ವಚನ ದರ್ಶನ ಪುಸ್ತಕ ವೈಚಾರಿಕ ವಲಯದಲ್ಲಿ ಸಾಕಷ್ಟು ಚರ್ಚೆ ಸಂವಾದಗಳನ್ನು ಹುಟ್ಟುಹಾಕಿದೆ. ವಚನಗಳನ್ನು ಹೇಗೆ ವ್ಯಾಖ್ಯಾನಿಸಬೇಕು ಎಂಬುದರ ಬಗ್ಗೆ ಅನೇಕ ಮುಖಗಳು ತೆರೆದುಕೊಂಡಿವೆ. ಇದರಲ್ಲಿ ಮುನ್ನೆಲೆಗೆ ಬಂದ ಒಂದು ಮಹತ್ವದ ಚರ್ಚೆ ಹಿಂದೂಗಳು ಯಾರು? ಧರ್ಮವೆಂದರೆ ಏನು? ಹಿಂದೂ ಪದದ ಅರ್ಥ ಮತ್ತು ವ್ಯಾಪ್ತಿಯ ಕುರಿತಾಗಿ ಹಲವು ವಾದಗಳು ನಮ್ಮ ಮುಂದಿವೆ. ಹಿಂದೂ ಶಬ್ದವನ್ನು ಅಪವ್ಯಾಖ್ಯಾನಿಸುವ ಕೆಲಸ, ಸಮಾಜದಲ್ಲಿ ಕೆಲವರಿಂದ ನಡೆಯುತ್ತಿದೆ. ಆರ್ಯ, ಸನಾತನ ಶಬ್ದಗಳು ಪುರಾತನ, ಆದರೆ ಹಿಂದೂ ಎಂಬ ಹೆಸರನ್ನು ಮೂಸ್ಲಿಮರು ನೀಡಿದ್ದು ಎಂಬ ತಪ್ಪು ಗ್ರಹಿಕೆ ಇದೆ. ಹಾಗಾದರೆ ಹಿಂದೂ ಎಂದರೆ ಏನು? ಅದರ ವ್ಯಾಪ್ತಿ ವೈಶಾಲ್ಯ ಎಂತಹದ್ದು? ಎಂಬುದನ್ನು ನೋಡೋಣ.
ಹಿಂದೂ ಎಂದರೆ ಯಾರು? ಹಿಂದೂ ಎಂದರೆ ಏನು?
ಭಾರತ ಸಂವಿಧಾನದ ವಿಧಿ 25(2)(b) ಯ ಅನ್ವಯ ಸಿಖ್, ಜೈನ ಮತ್ತು ಬೌದ್ಧ ಎಲ್ಲರೂ ಹಿಂದೂಗಳೇ. ಲಿಂಗಾಯತರನ್ನೂ ಒಳಗೊಂಡಂತೆ, ಭಾರತದಲ್ಲಿ ಹುಟ್ಟಿದ ಎಲ್ಲ ಮತ ಪಂಥಗಳು ಹಿಂದೂ ಎಂದು ಸಂವಿಧಾನವು ವ್ಯಾಖ್ಯಾನಿಸಿದೆ. 1995 ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ , ಹಿಂದೂ ಎಂಬುದು ಜೀವನ ಪದ್ಧತಿ, ಇದು ಒಂದು ರಿಲಿಜನ್ ಅಲ್ಲ ಎಂದು ಐತಿಹಾಸಿಕ ತೀರ್ಪು ನೀಡಿದೆ. ಇದಕ್ಕೆ ಕಾರಣ ಆಚರಣೆ ಮತ್ತು ಸಿದ್ಧಾಂತಗಳಲ್ಲಿ ವಿವಿಧತೆ ಇದ್ದರೂ ಮೂಲ ತತ್ವ ಒಂದೇ ಎಂದು, ಮಾನ್ಯ ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಸಿಂಧೂ ನದಿಯ ಸುತ್ತಮುತ್ತಲಿನ ಪ್ರದೇಶದಲ್ಲಿರುವವರು ಹಿಂದೂಗಳು, ಸಿಂಧೂ ಹಿಂದೂ ಆಗಿದೆ. ಹಿಮಾಲಯದಿಂದ ಹಿಂದೂ ಸರೋವರದವರೆಗೆ (ಹಿಂದೂ ಮಹಾಸಾಗರ) ವ್ಯಾಪಿಸಿರುವ ಪ್ರದೇಶ ಹಿಂದೂ ರಾಷ್ಟ್ರ. ಹಿಂದೂ ಎನ್ನುವುದು ಪ್ರದೇಶವಾಚಕ ಮಾತ್ರ ಎಂಬ ವಾದವಿದೆ ಇದು ಅರ್ಧ ಸತ್ಯ. ಪುರಾಣ ಇತಿಹಾಸಗಳಲ್ಲಿ ಹಿಂದೂ ಶಬ್ದಕ್ಕೆ ವಿಶಾಲವಾದ ಅರ್ಥವಿದೆ. ಇದೊಂದು ತತ್ವವಾಚಕ ಪದ. ಸಾಮಾನ್ಯವಾಗಿ ಇದನ್ನು ಹಿಂದುತ್ವ ಎಂದು ಕರೆಯುತ್ತೇವೆ. "ಹೀನಂ ದೂಷಯತಿ ಇತಿ ಹಿಂದೂ" ಎಂಬ ವ್ಯುತ್ಪತ್ತಿ ಇದೆ. ಕೆಟ್ಟದನ್ನು ಬಯಸದಿರುವವರು, ಕೆಟ್ಟದ್ದನ್ನು ದೂರ ಇಟ್ಟವರು ಹಿಂದೂಗಳು. ವೃದ್ಧ ಸ್ಮೃತಿಯಲ್ಲಿ "ಹಿಂಸಯಾ ದ್ರೂಯತೆ ಯಶ್ಚ ಸದಾಚಾರ ತತ್ಪರ:" ಎಂದು ಹೇಳಿದೆ. ಹಿಂಸೆಯಿಂದ ದೂರ ಇರುವವರು, ಸದಾಚಾರ ತತ್ಪರರು ಹಿಂದೂಗಳು. ಸಹನಾವವತು ಸಹನೌ ಭುನಕ್ತು ಎನ್ನುವ ಮಾರ್ಗ ಹಿಂದೂ. ಉಪಜೀವನ ಮಾತ್ರವಲ್ಲ, ಜೀವನ, ಉಜ್ಜೀವನದ ದಾರಿ ಹಿಂದೂಗಳದು. ಇದು ಶುದ್ಧ ಜೀವನ ಪದ್ಧತಿ.
“ಓಂಕಾರ ಮೂಲಮಂತ್ರಾಢ್ಯಃ ಪುನರ್ಜನ್ಮ ಹೃದಾಶಯಃ ಗೋಭಕ್ತೋ ಭಾರತಗುರೂ ಹಿಂದೂ ಹಿಂಸನದೂಷಕಃ”
ಧರ್ಮ, ಮತ ಮತ್ತು ರಿಲಿಜನ್
“ಧಾರಣಾತ್ ಇತಿ ಧರ್ಮಃ” ಧಾರಣೆ ಮಾಡಿಕೊಳ್ಳಲ್ಪಡುವುದು ಧರ್ಮ.ಇದು ದೇಶ, ಕಾಲ, ಪ್ರಕೃತಿ, ಪುರುಷರನ್ನು ಒಳಗೊಂಡ ತತ್ವ. ಇದೊಂದು ಸ್ವಯಂಪ್ರೇರಿತರಾಗಿ ಎಲ್ಲರೂ ಪಾಲಿಸಬೇಕಾದ ನೀತಿ ಸಂಹಿತೆ. ಇದಕ್ಕೆ ಸೀಮಿತ ಪರಿಧಿ ಇಲ್ಲ. ಮತವೆಂದರೆ ಅಭಿಪ್ರಾಯ, ಸಂಪ್ರದಾಯ, ಆಚಾರ, ವಿಚಾರ. ಇದು ದೇಶ ಕಾಲಗಳ ಅಧೀನ. ಮತವೆಂದರೆ ಮಾರ್ಗವೂ ಕೂಡ. ರಿಲಿಜನ್ ಎಂಬ ಶಬ್ದಕ್ಕೆ ಭಾರತದ ಯಾವ ಭಾಷೆಗಳಲ್ಲಿಯೂ ಪರ್ಯಾಯ ಶಬ್ದವಿಲ್ಲ. ಏಕೆಂದರೆ ರಿಲಿಜನ್ನುಗಳಲ್ಲಿ ಒಂದು ಗ್ರಂಥ, ಒಬ್ಬ ದೇವರು, ಒಬ್ಬ ಪ್ರವಾದಿ ತಮ್ಮದು ಮಾತ್ರ ಸರಿ, ಉಳಿದಿದ್ದೆಲ್ಲ ತಪ್ಪು. ಅನ್ಯರು, ಒಪ್ಪದೇ ಇರುವವರು ಇರುವುದೇ ತಪ್ಪು ಎಂಬ ಅಭಿಮತ ರಿಲಿಜನ್ನುಗಳದ್ದು. ಆದರೆ ಭಾರತೀಯ ತತ್ವ ವಿಚಾರ ಸಮನ್ವಯ ದೃಷ್ಟಿಯದ್ದು.
ನಾವು ಸೆಮೆಟಿಕ್ ರಿಲಿಜನ್ ಗಳನ್ನು, ಧರ್ಮ ಎಂದು ಕರೆಯುತ್ತಿದ್ದೇವೆ. ಇದು ಸರಿಯಲ್ಲ. ರಿಲಿಜನ್ ಒಂದು ಸಂಪ್ರದಾಯವೇ ಹೊರತು ಧರ್ಮವಲ್ಲ. ರಿಲಿಜನ್ನು ಜನಸಮೂಹದೊಂದಿಗೆ ಕಾರ್ಯನಿರ್ವಹಿಸುತ್ತದೆ, ಆದರೆ ಧರ್ಮವು ವ್ಯಕ್ತಿತ್ವ ನಿರ್ಮಾಣಕ್ಕೆ ಒತ್ತುಕೊಡುತ್ತದೆ. ತರ್ಕ ಮತ್ತು ವಿವೇಕಕ್ಕೆ ಅನುಗುಣವಾಗಿ ಧರ್ಮವನ್ನು ಅನುಸರಿಸಬೇಕು.
ಸಿಖ್,ಬೌದ್ಧ, ಜೈನ, ಲಿಂಗಾಯತ, ವೀರಶೈವ ಎಲ್ಲರೂ ಹಿಂದೂಗಳೇ.
ಭಾರತದಲ್ಲಿ ಹುಟ್ಟಿದ ಮತಗಳ, ಪಂಥಗಳ ಆಚರಣೆ, ಸಂಪ್ರದಾಯಗಳು ಬೇರೆ ಬೇರೆ ಇರಬಹುದು, ಆದರೆ ಮೂಲತತ್ವಗಳು ಒಂದೇ. ಈ ತತ್ವಗಳು ಉದಾತ್ತವಾಗಿವೆ. ಭಾರತೀಯ ಮೂಲದ ಎಲ್ಲ ಮತಗಳಲ್ಲಿ ಇರುವ ತತ್ವಗಳಲ್ಲಿ ಬಹುಪಾಲು ಸಾಮ್ಯತೆ ಇದೆ. ಅವುಗಳನ್ನು ಈ ಕೆಳಗಿನಂತೆ ನೋಡಬಹುದು.
1. ದೇವನೊಬ್ಬ ನಾಮ ಹಲವು. ಸತ್ಯವೊಂದೇ,ಹುಡುಕುವ ದಾರಿಗಳು ಹಲವು ಎಂಬುದನ್ನು ಎಲ್ಲ ಮತಗಳು ಒಪ್ಪುತ್ತವೆ. ನಾನಾ ನಾಮರೂಪಗಳಲ್ಲಿ ದೇವರ ಆರಾಧನೆಗಳಿವೆ.
2. ಧರ್ಮ, ಅರ್ಥ, ಕಾಮ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳು ಎಲ್ಲ ಮತಗಳಲ್ಲಿ ಇವೆ. ಬಹುಪಾಲು ಮತಗಳು ಮೋಕ್ಷವನ್ನೇ ಅಂತಿಮ ಗುರಿಯನ್ನಾಗಿಸಿಕೊಂಡಿವೆ. ಅದಕ್ಕೆ ನೀಡಿರುವ ಹೆಸರು ಬೇರೆ ಬೇರೆ ಇರಬಹುದು. ಉದಾಹರಣೆಗೆ ಲಿಂಗಾಯತ ವೀರಶೈವದಲ್ಲಿ ಅದು ಲಿಂಗಾಂಗ ಸಾಮರಸ್ಯ. ಬೌದ್ಧರಲ್ಲಿ ನಿರ್ವಾಣ ಹೀಗೆ.
3. ಕರ್ಮ ಸಿದ್ಧಾಂತ : ತನ್ನ ಪಾಲಿನ ಕರ್ತವ್ಯ ಎಲ್ಲ ಜೀವಿಗಳಿಗೂ ಅನಿವಾರ್ಯ. ಸತ್ಯ, ನಿಷ್ಠೆ, ಭಕ್ತಿ, ದಾಸೋಹದಿಂದ ಕೂಡಿದ ಕಾಯಕವೇ ಶ್ರೇಷ್ಠ ಕರ್ಮ, ಇದರಿಂದ ಮೋಕ್ಷ ಸಾಧ್ಯ. ಹಿಂದೆ 84 ಲಕ್ಷ ಯೋನಿಗಳಲ್ಲಿ ಜನಿಸಿದ ನಂತರ ಮಾನವ ಜನ್ಮ ಬಂದಿದೆ. ಇದೇ ಜನ್ಮ ಕಡೆಯಾಗಬೇಕು, ಮತ್ತೆ ಹುಟ್ಟಬಾರದು ಎಂಬುದರಲ್ಲಿ ಎಲ್ಲ ಮತಗಳು ನಂಬಿಕೆ ಇಟ್ಟಿವೆ.
4. ಗೋವು ಪೂಜ್ಯ : ಭಾರತದಲ್ಲಿ ಜನಿಸಿದ ಎಲ್ಲ ಮತ ಸಂಪ್ರದಾಯಗಳು ಗೋವನ್ನು ಪೂಜಿಸುತ್ತವೆ.
5. ಓಂಕಾರ : ಓಂಕಾರವು ಭಾರತೀಯ ಎಲ್ಲ ಮತಗಳಲ್ಲಿ ಸಾರ್ವಭೌಮ ಮಂತ್ರ. ಸನ್ಯಾಸಿಗಳಿಗೆ ಪ್ರಣವ ಸ್ವರೂಪಿಗಳು ಎಂದು ಕರೆಯುವುದೇ ರೂಢಿ.
6. ಸುಖ ದುಃಖಗಳು : ಲೋಕದಲ್ಲಿ ಎರಡು ವಿಧದ ಸುಖಗಳಿವೆ. ಒಂದು ಇಂದ್ರಿಯಗಳ ಮೂಲಕ ಸಿಗುವ ಸುಖ. ಇದು ವಿಷಯ ಸುಖ. ಇನ್ನೊಂದು ಇಂದ್ರಿಯ ವ್ಯಾಪಾರವಿಲ್ಲದ ಪರಮ ಸುಖ. ವಿಷಯ ಸುಖಕ್ಕೆ ದುಃಖದ ಲೇಪವಿದೆ. ಪರಮ ಸುಖಕ್ಕೆ ದುಃಖಾನುಭವವೇ ಇಲ್ಲ. ಆತ್ಮಾನುಭವವೇ ಪರಮ ಸುಖ. ವಿಷಯ ಸುಖದ ಆಸೆಯೇ ದುಃಖಕ್ಕೆ ಮೂಲ. ಮನದ ಮುಂದಣ ಆಸೆಯೇ ಮಾಯೆ.
7. “ವಸುಧೈವ ಕುಟುಂಬಕಂ” : ಇಡೀ ಜಗತ್ತೇ ನನ್ನ ಕುಟುಂಬ. ಎಲ್ಲರೂ ನಮ್ಮವರೇ. ಸಾಮರಸ್ಯ ಪ್ರತಿ ಮತಗಳ ಮೂಲ ಮಂತ್ರ.
ಈ ಎಲ್ಲ ತತ್ವಗಳಿಂದ ಸಿಖ್ ,ಬೌದ್ಧ, ಜೈನ, ಲಿಂಗಾಯತ, ವೀರಶೈವ ಎಲ್ಲರೂ ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಿಂದುಗಳೇ.
ಹಿಂದೂ ಎಂಬಲ್ಲಿ ವೈದಿಕ-ಅವೈದಿಕ ಚರ್ಚೆಯೇ ಅಪ್ರಸ್ತುತ.
ತತ್ವದ ಮೂಲದಲ್ಲಿ ವ್ಯತ್ಯಾಸಗಳಿಲ್ಲ. ಉಪಾಸನಾ ಕ್ರಮದಲ್ಲಿ, ಪೂಜಾ ವಿಧಾನಗಳಲ್ಲಿ, ಸಂರಚನೆಗಳಲ್ಲಿ ವ್ಯತ್ಯಾಸಗಳಿವೆ. ಆಕಾರ-ನಿರಾಕಾರ, ಸ್ಥಾವರ-ಜಂಗಮ, ಸಗುಣ-ನಿರ್ಗುಣ, ಆಸ್ತಿಕ-ನಾಸ್ತಿಕ ಮುಂತಾದ ವಿಭಿನ್ನ ದೃಷ್ಟಿಕೋನಗಳಿವೆ. ಭಾರತದಲ್ಲಿ ಮೂಲದಲ್ಲಿ ಷಡ್ದರ್ಶನಗಳು ಪ್ರಚಲಿತದಲ್ಲಿವೆ. ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಮೀಮಾಂಸ ಮತ್ತು ವೇದಾಂತ. ದೇವತಾ ಉಪಾಸನಾ ಕ್ರಮದಲ್ಲಿ ಶೈವ, ವೈಷ್ಣವ,ಶಾಕ್ತ, ಸೌರ, ಕೌಮಾರ ಮತ್ತು ಗಾಣಪತ್ಯ ಎಂಬ ಆರು ಮತಗಳಿವೆ.ತಾತ್ವಿಕವಾಗಿ ಬೌದ್ಧ, ಜೈನ, ಚಾರ್ವಾಕ, ಸಾಂಖ್ಯ, ಯೋಗ, ಮೀಮಾಂಸಕ, ಅದ್ವೈತ, ವಿಶಿಷ್ಟಾದ್ವೈತ, ದ್ವೈತ, ಶಕ್ತಿ-ವಿಶಿಷ್ಟಾದ್ವೈತ ಹೀಗೆ ಮಹಾಪುರುಷರ ದೆಸೆಯಿಂದ ದರ್ಶನಗಳು ತೆರೆದುಕೊಂಡಿವೆ.ಇವೆಲ್ಲವೂ ಹಿಂದೂ ಧರ್ಮದ ಭಾಗಗಳೇ. ವೇದಗಳನ್ನು ಪ್ರಮಾಣವೆಂದು ಒಪ್ಪುವವರು ವೈದಿಕರು, ವೇದಗಳನ್ನು ಪ್ರಮಾಣವನ್ನು ಒಪ್ಪದಿರುವ ಹಲವು ಮತಗಳೂ ಇವೆ. ಇವೆರಡೂ ಹಿಂದುವೇ, ಆ ಸ್ವಾತಂತ್ರ್ಯ ಹಿಂದೂ ಧರ್ಮದಲ್ಲಿ ಮಾತ್ರ ಇದೆ. ಇದು ಒಂದು ಗ್ರಂಥ, ಒಬ್ಬ ಉದ್ಧಾರಕನಿಗೆ ಕಟ್ಟು ಬಿದ್ದಿಲ್ಲ. ಪ್ರಾದೇಶಿಕತೆಯನ್ನು ತೆಗೆದುಕೊಂಡರೆ ಹಿಂದೂಸ್ಥಾನದಲ್ಲಿರುವ ಎಲ್ಲರೂ ಹಿಂದೂಗಳೇ. ಸಾಂಸ್ಕೃತಿಕ ಭಾರತವನ್ನು ಕಲ್ಪಿಸಿಕೊಂಡಾಗ ಅಫಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ್, ಮ್ಯಾನ್ಮಾರ,ಶ್ರೀಲಂಕಾ, ಇಂಡೋನೇಶೀಯಾ, ಮಲೇಶಿಯಾ, ಮಾರಿಷಸ್ ಎಲ್ಲರೂ ಹಿಂದೂಗಳೇ.
ಧರ್ಮದ ವ್ಯಾಪ್ತಿ.
ಧರ್ಮದ ವ್ಯಾಪ್ತಿ ವ್ಯಕ್ತಿಯಿಂದ ವಿಶ್ವದವರೆಗೂ ಹರಡಿದೆ. ಚರ-ಅಚರ ವಸ್ತುಗಳಿಗೂ ಧರ್ಮವಿದೆ. ಹರಿಯುವುದು ನೀರಿನ ಧರ್ಮ, ಬೀಸುವುದು ಗಾಳಿಯ ಧರ್ಮ ಇತ್ಯಾದಿ. ವ್ಯಕ್ತಿಧರ್ಮ, ಕುಟುಂಬಧರ್ಮ, ರಾಷ್ಟ್ರಧರ್ಮ, ವಿಶ್ವಧರ್ಮ ಹೀಗೆ ಹಾಕಿಕೊಂಡ ನೀತಿ ಸಂಹಿತೆಗಳೊಂದಿಗೆ ಕರ್ತವ್ಯಗಳಿವೆ. ಧರ್ಮವೆಂಬ ಜೀವನ ಪದ್ಧತಿಯಲ್ಲಿ, ಯಮ ನಿಯಮಗಳಿವೆ. ಯಮವೆಂದರೆ ಪಾಲಿಸಬೇಕಾದವುಗಳು. ನಿಯಮವೆಂದರೆ ಬಿಡಲೇಬಾರದವು. ಧರ್ಮಿಯು ಕುಟುಂಬದ, ಸಮಾಜದ, ರಾಷ್ಟ್ರದ, ಪ್ರಕೃತಿಯ ನಿಯಮಗಳಿಗೆ, ಸಂವಿಧಾನಕ್ಕೆ ಬದ್ಧನಾಗಿರಬೇಕು.
ದಯವೇ ಧರ್ಮದ ಮೂಲವಯ್ಯಾ. ದಯಬೇಕು ಸಕಲ ಪ್ರಾಣಿಗಳಲ್ಲಿ ಎಂದು ಬಸವಣ್ಣನವರು ಹೇಳುತ್ತಾರೆ. ಭಗವಾನ ಬುದ್ದ, ಭಗವಾನ ಮಹಾವೀರ, ಗುರು ನಾನಕರದು ಶಾಂತಿ-ಸಹಬಾಳ್ವೆಯ ಸಂದೇಶವಿದೆ. ವಿದೇಶದಿಂದ ಬಂದ ದಾಳಿಕಾರರು, ಕೊಳ್ಳೆ ಹೊಡೆಯಲು ಬಂದ ಲೂಟಿಕೋರರು, ಭಾರತಕ್ಕೆ ನಾವು ಧರ್ಮ ಬೋಧಿಸುತ್ತೇವೆ ಎನ್ನುತ್ತಾರೆ. ಯಾವ ನೀತಿ ನಿಯಮಗಳಿಲ್ಲದೇ, ಆಕ್ರಮಿಸುವ, ಯುದ್ಧ ಮಾಡುವ, ದುರಾಡಳಿತ ನಡೆಸಿದವರಿಗೆ ಯಾವ ಧರ್ಮವಿದೆ? ಅಲ್ಲಮ ಪ್ರಭುಗಳ ವಚನದ ಸಾಲುಗಳು ಸಹಾಯಕ್ಕೆ ಬರುತ್ತವೆ. “ದಾಳಿಕಾರಂಗೆ ಧರ್ಮವುಂಟೆ? [ಕನ್ನಗಳ್ಳಂಗೆ] ಕರುಳುಂಟೆ?”
ಪಾಶ್ಚಾತ್ಯ ಮನೋಭೂಮಿಕೆಯಿಂದ, ಭಾರತೀಯ ತತ್ವಮೀಮಾಂಸೆಯನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ವಿದೇಶಿ ಮಾನದಂಡಗಳಿಂದ ನಮ್ಮನ್ನು ನಾವು ನೋಡಿಕೊಳ್ಳುವುದು ಮೂರ್ಖತನ. ಈ ನೆಲಮೂಲದ ದೃಷ್ಟಿಯಿಂದ ತತ್ವವಿಚಾರಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಿದಾಗ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.
ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಿಹರ.
No comments:
Post a Comment