಹ ಅವರು ಯಾವುದೇ ಸಮಜಾಯಿಷಿ ಕೊಟ್ಟಿಲ್ಲ. 


ಆದರೆ ಹೀಗಿದ್ದೂ ವೀರಶೈವ ಎಂದಿರುವ ಎಲ್ಲಾ ಪ್ರಕ್ಷಿಪ್ತ ವಚನಗಳನ್ನು ಇವರ ಸಂಪಾದಕತ್ವದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗಿದೆ....ಓಂ ಶ್ರೀ ಗುರು ಬಸವಲಿಂಗಾಯ ನಮಃ!

***

ಪ್ರೊ. ಕಲ್ಬುರ್ಗಿಯವರ ಕೃತಿ "ಲಿಂಗಾಯತ ಸ್ವತಂತ್ರ ಧರ್ಮ"ದಲ್ಲಿನ ’ವೀರಶೈವ ಇತಿಹಾಸ ಮತ್ತು ಭೂಗೋಲ’ ಎಂಬ ಅಧ್ಯಾಯದಲ್ಲಿ "ಹದಿಮೂರನೇ ಶತಮಾನದ ಪಾಲ್ಕುರಿಕೆ ಸೋಮನಾಥನ ತೆಲುಗು ಭಾಷೆಯಲ್ಲಿರುವ ’ಬಸವಪುರಾಣ’ದಲ್ಲಿ ಲಿಂಗವಂತ, ವೀರಮಾಹೇಶ್ವರ ಪದಗಳಿವೆಯಾದರೂ ವೀರಶೈವ ಪದ ಕಂಡುಬರುವುದಿಲ್ಲ" ಎನ್ನುತ್ತಾ "ಬಸವಪುರಾಣವನ್ನು ಕನ್ನಡಕ್ಕೆ ಅನುವಾದಿಸಿದ ಭೀಮಕವಿಯು (ಕ್ರಿ. ಶ. ೧೩೬೮) ಕೆಲವೊಮ್ಮೆ ಅಲ್ಲಿಯ ವೀರಮಾಹೇಶ್ವರ ಪದಕ್ಕೆ ಬದಲು ಇಲ್ಲಿ ವೀರಶೈವ ಪದವನ್ನು ಬಳಸಿದ್ದಾನೆ. ಕನ್ನಡದಲ್ಲಿ ವೀರಶೈವ ಪದ ಕಂಡುಬರುವುದು ಇದೇ ಮೊದಲು. ಹಾಗಾಗಿ ವೀರಶೈವ ಪದ ಪಾಲ್ಕುರಿಕೆ ಸೋಮೇಶನ ತೆಲುಗು ಬಸವಪುರಾಣಮು ಮತ್ತು ಭೀಮಕವಿಯ ಕನ್ನಡ ಬಸವಪುರಾಣದ ಮಧ್ಯದ ಕಾಲಾವದಿಯಲ್ಲಿ ಹುಟ್ಟಿದೆಯೆಂದು ಸ್ಪಷ್ಟವಾಗಿ ಹೇಳಬಹುದು" ಎನ್ನುತ್ತಾರೆಯೇ ಹೊರತು ಇದರಲ್ಲಿ ಲಿಂಗಾಯತ ಪದವೂ ಇಲ್ಲದ್ದನ್ನು ಮಾತ್ರ ಅವರು ಹೇಳುವುದಿಲ್ಲ.  ಹಾಗೆಯೇ ಮುಂದುವರಿಯುತ್ತ ಪ್ರೊ. ಕಲ್ಬುರ್ಗಿಯವರು "ಈ ಸಂದರ್ಭದಲ್ಲಿ ’ಆಂಧ್ರಪ್ರದೇಶದ ವೀರಶೈವ’ ವಿಷಯವನ್ನು ಕುರಿತ ಪಿಹೆಚ್ಡಿ ಪ್ರಬಂಧದಲ್ಲಿ ಹೇಳಲಾಗಿರುವ ’ Palakuriki Somanatha was the earliest to use word Virashaiva in Andhra. In his Chaturveda Saram, Somanatha describes lord Hari as Virashaiva, because the latter performed certain heroic deeds, such as offering his own eyes to Shiva, as a token of deep devotion. In Basava Puranam however, he appears to have give deeper meaning to Virashaiva, though the word was not actually used. (Virashaiva in Andhra, K. Lalitamba p 2)' ಅಭಿಪ್ರಾಯವನ್ನು ಅವಶ್ಯ ಗಮನಿಸಬೇಕು" ಎನ್ನುತ್ತಾರೆ.


ಆದರೆ ಈ ಮೇಲಿನ ಪಿಹೆಚ್ಡಿ ಉದಾರಹಣೆಯಲ್ಲೇ "ಪಾಲ್ಕುರಿಕಿ ಸೋಮನಾಥನು ತನ್ನ ’ಚಾತುರ್ವೇದ ಸಾರಂ’ ಕೃತಿಯಲ್ಲಿ ವೀರಶೈವ ಪದವನ್ನು ಆಂಧ್ರದಲ್ಲಿ ಪ್ರಪ್ರಥಮವಾಗಿ ಬಳಸಿದ್ದಾನೆ. ಬಸವಪುರಾಣದಲ್ಲಿ ವೀರಶೈವ ಪದವನ್ನು ಬಳಸದಿದ್ದರೂ ಅದನ್ನು ಇನ್ನಷ್ಟು ಗಾಢವಾಗಿಸಿದ್ದಾನೆ ಎನ್ನುವ ಲಲಿತಾಂಬ ಅವರ ಇಂಗ್ಲಿಷ್ ಒಕ್ಕಣೆಯನ್ನು ಅರಿಯುವಷ್ಟು ಇಂಗ್ಲಿಷ್ ಪ್ರೌಢಿಮೆ ಪ್ರೊ. ಕಲ್ಬುರ್ಗಿಯವರಿಗೆ ಇರಲಿಲ್ಲವೇ?! ಇದ್ದರೆ ಈ ಒಕ್ಕಣೆಯನ್ನು ಬಿಟ್ಟು ಉಳಿದದ್ದನ್ನು ಏಕೆ ಹೆಕ್ಕಿಕೊಂಡರು....ಓಂ ಶ್ರೀ ಗುರು ಬಸವಲಿಂಗಾಯ ನಮಃ!

***

ಇಂತಹ ಅವಘಡಗಳ ಸಾಲು ಸಾಲು ಸಾಧನೆಗಳು ಪ್ರೊಫೆಸರರ ತೆಕ್ಕೆಯಲ್ಲಿವೆ. ಇಂತಹ ಸಂಶೋಧಕರನ್ನೇ ಇಂದಿನ ರಾಜಕಾರಣಪ್ರೀತ ಆಧುನಿಕ ಲಿಂಗಾಯತ ಧರ್ಮದ ಹೋರಾಟಗಾರರು ತಮ್ಮ "ಸಂಶೋಧನಾ ಲಾಂಛನ"ವಾಗಿರಿಸಿಕೊಂಡು ಅವರ "ಪ್ರಸಾದ"ದ ಸಿದ್ಧಮಾದರಿ ಸಂಶೋಧನೆಯಲ್ಲಿ ವಚನಗಳನ್ನು ಗೆರೆ ಕೆರೆ ದರ್ಗಾ ಮುರ್ಗಾ ಚರ್ಗಾ ಜಮಾಖರ್ಚುದಾರರು, ಕಮ್ಯೂನಿಸ್ಟರು, ಉದಾರಿಗಳು, ವಾಟ್ಸಾಪಿವೀರರು ತಮ್ಮ ತಮ್ಮ ಮೂಗಿನ ನೇರಕ್ಕೆ ಸಿದ್ಧಾಂತಕ್ಕೆ ವಚನಗಳನ್ನು ವ್ಯಾಖ್ಯಾನಿಸಿ/ಸಮೀಕರಿಸಿ ಮಾಡಿರುವ ಅಧ್ವಾನಗಳು, ಜಗದಗಲ ಮುಗಿಲಗಲ........ಓಂ ಶ್ರೀ ಗುರು ಬಸವಲಿಂಗಾಯ ನಮಃ!


ಇನ್ನು ಅಂದು ಇವರ ಸಂಶೋಧನೆ ನಂಬಿ ಭೀಷಣ-ಭಾಷಣ ಮಾಡಿದ್ದ ವಿರಕ್ತರ ಮುಂತಲೆಗಳು ತಮ್ಮ ಹೆಸರಿನ ಹಿಂದಿರುತ್ತಿದ್ದ ಶ್ರೀ ಮ.ನಿ.ಪ್ರ. ಕ್ಕೆ ತಿಲಾಂಜಲಿಯಿಟ್ಟು ಮಾತೃ ಹೃದಯಿ, ರೈತ ಋಣಿ, ವಿದ್ಯಾಗಣಿ, ಕಲ್ಯಾಣಕಣ್ಮಣಿ, ರಂಗಜಂಗಮ,  ಮುಂತಾದ ಚಿಂತಕ ಬೆಡಗಿನ ಬಿರುದುಗಳೊಂದಿಗೆ ಕಲಬುರ್ಗಿ-ಸಂಶೋಧನಾ ಪರಂಪರೆಯ ಕಮ್ಯೂನಿಸ್ಟ್ ಪ್ರೊಫೆಸರರುಗಳು ಪೊಡಮಟ್ಟ ಗೌರವ "ಡಾ" ಇಟ್ಟುಕೊಂಡು ತಮ್ಮ ಅನುರಕ್ತಿಯನ್ನು ಮೆರೆಯುತ್ತಿರುವುದು....ಓಂ ಶ್ರೀ ಗುರು ಬಸವಲಿಂಗಾಯ ನಮಃ!


ಪ್ರಚಲಿತ "ವಚನ ದರ್ಶನ" ಕೃತಿಯ ಹಿನ್ನೆಲೆಯಲ್ಲಿ ಕೇವಲ ಮುಖಪುಟ ನೋಡಿ ವೀರಾವೇಶ ಮೆರೆಯುತ್ತಿರುವ ಇವರ ನಡೆ ಹಾಸ್ಯಾಸ್ಪದ. ಇವರ ವಚನ ವ್ಯಾಖ್ಯಾನ ಮಾತ್ರವೇ ಸರಿ. ಉಳಿದವರದು ತಪ್ಪು ಎಂದು ಫರ್ಮಾನು ಹೊರಡಿಸಿದ್ದಾರೆ. ಅಷ್ಟರ ಮಟ್ಟಿಗೆ ವಚನ ಸಾಹಿತ್ಯದ ಮೇಲೆ ಕಮ್ಯುನಿಸ್ಟರ ಹಕ್ಕೊತ್ತಾಯವಾಗಿದೆ.  ಈ ಹಿನ್ನೆಲೆಯಲ್ಲಿ ಓರ್ವ ವಾಟ್ಸಾಪಿ ವೀರರು ವಚನದರ್ಶನದ ಗೌರವ ಸಂಪಾದಕರಿಗೆ ಕೇಳಿದ ವಚನ ಹೀಗಿತ್ತು.

"ಕಟ್ಟಿದ ಲಿಂಗವ ಕಿರಿದು ಮಾಡಿ,

ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ!

ಇಂತಪ್ಪ ಲೊಟ್ಟಿಮೂಳರ ಕಂಡರೆ

ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು

ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ"


ಇಂದು ತಾಯಂದಿರು ತಮ್ಮ ಪ್ರಾಥಮಿಕ ಶಾಲೆಯಲ್ಲಿರುವ ಮಕ್ಕಳಿಗೆ ಟಿವಿ ನೋಡಬೇಡ, ಮೊಬೈಲ್ ಮುಟ್ಟಬೇಡ, ಕಂಪ್ಯೂಟರ್ ಗೇಮ್ ಆಡಬೇಡ. ಕೇವಲ ಪುಸ್ತಕಗಳನ್ನು ಓದು. ಹೋಂ ವರ್ಕ್ ಮಾಡು. ಇಲ್ಲದಿದ್ದರೆ ಹೊಡೆಯುತ್ತೇನೆ ಎನ್ನುವುದರ ಹಿಂದಿನ ಉದ್ದೇಶವೇ ಈ ವಚನದ ಹಿಂದಿನ ಉದ್ದೇಶ ಸಹ. ಲಿಂಗವೆಂದು ಕಲ್ಲು ಕಟ್ಟಿಕೊಂಡು ಬಂದವರನ್ನೆಲ್ಲ ಅನುಭವ ಮಂಟಪಕ್ಕೆ ಸೇರಿಸಿಕೊಂಡ ಬಸವಣ್ಣ, ಬೇರೆಲ್ಲ ಬಿಟ್ಟು ಮೊದಲು ಲಿಂಗಪೂಜೆಯಲ್ಲಿ ಸಾಧನೆ ಮಾಡಿ ಎಂಬ ಉದ್ದೇಶವನ್ನು ಅಂಬಿಗರ ಚೌಡಯ್ಯ ಹೀಗೆ ವಾಚ್ಯವಾಗಿ ಹೇಳಿದ್ದಾನೆ.  ಇದನ್ನು ಕಮ್ಯುನಿಸ್ಟ್ ಪ್ರಣೀತರು ಮೂರ್ತಿಪೂಜೆ, ದೇವಾಲಯಗಳನ್ನು ಶರಣರು ಬಹಿಷ್ಕರಿಸಿದ್ದರು ಎಂಬ ತಮ್ಮ ಸಿದ್ಧಾಂತದ ಪುರಾವೆಯಾಗಿ ಬಳಸುತ್ತಾರೆ.


ಇವರ ವಾದವನ್ನು ಒಪ್ಪುವುದಾದರೆ ಶ್ರೀಶೈಲ ಬೆಟ್ಟದ ಲಿಂಗವ ಹಿರಿದು ಮಾಡಿದ ಅಕ್ಕಮಹಾದೇವಿ, ನದಿ ಸಂಗಮದ, ಗುಹೆಯಲ್ಲಿನ ಸ್ಥಾವರದ ಲಿಂಗಗಳ ಅಂಕಿತ ಮಾಡಿಕೊಂಡ ಬಸವಣ್ಣ, ಅಲ್ಲಮರ ನಡೆಗೆ ಇದನ್ನು ಅನ್ವಯಿಸಿದರೆ ಆಗುವ ಅಧ್ವಾನ.........ಓಂ ಶ್ರೀ ಗುರು ಬಸವಲಿಂಗಾಯ ನಮಃ!


ಅಂದ ಹಾಗೆ ಬಸವಾದಿ ಪ್ರಮಥರು ಬೋಧಿಸಿದ/ ಧ್ಯಾನಿಸಿದ/ಸಾಧಿಸಿದ ಮಂತ್ರ, ಓಂ ನಮಃ ಶಿವಾಯ ಎಂಬ ಷಡಕ್ಷರಿ ಅಥವಾ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರ! 


ಈ ಮೂಲಮಂತ್ರವನ್ನೇ ಮೂಲೋಚ್ಚಾಟನೆ ಮಾಡಿ ರಾಜಕಾರಣಕ್ಕಾಗಿ ಬಸವರಾಜಕಾರಣವ್ಹಿಡಿದು "ಪ್ರಸಾದೀ"ಕರಣ ತಂತ್ರ ಬಳಸಿ ಸಾಮಾಜಿಕ ಲಾಭಕ್ಕಾಗಿ ಓಂ ಗುರು ಬಸವಲಿಂಗಾಯ ನಮಃ ಎಂದು ಘೋಷಿಸುತ್ತ ಮತ್ತೊಂದು ಮಗದೊಂದಕ್ಕೆ ಮಾಡುತ್ತಿರುವ ಕುರುಹಿನ ಹೆಡ್ಡರಿಂದ ಅರುಹಿನ ಲಿಂಗಾಯತವನ್ನು ಕಾಪಾಡಬೇಕಿದೆ.


ಆರುಹ ಪೂಜಿಸಲೆಂದು ಕುರುಹ ಕೊಟ್ಟೆಡೆ 

ಅರುಹ ಮರೆತು ಕುರುಹ ಪೂಜಿಸುವ 

ಹೆಡ್ಡರಾ ನೋಡಾ ಗುಹೇಶ್ವರ!!


ವಿ. ಸೂ: ಪ್ರೊ ಎಂ. ಎಂ. ಕಲಬುರ್ಗಿಯವರ "ಪ್ರಸಾದ" ಸಂಶೋಧನೆಯ ವಿಚಾರದ ಪುರಾವೆ ಮತ್ತು ಹೆಚ್ಚಿನ ಮಾಹಿತಿಗೆ ಆಸಕ್ತರು ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಜಗದ್ಗುರುಗಳ ರಜತ ಮಹೋತ್ಸವದ ಸ್ಮರಣ ಸಂಚಿಕೆಯಾದ "ಚಿನ್ಮೂಲಾದ್ರಿ ಚೇತನ"ದಲ್ಲಿನ ಎಲ್. ಬಸವರಾಜು ಅವರ ಲೇಖನವನ್ನು ಪರಾಂಭರಿಸಬಹುದು. ಅಲ್ಲದೇ ಈ ರಜತ ಮಹೋತ್ಸವದ ಸಮಾರಂಭದಲ್ಲಿ ಹಾಜರಿದ್ದ ಪ್ರೊಫೆಸರರಿಗೆ ಅವರ ಸಂಶೋಧನೆಗಾಗಿ ಭಕ್ತರು "ತಕ್ಕ" ಉಡುಗೊರೆ ನೀಡಿದ್ದ ಐತಿಹಾಸಿಕ ಸತ್ಯದ ಬಗ್ಗೆ ತಮ್ಮ ಹಿರಿತಲೆಗಳನ್ನು ಪ್ರಶ್ನಿಸಬಹುದು.

-ರವಿ ಹಂಜ್

ವಿಶ್ವವಾಣಿ, ೨೮ ಆಗಸ್ಟ ೨೦೨೪

Saturday 24 August 2024

वचन दर्शन : श्री सदाशिवानंद स्वामी


 

वचन दर्शन : श्री सदाशिवानंद स्वामी


 

समाजात समानता आणणे हेच वचनकारांचे ध्येय : रघुनंदन


 

वचन दर्शन : श्री सदाशिवानंद स्वामी

 


वचन दर्शन : मुकुंद सी. आर.


 

ವಚನಗಳು ಮಾತ್ರ ಲಿಂಗಾಯತ ಧರ್ಮ ಗ್ರಂಥಗಳಲ್ಲ !

 




ಲಿಂಗಾಯತ ಸ್ವತಂತ್ರ ಧರ್ಮ ಎನ್ನುವ ಕೂಗನ್ನು ಒಪ್ಪಿ ಲಿಂಗಾಯತವನ್ನು ಹಿಂದೂ ಮತ್ತು ವೀರಶೈವ ಎರಡರಿಂದಲೂ ದೂರವಿಟ್ಟು ಅದನ್ನು ಸ್ವತಂತ್ರ ಧರ್ಮ ಎಂದೇ ಈಗೊಮ್ಮೆ ವಿಶ್ಲೇಷಿಸೋಣ. ಈ ಕೂಗಿಗರು ಹೇಳುವಂತೆ ಇದು ಬಸವ-ಸ್ಥಾಪಿತ ಸ್ವತಂತ್ರ ಧರ್ಮ. ಇದರ ಸಂಸ್ಥಾಪಕ ಬಸವಣ್ಣ ಮತ್ತು ಧರ್ಮಗ್ರಂಥ ವಚನ ಸಾಹಿತ್ಯ ಎನ್ನೋಣ.


ಆದರೆ ಲಿಂಗಾಯತವು ಸ್ಥಾಪಿತಗೊಂಡ ಹನ್ನೆರಡನೇ ಶತಮಾನದ ಶರಣರು ಕೇವಲ ವಚನ ಸಾಹಿತ್ಯವನ್ನಷ್ಟೇ ರಚಿಸಿಲ್ಲ. ಅದು ಪ್ರಮುಖವಾಗಿ ವಚನ ಸಾಹಿತ್ಯ ಮತ್ತು ವಚನೇತರ ಸಾಹಿತ್ಯ ಎಂಬ ಎರಡು ಬಗೆಯ ಸಾಹಿತ್ಯವನ್ನು ಹೊಂದಿದೆ.


ಈ ಧರ್ಮದ ಸಂಸ್ಥಾಪಕರಾಗಲಿ ಅಥವಾ ಅವರು ಬೋಧಿಸಿದ ಧರ್ಮಾನುಷ್ಟಾನವು ವಚನ ಸಾಹಿತ್ಯವನ್ನು ಧಾರ್ಮಿಕ ಗ್ರಂಥ ಅಥವಾ ಧರ್ಮಪಾಲನ ಮಾರ್ಗದರ್ಶಿ ಎಂದು ಎಲ್ಲಿಯೂ ಹೇಳಿಲ್ಲ. ವಚನ ಸಾಹಿತ್ಯವು ಕೇವಲ ಶ್ರೀಸಾಮಾನ್ಯನ ದೈನಂದಿನ ಜೀವನ, ಸಾಮಾಜಿಕ ನೀತಿ, ಕಾಯಕ, ದಾಸೋಹಗಳ ಮಹತ್ವವನ್ನು ತಿಳಿಸುವುದರ ಜೊತೆಗೆ ತಮ್ಮ ಧರ್ಮದ ಮಹಿಮೆ, ಗರಿಮೆ, ಪರಧರ್ಮ ಅವಹೇಳನ, ಸ್ವಧರ್ಮ ವಿಸ್ತರಣೆಯ ಸಾಧನಗಳ ಕುರಿತಾಗಿದೆಯೇ ಹೊರತು ಲಿಂಗಾಯತ ಧರ್ಮದ ಧರ್ಮಾನುಷ್ಟಾನ, ಆಧ್ಯಾತ್ಮಿಕ ಸಾಧನೆಯ ಕುರಿತಲ್ಲ. ಆ ವಿಷಯಗಳಿಗಾಗಿಯೇ ವಚನೇತರ ಸಾಹಿತ್ಯವಿದೆ. ಹಾಗೆಂದು ವಚನೇತರ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಶರಣರೇ ಹೇಳಿದ್ದಾರೆ.


ಬಸವಣ್ಣ ಮತ ವಿಸ್ತರಣೆ ಕಾಯಕದಲ್ಲಿ ತೊಡಗಿದರೆ, ಚೆನ್ನಬಸವಣ್ಣ ಮತಕ್ಕೆ ಸೇರಿದವರ ಆಚಾರ ವಿಚಾರಗಳನ್ನು ಕ್ರಮಗೊಳಿಸುವ ಕಾರ್ಯವನ್ನು ಕೈಗೊಂಡಿದ್ದನು. ಬಸವಣ್ಣನು ಲಿಂಗವೆಂದು ಕಲ್ಲು ಕಟ್ಟಿಕೊಂಡು ಬಂದವರೆಲ್ಲರಿಗೂ ಅನುಭಾವ ಮಂಟಪಕ್ಕೆ ಪ್ರವೇಶವಿತ್ತಿದ್ದರೆ, ಚೆನ್ನಬಸವಣ್ಣನ ಷಟ್ಸ್ಥಲಮಂದಿರಕ್ಕೆ ಸಾಧನೆಯ ಮಾನ್ಯತೆ ಪಡೆದವರಿಗೆ ಮಾತ್ರ ಪ್ರವೇಶವಿತ್ತು. ಪ್ರಾಣಲಿಂಗಿಯಾದ ಸಿದ್ಧರಾಮನಿಗೂ ಅಲ್ಲಿ ಪ್ರವೇಶವಿರಲಿಲ್ಲ. ರಾಜಯೋಗಿ ಎನಿಸಿದ್ದ ಸಿದ್ಧರಾಮನು ಎಲ್ಲಾ ರೀತಿಯಿಂದ ಪರಿಪೂರ್ಣನಿದ್ದರೂ ಶಿವಯೋಗರಹಸ್ಯ ಅರಿಯದ ಕಾರಣ ಅಲ್ಲಮನಿಂದ ನಿರ್ದಿಷ್ಟನಾಗಿ ಚೆನ್ನಬಸವಣ್ಣನಿಂದ ಸಂಸ್ಕಾರ ಪಡೆದ ನಂತರವೇ ಪ್ರಮಥಗಣ ಮಾಲಿಕೆ ಸೇರಿ ಇಲ್ಲಿಗೆ ಪ್ರವೇಶ ಪಡೆದನು. - ಹೀಗೆಂದು ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ವಾಗ್ಮಯ ಶಾಖೆಯು ೧೯೩೪ ರಲ್ಲಿ ಪ್ರಕಟಿಸಿದ "ಚೆನ್ನಬಸವ ಪುರಾಣ"ದ ಪ್ರಸ್ತಾವನೆಯಲ್ಲಿ ಮುರಿಗೆಪ್ಪ ಚೆಟ್ಟಿಯವರು ಬರೆದಿದ್ದಾರೆ.


ಹೀಗೆ ಲಿಂಗಾಯತ ಧರ್ಮಕ್ಕೆ ಸೇರಿದವರು ಷಟ್ಸ್ಥಲಗಳ ಮಜಲುಗಳಾದ ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣಗಳನ್ನು ಏರಿ ಅಂತಿಮವಾಗಿ ಐಕ್ಯರಾಗುತ್ತಿದ್ದರು. ಈ ಮಜಲುಗಳನ್ನು ಏರಲು ವಚನೇತರ ಸಾಹಿತ್ಯದ ಅಧ್ಯಯನ ಸಾಧನೆ ಅವಶ್ಯವಿತ್ತು.


ವಚನ ಸಾಹಿತ್ಯವು ಜನಸಾಮಾನ್ಯರ ಸಾಮಾಜಿಕ ಸಾತ್ವಿಕ ಜೀವನ ಕ್ರಮಕ್ಕೆ ಬೇಕಾದ ಕನಿಷ್ಠ ಶಿಕ್ಷಣ ಮಾರ್ಗಸೂಚಿ ಎನಿಸಿದರೆ ಹೆಚ್ಚಿನ ಸಾಧನೆಗೆ ಅನುವಾಗಲು ಸ್ನಾತಕೋತ್ತರ, "ಪೋಸ್ಟ್ ಡಾಕ್ಟೋರಲ್" ಎನ್ನಬಹುದಾದ ವಚನೇತರ ಸಾಹಿತ್ಯ ಕೃತಿಗಳಿವೆ. ಅವು ಕರಣ ಹಸಿಗೆ (ಶಾರೀರಿಕ ವಿಜ್ಞಾನ), ಮಿಶ್ರಾರ್ಪಣ - ಶರಣಸತಿ ಲಿಂಗಪತಿ ಪಾರಮಾರ್ಥಿಕ (ಸಕೀಲಗಳ ಷಟ್ಸ್ಥಳ ಸಿದ್ಧಾಂತದ ತಳಹದಿಯ ಮೇಲೆ ದೇಹೀಂದ್ರಿಯ, ಸೃಷ್ಟಿ ಶಾಸ್ತ್ರ, ಮನಃಶಾಸ್ತ್ರಗಳನ್ನು ತಾರ್ಕಿಕವಾಗಿ ಬೋಧಿಸುವ ಶಿವಯೋಗ), ಮಂತ್ರಗೋಪ್ಯ - (ಯೋಗ ಸಿದ್ಧಿ, ಆತ್ಮಸಿದ್ದಿ), ಘಟಚಕ್ರ - ಸೃಷ್ಟಿಯ ಉತ್ಪತ್ತಿ, ಪಿಂಡಾಂಡ - ಬ್ರಹ್ಮಾಂಡ ಸಂಯೋಗ, ಮತ್ತು ಅಲ್ಲಮ/ಮಹಾದೇವಿಯವರ ಸೃಷ್ಟಿ ವಚನಗಳು.


ಲಿಂಗಾಯತದ ಶರಣ ಸ್ಥಲವೇರಿದ ನಂತರ ಗಣಂಗಳು ಎಂದು ವಿಶೇಷ ಸಾಧನೆ ಅಥವಾ ಹುದ್ದೆ ಎನ್ನುವಂತಹ ಎಂಟು ಗಣಂಗಳ ಪೂಜ್ಯ ಸ್ಥಾನಗಳಿವೆ. ಈ ಸ್ಥಾನಗಳನ್ನು ಗಳಿಸಿದವರು ಚೆನ್ನಬಸವಣ್ಣನ ಷಟ್ಸ್ಥಲಮಂದಿರದ ಪ್ರವೇಶಕ್ಕೆ ಅರ್ಹರಾಗಿದ್ದರು ಎಂದು ಚೆನ್ನಬಸವ ಪುರಾಣ ಹೇಳುತ್ತದೆ. ಹಾಗಾಗಿಯೇ ಮುರಿಗೆಪ್ಪ ಚೆಟ್ಟಿಯವರು ತಮ್ಮ ಪ್ರಸ್ತಾವನೆಯಲ್ಲಿ, ಅಂತಹ ಪ್ರಮಥಗಣ ಸ್ಥಾನವನ್ನು ಪಡೆದ ನಂತರವೇ ಸಿದ್ಧರಾಮನಿಗೆ ಇಲ್ಲಿ ಪ್ರವೇಶ ಸಿಕ್ಕದ್ದು ಎಂದಿರುವುದು.


ಹೀಗೆ ಕಳಬೇಡ ಕೊಲಬೇಡ...ಎನ್ನುವ ಪಂಚಶೀಲದ ವಚನದ ಶಿಶುವಿಹಾರ ಪಠ್ಯದಿಂದ ಹಿಡಿದು ಸ್ನಾತಕೋತ್ತರದ ಸೃಷ್ಟಿ ವಚನಗಳವರೆಗಿನ ವಚನಗಳನ್ನು ಗ್ರಹಿಸಿ ಅನುಭಾವ ಪಡೆದು ನಂತರ ಪೋಸ್ಟ್ ಡಾಕ್ಟೋರಲ್ ಅನುಭಾವಕ್ಕೆ ವಚನೇತರ ಸಾಹಿತ್ಯವನ್ನು ಅಭ್ಯಸಿಸಿ ಸಾಧನೆ ಮಾಡಿ ಶರಣನಾಗಿ ಪೀಠಾಧಿಪತಿಯಾಗಿ, ಶೂನ್ಯ ಪೀಠಾಧಿಪತಿಯಾಗಿ ಸ್ಥಾನ ಗಳಿಸಲು ಸಾಧ್ಯ ಎನ್ನುತ್ತವೆ ಈ ಎಲ್ಲಾ ಲಿಂಗಾಯತ ಧರ್ಮಗ್ರಂಥಗಳು. ಜೀವನಕ್ರಿಯೆಗೆ ಅಷ್ಟಾವರಣ, ನೀತಿಗೆ ಪಂಚಾಚಾರ, ಜ್ಞಾನಕ್ಕೆ ಷಟ್ಸ್ಥಲ ಎಂಬ ಶಿಕ್ಷಣ ಮಾರ್ಗಸಾಧನೆಯ ನಂತರ ಗಣ, ಪೀಠದ ಹುದ್ದೆ.... ಇದಿಷ್ಟು ಲಿಂಗಾಯತ ಸಾಧನೆಯ ಸಿದ್ಧಿ ಮಾರ್ಗ!


ಈ ಎಲ್ಲಾ ಕಾರಣಗಳಿಂದಾಗಿ ಈ ಧರ್ಮಕೂಗಿಗರು ಹೇಳುವಂತೆ ಕೇವಲ ವಚನ ಸಾಹಿತ್ಯದ ಕಟ್ಟು ಲಿಂಗಾಯತದ ಧರ್ಮಗ್ರಂಥವಲ್ಲ! 


ಇದೇ ರೀತಿ ಪೀಠಾಧಿಪತಿಯಾಗಿ ಪಟ್ಟ ಕಟ್ಟಿ ಮಾನ್ಯ ಮಾಡಲು ಸಹ ಕಟ್ಟುನಿಟ್ಟಾದ ಕ್ರಮಗಳಿವೆ.


ಪಟ್ಟಾಧಿಕಾರದ ಪ್ರತಿಯೊಬ್ಬ ಸ್ವಾಮಿಗೂ ಈ ವಚನೇತರ

ಸಾಹಿತ್ಯದ ಒಂದು ಕಟ್ಟು ಕೊಡಲಾಗುತ್ತದೆ. ಅದರಲ್ಲೂ ಮೊದಲು ಓರ್ವ ಚರಮೂರ್ತಿಗಳಿಂದ ಅವರಿಗೆ ಶಿವ ಪುರಾಣ, ಬಸವ ಪುರಾಣ, ಚೆನ್ನಬಸವ ಪುರಾಣ ಗ್ರಂಥಗಳನ್ನು ಕೊಡಿಸಿ ಪುರಾಣ ಚರಂತಿ ಎಂದು ನೇಮಕಾತಿ ಮಾಡುತ್ತಾರೆ. ಈ ಪುರಾಣ ಚರಂತಿಯು ಮುಂದೆ ಕರಣ ಹಸಿಗೆ, ಮಂತ್ರಗೋಪ್ಯ, ಮಿಶ್ರಾರ್ಪಣ, ಸೃಷ್ಟಿ ವಚನಗಳನ್ನು ಅಭ್ಯಾಸ ಮಾಡಿ ಸಾಧನೆ ಮಾಡಿದ ನಂತರ ಅವನಿಗೆ ಸಭಾಮಧ್ಯದಲ್ಲಿ ಗುರುವಿನಿಂದ ಈ ಕೃತಿಗಳನ್ನು ಗೌರವಪ್ರಧಾನ (ಒಂದು ರೀತಿಯಲ್ಲಿ ಪದವಿ ಪ್ರದಾನ ಸಮಾರಂಭದಂತೆ) ಮಾಡಿದಾಗ ಮಾತ್ರ ಚರಂತಿಯು ವಿರಕ್ತನಾಗಿ ಪಟ್ಟಾಧಿಕಾರಿಯಾಗುವನು. ಇಲ್ಲದಿದ್ದರೆ ಆತ ಕೇವಲ ಪುರಾಣ ಚರಂತಿ ಮಾತ್ರವಾಗಿರುತ್ತಾನೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಆಸಕ್ತರು "ನಿರಂಜನ ವಂಶ ರತ್ನಾಕರ" ಕೃತಿಯನ್ನು ಪರಾಂಭರಿಸಬಹುದು.


ಹೀಗೆ ಚರಂತಿಯಾಗಿ ಗುರುವಿನಿಂದ ಪಟ್ಟ ಕಟ್ಟಿಸಿಕೊಂಡ ಒಬ್ಬನೇ ಒಬ್ಬ ವಿರಕ್ತ ಇಂದಿನ ಇಪ್ಪತ್ತೊಂದನೇ ಶತಮಾನದಲ್ಲಿ ಇಲ್ಲವೇ ಇಲ್ಲ ಎಂದೇ ಹೇಳಬಹುದು. ವಚನೇತರ ಸಾಹಿತ್ಯದಲ್ಲಿ ಜ್ಞಾನ ಪಡೆದಿದ್ದರೋ ಇಲ್ಲವೋ ಆದರೆ ಗುರುವಿನಿಂದ ಹೀಗೆ ವಚನೇತರ ಸಾಹಿತ್ಯದ ಕಟ್ಟು ಪಡೆದು ಪೀಠಾಧಿಪತಿಯಾಗಿದ್ದು ನಾನು ಬಲ್ಲಂತೆ ಇಂದು ಬಂಧಿಖಾನೆಯಲ್ಲಿರುವ ಮುರುಘಾಶರಣರು ಮಾತ್ರ!


ಇನ್ನು ಈ ಎಲ್ಲಾ ಲಿಂಗಾಯತ ತತ್ವಜ್ಞಾನ ಆಚರಣಾ, ಸಾಧನಾ ಸೂತ್ರಗಳನ್ನು ಭಾರತದಲ್ಲಿ ಅದಾಗಲೇ ಆಚರಣೆಯಲ್ಲಿದ್ದ ಸನಾತನ ಧರ್ಮದ ಆತ್ಮ, ಪರಮಾತ್ಮ, ಅಂತರಾತ್ಮ, ನ್ಯಾಯ, ಮೀಮಾಂಸೆ, ತರ್ಕ, ಧ್ಯಾನಗಳ ಪಾಶುಪತ, ಕಾಳಾಮುಖ, ತಾಂತ್ರಿಕ, ಬೌದ್ಧ, ಜೈನ, ಮುಂತಾದ ತತ್ವಜ್ಞಾನ ಶಾಲೆಗಳಿಂದ ಪಡೆದ ಮೂಲ ವಿಷಯಗಳ ಸರಳೀಕೃತ, ಪರಿಷ್ಕೃತ, ಉನ್ನತೀಕರಿಸಿದ ಪಠ್ಯವೇ ಆಗಿದೆ ಎಂಬುದು ಗಮನಾರ್ಹ. 


ಇಂತಿಪ್ಪ ಕಟ್ಟುನಿಟ್ಟಿನ ಲಿಂಗಾಯತವನ್ನು ಈಗಿನ ಆಧುನಿಕ ಶರಣ ವಿರಕ್ತರು ಜಾತಿಗೆ, ಆಸ್ತಿಗೆ, ಅಧಿಕಾರಕ್ಕೆ, ಮೀಸಲಾತಿಗೆ, ಮತ(vote)ಬ್ಯಾಂಕಿಗೆ ಮತ(Religion) ಬೇಕೆಂಬ "ಶರಣ ಹಸಿಗೆ" ಮಾಡಿ ಪಟ್ಟ ಕಟ್ಟಿಸಿಕೊಂಡು ಅವಿರಕ್ತರೇ ಆಗಿ ಇಂದು ಈ ಪ್ರತ್ಯೇಕತೆಯ ಕೂಗಿನಲ್ಲಿ ವಿಜೃಂಭಿಸುತ್ತಿದ್ದಾರೆ. ಲಿಂಗಾಯತ ಧರ್ಮದ ಶಿಶುವಿಹಾರದ ಪ್ರಾಸಸಾಹಿತ್ಯದಂತಹ ಬೆರಳೆಣಿಕೆಯ ಕೆಲವು ವಚನಗಳನ್ನು ಕಂಠಪಾಠ ಮಾಡಿ ರಾಜಕೀಯ ಹುರುಪಿನಿಂದ ಭಾಷಣ ಮಾಡುವ ಒಂದೊಮ್ಮೆಯ ತೆಂಗಿನಕಾಯಿಕಳ್ಳ, ಕುಡುಕರಿಗೆ ನಿಪ್ಪಟ್ಟು ತಂದುಕೊಡುತ್ತಿದ್ದವ, ಊಟಕ್ಕೆ ವಿಷ ಬೆರೆಸಿ ಕೊಂದು ಮಠ ಸೇರಿದ್ದವ, ತಮ್ಮ ಕಾಮಕ್ಕೆ ವಿವೇಕಾನಂದ-ನಿವೇದಿತಾ, ಗಾಂಧಿ ಮತ್ತವರ ಆಜುಬಾಜಿಗಿದ್ದ ಇಬ್ಬರು ಹೆಣ್ಣುಗಳ ಸಂಬಂಧದಂತೆಯೇ ನಾನೂ ಸಹ ಕೇವಲ ಇಂದ್ರಿಯ ನಿಗ್ರಹ ಪ್ರಯೋಗ ಮಾಡುತ್ತಿದ್ದೆ ಎಂದಂತಹ ಕದ್ದ, ಕೊಂದ, ಹುಸಿಯ ನುಡಿವ ಗುರು-ಗುರುಮಾತೆಯರಷ್ಟೇ ನಮಗೆ ಬೇಕೆನ್ನುವ ಭಕ್ತರೂ ಇದಕ್ಕೆ ಮೂಲ ಕಾರಣ ಎನ್ನಬಹುದು. 


ಹಾಗಾಗಿ ಇವರೆಲ್ಲರ ವಾದ ಏನೇ ಇದ್ದರೂ ಲಿಂಗಾಯತವನ್ನು ಕರಣ ಹಸಿಗೆಯ ಸೂತ್ರದಂತೆ ಹಸುಗೆ ಮಾಡಿ ನೋಡಿದಾಗ ಅದು ಭಾರತ ನೆಲಮೂಲದ ಹಿಂದೂ ಎನ್ನುವ, ಸನಾತನ ಎನ್ನುವ, ಅಹಿಂದೂ ಎನ್ನುವ, ಆರ್ಯ ಎನ್ನುವ, ದ್ರಾವಿಡ ಎನ್ನುವ, ವೈದಿಕ ಎನ್ನುವ, ಅವೈದಿಕ ಎನ್ನುವ, ತಂತ್ರ ಎನ್ನುವ, ಮಂತ್ರ ಎನ್ನುವ, ಉತ್ಕೃಷ್ಟ ಎನ್ನುವ, ಅನಿಷ್ಟ ಎನ್ನುವ ಮುಂದೆ ಇನ್ನೂ ಏನೇನೋ ಎನ್ನಲಿರುವ ಈ ನೆಲದಲ್ಲೇ ಘನಿರ್ಭೂತಗೊಂಡ ಕರಣದ ಹಸುಗೆಗೊಂಡ ತತ್ವಜ್ಞಾನದ ಭಾಗವೇ ಆಗಿದೆ. 

-ರವಿ ಹಂಜ್

ವಿಶ್ವವಾಣಿ, ೨೪ ಆಗಸ್ಟ್ ೨೦೨೪

वचन दर्शन: श्री सदाशिवानंद स्वामी यांची मुलाखत


 

Friday 23 August 2024

ಪ್ರಜ್ಞಾ ಪ್ರವಾಹ ಕಿರಿದೆನ್ನಬಹುದೇ ಕೂಡಲಸಂಗಮದೇವಾ?

 


ಸಂತೋಷ ತಮ್ಮಯ್ಯ

ಹೋಸ ದಿಗಂತ

ದಿ. ೨೩ ಆಗಸ್ಟ್ ೨೦೨೪

೧೨ನೇ ಶತಮಾನಕ್ಕೂ ೨೧ನೇ ಶತಮಾನಕ್ಕೂ ಏನು ವ್ಯತ್ಯಾಸ? ಹೊರನೋಟಕ್ಕೆ ಪ್ರಶ್ನೆ ಅಸಂಗತವೆನಿಸಬಹುದು. ಆದರೆ ಅದೇನೂ ಕಾರ್ಲ್ ಮಾರ್ಕ್ಸ್‌ನನ್ನೂ ಬಸವಣ್ಣನನ್ನೂ ತುಲನೆ ಮಾಡಿದಷ್ಟು ಹುಚ್ಚುತನದ್ದೇನಲ್ಲ. ಹಾಗಾಗಿ ೧೨ನೇ ಶತಮಾನದ ಸಮಾಜವ್ಯವಸ್ಥೆ ಮತ್ತು ಕ್ರಾಂತಿ ೨೧ನೇ ಶತಮಾನದಲ್ಲಿ ಅದರ ಪರಿಣಾಮಗಳನ್ನು ಅವಲೋಕಿಸುವುದರಲ್ಲೇನೂ ಅಸಂಗತತೆಯಿಲ್ಲ. ಬಸವಾದಿ ಶರಣರು ಸಾರ್ವಕಾಲಿಕ ಶ್ರೇಷ್ಠರೆಂಬುದರಲ್ಲೇನೂ ಗೊಂದಲಗಳಿಲ್ಲ. ಆದರೆ ಅವರು ತಂದ ಪರಿವರ್ತನೆಯನ್ನು ಸಮಾಜ ಇಂದು ಎಷ್ಟರಮಟ್ಟಿಗೆ ಕಾಪಿಟ್ಟುಕೊಂಡಿದೆ ಎನ್ನುವುದು ಸದ್ಯದ ಪ್ರಶ್ನೆ.

ಅಂದು ಯಾವ ಬಸವಣ್ಣ ಸಮಾಜ ಜಾಗರಣೆಗಾಗಿ ಅಧಿಕಾರತ್ಯಾಗ ಮಾಡಿದ್ದನೋ ಅದೇ ಬಸವಣ್ಣ ಇಂದು ರಾಜಕಾರಣದಲ್ಲಿ ಎಲ್ಲರಿಗೂ ಪ್ರಬಲ ಅಸ್ತ್ರ. ತನ್ನ ಹುಟ್ಟನ್ನೇ ಆಡಿಕೊಂಡ ಬಸವಣ್ಣನ ಹುಟ್ಟು ಇಂತಿಂಥ ಜಾತಿಯಲ್ಲಾಯಿತು ಎನ್ನುವುದು ಇಂದು ವಿಶ್ವವಿದ್ಯಾಲಯಗಳ ಪಿಎಚ್ಡಿ ಸರಕು. ಸಮಾನತೆಯನ್ನು ಸಾರಿದ ಅದೇ ಬಸವಾದಿ ಶರಣರಿಂದು ಒಂದೊಂದು ಜಾತಿಗಳ ನಾಯಕರಾಗಿ ಪ್ರತಿಮೆಗಳಾಗಿ ನಿಂತಿದ್ದಾರೆ. ಭಕ್ತಿ ಬರಡಾಗಿದೆಯೆಂದು ದೇವವಾಣಿಯನ್ನು ಜನವಾಣಿಗಿಳಿಸಿ ಭಕ್ತಿಯಿಂದಲೇ ವ್ಯಕ್ತಿನಿರ್ಮಾಣವೆಂದವರೆಲ್ಲರೂ ಇಂದು ನಾಸ್ತಿಕ ಬುದ್ಧಿಜೀವಿಗಳು ಉಲ್ಲೇಖಿಸಲ್ಪಡುವ ಹೆಸರುಗಳು. ಅಂದು ಮೌಢ್ಯವನ್ನು ಕಟುವಾಗಿ ಟೀಕಿಸಿದವರೆಲ್ಲರೂ ಇಂದು ಪರಂಪರೆಯನ್ನೇ ಟೀಕಿಸಲ್ಪಟ್ಟವರೆಂದು ಹಣೆಪಟ್ಟಿ ಹೊತ್ತು ನಿಂತಿದ್ದಾರೆ! ಹಾಗಾದರೆ ೧೨ನೇ ಶತಮಾನದಲ್ಲಿ ನಡೆದಿದ್ದು ಮಹಾ ಸಾಮಾಜಿಕ ಪರಿವರ್ತನೆ ಎಂಬುದು ಸುಳ್ಳೇ? ಸುಳ್ಳಲ್ಲ ಎಂದಾದರೆ ಈ ವೈರುಧ್ಯಗಳೆಲ್ಲಾ ಯಾಕಿವೆ? ಉತ್ತರ ಸರಳ ಮತ್ತು ಸ್ಪಷ್ಟ. ೧೨ನೇ ಶತಮಾನದವರು ಮೆಟ್ಟು ಹೊಲಿಯುತ್ತಾ, ಬಟ್ಟೆ ನೇಯುತ್ತಾ, ಬುಟ್ಟಿ ಮಾಡುತ್ತಾ, ಹಗ್ಗ ಹೊಸೆಯುತ್ತಾ, ಸೌದೆ ಮಾರುತ್ತಾ, ದನ ಕಾಯುತ್ತಾ ಸಾಮಾನ್ಯರಲ್ಲಿ ಸಾಮಾನ್ಯರಂತಿದ್ದು ಜೀವನಾನುಭವವನ್ನು ಪಡೆದು ಸಮಾಜಕ್ಕೆ ಮಾರ್ಗದರ್ಶನ ಮಾಡಿದವರು. ಅವರಲ್ಲಿ ಅನ್ಯಾಯವನ್ನು ಪ್ರತಿಭಟಿಸುವ ಗುಣವಿತ್ತು, ಬದಲಾವಣೆ ತರಲೇಬೇಕೆಂಬ ಛಲವಿತ್ತು. ಪರಿಣಾಮ ಕ್ರಾಂತಿಯಾಯಿತು. ಕ್ರಾಂತಿ ಇತಿಹಾಸವಾಯಿತು. ಆದರೆ ಈ ೨೧ನೇ ಶತಮಾನದಲ್ಲಿ ಖಾದಿ ಮತ್ತು ಕಾವಿಗಳನ್ನು ಉದ್ದಿಮೆ ಮಾಡಿಕೊಂಡ ಕೆಲವೇ ಕೆಲವರು ಅತ್ತ ಶರಣರಂತೆ ಬದುಕಲೂ ಆಗದೆ, ಆ ಕ್ರಾಂತಿಯ ಆಶಯಗಳನ್ನು ಉಳಿಸಿಕೊಳ್ಳಲೂ ಆಗದೆ ದಿಕ್ಕುತಪ್ಪಿಸುವ ಪ್ರವೃತ್ತಿಯವರಾಗಿ, ಅನ್ಯಾಯವನ್ನು ಪ್ರತಿಭಟಿಸುವ ಬದಲು ವೋಟ್ ಬ್ಯಾಂಕಿನ ಅಸ್ತ್ರಗಳಾಗಿ, ಪರಿವರ್ತನೆಯ ಬದಲು ಜನಾಂಗದ ನಾಯಕರಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಹಾಗಾಗಿ ಕ್ರಾಂತಿ ಇತಿಹಾಸದಲ್ಲಿ ಬಂಧಿಯಾಗಿದೆ. ಅಷ್ಟೇ ಅಲ್ಲ, ಅವರಿಗೆ ೧೨ನೇ ಶತಮಾನದ ಸುಧಾರಕರ ಬಗ್ಗೆ ಪ್ರಾಮಾಣಿಕ ಪ್ರೀತಿ-ಭಕ್ತಿಗಳೂ ಇಲ್ಲ. ಶರಣಾದಿಗಳನ್ನು ಅನುಕೂಲಸಿಂಧುವಾಗಿ ಬಳಸಿಕೊಳ್ಳುವ ರಾಜಕೀಯ ಬುದ್ಧಿ ಇಂದು ೧೨ನೇ ಶತಮಾನದ ಕ್ರಾಂತಿಯ ಆಶಯಗಳನ್ನೂ ಮಣ್ಣುಪಾಲು ಮಾಡುತ್ತಿವೆ. ಅದರ ಪರಿಣಾಮ ಪ್ರತ್ಯೇಕ ಧರ್ಮ, ಹಗೆತನ ಮತ್ತು ಪರರ ಬಗೆಗಿನ ಅಸಹನೆ.


ಗದಗಿನ ಸದಾಶಿವಾನಂದ ಸ್ವಾಮಿಗಳ ಸಂಪಾದಕತ್ವದಲ್ಲಿ ಹೊರತಂದಿರುವ “ವಚನ ದರ್ಶನ” ಕೃತಿಗೆ ವ್ಯಕ್ತವಾದ ಕೆಲವರ ವಿರೋಧ ಈ ಮಾನಸಿಕತೆಯವರದ್ದು. ಹಾಗಾಗಿ ಅಸಂಗತವೆನಿಸುವಂತೆ ಕಾಣುವ ಎರಡು ಶತಮಾನಗಳ ವ್ಯತ್ಯಾಸದ ಪ್ರಶ್ನೆ ಯಥೋಚಿತವಾದುದೇ! ಆ ಪ್ರಶ್ನೆಗೆ ಅತ್ಯಂತ ಸರಳ ಉತ್ತರ, ೧೨ನೇ ಶತಮಾನದ್ದು ಕ್ರಾಂತಿಯಾದರೆ, ೨೧ನೇ ಶತಮಾನದ್ದು ಭ್ರಾಂತಿ! “ವಚನ ದರ್ಶನ’ ಪುಸ್ತಕದ ಮುಖಪುಟದಲ್ಲಿ ಬಸವಣ್ಣನನ್ನು ಯೋಗಿಯಂತೆ ಚಿತ್ರಿಸಲಾಗಿದೆ, ವೇದೋಪನಿಷತ್‌ಗಳ ಅಡಿಪಾಯದಲ್ಲಿ ವಚನಗಳು ರಚನೆಯಾಗಿರುವುದು ಸುಳ್ಳು ಎನ್ನುವುದು ವಿರೋಗಳ ಕೂಗು. ಇದೇನೂ ಮೊದಲಲ್ಲ, ತಮ್ಮ ಸುಳ್ಳಿನ ಕೋಟೆ ಅಲುಗಾಡುತ್ತಿದೆ ಎಂದಾಗಲೆಲ್ಲಾ ಇಂಥವರು ವಿರೋಧ ಮಾಡುತ್ತಲೇ ಬಂದಿದ್ದಾರೆ. ಹಿಂದೊಮ್ಮೆ ಬಸವಣ್ಣನವರನ್ನು ಬ್ರಾಹ್ಮಣ ಮೂಲವಲ್ಲ ಎಂದರೆಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಪುಸ್ತಕವನ್ನೇ ನಿಷೇಧಿಸಿದವರೂ ಇವರೇ. ಈಗ ವಚನಗಳನ್ನು ಬ್ರಾಹ್ಮಣೀಕರಣ ಮಾಡಲಾಗುತ್ತಿದೆ ಎನ್ನುತ್ತಿರುವವರೂ ಇವರೇ! ಜೊತೆಜೊತೆಯಲ್ಲಿ ವಚನಗಳ ಅಂಕಿತವನ್ನು ಬದಲಿಸುವುದು, ವಚನಗಳ ಆಧಾರದಲ್ಲಿ ಪ್ರತ್ಯೇಕ ಧರ್ಮಕ್ಕೆ ಬೇಡಿಕೆ ಇಡುತ್ತಿರುವವರೂ ಇವರೇ! ಇದೇನವಸ್ಥೆ? ರಾಜಕಾರಣಿಗಳ ಕೈಗೊಂಬೆಗಳಂತಾಡುವ ಕೆಲವು ಮಠಾಶರನ್ನು ಗುರಾಣಿ ಮಾಡಿ ಪ್ರತಿಭಟಿಸುವ ಇವರು ತಕ್ಕ ಮಟ್ಟಿಗೆ ಯಶಸ್ವಿಯಾಗುತ್ತಲೂ ಇದ್ದಾರೆ. ಇದೀಗ ಅವರ ಗುರಿ “ವಚನ ದರ್ಶನ”. ಯಾವಾಗ ರಾಜಕಾರಣದಲ್ಲಿ ಸಂತರಂತೆ, ಅವಧೂತರಂತೆ, ಪ್ರವಾದಿಗಳಂತೆ, ಮಹಾ ಸುಧಾರಕರಂತೆ ವೇಷ ಹಾಕುವ ಜನರು ತುಂಬತೊಡಗಿದರೋ ಆಗ ರಾಜಕಾರಣದಲ್ಲಿದ್ದ ಕೊಳೆ ಸಮಾಜಕ್ಕೂ ಹರಿಯಲಾರಂಭಿಸಿತು. ರಾಜಕಾರಣಿಗಳ ನಂಟನ್ನು ಮಠಾಶರುಗಳು ’ರಾಜಾಶ್ರಯ’ ಎಂದುಕೊಳ್ಳಲಾರಂಭಿಸಿದರು. ಇವೆರಡೂ ಕಾಂಬಿನೇಶನ್‌ಗಳು ಸಮಾಜದಲ್ಲಿ ಏನೇನು ಅಪಸವ್ಯಗಳನ್ನು ಸೃಷ್ಟಿಸುತ್ತವೆ ಎಂಬುದಕ್ಕೆ ಪುಸ್ತಕಕ್ಕೆ ವ್ಯಕ್ತವಾಗುತ್ತಿರುವ ವಿರೋಧವೇ ಸಾಕ್ಷಿ.


ವಚನಗಳು ತಾವು ವ್ಯಾಖ್ಯಾನಿಸಿದಂತೆ ಮಾತ್ರ ಇರಬೇಕು, ನಮ್ಮ ವಚನಗಳನ್ನು ಪ್ರಕಟಿಸಲು ಇವರಾರು?, ವಚನ ಮತ್ತು ಬಸವತತ್ತ್ವಗಳು ವೇದ ವಿರೋಧದಿಂದ ಹುಟ್ಟಿದವುಗಳು. ಬ್ರಾಹ್ಮಣಶಾಹಿಗಳು ವಚನವನ್ನು ತಿರುಚುತ್ತಿದ್ದಾರೆ ಎಂದು ಹುಯಿಲಿಡುವವರಿಗೆ ಉತ್ತರ ಕೊಡಲು ಒಂದೊಂದು ವಚನಗಳನ್ನು ವೇದೋಪನಿಷತ್ತಿನ ಉಲ್ಲೇಖದೊಂದಿಗೆ ವಿವರಿಸಿ ಮುಖಕ್ಕೆ ಹಿಡಿಯಬಹುದು. ಆದರೆ ಇದರಿಂದ ಅವರೇನೂ ತಿದ್ದಿಕೊಳ್ಳುವವರಲ್ಲ. ಏಕೆಂದರೆ ಶೈವ ಪಂಥದ ನಾನಾ ಶಾಖೆಗಳ ಬಗ್ಗೆ ಹಿಂದಿನಿಂದಲೂ ಬರೆದಿದ್ದಾರೆ. ವೀರಶೈವ ಪಂಥದ ಕುರಿತ ಪುಸ್ತಕಗಳೂ ಹಲವಾರಿವೆ. ಅದರ ಬಗೆಗೆ ಚರ್ಚೆ-ವಿಶ್ಲೇಷಣೆಗಳು ಸಾಕಷ್ಟಾಗಿವೆ. ಅವೆಲ್ಲವೂ ಸರ್ವರಿಗೂ ಸಿಗುವಂತಿವೆ. ಆದರೆ ಇದೇ ಮಾತನ್ನು ವಚನಗಳ ಬಗ್ಗೆ ಹೇಳಬಹುದೇ ಎಂದರೆ ಹಲವರು “ವಚನಗಳ ಬಗ್ಗೆ ನಡೆದಷ್ಟು ಚರ್ಚೆ, ವಿಶ್ಲೇಷಣೆಗಳು ಯಾವ ಸಾಹಿತ್ಯ ಪ್ರಾಕಾರಗಳ ಮೇಲೂ ನಡೆದಿಲ್ಲ” ಎನ್ನಬಹುದು. ವಚನ ಸಂಗ್ರಹಗಳ ಉದ್ದದ ಪಟ್ಟಿಯನ್ನೂ ಕೊಡಬಹುದು. ಶ್ರೀಮಂತ ಮಠಗಳಿಂದ ಹಿಡಿದು ಕಾಲಕಾಲಕ್ಕೆ ಸರ್ಕಾರಗಳೂ ವಚನಗಳ ಸಂಗ್ರಹ ಮತ್ತು ಸಂಪಾದನೆಯನ್ನು ಮಾಡಿವೆ. ವಿಚಿತ್ರವೆಂದರೆ ೨೧ನೇ ಶತಮಾನದ ವಚನಗಳೆಂಬ ಚುಟುಕಗಳಂತಿರುವ, ಕಮ್ಯುನಿಸ್ಟ್ ಸಾಹಿತ್ಯಗಳೂ ಪ್ರಕಟವಾಗಿ ವಚನ ಎಂಬ ಆದರ್ಶವಾಣಿಯನ್ನು ಅಣಕಿಸಿದ್ದೂ ಇದೆ. ಇಷ್ಟೆಲ್ಲಾ ಇದ್ದರೂ ವಚನಗಳು ಸಂಪೂರ್ಣವಾಗಿ ಸಂಗ್ರಹವಾಗಿವೆಯೇ ಎಂದರೆ ಸಂಶೋಧಕರು ಕೆಲವು ಲುಪ್ತವಾಗಿರಬಹುದು ಎನ್ನುತ್ತಾರೆ. ಲುಪ್ತವಾಗಿರುವುದಲ್ಲ, ಲಭ್ಯವಾಗಿರುವುದೆಲ್ಲವೂ ಸಾಮಾನ್ಯರ ಕೈಗೆ ಸಿಗುವಂತಿದೆಯೇ ಎಂದರೆ ಜಾರಿಕೊಳ್ಳುತ್ತಾರೆ. ಏಕೆಂದರೆ ಸಂಪಾದನೆಯ ಹೆಸರಿನಲ್ಲಿ ಅಂಕಿತಗಳನ್ನೇ ಬದಲಿಸಿದವರಿದ್ದಾರೆಂದರೆ ಕೈಯಾಡಿಸಿದವರು ಇರಲಿಕ್ಕಿಲ್ಲವೇ? ಇವಲ್ಲದೆ ಮರೆಮಾಚಿದ ಅನೇಕ ವಚನಗಳಿವೆ ಎಂಬುದು ಹಲವರ ಅಭಿಪ್ರಾಯ. ಕೆಲವರ ಮನಸ್ಥಿತಿಯನ್ನು ನೋಡಿದರೆ ನಿಜವಿರಬಹುದೆನಿಸುತ್ತದೆ. ಉದಾಹರಣೆಗೆ ಬಸವಣ್ಣನವರ “ಶ್ರುತಿ ತತಿ ಶಿರದ ಮೇಲೆ ಅತ್ಯತಿಷ್ಠದಶಾಂಗುಲಂ ನಾನೇನೆಂಬೆನಯ್ಯಾ ಮಹಾದಾನಿ ಕೂಡಲ ಸಂಗಮದೇವಾ” ಎಂಬ ವಚನವೊಂದಿದೆ (ವಚನ ಸಾಹಿತ್ಯ ದರ್ಶನ-ಷಣ್ಮುಖಯ್ಯ ಅಕ್ಕೂರಮಠ). ಆದರೆ ಅದೇಕೆ ಯಾವ ವಚನ ಸಂಪುಟಗಳಲ್ಲೂ ಕಾಣಿಸುವುದಿಲ್ಲ? ಸಾಮಾನ್ಯ ಪಠ್ಯಪುಸ್ತಕಗಳಲ್ಲಿರುವ ವಚನಗಳನ್ನೇ ಸಂಪುಟಗಳಲ್ಲೂ ಪ್ರಕಟಿಸುವ ಉದ್ದೇಶವೇನು? ಬಂಡಾಯದ ಧ್ವನಿಯಿರುವ ವಚನಗಳಷ್ಟೇ ಸಮಾಜಕ್ಕೆ ತಿಳಿದರೆ ಸಾಕು, ಇಂಥದ್ದರ ಅಗತ್ಯವಿಲ್ಲ ಎಂದು ಭಾವಿಸುವವರ ಅಸಲು ಉದ್ದೇಶವೇನು? ಈ “ಅತ್ಯತಿಷ್ಠದಶಾಂಗುಲಂ…” ವಚನವೊಂದನ್ನೇ ತೆಗೆದುಕೊಂಡರೂ ೧೨ನೇ ಶತಮಾನದ ವಚನಕಾರರ ಉದ್ದೇಶವನ್ನು ವಿವರವಾಗಿ ವರ್ಣಿಸಿಬಿಡಬಹುದು. ಏಕೆಂದರೆ ಈ ’ಅತ್ಯತಿಷ್ಠದಶಾಂಗುಲಂ’ ಎನ್ನುವ ಪದ ಪುರುಷಸೂಕ್ತದಲ್ಲಲ್ಲದೆ ಬೇರೆಲ್ಲೂ ಉಲ್ಲೇಖವಿಲ್ಲ. ಪುರುಷಸೂಕ್ತವು ವೈದಿಕರಲ್ಲಿ ಪೂಜಾನುಷ್ಠಾನಗಳಲ್ಲಿ ಇಂದಿಗೂ ಬಳಕೆಯಾಗುತ್ತಿರುವ ವೇದಮಂತ್ರ ಭಾಗ. ಇಂದೂ ವೇದಾಧ್ಯಯನದ ಆರಂಭ ಪುರುಷಸೂಕ್ತದಿಂದಲೇ ಆರಂಭಿಸುವ ಕ್ರಮವಿದೆ. ‘ಪುರುಷಸೂಕ್ತವು ಜಿಜ್ಞಾಸುಗಳ ಜ್ಞಾನಯಜ್ಞಕ್ಕೆ, ಮುಮುಕ್ಷುಗಳಿಗೆ ಕಾಮಧೇನುವೂ ಆಗಿದೆ‘ (ಪುರುಷಸೂಕ್ತ ಭಾಷ್ಯ-ಆಧ್ಯಾತ್ಮ ಪ್ರಕಾಶನ, ಹೊಳೆನರಸೀಪುರ). ವೇದ ನಿರಾಕರಣೆ ಮಾಡಿದ ಬಸವಣ್ಣನವರು ವಚನದಲ್ಲಿ ಪುರುಷಸೂಕ್ತವನ್ನು ಬಳಸಿದ್ದೇಕೆಂಬುದಕ್ಕೆ ಅವರು ಸ್ವತಃ ಮುಮುಕ್ಷುಗಳಾಗಿದ್ದರೆಂಬುದೇ ಸಾಕ್ಷಿ. ಅದರಲ್ಲಿ ಆಶ್ಚರ್ಯವೇನಿದೆ? ಪ್ರಜ್ಞಾ ಪ್ರವಾಹ ಹೊರತಂದ “ವಚನದರ್ಶನ’ದಲ್ಲಿ ಅಂಥದ್ದನ್ನೇನಾದರೂ ಛಾಪಿಸಿಬಿಟ್ಟಿದ್ದಾರೆಯೇ ಎಂಬ ಭಯವೂ ಪುಸ್ತಕ ವಿರೋಧಕ್ಕೆ ಕಾರಣವಿರಬಹುದು. ಬಸವಧರ್ಮವೆಂಬುದು ಹಿಂದುತ್ವದ ಶಾಖೆಯಲ್ಲ ಎನ್ನುವ ಮನಸ್ಥಿತಿ ೧೯ನೆ ಶತಮಾನದ ಆದಿಯಿಂದಲೇ ಆರಂಭವಾಗಿದೆ. ಅಂದರೆ ಶೈವ ಪಂಥಕ್ಕೂ ಬಸವ ಪಂಥಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವವರು ಶತಮಾನಗಳಿಂದಲೂ ಇದ್ದಾರೆ! ಶೈವ ಎಂಬುದಿದ್ದರೆ ವೇದ ಉಲ್ಲೇಖವಾಗಬೇಕು. ಬಸವಣ್ಣನನ್ನು ಕಾಮ್ರೆಡ್ ಮಾಡಲು ಮತ್ತು ಪ್ರತ್ಯೇಕತೆಯನ್ನು ಬಿಂಬಿಸಲು ಈ ಶೈವ ಎಂಬುದೇ ದೊಡ್ಡ ಅಡ್ಡಿ ಎನ್ನುತ್ತಿದ್ದವರು ಕ್ರಮೇಣ ವೀರಶೈವ ಎನ್ನುವುದನ್ನೇ ತಮ್ಮದಲ್ಲ ಎನ್ನತೊಡಗಿದರು! ನಿಜಕ್ಕೂ ಅವರ ಮೊದಲ ವಿರೋಧವಿರುವುದು ಬ್ರಾಹ್ಮಣರ ಮೇಲಾ ಅಥವಾ ವೀರಶೈವ ಪಂಚಪೀಠಗಳ ಮೇಲಾ ಎನ್ನುವ ಅನುಮಾನ ಮೂಡುತ್ತವೆ. ಹಾಗಾದರೆ ಶತಮಾನಗಳ ಹಿಂದೆ ಇವೆರಡು ಬೇರೆಯಲ್ಲ, ಒಂದೇ ಎಂದವರಿರಲಿಲ್ಲವೇ ಎಂದರೆ ಇದ್ದೇ ಇದ್ದರು. ಆ ಕಾರಣಕ್ಕಾಗಿಯೇ ಹಾನಗಲ್ ಕುಮಾರಸ್ವಾಮಿಗಳು ವೀರಶೈವ ಮಹಾಸಭಾವನ್ನು ಸ್ಥಾಪಿಸಿದ್ದರು. ಬಸವಾದಿ ಶರಣರೇ ಲಿಂಗಧಾರಣೆಯನ್ನು ಅನುಷ್ಠಾನಕ್ಕೆ ತಂದರೆಂದು ವಾದಿಸುವವರು ಅಂದಿನಿಂದಲೂ ವೀರಶೈವ ಸಾಹಿತ್ಯವನ್ನು ಅಲ್ಲಗೆಳೆಯುತ್ತಲೇ ಬಂದಿದ್ದಾರೆ. ವಿಚಿತ್ರವೆಂದರೆ ಕನ್ನಡದಲ್ಲಿ ವೀರಶೈವ ಸಾಹಿತ್ಯಗಳು ವಿಫುಲವಾಗಿವೆ. ಮರಾಠಿ ಮತ್ತು ತೆಲುಗುಗಳಲ್ಲಿಯೂ ವೀರಶೈವ ಸಾಹಿತ್ಯಗಳಿವೆ. ಅವೆಲ್ಲವೂ ಶರಣರು ಮತ್ತು ವಚನಗಳನ್ನು ವೇದಮೂಲಕ್ಕೆ ಕೊಂಡೊಯ್ಯುತ್ತವೆ. ಅಷ್ಟೇ ಏಕೆ ಕರ್ನಾಟಕದ ಕೆಲವು ವಿರಕ್ತ ಮಠಗಳು ಸಿದ್ಧಾರೂಢ ಮಠವನ್ನು, ಮೂರುಸಾವಿರ ಮಠವನ್ನು ತಮ್ಮದಲ್ಲ ಎಂದು ನಿರಾಕರಿಸುತ್ತಾರೆ. ಸಿದ್ದೇಶ್ವರ ಸ್ವಾಮಿಗಳನ್ನು ವಿರೋಧಿಸಲೂ ಕೆಲವರು ಹಿಂಜರಿಯಲಿಲ್ಲ! ಈಗ ಅಂಥವರೆಲ್ಲರೂ “ವಚನ ದರ್ಶನ” ಕೃತಿಯನ್ನು ವಿರೋಧಿಸುತ್ತಿದ್ದಾರೆ. ಇವೆಲ್ಲವೂ ಹೇಗೆ ತಾನೇ ಪ್ರಾಂಜಲ ಬಸವ ಭಕ್ತಿಯಾಗುತ್ತದೆ? “ವಚನ ದರ್ಶನ”ದ ಬಗ್ಗೆ ಕೆಲವು ಮಠಾಧೀಶರುಗಳು ರಾಜಕಾರಣಿಗಳಂತೆ ಹೇಳಿಕೆ ನೀಡುವುದನ್ನು ನೋಡಿದರೆ ಬಸವಾದಿ ಶರಣರನ್ನೆಲ್ಲಾ ಇವರು ಯಾವತ್ತೋ ಬೀಗ ಹಾಕಿಟ್ಟಿದ್ದಾರೆ ಎನಿಸದಿರದು. ಆ ಕಾರಣಕ್ಕೆ ಇಂದು ಲಿಂಗಾಯತ-ವೀರಶೈವದಲ್ಲಿರುವ ಹೆಚ್ಚುಕಡಿಮೆ ನೂರರಷ್ಟಿರುವ ಒಳಪಂಗಡಗಳ ಒಳಜಗಳಗಳನ್ನು ಯಾವ ಮಠಾಧೀಶರಿಗೂ ಇತ್ಯರ್ಥ ಮಾಡಲಾಗುತ್ತಿಲ್ಲ. ಬಸವಭಕ್ತಿ, ಲಿಂಗಭಕ್ತಿಯೊಂದೇ ಇದ್ದಿದ್ದಿದರೆ ಯಾವ ಭೇದವೂ ಇರುತ್ತಿರಲಿಲ್ಲ. ಅದನ್ನು ಮುಚ್ಚಿಡಲು ಆಯ್ದ ವಚನಗಳನ್ನು ಮಾತ್ರ ಹರಡಲು ಹೊರಟರೇ? ಅದಕ್ಕಾಗಿ “ವಚನ ದರ್ಶನ”ಕ್ಕೆ ವಿರೋಧವೇ?


ಹಾಗಾದರೆ ಬಸವಾದಿ ಶರಣರು ಮೇಲ್ಜಾತಿಯವರೆನಿಸಿಕೊಂಡಿದ್ದವರನ್ನು ಕಟುವಾಗಿ ಟೀಕಿಸಿಲ್ಲವೇ ಎಂಬ ಪ್ರಶ್ನೆಯೂ ಮೂಡುತ್ತವೆ. ಖಂಡಿತವಾಗಿಯೂ ಬಸವಾದಿ ಶರಣರು ಮಡಿ-ಮೈಲಿಗೆ ಎನ್ನುವವರನ್ನು, ಜಾತಿಯ ಕಾರಣಕ್ಕೆ ದೂರ ಇಡುವ ಮಾನಸಿಕತೆಯವರನ್ನು ವಿರೋಧಿಸಿದ್ದರು. ಅದರಲ್ಲಿ ತಪ್ಪೇನಿದೆ? ಇಂದೂ ಕೆಲವರ ಗುಣವನ್ನು ನೋಡಿದರೆ ನಾವೂ ವಚನ ಕಟ್ಟಿ ಹಾಡಬೇಕೆನಿಸುತ್ತದೆ! ಅದು ಇಡೀ ಸಮುದಾಯವನ್ನೇ ವಿರೋಧಿಸಿದಂತಲ್ಲ. ವಿಜಯನಗರದ ಸಾಮ್ರಾಜ್ಯ ಉತ್ತುಂಗದಲ್ಲಿದ್ದಾಗಲೇ ದಾಸರು ಲೊಳಲೊಟ್ಟೆ ಎಂದು ಹಾಡಲಿಲ್ಲವೇ? ಹಾಗಾದರೆ ವಿಜಯನಗರದಲ್ಲಿ ಎಲ್ಲವೂ ಲೊಳಲೊಟ್ಟೆಯಾಗಿತ್ತೇ? ವ್ಯವಸ್ಥೆಯನ್ನು ವಿರೋಧಿಸುವ ಮುನ್ನ ಬಸವಣ್ಣನೇ ಅದನ್ನು ಪಾಲಿಸಿದ. ತನ್ನ ಮನೆಯಿಂದಲೇ ಅಂತರ್ಜಾತಿ ವಿವಾಹವನ್ನು ಮಾಡಿಸಿದ. ಲಿಂಗಪೂಜೆಗೆ ಸರ್ವರೂ ಅರ್ಹರು ಎಂದು ಲಿಂಗಧಾರಣೆ ಕೂಡ ಮಾಡಿಸಿದ. ದೂರ ಉಳಿದವರನ್ನೂ ಶರಣರನ್ನಾಗಿಸಿದ. ಹಾಗಾಗಿ ವಚನಗಳಲ್ಲಿ ಜಾತಿ ನಿರ್ಮೂಲನೆಯ ವಚನಗಳೇ ಹೆಚ್ಚಿವೆ. ಲಿಂಗತಾರತಮ್ಯದ ಬಗೆಗೆ ಆ ಕಾಲದಲ್ಲಿ ಹೋರಾಡುವ ಛಾತಿ ಕೇವಲ ಶರಣರಿಗೆ ಮಾತ್ರ ಇತ್ತು. ಇಂದು “ವಚನ ದರ್ಶನ’ ವಿರೋಧಿಸುತ್ತಿದ್ದವರಿಗೆ ಸುಳ್ಳನ್ನು ಅಪ್ಪಿಕೊಳ್ಳುವ ಗುಣವೊಂದುಳಿದು ಇನ್ಯಾವ ಛಾತಿ ಇದೆ? ಪ್ರತ್ಯೇಕ ಬಸವ ಧರ್ಮ ಆಗಲೇಬೇಕೆಂದು ರಾಜಕಾರಣದ ದಾಳ ಉದುರಿಸುವ ಮಂತ್ರಿಯೊಬ್ಬರ ಪತ್ನಿ ಯೂಟ್ಯೂಬ್ ವಾಹಿನಿಯೊಂದಕ್ಕೆ “ನನ್ನ ಗಂಡನಿಗೆ ಚಿಕನ್ ಫ್ರೈ ಎಂದರೆ ತುಂಬಾ ಇಷ್ಟ” ಎಂದು ಸಂದರ್ಶನ ಕೊಡುತ್ತಾಳೆ, ಈಗ ವಿರೋಧಪಕ್ಷದಲ್ಲಿರುವ ಹಿಂದು ಭಾಷಣಕಾರರೊಬ್ಬರು ತಾವು ಇಷ್ಟಪಡದ ಕೆಲವು ಮಠಗಳಿಗೆಂದೂ ಕಾಲಿಡದ ತಾಲಿಬಾನಿಗಳಾಗಿದ್ದಾರೆ. ಇನ್ನೊರ್ವ ಸಚಿವರು ತಾವು ನಾಮ ಧರಿಸುವ ರೆಡ್ಡಿ ಲಿಂಗಾಯತರಾಗಿದ್ದರೂ ವೇದಿಕೆ ಏರುವ ಮುನ್ನ ತ್ರಿಫುಂಡ್ರ ಭಸ್ಮಾಧಾರಣೆ ಮಾಡುತ್ತಾರೆ! ಇವೆಲ್ಲವೂ ಅದೇ ವೇದಿಕೆಯಲ್ಲಿರುವ ಖಾವಿಧಾರಿಗೂ ತಿಳಿದಿರುತ್ತವೆ. ಆದರೂ ಇವನಾರವ ವಚನ ಪಠಿಸಿ ಆಶೀರ್ವಚನ ಮುಗಿಸಿ ಕಾರೇರುತ್ತಾರೆ. ಇಂಥವರಲ್ಲಿ ಶರಣ ಗುಣವೆಷ್ಟಿದ್ದೀತು? ಎಲ್ಲರಲ್ಲೂ ದೇವರನ್ನು ಕಾಣು ಎಂದ ಶರಣ ಪರಂಪರೆಗೇ ದ್ರೋಹ ಎಸಗುವ ಇಂಥವರು ಆರೆಸ್ಸೆಸ್ಸಿನವರು ’ವಚನ ದರ್ಶನ’ ಮಾಡಿಸುತ್ತಿದ್ದಾರೆಂದರೆ ವಿರೋಧಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ವಚನ ಎಂದಾಗ ಅದರ ಪ್ರಸಾರಕ್ಕಿಂತ ಅದನ್ನು ಸಂಪಾದಿಸಿದವರು, ಪ್ರಕಟಿಸಿದವರು ಮುಖ್ಯವಾಗುವ ಮನೋಧರ್ಮ ಆಳವಾಗಿ ಬೇರೂರಿಬಿಟ್ಟಿದೆ. ಹೇಗೆ ದಲಿತರ, ಅಂಬೇಡ್ಕರರ ಬಗ್ಗೆ ಪುಸ್ತಕವೊಂದು ಬರೆದರೆ ದಲಿತರ ಬವಣೆಯನ್ನು ನೀವೆಷ್ಟು ಅನುಭವಿಸಿದ್ದೀರಿ ಎಂದು ಪ್ರಶ್ನಿಸುವಂತೆ ಇಂದು ವಚನಾಧ್ಯಯನ ಮಾಡುವವರನ್ನು ಲಿಂಗಾಯತರಾ? ವೀರಶೈವರಾ? ಎಂದು ಹುಡುಕುವ ಜಾಯಮಾನ ಅನೇಕರಲ್ಲಿದೆ. ಅದೂ ದೊಡ್ಡವರಲ್ಲೇ ಇದೆ! ಅದರಲ್ಲೂ ಆರೆಸ್ಸೆಸ್ಸಿಗರು ಕಳಬೇಡ ಕೊಲಬೇಡ ಎಂದರಂತೂ ಮುಗಿಯಿತು. ಅಷ್ಟಕ್ಕೇ ವಚನಗಳ ಕೇಸರೀಕರಣವಾಗಿಹೋಯಿತೆಂಬ ಆರ್ಭಟ ಆರಂಭವಾಗುತ್ತದೆ. ಶರಣರು ಮತ್ತು ವಚನಗಳೇನು ಒಂದು ಜಾತಿಯ ಸ್ವತ್ತೇ? ಯಾವುದೇ ಒಂದು ಸಮುದಾಯವನ್ನು ವ್ಯವಸ್ಥೆ ವೋಟ್ ಬ್ಯಾಂಕಾಗಿ ಕಾಣುವುದೇನೂ ಆ ಸಮಾಜಕ್ಕೆ ಹೆಗ್ಗಳಿಕೆಯ ವಿಷಯವಲ್ಲ. ವೋಟ್ ಬ್ಯಾಂಕಾಗಿ ನೋಡುವ ಸಮುದಾಯವನ್ನು ರಾಜಕೀಯ ಚೆನ್ನಾಗಿ ಮಂಗ ಮಾಡುತ್ತಿದೆ, ಹೊನ್ನಶೂಲಕ್ಕೇರಿಸುತ್ತಿದೆ ಎಂದೇ ಅರ್ಥ. ಎಲ್ಲಿ ಓಲೈಕೆ ಮಿತಿಮೀರಿರುತ್ತದೋ ಅಲ್ಲಿ ನೈಜ ಗೌರವ ಇರುವುದಿಲ್ಲವೆಂಬ ವಚನಗಳ ಮೂಲ ಧೋರಣೆಯನ್ನು ಸಮಾಜ ಅರಿತುಕೊಂಡಿದ್ದರೆ ೧೨ನೇ ಶತಮಾನದ ಕ್ರಾಂತಿ ಇಂದಿಗೂ ಮುಂದುವರಿಯುತ್ತಿದೆ ಎನ್ನಬಹುದಿತ್ತು. ಆ ಮೂಲಕ ಬಸವಾದಿ ಶರಣರಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದಂತಾಗುತ್ತಿತ್ತು. ಅದು ಬಿಟ್ಟು ಪುಸ್ತಕ ಪ್ರಕಟಣೆಯನ್ನು ವಿರೋಧಿಸುವುದು, ಅದಕ್ಕೆ ಶರಣರನ್ನು ಎಳೆದುತರುವುದು ಶರಣ ಸಂಸ್ಕೃತಿಗೆ ಸಮಾ ತೋಡಿದಂತೆ. ಎಲ್ಲೋ ಕೆಲವು ರಾಜಕಾರಣಿಗಳ ಮತ್ತು ಮಠಾಶರ ಸ್ವಾರ್ಥಕ್ಕೆ ಇಡೀ ಸಮುದಾಯದ ಮಾನಸಿಕತೆಯನ್ನು ಕೆಡಿಸುವುದು ಬಸವಣ್ಣನನ್ನು ಮತ್ತೆಮತ್ತೆ ಕೊಂದಂತೆ.

ಇಂಥವರಿಗೆ ಅರಿವು ಮೂಡಿಸಲು ವಿಶಾಲಮನಸ್ಸಿನವರೇ ವಚನವನ್ನು ಪುನಃ ಸಮಾಜದೊಳಗೆ ತರುವ ಪ್ರಯತ್ನವನ್ನು ಮಾಡುವ ಅನಿವಾರ್ಯತೆಯಿದೆ. ಆ ಕಾರ್ಯವನ್ನು ಪ್ರಜ್ಞಾಪ್ರವಾಹ ಮಾಡಿದೆ. ಅದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಆದರೆ ಬಸವಣ್ಣನಿಗೇ ವಿರೋಧ ಮಾಡಿದವರಿದ್ದರಲ್ಲ ಎಂದುಕೊಂಡು ಪ್ರಜ್ಞಾಪ್ರವಾಹ ವಿರೋಧವನ್ನು ಲೆಕ್ಕಿಸದೆ ತನ್ನ ಕೆಲಸ ತಾನು ಮಾಡುತ್ತಿದೆ. ಆದರೆ ಇಂಥ ವಿರೋಧಗಳು ಸಮಾಜದಲ್ಲಿ ಸದ್ದಿಲ್ಲದೆ ಅನೇಕ ಗಂಡಾಂತರಗಳನ್ನು ಸೃಷ್ಟಿಮಾಡುವುದರಲ್ಲಿ ಸಮರ್ಥವಾಗುತ್ತವೆ. ವಚನಗಳ ಹೆಸರಿನಲ್ಲಿ ಬ್ರಾಹ್ಮಣೀಕರಣ ಎನ್ನುವ ಆಲಾಪ ಎರಡು ವರ್ಗಗಳಲ್ಲಿ ಕಂದಕ ನಿರ್ಮಾಣ ಮಾಡುತ್ತವೆ. ಸಮಾಜಕ್ಕೆ ಮೇಲ್ಪಂಕ್ತಿಯಾಗಬೇಕಿದ್ದ ಪ್ರಬಲ ಮತ್ತು ಬುದ್ದಿವಂತ ಸಮುದಾಯಗಳಿಂದ ಉಳಿದ ಸಮುದಾಯಗಳು ನೀತಿ ಕಲಿಯುವಂತಿರಬೇಕೇ ಹೊರತು ಸಂಕುಚಿತತೆಯನ್ನು ಹರಡುವಂತಿರಬಾರದು. ಸಂಕುಚಿತ ಮಾನಸಿಕತೆ ಉಳಿದ ಸಣ್ಣ ಸಮುದಾಯಗಳಿಗೂ ಪ್ರೇರಣೆ ಎನಿಸಿಬಿಡುವ ಅಪಾಯವೂ ಇದೆ. ಲಿಂಗಾಯತ-ಬ್ರಾಹ್ಮಣರ ಜಾತಿ ಪ್ರೇಮದಿಂದ ನಾವೆಲ್ಲರೂ ಕಲಿಯುವುದು ಸಾಕಷ್ಟಿದೆ ಎನಿಸುವ ಆತಂಕವೂ ಇದೆ. ಅದು ಈಗಾಗಲೇ ದಟ್ಟವಾಗುತ್ತಿವೆ. ಅವರು ತಮ್ಮ ವಚನಗಳನ್ನು ಕೇವಲ ತಮ್ಮದು ಎನ್ನುತ್ತಾರೆ. ನಾವೇಕೆ ನಮ್ಮ ಕಾವೇರಿಯನ್ನು ಕೇವಲ ತಮ್ಮದು ಎಂದುಕೊಳ್ಳಬಾರದು? ನಾರಾಯಣಗುರುಗಳನ್ನೇಕೆ ನಮ್ಮ ಜಾತಿಯ ನಾಯಕನೆಂದು ಪರಿಗಣಿಸಬಾರದು ಎನ್ನುವ ಮಾನಸಿಕತೆಯೂ ಹೆಚ್ಚುತ್ತವೆ. ಪ್ರತಿ ಜಾತಿಗಳೂ ಬುಡಕಟ್ಟು, ನಾಡು ಕಟ್ಟಿದವರೆಂಬ ಕಾರಣಗಳನ್ನು ಹುಡುಕಿ ಫೆನೆಟಿಕ್ ಆಗಲು ತೊಡಗುವ ಸಂದರ್ಭಗಳೂ ಹೆಚ್ಚುತ್ತವೆ. ಅದರ ನಡುವೆ ಇನ್ಯಾರೋ ಕ್ರಿಕೇಟ್ ತಂಡದಲ್ಲಿ ಬ್ರಾಹ್ಮಣ ಆಟಗಾರರೇ ಹೆಚ್ಚಿರುವುದಕ್ಕೆ ವಿಶ್ವಕಪ್ ಗೆದ್ದರು ಎಂದು ಆಲಾಪಿಸುತ್ತಾರೆ. ಇನ್ನೆಲ್ಲೋ ಸಂಸ್ಕೃತ ಶ್ಲೋಕ ಉಲ್ಲೇಖಿಸಿದವರನ್ನು ಶೂದ್ರ ಮುಂಡೇದು ಬಾಯಲ್ಲಿ ಸಂಸ್ಕೃತ ಎಂಬ ಬಯ್ಗಳಗಳು ಕಿವಿಗೆ ಬಿದ್ದಿರುತ್ತವೆ. ಈ ಮಾನಸಿಕತೆ ರೋಗಗ್ರಸ್ಥ ಸಮಾಜವನ್ನು ನಿರ್ಮಾಣ ಮಾಡುವುದರಲ್ಲಿ ಯಶಸ್ವಿಯಾಗುತ್ತವೆ. ರೋಹಿತ್ ಶರ್ಮಾನಲ್ಲೂ ಜಾತಿ ಕಾಣುವವರು ಹೆಡಗೇವಾರರಲ್ಲೂ ಜಾತಿಯನ್ನು ಕಾಣದಿರುತ್ತಾರಾ ಎಂಬ ಗಂಭೀರ ಪ್ರಶ್ನೆಗಳು ಆಗ ಹುಟ್ಟುತ್ತವೆ!


ಇವನ್ನೆಲ್ಲಾ ನೋಡಿದರೆ ಸಮಾಜದಲ್ಲಿ ಸಮನ್ವಯ ಸಾಧಿಸಬೇಕಾಗಿದ್ದ ವಚನಗಳಿಂದ ೨೧ನೆಯ ಶತಮಾನ ಅರಿಯುವುದು ಸಾಕಷ್ಟಿದೆ. ವೇದ ನಮ್ಮದು, ಅದರ ವಾರಿಸುದಾರರು ನಾವೇ ಎಂಬ ಮೌಢ್ಯ ಒಂದೆಡೆಯಾದರೆ, ವಚನ ನಮ್ಮದೆಂಬ ಮೌಢ್ಯ ಇನ್ನೊಂದೆಡೆ! ಈ ಮೌಢ್ಯಗಳನ್ನು ತೊಲಗಿಸಲು ಸರಳ ಪರಿಹಾರ ವೇದಗಳಂತಿರುವ ವಚನ ಮತ್ತು ವಚನಗಳಂತಿರುವ ವೇದಗಳನ್ನು ‘ವಾರಿಸುದಾರರ’ ಕಪಿಮುಷ್ಠಿಯಿಂದ ಬಿಡಿಸಿ ಸ್ವತಂತ್ರಗೊಳಿಸುವುದೊಂದೇ. ಯಾವ ಆದರ್ಶಗಳೂ ಯಾರ ಸ್ವತ್ತೂ ಅಲ್ಲ. ಸಕಲವೂ ಸರ್ವರದ್ದು. ಸರ್ವವೂ ಸಕಲರಿಗೆ ಸಲ್ಲಬೇಕಾಗಿರುವಂಥದ್ದು. ಅದು ಇಂದಿನ ಕಾಲಘಟ್ಟದ ಪ್ರಜ್ಞೆಯಷ್ಟೇ ಅಲ್ಲ. ಎಲ್ಲಾ ಕಾಲಘಟ್ಟದಲ್ಲೂ ಅದು ಸಹಜವಾಗಿದ್ದ ಪ್ರಕೃತಿ ನಿಯಮ. ಏಕೆಂದರೆ ಯಾವ ಕಾಲದಲ್ಲೂ ಯಾವ ಮೌಲ್ಯಗಳೂ ಒಬ್ಬರಿಗಾಗಿ ಹುಟ್ಟಿದವುಗಳಲ್ಲ. ಎಲ್ಲಾ ಮೌಲ್ಯಗಳ ಅಂತಿಮ ಉದ್ದೇಶ ಲೋಕಕಲ್ಯಾಣವೇ. ಲೋಕಕಲ್ಯಾಣದ ಯಾವುದಕ್ಕೂ ಕಟ್ಟೆ ಕಟ್ಟಬಾರದು. ಅದರ ಸಾಕಾರಕ್ಕಾಗಿ ಇಂದು ಪ್ರಜ್ಞೆಯ ಪ್ರವಾಹವೇ ಹರಿಯಬೇಕಿದೆ. ಇಲ್ಲದಿದ್ದರೆ ಶಿಲೆಯೊಳಗಣ ಪಾವಕದಂತೆ ಸಮಾಜ ಕುದಿಯುತ್ತಲೇ ಇರುತ್ತದೆ.

ಗ್ರಂಥಋಣ:

ವಚನಶಾಸ್ತ್ರ ಸಾರ-ಫ.ಗು ಹಳಕಟ್ಟಿ

ಮ‘ಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ-ಡಾ.ಎಂ. ಚಿದಾನಂದಮೂರ್ತಿ

शिवभक्त बसवण्णा हिंदूविरोधी !


 

वचन दर्शन पुस्तक प्रकाशन : बी. एल. संतोष



वचन दर्शन पुस्तक प्रकाशन : मल्लेपूरम जी. व्यंकटेश

 


वचन दर्शन पुस्तक प्रकाशन, कलबुर्गी : श्री


 

ಸಾಣೇಹಳ್ಳಿ ಶ್ರೀಗಳೇ, ಸಾಕು ಮಾಡಿ ನಿಮ್ಮ ಗೊಡ್ಡು ಪುರಾಣ!


- ವಿಶ್ವೇಶ್ವರ ಭಟ್ I ನೂರೆಂಟು ವಿಶ್ವ I ವಿಶ್ವವಾಣಿ 


ಕಳೆದ ವಾರ ಓದುಗರೊಬ್ಬರು, 'ಭಟ್ಟರ ಸ್ಕಾಚ್' ಅಂಕಣ (ಓದುಗರ ಪ್ರಶ್ನೆಗಳಿಗೆ ನನ್ನ ಉತ್ತರ)ದಲ್ಲಿ 'ಭಟ್ರೇ, ವಯಸ್ಸಾದರೂ ಬುದ್ಧಿ ಬರುವುದಿಲ್ಲವಲ್ಲ?' ಎಂಬ ಪ್ರಶ್ನೆ ಕೇಳಿದ್ದರು. ಅದಕ್ಕೆ ನಾನು, 'ವಯಸ್ಸಾದರೆ ಕೆಲವರಿಗೆ ಬುದ್ಧಿ ಹೋಗುತ್ತದೆ!' ಎಂದು ಉತ್ತರಿಸಿದ್ದೆ. ಈ ಉತ್ತರವನ್ನು ಬರೆಯುವಾಗ ನನ್ನ ಮನಸ್ಸಿನಲ್ಲಿ ಯಾರೂ ಇರಲಿಲ್ಲ. ಆದರೆ ಕಾಕತಾಳೀಯ ಎಂಬಂತೆ, ಮರುದಿನದ ಪತ್ರಿಕೆಗಳಲ್ಲಿ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಹಿಂದೂ ಧರ್ಮದ ಕುರಿತಾಗಿ ಹೇಳಿದ ಮಾತುಗಳನ್ನು ಓದಿದೆ. ಅದಾದ ನಂತರ, 'ಭಟ್ಟರ ಸ್ಕಾಚ್' ನಲ್ಲಿ ಬರೆದ ಉತ್ತರ ಪಂಡಿತಾರಾಧ್ಯ ಸ್ವಾಮಿಗಳಿಗೆ ಅತ್ಯಂತ ಸಮರ್ಪಕವಾಗಿ ಒಪ್ಪುತ್ತದೆ ಎಂದು ಖಾತ್ರಿ ಆಯಿತು. ಹೌದು, ಕೆಲವರಿಗೆ ವಯಸ್ಸಾಗುತ್ತಿದ್ದಂತೆ ಬುದ್ಧಿ ಹೊರಟು ಹೋಗುತ್ತದೆ! 


ಇತ್ತೀಚಿನ ದಿನಗಳಲ್ಲಿ ಸಾಣೇಹಳ್ಳಿ ಶ್ರೀಗಳು ಅಸಂಬದ್ಧ ಮತ್ತು ತೋಳಸಂಬಟ್ಟೆ ಹೇಳಿಕೆಗಳನ್ನು ನೀಡುತ್ತಾ ಸಾರ್ವಜನಿಕರು ಮತ್ತು ತಮ್ಮ ಭಕ್ತರ ಮುಂದೆಯೇ ಅಪಹಾಸ್ಯಕ್ಕೆ ಈಡುಗುತ್ತಿದ್ದಾರೆ. ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸಬೇಕಾದ ಮಠಾಧಿಪತಿಗಳು, ತಮ್ಮ ಅರೆಬೆಂದ ಮತ್ತು ಅವಿವೇಕದ ಹೇಳಿಕೆಗಳಿಂದ ಸಾರ್ವಜನಿಕರ ಮುಂದೆ ಗೇಲಿಗೊಳಗಾಗುತ್ತಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ಶ್ರೀಗಳು ಪ್ರಸ್ತಾಪಿಸಿರುವ ವಿಚಾರದಿಂದ ಸಾರ್ವಜನಿಕರು ಗೊಂದಲಕ್ಕೀಡಾಗಿಲ್ಲ. ಆದರೆ ಶ್ರೀಗಳ ಬುದ್ಧಿಮಟ್ಟದ ಬಗ್ಗೆ ಅವರು ಯೋಚಿಸುವಂತಾಗಿರುವುದು ಕಳವಳಕಾರಿ ಸಂಗತಿ. ಅರಳು-ಮರಳು ಕವಿದವರಂತೆ ಶ್ರೀಗಳು, ತಮ್ಮ ಶುದ್ಧ ತಿಕ್ಕಲು ಹೇಳಿಕೆಗಳಿಂದ ತಮ್ಮ ಬುದ್ಧಿಗೆ 'ಸಾಣೆ' ಹಿಡಿಯುವ ಕೆಲಸ ಮಾಡಿದ್ದರೆ ಒಳ್ಳೆಯದಿತ್ತು ಎಂದು ಅನಿಸುವ ರೀತಿಯಲ್ಲಿ ಮಾತಾಡುತ್ತಿರುವುದು, ಅವರ ಬಗ್ಗೆ ಇದ್ದಬದ್ದ ಗೌರವ ಇಟ್ಟುಕೊಳ್ಳುವವರೂ ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಮಾಡಿದೆ. 


ಸುಮಾರು ಹತ್ತು ತಿಂಗಳ ಹಿಂದೆ, ಇದೇ ಸಾಣೇಹಳ್ಳಿ ಶ್ರೀಗಳು ಗಣಪತಿ ಕುರಿತು ಮಾತಾಡಿ ಸಾರ್ವಜನಿಕರ ಕಟು ಟೀಕೆಗೆ ಗುರಿಯಾಗಿದ್ದರು. 'ಗಣಪತಿಯನ್ನು ಸ್ತುತಿಸುವುದು ಮೌಢ್ಯದ ಆಚರಣೆ. ಗಣಪತಿ ಕಾಲ್ಪನಿಕ ದೇವರು, ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ನೆಪ ಮಾತ್ರಕ್ಕೆ ಹುಟ್ಟಿಕೊಂಡ ದೇವರು. ಬಾಹ್ಯ ವಸ್ತುಗಳಿಂದ ಮಾಡಿದ ದೇವರುಗಳು ದೇವರಲ್ಲ. ಗಣಪತಿ ಪೂಜೆ ನಮ್ಮ ಸಂಸ್ಕೃತಿ ಅಲ್ಲ' ಎಂದು ಹೇಳುವ ಮೂಲಕ ಕೋಟ್ಯಂತರ ಗಣೇಶ ಭಕ್ತರ ಮನಸ್ಸನ್ನು ಘಾಸಿಗೊಳಿಸಿದ್ದರು. ಇದೊಂದು ಉದ್ಧಟತನದ, ಬಾಲಿಶ ಮತ್ತು ಬೇಜವಾಬ್ದಾರಿ ಹೇಳಿಕೆಯಾಗಿತ್ತು, ಪುಣ್ಯವಶಾತ್ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ ಎಂಬುದು ಬೇರೆ ಮಾತು. ಅಲ್ಲದೇ ಇಂಥ ಹೇಳಿಕೆಗಳಿಂದ ಏನೂ ಆಗುವುದಿಲ್ಲ. ಆದರೆ ಸಾರ್ವಜನಿಕವಾಗಿ ಹೀಗೆ ಹಲುಬುವುದು ಶ್ರೀಗಳಿಗೆ ವ್ಯಸನವಾಗಿಬಿಟ್ಟಿದೆ. 


ಶತಶತಮಾನಗಳಿಂದ ಆಚರಣೆಯಲ್ಲಿರುವ ನಂಬಿಕೆ, ಅಭಿಪ್ರಾಯಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿ, ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವುದು, ಆ ಮೂಲಕ ಚಲಾವಣೆಗೆ ಬರಲು ಬಯಸುವುದು ಹೊಸ ತಂತ್ರವೇನಲ್ಲ. ತಮ್ಮ ಎಡಬಿಡಂಗಿ ಹೇಳಿಕೆಯಿಂದ ತುಸು ವಿಹ್ವಲರಾದ ಸಾಣೇಹಳ್ಳಿ ಶ್ರೀಗಳು ತಾವು ಲಿಂಗಾಯತರ ಕುರಿತಾಗಿ ಹಾಗೆ ಹೇಳಿದ್ದು ಎಂದು ಆಗ ತಿಪ್ಪೆ ಸಾರಿಸುವ ತಂತ್ರಕ್ಕೆ ಶರಣಾಗಿದ್ದರು. ಅದು ಅವರ ವಿಚಾರ ಶುಷ್ಕಭರಿತವಾಗಿರುವುದನ್ನು ಸಾಬೀತುಪಡಿಸಿತ್ತು. ಗಣಪತಿಯನ್ನು ಪೂಜಿಸುವವರಲ್ಲಿ, ಆರಾಧಿಸುವವರಲ್ಲಿ ಲಿಂಗಾಯತರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬುದು ಗೊತ್ತಿದ್ದೂ, ಸ್ವಾಮೀಜಿ ಅಂಥ ಅಸಂಬದ್ಧ ಹೇಳಿಕೆ ನೀಡಲು ಮುಂದಾಗಿದ್ದರು. 


ನಮ್ಮ ನಾಡಿನಲ್ಲಿ ಸಾವಿರಾರು ಗಣಪತಿ ದೇವಸ್ಥಾನಗಳಿವೆ. ಕೋಟ್ಯಂತರ ಭಕ್ತರಿದ್ದಾರೆ. ಗಣಪತಿಯ ಭಕ್ತರಿಗೆ ಜಾತಿಯಿಲ್ಲ. ಎಲ್ಲ ವರ್ಗದವರೂ ಗಣಪತಿಯನ್ನು ಆರಾಧಿಸುತ್ತಾರೆ, ನಿತ್ಯ ಪೂಜಿಸುತ್ತಾರೆ. ಶಿವನ ಮಗ ಮತ್ತು ಪಾರ್ವತಿಯ ಮಾನಸಪುತ್ರನಾದ ಗಣಪತಿ, ಪ್ರಥಮ ವಂದಿತ ಮತ್ತು ದೇವರುಗಳ ಪೈಕಿ ಅತ್ಯಂತ ಶಕ್ತಿವಂತ ಎಂಬ ನಂಬಿಕೆ ಎಲ್ಲ ಸಮೂದಾಯಗಳ ಜನರಲ್ಲೂ ಇದೆ. ಸಾರ್ವಜನಿಕರಲ್ಲಿ ಹಾಸುಹೊಕ್ಕಾಗಿರುವ ಮೂಲಭೂತ ನಂಬಿಕೆಗಳಿಗೆ ಘಾಸಿಯಾಗುವ ಕೆಲಸವನ್ನು ಯಾರೇ ಮಾಡಿದರೂ ಅದು ಉದ್ಧಟತನ, ಉಪದ್ವ್ಯಾಪಿತನ ಎಂದು ಕರೆಯಿಸಿಕೊಳ್ಳುತ್ತದೆ. ವಚನಗಳಲ್ಲೂ ಗಣಪತಿಯ ಸ್ತುತಿಯ ಪ್ರಸ್ತಾಪವಿದೆ. ಗಣಪತಿ ಯಾರಿಗೂ ಬೇಡದ ದೇವರಲ್ಲ. ಇಲ್ಲಿ ತನಕ ಅವನಿಗೆ ಯಾರೂ ಬಹಿಷ್ಕಾರ ಹಾಕಿಲ್ಲ. ಆದರೆ ಸಾಣೇಹಳ್ಳಿ ಶ್ರೀಗಳು ಜನಮಾನಸದಲ್ಲಿ ಬೇರೂರಿರುವ ಸ್ಥಾಪಿತ ನಂಬಿಕೆಗಳಿಗೆ ವಿರುದ್ಧವಾದ ಹೇಳಿಕೆ ನೀಡಿ, ಆಗ ಗಣಪತಿ ಭಕ್ತರ ಭಾವನೆಗಳನ್ನು ಘಾಸಿಗೊಳಿಸಿದ್ದರು.


ಸ್ವಾಮೀಜಿಯವರು ಆಗ ಲಿಂಗಾಯತರಿಗೇ ಈ ಮಾತನ್ನು ಹೇಳಿದ್ದಾರೆ ಎಂದಿಟ್ಟುಕೊಳ್ಳೋಣ. ಲಿಂಗಾಯತರಲ್ಲೂ ಗಣಪತಿಯನ್ನು ಆರಾಧಿಸುವವರು, ಪೂಜಿಸುವವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ ಎಂದಂತಾಯಿತಲ್ಲವೇ? ಅದನ್ನು ಪರಿಗಣಿಸಿಯೇ ಅವರು ಉದ್ದೇಶಪೂರ್ವಕವಾಗಿ ಹಾಗೆ ಹೇಳಿದ್ದಾರೆ ಎಂದಂತಾಯಿತಲ್ಲವೇ? ಜನರ ಶ್ರದ್ಧೆ, ಭಕ್ತಿ, ನಂಬಿಕೆಗಳ ಮೇಲೆ ಪ್ರಹಾರ ಮಾಡುವ ಹೊಣೆಗಾರಿಕೆಯನ್ನು ಸ್ವಾಮೀಜಿಯವರಿಗೆ ಕೊಟ್ಟವರು ಯಾರು? ಇದು ಸಮಾಜಘಾತಕ ಕೆಲಸವಲ್ಲವೇ? ಸಹಸ್ರಾರು ವರ್ಷಗಳ ಧಾರ್ಮಿಕ ಆಚರಣೆ, ಸಂಪ್ರದಾಯ, ಪರಂಪರೆ, ನಂಬಿಕೆಗಳಲ್ಲಿ ಹುಳಿ ಹಿಂಡುವ ಕೆಲಸವನ್ನು ಸ್ವಾಮೀಜಿಯವರು ಮಾಡಿದಂತಾಯಿತಲ್ಲವೇ? ಯಾವ ದೇವರನ್ನು ಪೂಜಿಸಬೇಕು, ಯಾವ ಸ್ತೋತ್ರ ಪಠಿಸಬೇಕು ಎಂಬುದು ಅವರವರಿಗೆ ಬಿಟ್ಟ ವಿಚಾರ. ಸ್ವಾಮೀಜಿಯವರಿಗೇಕೆ ಈ ಉಸಾಬರಿ? ಇಷ್ಟು ವರ್ಷಗಳಿಂದ ಗಣಪತಿಯನ್ನು ಆರಾಧಿಸಿಕೊಂಡು ಬಂದವರಿಗೆ (ಲಿಂಗಾಯತರನ್ನು ಸೇರಿಸಿ), ಈಗ ಪೂಜಿಸಬೇಡಿ, ಅದು ನಮ್ಮ ಸಂಸ್ಕೃತಿ ಅಲ್ಲ ಎಂದು ಹೇಳಿದರೆ ಏನಾಗಬೇಡ? ಅದರಿಂದ ಜನಸಾಮಾನ್ಯರ ಧಾರ್ಮಿಕ ಭಾವನೆಗಳ ಮೇಲೆ ಅದೆಂಥ ಆಘಾತವಾಗಬಹುದು? ಇಂಥ ತಿರಸಟ್ಟು ಮತ್ತು ಅವಿವೇಕದ ಹೇಳಿಕೆ ನೀಡುವ ಮುನ್ನ ಈ ಎಲ್ಲ ಸೂಕ್ಷ್ಮ ಸಂಗತಿಗಳನ್ನು ಸ್ವಾಮೀಜಿಯವರು ಯೋಚಿಸಬೇಕಿತ್ತು, ಅರಿಯಬೇಕಿತ್ತು. 


ಗಣಪತಿ ಪೂಜೆ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ ಎನ್ನುವುದಾದರೆ, ಅವರ ಭಕ್ತರ ಮನೆಗೆ ಹೋಗಿ ಪಾದಪೂಜೆ ಮಾಡಿಸಿಕೊಳ್ಳುವ ಸ್ವಾಮಿಗಳದು ಯಾವ ಸಂಸ್ಕೃತಿ ಎಂದು ಅನೇಕರು ಆಗ ಕೇಳಿದ್ದರು. ದೇವರ ಹೆಸರಲ್ಲಿ ಜನರ ಮಧ್ಯೆ ಬಿರುಕು ಮೂಡಿಸುವ, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ, ಮನಸ್ಸು-ಮನಸ್ಸುಗಳನ್ನು ಒಡೆಯುವ, ನಂಬಿಕೆಗಳನ್ನು ಶಿಥಿಲಗೊಳಿಸುವ ಕೆಲಸವನ್ನು ಶ್ರೀಗಳು ಮಾಡಿದ್ದರು. ತಮ್ಮ ಹೇಳಿಕೆಯಿಂದ ಎಂಥ ತಪ್ಪು ಸಂದೇಶ ಹೋಗುತ್ತದೆ ಎಂಬ ವಿವೇಕ ಉನ್ನತ ಸ್ಥಾನದಲ್ಲಿ ಇರುವವರಿಗೆ ಇರಬೇಕಿತ್ತು. ಸಾಣೇಹಳ್ಳಿ ಶ್ರೀಗಳು ಸಮಜಾಯಿಷಿ ಕೊಟ್ಟು ಈ ವಿಷಯದಲ್ಲಿ ಮೂಡಿರುವ ಗೊಂದಲವನ್ನಾದರೂ ನಿವಾರಿಸಬೇಕಿತ್ತು. ಆಗ ಅವ್ಯಾವುದನ್ನೂ ಮಾಡದೇ, ಈಗ ಪುನಃ ಮನಸ್ಸುಗಳನ್ನು ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ. 


ಗಣಪತಿ ವಿವಾದದ ನೆನಪು ಇನ್ನೇನು ನೇಪಥ್ಯಕ್ಕೆ ಸರಿಯುತ್ತಿದೆ ಎನ್ನುವಾಗ, ಸಾಣೇಹಳ್ಳಿ ಶ್ರೀಗಳು ಇನ್ನೊಂದು ಕಿತಾಪತಿ ಮಾಡಿದ್ದಾರೆ. ಕಳೆದ ವಾರ ಹೊಳಲ್ಕೆರೆಯ ಒಂಟಿಕಂಬದ ಮಠದಲ್ಲಿ ಚಿತ್ರದುರ್ಗ ಮುರುಘಾಮಠದ ಲಿಂಗೈಕ್ಯ ಮಲ್ಲಿಕಾರ್ಜುನ ಜಗದ್ಗುರುಗಳ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಶ್ರೀಗಳು 'ಲಿಂಗಾಯತ ಧರ್ಮ, ಹಿಂದೂ ಧರ್ಮದ ಭಾಗವಲ್ಲ' ಎಂಬ ಹೇಳಿಕೆ ನೀಡಿ, ಮತ್ತೊಮ್ಮೆ ಟೀಕೆಗೆ, ಗೇಲಿಗೆ ಗುರಿಯಾಗಿದ್ದಾರೆ. ತಮಾಷೆ ಅಂದ್ರೆ ಆ ವೇದಿಕೆಯಲ್ಲಿದ್ದ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿಯವರು, 'ಅಲ್ಲೇ ಡ್ರಾ, ಅಲ್ಲೇ ಬಹುಮಾನ' ಎನ್ನುವ ಧಾಟಿಯಲ್ಲಿ ಸಾಣೇಹಳ್ಳಿಯವರಿಗೆ ತಿರುಗೇಟು ಕೊಟ್ಟು, ಬಾಯಿಮುಚ್ಚಿಸಿದ್ದಾರೆ. ಅಂದರೆ ಸಾಣೇಹಳ್ಳಿ ಶ್ರೀಗಳ ನಿಲುವನ್ನು ಬೇರೆಯವರಲ್ಲ, ಸ್ವತಃ ಲಿಂಗಾಯತ ಸ್ವಾಮೀಜಿಗಳೇ ಘಂಟಾಘೋಷವಾಗಿ ತಿರಸ್ಕರಿಸಿದ್ದಾರೆ. 


ಅಪಕ್ವ ಮತ್ತು ಬಾಲಿಶ ವಿಚಾರಗಳನ್ನು ಪ್ರಸ್ತಾಪಿಸಿ, ತಾವೊಬ್ಬ ಪ್ರಗತಿಪರ ಸ್ವಾಮೀಜಿ ಎಂಬುದನ್ನು ಬಿಂಬಿಸಲು ಹೋಗಿ ಸಾಣೇಹಳ್ಳಿ ಶ್ರೀಗಳು ಆಗಾಗ ಉಪದ್ವ್ಯಾಪ ಮಾಡುತ್ತಿರುವುದು ಹೊಸತೇನಲ್ಲ. ಇತ್ತೀಚೆಗೆ ಅವರ ಹೇಳಿಕೆಗಳನ್ನು ಲಿಂಗಾಯತರೇ ಗಂಭೀರವಾಗಿ ಸ್ವೀಕರಿಸುವುದಿಲ್ಲ. 'ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವಲ್ಲ' ಎಂಬ ಹೇಳಿಕೆಗೆ ಮೊದಲು ವಿರೋಧ ವ್ಯಕ್ತವಾಗಿದ್ದು ಲಿಂಗಾಯತರಿಂದಲೇ ಎಂಬ ಸತ್ಯ ಸಾಣೇಹಳ್ಳಿ ಶ್ರೀಗಳಿಗೆ ಇನ್ನಾದರೂ ಅರ್ಥವಾಗಬೇಕಿದೆ. ಶ್ರೀಗಳ ಹೇಳಿಕೆ ಅದೆಷ್ಟು ಸವಕಲು ಮತ್ತು ಅಪ್ರಸ್ತುತ ಎನ್ನುವುದು ಎಂಥವರಿಗಾದರೂ ಅರ್ಥವಾಗುತ್ತದೆ. 'ಹಿಂದೂ ಎಂಬುದು ಒಂದರ್ಥದಲ್ಲಿ ಧರ್ಮವೇ ಅಲ್ಲ. ಅದು ಎಲ್ಲ ರೀತಿಯ ಅನಿಷ್ಟ, ಅನಾಚಾರ, ಮೂಢನಂಬಿಕೆಗಳನ್ನು ಒಳಗೊಂಡಿದೆ. ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವಲ್ಲ ಎಂಬುದನ್ನು ಅರಿಯಬೇಕು. ಹಿಂದೂ ಎಂಬುದು ಒಂದು ಧರ್ಮ ಎಂದು ಒಪ್ಪಲು ನಾನು ಸಿದ್ಧನಿಲ್ಲ. ನಾವು ಸ್ವತಂತ್ರ ಲಿಂಗಾಯತ ಧರ್ಮದವರು. ಆ ಕಾಲದಲ್ಲಿಯೇ ಬಸವಣ್ಣವರು ವೇದ, ಪುರಾಣ, ಶಾಸ್ತ್ರಗಳನ್ನು ತಿರಸ್ಕರಿಸಿದ್ದರು. ವೇದವೆಂಬುದು ಓದಿನ ಮಾತು, ಪುರಾಣವೆಂಬುದು ಪುಂಡರ ಗೋಷ್ಠಿ, ಶಾಸ್ತ್ರವೆಂಬುದು ಸಂತೆಯ ಸುದ್ದಿ ಎಂದು ಹೇಳುವ ಮೂಲಕ ಲಿಂಗಾಯತ ಧರ್ಮದ ಹುಟ್ಟಿಗೆ ಕಾರಣರಾದರು. ವೈದಿಕ ಪರಂಪರೆಯ ಬೇರುಗಳು ನಮ್ಮ ತಲೆಯಲ್ಲಿ ಆಳವಾಗಿ ಬೇರೂರಿವೆ. ಈ ವೈದಿಕ ಮನಸ್ಥಿತಿಯನ್ನು ಕಿತ್ತೆಸೆಯಬೇಕು, ನಾವು ಲಿಂಗಾಯತರು ಹಿಂದೂ ಧರ್ಮದ ವ್ಯಾಪ್ತಿಯಿಂದ ಹೊರಬರಬೇಕು' ಎಂದು ಸಾಣೇಹಳ್ಳಿ ಶ್ರೀಗಳು ಫರ್ಮಾನು ಹೊರಡಿಸಿದ್ದಾರೆ. 


ಹಾಗೆ ನೋಡಿದರೆ ಸಾಣೇಹಳ್ಳಿಯವರ ವಿಚಾರದಲ್ಲಿ ಯಾವ ಹೊಸ ವಿಚಾರಗಳೂ ಇಲ್ಲ. ಶ್ರೀಗಳ ಈ ಮಾತುಗಳನ್ನೇ ಬಸವಣ್ಣನವರು ಬದುಕಿದ್ದಾಗಲೂ ಕೆಲವರು ಪ್ರಸ್ತಾಪಿಸಿದ್ದರು. ಆಗಲೂ ಈ ಮಾತಿಗೆ ಪುರಸ್ಕಾರ ದೊರೆತಿರಲಿಲ್ಲ. ಅಂದಿನಿಂದ ಲಿಂಗಾಯತರನ್ನು ಹಿಂದೂ ಧರ್ಮದಿಂದ ಬೇರ್ಪಡಿಸುವ ಕುತಂತ್ರಗಳು ವ್ಯವಸ್ಥಿತವಾಗಿ ನಡೆದರೂ, ಯಾವ ಪ್ರಯೋಜನವೂ ಆಗಲಿಲ್ಲ. ಕಾಲಕಾಲಕ್ಕೆ ಈ ವಿಚಾರ ಪ್ರಸ್ತಾಪವಾಗಿ ಅಲ್ಲಿಯೇ ಸತ್ತು, ಮತ್ತೆ ಯಾವಾಗಲೋ ಮರು ಹುಟ್ಟು ಪಡೆದು, ಪುನಃ ಸಾವಿಗೀಡಾಗುವುದು ನಡೆದುಕೊಂಡೇ ಬರುತ್ತಿದೆ. ಸಾಣೇಹಳ್ಳಿ ಶ್ರೀಗಳು ಹೇಳಿದ್ದು ಯಾರಿಗೂ ಗೊತ್ತಿಲ್ಲದ gospel truth ಅಲ್ಲ. ಈ ವಾದವನ್ನು ಸಾರಾಸಗಟು ತಿರಸ್ಕರಿಸುತ್ತಾ, ಕಾಲಕಾಲಕ್ಕೆ ತಿರುಗೇಟು ಕೊಡುತ್ತಲೇ ಬಂದಿದ್ದಾರೆ. ಆದರೂ ಸಾಣೇಹಳ್ಳಿ ಸ್ವಾಮೀಜಿಯವರಂಥ ಮನಸ್ಸುಗಳು ಇಂಥ ಬಾಲಿಶ ವಾದಗಳಿಗೆ ತುಪ್ಪ ಸುರಿಯುತ್ತಲೇ ಬರುತ್ತಿದ್ದಾರೆ.  


ಸಾಣೇಹಳ್ಳಿಯವರಿಗಿಂತ ವಯಸ್ಸಿನಲ್ಲಿ ಕಿರಿಯರಾದ ವಚನಾನಂದ ಶ್ರೀಗಳು, 'ಹಿಂದೂ ಧರ್ಮ ಮಹಾಸಾಗರವಿದ್ದಂತೆ. ಹಿಂದೂ ಧರ್ಮದ ಬಗ್ಗೆ ಜ್ಞಾನವಿಲ್ಲದವರು ಈ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕು. ದೇಶದಲ್ಲಿನ ಬೌದ್ಧರು, ಜೈನರು,ಲಿಂಗಾಯತರು, ವೀರಶೈವರು ಎಲ್ಲರೂ ಹಿಂದೂಗಳೇ. ವೈದಿಕರು, ಅವೈದಿಕರು, ದ್ವೈತ, ಅದ್ವೈತ ಸೇರಿದಂತೆ ಹಿಂದೂ ಧರ್ಮ ಸರ್ವವನ್ನೂ, ಸರ್ವರನ್ನೂ ಒಳಗೊಂಡಿದೆ. ಎಲ್ಲ ಮೂಲಪುರುಷರು, ಮಹಾಪುರುಷರು ಇದ್ದಿದ್ದು ಹಿಂದೂ ಧರ್ಮದಲ್ಲಿಯೇ. ವೀರಶೈವ, ಲಿಂಗಾಯತ ತತ್ವಗಳು ಬೇರೆ ಬೇರೆ ಇರಬಹುದು. ನಮ್ಮ ಮಠ, ಪೀಠಗಳ ತತ್ವಗಳು ಏನೇ ಇರಬಹುದು, ಆದರೆ ನಾವೆಲ್ಲ ಒಟ್ಟಾಗಿ ಹೋದಾಗ ಮಾತ್ರ ಸಮಾಜಕ್ಕೆ ಭವಿಷ್ಯವಿದೆ' ಎಂದು ವಚನಾನಂದ ಶ್ರೀಗಳು ಅತ್ಯಂತ ಸಮಚಿತ್ತದಿಂದ, ಪ್ರಬುದ್ಧರಾಗಿ ಹೇಳಿ, ಸಾಣೇಹಳ್ಳಿಯವರ ವಾದ ಗೊಡ್ಡುತನದಿಂದ ಕೂಡಿದೆ ಎಂಬುದನ್ನು ಎತ್ತಿ ತೋರಿಸಿದ್ದಾರೆ. 


ಗಣಪತಿ ವಿವಾದವಾದಾಗಲೇ, ಲಿಂಗಾಯತ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಾಣೇಹಳ್ಳಿಶ್ರೀಗಳನ್ನು 'ಆ ನಕ್ಸಲ್ ವಾದಿ ಸ್ವಾಮಿಯ ಮಾತಿಗೇಕೆ ಕಿಮ್ಮತ್ತು ಕೊಡುತ್ತೀರಿ?' ಎಂದು ಒಂದೇ ಮಾತಿನಲ್ಲಿ ಇಡೀ ವಾದಕ್ಕೆ ಷರಾ ಬರೆದುಬಿಟ್ಟಿದ್ದರು. ಆದರೂ ಅವರ ಬಗೆಗಿನ ಕಿಂಚಿತ್ ಗೌರವದಿಂದ ಆಗ ಅನೇಕರು ತಾಳ್ಮೆಯಿಂದ ಪ್ರತಿಕ್ರಿಯಿಸಿದ್ದರು. ಆದರೆ ಈಗ ಶ್ರೀಗಳು ತಮ್ಮ ಬಾಯಿಶೀಕಿನಿಂದ ನಗೆಪಾಟಲಿಗೆ ಗುರಿಯಾಗುತ್ತಿದ್ದಾರೆ. ಸಮಾಜವನ್ನು ಒಡೆಯುವ, ಮನಸ್ಸುಗಳನ್ನು ಘಾಸಿಗೊಳಿಸುವ ಕೆಲಸವನ್ನು ಆಗಾಗ ಮಾಡುತ್ತಿದ್ದಾರೆ. ತಮ್ಮ ವಾದವನ್ನು ಬೆಳಗಿಸುವ, ಅದಕ್ಕೆ ಹೊಳಪು ನೀಡುವ ಪ್ರತ್ಯುತ್ಪನ್ನ ಮತಿತ್ವ ಅವರಲ್ಲಿ ಬರಿದಾದಂತೆ ತೋರುತ್ತಿದೆ ಎಂಬುದನ್ನು ವಿಷಾದದಿಂದಲೇ ಹೇಳಬೇಕಿದೆ. 

ಫುಲ್ ಸ್ಟಾಪ್!

Thursday 22 August 2024

ಸಿಖ್, ಬೌದ್ಧ, ಜೈನ, ಲಿಂಗಾಯತ, ವೀರಶೈವ ಎಲ್ಲರೂ ಹಿಂದೂಗಳು

 


ವಚನ ದರ್ಶನ ಪುಸ್ತಕ ವೈಚಾರಿಕ ವಲಯದಲ್ಲಿ ಸಾಕಷ್ಟು ಚರ್ಚೆ ಸಂವಾದಗಳನ್ನು ಹುಟ್ಟುಹಾಕಿದೆ. ವಚನಗಳನ್ನು ಹೇಗೆ ವ್ಯಾಖ್ಯಾನಿಸಬೇಕು ಎಂಬುದರ ಬಗ್ಗೆ ಅನೇಕ ಮುಖಗಳು ತೆರೆದುಕೊಂಡಿವೆ. ಇದರಲ್ಲಿ ಮುನ್ನೆಲೆಗೆ ಬಂದ ಒಂದು ಮಹತ್ವದ ಚರ್ಚೆ ಹಿಂದೂಗಳು ಯಾರು? ಧರ್ಮವೆಂದರೆ ಏನು? ಹಿಂದೂ ಪದದ ಅರ್ಥ ಮತ್ತು ವ್ಯಾಪ್ತಿಯ ಕುರಿತಾಗಿ ಹಲವು ವಾದಗಳು ನಮ್ಮ ಮುಂದಿವೆ. ಹಿಂದೂ ಶಬ್ದವನ್ನು ಅಪವ್ಯಾಖ್ಯಾನಿಸುವ ಕೆಲಸ, ಸಮಾಜದಲ್ಲಿ ಕೆಲವರಿಂದ ನಡೆಯುತ್ತಿದೆ. ಆರ್ಯ, ಸನಾತನ ಶಬ್ದಗಳು ಪುರಾತನ, ಆದರೆ ಹಿಂದೂ ಎಂಬ ಹೆಸರನ್ನು ಮೂಸ್ಲಿಮರು ನೀಡಿದ್ದು ಎಂಬ ತಪ್ಪು ಗ್ರಹಿಕೆ ಇದೆ. ಹಾಗಾದರೆ ಹಿಂದೂ ಎಂದರೆ ಏನು? ಅದರ ವ್ಯಾಪ್ತಿ ವೈಶಾಲ್ಯ ಎಂತಹದ್ದು? ಎಂಬುದನ್ನು ನೋಡೋಣ.

 

ಹಿಂದೂ ಎಂದರೆ ಯಾರು? ಹಿಂದೂ ಎಂದರೆ ಏನು?

 

ಭಾರತ ಸಂವಿಧಾನದ ವಿಧಿ 25(2)(b) ಯ ಅನ್ವಯ ಸಿಖ್, ಜೈನ ಮತ್ತು ಬೌದ್ಧ ಎಲ್ಲರೂ ಹಿಂದೂಗಳೇ. ಲಿಂಗಾಯತರನ್ನೂ ಒಳಗೊಂಡಂತೆ, ಭಾರತದಲ್ಲಿ ಹುಟ್ಟಿದ ಎಲ್ಲ ಮತ ಪಂಥಗಳು ಹಿಂದೂ ಎಂದು ಸಂವಿಧಾನವು ವ್ಯಾಖ್ಯಾನಿಸಿದೆ. 1995 ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ , ಹಿಂದೂ ಎಂಬುದು ಜೀವನ ಪದ್ಧತಿ, ಇದು ಒಂದು ರಿಲಿಜನ್‌ ಅಲ್ಲ ಎಂದು ಐತಿಹಾಸಿಕ ತೀರ್ಪು ನೀಡಿದೆ. ಇದಕ್ಕೆ ಕಾರಣ  ಆಚರಣೆ ಮತ್ತು ಸಿದ್ಧಾಂತಗಳಲ್ಲಿ ವಿವಿಧತೆ ಇದ್ದರೂ ಮೂಲ ತತ್ವ ಒಂದೇ ಎಂದು, ಮಾನ್ಯ ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

 

ಸಿಂಧೂ ನದಿಯ ಸುತ್ತಮುತ್ತಲಿನ ಪ್ರದೇಶದಲ್ಲಿರುವವರು ಹಿಂದೂಗಳು, ಸಿಂಧೂ ಹಿಂದೂ ಆಗಿದೆ.‌ ಹಿಮಾಲಯದಿಂದ ಹಿಂದೂ ಸರೋವರದವರೆಗೆ (ಹಿಂದೂ ಮಹಾಸಾಗರ) ವ್ಯಾಪಿಸಿರುವ ಪ್ರದೇಶ ಹಿಂದೂ ರಾಷ್ಟ್ರ. ಹಿಂದೂ ಎನ್ನುವುದು ಪ್ರದೇಶವಾಚಕ ಮಾತ್ರ ಎಂಬ ವಾದವಿದೆ ಇದು ಅರ್ಧ ಸತ್ಯ. ಪುರಾಣ ಇತಿಹಾಸಗಳಲ್ಲಿ ಹಿಂದೂ ಶಬ್ದಕ್ಕೆ ವಿಶಾಲವಾದ ಅರ್ಥವಿದೆ. ಇದೊಂದು ತತ್ವವಾಚಕ ಪದ. ಸಾಮಾನ್ಯವಾಗಿ ಇದನ್ನು ಹಿಂದುತ್ವ ಎಂದು ಕರೆಯುತ್ತೇವೆ. "ಹೀನಂ ದೂಷಯತಿ ಇತಿ ಹಿಂದೂ" ಎಂಬ ವ್ಯುತ್ಪತ್ತಿ ಇದೆ. ಕೆಟ್ಟದನ್ನು ಬಯಸದಿರುವವರು, ಕೆಟ್ಟದ್ದನ್ನು ದೂರ ಇಟ್ಟವರು ಹಿಂದೂಗಳು. ವೃದ್ಧ ಸ್ಮೃತಿಯಲ್ಲಿ "ಹಿಂಸಯಾ ದ್ರೂಯತೆ ಯಶ್ಚ ಸದಾಚಾರ ತತ್ಪರ:" ಎಂದು ಹೇಳಿದೆ. ಹಿಂಸೆಯಿಂದ ದೂರ ಇರುವವರು, ಸದಾಚಾರ ತತ್ಪರರು ಹಿಂದೂಗಳು. ಸಹನಾವವತು ಸಹನೌ ಭುನಕ್ತು ಎನ್ನುವ ಮಾರ್ಗ ಹಿಂದೂ. ಉಪಜೀವನ ಮಾತ್ರವಲ್ಲ, ಜೀವನ, ಉಜ್ಜೀವನದ ದಾರಿ ಹಿಂದೂಗಳದು. ಇದು ಶುದ್ಧ ಜೀವನ ಪದ್ಧತಿ.

“ಓಂಕಾರ ಮೂಲಮಂತ್ರಾಢ್ಯಃ ಪುನರ್ಜನ್ಮ ಹೃದಾಶಯಃ ಗೋಭಕ್ತೋ ಭಾರತಗುರೂ ಹಿಂದೂ ಹಿಂಸನದೂಷಕಃ”


ಧರ್ಮ, ಮತ ಮತ್ತು ರಿಲಿಜನ್

“ಧಾರಣಾತ್ ಇತಿ ಧರ್ಮಃ” ಧಾರಣೆ ಮಾಡಿಕೊಳ್ಳಲ್ಪಡುವುದು ಧರ್ಮ.ಇದು ದೇಶ, ಕಾಲ, ಪ್ರಕೃತಿ, ಪುರುಷರನ್ನು ಒಳಗೊಂಡ ತತ್ವ. ಇದೊಂದು ಸ್ವಯಂಪ್ರೇರಿತರಾಗಿ ಎಲ್ಲರೂ ಪಾಲಿಸಬೇಕಾದ ನೀತಿ ಸಂಹಿತೆ. ಇದಕ್ಕೆ ಸೀಮಿತ ಪರಿಧಿ ಇಲ್ಲ. ಮತವೆಂದರೆ ಅಭಿಪ್ರಾಯ, ಸಂಪ್ರದಾಯ, ಆಚಾರ, ವಿಚಾರ. ಇದು ದೇಶ ಕಾಲಗಳ ಅಧೀನ. ಮತವೆಂದರೆ ಮಾರ್ಗವೂ ಕೂಡ. ರಿಲಿಜನ್ ಎಂಬ ಶಬ್ದಕ್ಕೆ ಭಾರತದ ಯಾವ ಭಾಷೆಗಳಲ್ಲಿಯೂ ಪರ್ಯಾಯ ಶಬ್ದವಿಲ್ಲ. ಏಕೆಂದರೆ ರಿಲಿಜನ್ನುಗಳಲ್ಲಿ ಒಂದು ಗ್ರಂಥ, ಒಬ್ಬ ದೇವರು, ಒಬ್ಬ ಪ್ರವಾದಿ ತಮ್ಮದು ಮಾತ್ರ ಸರಿ, ಉಳಿದಿದ್ದೆಲ್ಲ ತಪ್ಪು. ಅನ್ಯರು, ಒಪ್ಪದೇ ಇರುವವರು ಇರುವುದೇ ತಪ್ಪು ಎಂಬ ಅಭಿಮತ ರಿಲಿಜನ್ನುಗಳದ್ದು. ಆದರೆ ಭಾರತೀಯ ತತ್ವ ವಿಚಾರ ಸಮನ್ವಯ ದೃಷ್ಟಿಯದ್ದು.

ನಾವು ಸೆಮೆಟಿಕ್‌ ರಿಲಿಜನ್‌ ಗಳನ್ನು, ಧರ್ಮ ಎಂದು ಕರೆಯುತ್ತಿದ್ದೇವೆ. ಇದು ಸರಿಯಲ್ಲ. ರಿಲಿಜನ್‌ ಒಂದು ಸಂಪ್ರದಾಯವೇ ಹೊರತು ಧರ್ಮವಲ್ಲ. ರಿಲಿಜನ್ನು ಜನಸಮೂಹದೊಂದಿಗೆ ಕಾರ್ಯನಿರ್ವಹಿಸುತ್ತದೆ, ಆದರೆ ಧರ್ಮವು ವ್ಯಕ್ತಿತ್ವ ನಿರ್ಮಾಣಕ್ಕೆ ಒತ್ತುಕೊಡುತ್ತದೆ. ತರ್ಕ ಮತ್ತು ವಿವೇಕಕ್ಕೆ ಅನುಗುಣವಾಗಿ ಧರ್ಮವನ್ನು ಅನುಸರಿಸಬೇಕು.

 

ಸಿಖ್,ಬೌದ್ಧ, ಜೈನ, ಲಿಂಗಾಯತ, ವೀರಶೈವ ಎಲ್ಲರೂ ಹಿಂದೂಗಳೇ.

ಭಾರತದಲ್ಲಿ ಹುಟ್ಟಿದ ಮತಗಳ, ಪಂಥಗಳ ಆಚರಣೆ, ಸಂಪ್ರದಾಯಗಳು ಬೇರೆ ಬೇರೆ ಇರಬಹುದು, ಆದರೆ ಮೂಲತತ್ವಗಳು ಒಂದೇ. ಈ ತತ್ವಗಳು ಉದಾತ್ತವಾಗಿವೆ. ಭಾರತೀಯ ಮೂಲದ ಎಲ್ಲ ಮತಗಳಲ್ಲಿ ಇರುವ ತತ್ವಗಳಲ್ಲಿ ಬಹುಪಾಲು ಸಾಮ್ಯತೆ ಇದೆ. ಅವುಗಳನ್ನು ಈ ಕೆಳಗಿನಂತೆ ನೋಡಬಹುದು.

1. ದೇವನೊಬ್ಬ ನಾಮ ಹಲವು. ಸತ್ಯವೊಂದೇ,ಹುಡುಕುವ ದಾರಿಗಳು ಹಲವು ಎಂಬುದನ್ನು ಎಲ್ಲ ಮತಗಳು ಒಪ್ಪುತ್ತವೆ. ನಾನಾ ನಾಮರೂಪಗಳಲ್ಲಿ ದೇವರ ಆರಾಧನೆಗಳಿವೆ. 

2. ಧರ್ಮ, ಅರ್ಥ, ಕಾಮ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳು ಎಲ್ಲ ಮತಗಳಲ್ಲಿ ಇವೆ. ಬಹುಪಾಲು ಮತಗಳು ಮೋಕ್ಷವನ್ನೇ ಅಂತಿಮ ಗುರಿಯನ್ನಾಗಿಸಿಕೊಂಡಿವೆ. ಅದಕ್ಕೆ ನೀಡಿರುವ ಹೆಸರು ಬೇರೆ ಬೇರೆ ಇರಬಹುದು. ಉದಾಹರಣೆಗೆ ಲಿಂಗಾಯತ ವೀರಶೈವದಲ್ಲಿ ಅದು ಲಿಂಗಾಂಗ ಸಾಮರಸ್ಯ. ಬೌದ್ಧರಲ್ಲಿ ನಿರ್ವಾಣ ಹೀಗೆ.

3. ಕರ್ಮ ಸಿದ್ಧಾಂತ : ತನ್ನ ಪಾಲಿನ ಕರ್ತವ್ಯ ಎಲ್ಲ ಜೀವಿಗಳಿಗೂ ಅನಿವಾರ್ಯ. ಸತ್ಯ, ನಿಷ್ಠೆ, ಭಕ್ತಿ, ದಾಸೋಹದಿಂದ ಕೂಡಿದ ಕಾಯಕವೇ ಶ್ರೇಷ್ಠ ಕರ್ಮ, ಇದರಿಂದ ಮೋಕ್ಷ ಸಾಧ್ಯ. ಹಿಂದೆ 84 ಲಕ್ಷ ಯೋನಿಗಳಲ್ಲಿ ಜನಿಸಿದ ನಂತರ ಮಾನವ ಜನ್ಮ ಬಂದಿದೆ. ಇದೇ ಜನ್ಮ ಕಡೆಯಾಗಬೇಕು, ಮತ್ತೆ ಹುಟ್ಟಬಾರದು ಎಂಬುದರಲ್ಲಿ ಎಲ್ಲ ಮತಗಳು ನಂಬಿಕೆ ಇಟ್ಟಿವೆ.

4. ಗೋವು ಪೂಜ್ಯ : ಭಾರತದಲ್ಲಿ ಜನಿಸಿದ ಎಲ್ಲ ಮತ ಸಂಪ್ರದಾಯಗಳು ಗೋವನ್ನು ಪೂಜಿಸುತ್ತವೆ.

5. ಓಂಕಾರ : ಓಂಕಾರವು ಭಾರತೀಯ ಎಲ್ಲ ಮತಗಳಲ್ಲಿ ಸಾರ್ವಭೌಮ ಮಂತ್ರ. ಸನ್ಯಾಸಿಗಳಿಗೆ ಪ್ರಣವ ಸ್ವರೂಪಿಗಳು ಎಂದು ಕರೆಯುವುದೇ ರೂಢಿ.

6. ಸುಖ ದುಃಖಗಳು : ಲೋಕದಲ್ಲಿ ಎರಡು ವಿಧದ ಸುಖಗಳಿವೆ. ಒಂದು ಇಂದ್ರಿಯಗಳ ಮೂಲಕ ಸಿಗುವ ಸುಖ. ಇದು ವಿಷಯ ಸುಖ. ಇನ್ನೊಂದು ಇಂದ್ರಿಯ ವ್ಯಾಪಾರವಿಲ್ಲದ ಪರಮ ಸುಖ. ವಿಷಯ ಸುಖಕ್ಕೆ ದುಃಖದ ಲೇಪವಿದೆ. ಪರಮ ಸುಖಕ್ಕೆ ದುಃಖಾನುಭವವೇ ಇಲ್ಲ. ಆತ್ಮಾನುಭವವೇ ಪರಮ ಸುಖ. ವಿಷಯ ಸುಖದ ಆಸೆಯೇ ದುಃಖಕ್ಕೆ ಮೂಲ. ಮನದ ಮುಂದಣ ಆಸೆಯೇ ಮಾಯೆ.

7.  “ವಸುಧೈವ ಕುಟುಂಬಕಂ” : ಇಡೀ ಜಗತ್ತೇ ನನ್ನ ಕುಟುಂಬ. ಎಲ್ಲರೂ ನಮ್ಮವರೇ. ಸಾಮರಸ್ಯ ಪ್ರತಿ ಮತಗಳ ಮೂಲ ಮಂತ್ರ.

ಈ ಎಲ್ಲ ತತ್ವಗಳಿಂದ ಸಿಖ್ ,ಬೌದ್ಧ, ಜೈನ, ಲಿಂಗಾಯತ, ವೀರಶೈವ ಎಲ್ಲರೂ ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಿಂದುಗಳೇ. 

ಹಿಂದೂ ಎಂಬಲ್ಲಿ ವೈದಿಕ-ಅವೈದಿಕ ಚರ್ಚೆಯೇ ಅಪ್ರಸ್ತುತ.

ತತ್ವದ ಮೂಲದಲ್ಲಿ ವ್ಯತ್ಯಾಸಗಳಿಲ್ಲ. ಉಪಾಸನಾ ಕ್ರಮದಲ್ಲಿ, ಪೂಜಾ ವಿಧಾನಗಳಲ್ಲಿ, ಸಂರಚನೆಗಳಲ್ಲಿ ವ್ಯತ್ಯಾಸಗಳಿವೆ. ಆಕಾರ-ನಿರಾಕಾರ, ಸ್ಥಾವರ-ಜಂಗಮ, ಸಗುಣ-ನಿರ್ಗುಣ, ಆಸ್ತಿಕ-ನಾಸ್ತಿಕ ಮುಂತಾದ ವಿಭಿನ್ನ ದೃಷ್ಟಿಕೋನಗಳಿವೆ. ಭಾರತದಲ್ಲಿ ಮೂಲದಲ್ಲಿ ಷಡ್ದರ್ಶನಗಳು ಪ್ರಚಲಿತದಲ್ಲಿವೆ. ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಮೀಮಾಂಸ ಮತ್ತು ವೇದಾಂತ. ದೇವತಾ ಉಪಾಸನಾ ಕ್ರಮದಲ್ಲಿ ಶೈವ, ವೈಷ್ಣವ,ಶಾಕ್ತ, ಸೌರ, ಕೌಮಾರ ಮತ್ತು ಗಾಣಪತ್ಯ ಎಂಬ ಆರು ಮತಗಳಿವೆ.ತಾತ್ವಿಕವಾಗಿ ಬೌದ್ಧ, ಜೈನ, ಚಾರ್ವಾಕ, ಸಾಂಖ್ಯ, ಯೋಗ, ಮೀಮಾಂಸಕ, ಅದ್ವೈತ, ವಿಶಿಷ್ಟಾದ್ವೈತ, ದ್ವೈತ, ಶಕ್ತಿ-ವಿಶಿಷ್ಟಾದ್ವೈತ ಹೀಗೆ ಮಹಾಪುರುಷರ ದೆಸೆಯಿಂದ ದರ್ಶನಗಳು ತೆರೆದುಕೊಂಡಿವೆ.ಇವೆಲ್ಲವೂ ಹಿಂದೂ ಧರ್ಮದ ಭಾಗಗಳೇ. ವೇದಗಳನ್ನು ಪ್ರಮಾಣವೆಂದು ಒಪ್ಪುವವರು ವೈದಿಕರು, ವೇದಗಳನ್ನು ಪ್ರಮಾಣವನ್ನು ಒಪ್ಪದಿರುವ ಹಲವು ಮತಗಳೂ ಇವೆ. ಇವೆರಡೂ ಹಿಂದುವೇ, ಆ ಸ್ವಾತಂತ್ರ್ಯ ಹಿಂದೂ ಧರ್ಮದಲ್ಲಿ ಮಾತ್ರ ಇದೆ. ಇದು ಒಂದು ಗ್ರಂಥ, ಒಬ್ಬ ಉದ್ಧಾರಕನಿಗೆ ಕಟ್ಟು ಬಿದ್ದಿಲ್ಲ. ಪ್ರಾದೇಶಿಕತೆಯನ್ನು ತೆಗೆದುಕೊಂಡರೆ ಹಿಂದೂಸ್ಥಾನದಲ್ಲಿರುವ ಎಲ್ಲರೂ ಹಿಂದೂಗಳೇ. ಸಾಂಸ್ಕೃತಿಕ ಭಾರತವನ್ನು ಕಲ್ಪಿಸಿಕೊಂಡಾಗ ಅಫಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ್, ಮ್ಯಾನ್ಮಾರ,ಶ್ರೀಲಂಕಾ, ಇಂಡೋನೇಶೀಯಾ, ಮಲೇಶಿಯಾ, ಮಾರಿಷಸ್‌ ಎಲ್ಲರೂ ಹಿಂದೂಗಳೇ.

 

ಧರ್ಮದ ವ್ಯಾಪ್ತಿ.

ಧರ್ಮದ ವ್ಯಾಪ್ತಿ ವ್ಯಕ್ತಿಯಿಂದ ವಿಶ್ವದವರೆಗೂ ಹರಡಿದೆ. ಚರ-ಅಚರ ವಸ್ತುಗಳಿಗೂ ಧರ್ಮವಿದೆ. ಹರಿಯುವುದು ನೀರಿನ ಧರ್ಮ, ಬೀಸುವುದು ಗಾಳಿಯ ಧರ್ಮ ಇತ್ಯಾದಿ. ವ್ಯಕ್ತಿಧರ್ಮ, ಕುಟುಂಬಧರ್ಮ, ರಾಷ್ಟ್ರಧರ್ಮ, ವಿಶ್ವಧರ್ಮ ಹೀಗೆ ಹಾಕಿಕೊಂಡ ನೀತಿ ಸಂಹಿತೆಗಳೊಂದಿಗೆ ಕರ್ತವ್ಯಗಳಿವೆ. ಧರ್ಮವೆಂಬ ಜೀವನ ಪದ್ಧತಿಯಲ್ಲಿ, ಯಮ ನಿಯಮಗಳಿವೆ. ಯಮವೆಂದರೆ ಪಾಲಿಸಬೇಕಾದವುಗಳು. ನಿಯಮವೆಂದರೆ ಬಿಡಲೇಬಾರದವು. ಧರ್ಮಿಯು ಕುಟುಂಬದ, ಸಮಾಜದ, ರಾಷ್ಟ್ರದ, ಪ್ರಕೃತಿಯ ನಿಯಮಗಳಿಗೆ, ಸಂವಿಧಾನಕ್ಕೆ ಬದ್ಧನಾಗಿರಬೇಕು. 

 

ದಯವೇ ಧರ್ಮದ ಮೂಲವಯ್ಯಾ. ದಯಬೇಕು ಸಕಲ ಪ್ರಾಣಿಗಳಲ್ಲಿ ಎಂದು ಬಸವಣ್ಣನವರು ಹೇಳುತ್ತಾರೆ. ಭಗವಾನ ಬುದ್ದ, ಭಗವಾನ ಮಹಾವೀರ, ಗುರು ನಾನಕರದು ಶಾಂತಿ-ಸಹಬಾಳ್ವೆಯ ಸಂದೇಶವಿದೆ. ವಿದೇಶದಿಂದ ಬಂದ ದಾಳಿಕಾರರು, ಕೊಳ್ಳೆ ಹೊಡೆಯಲು ಬಂದ ಲೂಟಿಕೋರರು, ಭಾರತಕ್ಕೆ ನಾವು ಧರ್ಮ ಬೋಧಿಸುತ್ತೇವೆ ಎನ್ನುತ್ತಾರೆ. ಯಾವ ನೀತಿ ನಿಯಮಗಳಿಲ್ಲದೇ, ಆಕ್ರಮಿಸುವ, ಯುದ್ಧ ಮಾಡುವ, ದುರಾಡಳಿತ ನಡೆಸಿದವರಿಗೆ ಯಾವ ಧರ್ಮವಿದೆ? ಅಲ್ಲಮ ಪ್ರಭುಗಳ ವಚನದ ಸಾಲುಗಳು ಸಹಾಯಕ್ಕೆ ಬರುತ್ತವೆ. “ದಾಳಿಕಾರಂಗೆ ಧರ್ಮವುಂಟೆ? [ಕನ್ನಗಳ್ಳಂಗೆ] ಕರುಳುಂಟೆ?”

 

ಪಾಶ್ಚಾತ್ಯ ಮನೋಭೂಮಿಕೆಯಿಂದ, ಭಾರತೀಯ ತತ್ವಮೀಮಾಂಸೆಯನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ವಿದೇಶಿ ಮಾನದಂಡಗಳಿಂದ ನಮ್ಮನ್ನು ನಾವು ನೋಡಿಕೊಳ್ಳುವುದು ಮೂರ್ಖತನ. ಈ ನೆಲಮೂಲದ ದೃಷ್ಟಿಯಿಂದ ತತ್ವವಿಚಾರಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಿದಾಗ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.


ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ

ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಿಹರ.





ಬಸವ ಮೂಲ, ಸನಾತನ ಶೈವ ಮೂಲ!

  "ಷಣ್ಮುಖನಿಗೆ ಪ್ರಸಾದ ಕೊಡುವುದನ್ನು ಮರೆತ ವೃಷಭನೆನ್ನುವ ಗಣನನ್ನು ಶಿವನು ಬಸವನಾಗಿ ಭೂಮಿಯಲ್ಲಿ ಜನಿಸಿ ಶಿವಭಕ್ತ ಜಂಗಮರಿಗೆ ಪ್ರಸಾದ ವಿನಿಯೋಗಿಸಿ ಪ್ರಾಯಶ್ಚಿತ್ತ...