Friday 23 August 2024

ಪ್ರಜ್ಞಾ ಪ್ರವಾಹ ಕಿರಿದೆನ್ನಬಹುದೇ ಕೂಡಲಸಂಗಮದೇವಾ?

 


ಸಂತೋಷ ತಮ್ಮಯ್ಯ

ಹೋಸ ದಿಗಂತ

ದಿ. ೨೩ ಆಗಸ್ಟ್ ೨೦೨೪

೧೨ನೇ ಶತಮಾನಕ್ಕೂ ೨೧ನೇ ಶತಮಾನಕ್ಕೂ ಏನು ವ್ಯತ್ಯಾಸ? ಹೊರನೋಟಕ್ಕೆ ಪ್ರಶ್ನೆ ಅಸಂಗತವೆನಿಸಬಹುದು. ಆದರೆ ಅದೇನೂ ಕಾರ್ಲ್ ಮಾರ್ಕ್ಸ್‌ನನ್ನೂ ಬಸವಣ್ಣನನ್ನೂ ತುಲನೆ ಮಾಡಿದಷ್ಟು ಹುಚ್ಚುತನದ್ದೇನಲ್ಲ. ಹಾಗಾಗಿ ೧೨ನೇ ಶತಮಾನದ ಸಮಾಜವ್ಯವಸ್ಥೆ ಮತ್ತು ಕ್ರಾಂತಿ ೨೧ನೇ ಶತಮಾನದಲ್ಲಿ ಅದರ ಪರಿಣಾಮಗಳನ್ನು ಅವಲೋಕಿಸುವುದರಲ್ಲೇನೂ ಅಸಂಗತತೆಯಿಲ್ಲ. ಬಸವಾದಿ ಶರಣರು ಸಾರ್ವಕಾಲಿಕ ಶ್ರೇಷ್ಠರೆಂಬುದರಲ್ಲೇನೂ ಗೊಂದಲಗಳಿಲ್ಲ. ಆದರೆ ಅವರು ತಂದ ಪರಿವರ್ತನೆಯನ್ನು ಸಮಾಜ ಇಂದು ಎಷ್ಟರಮಟ್ಟಿಗೆ ಕಾಪಿಟ್ಟುಕೊಂಡಿದೆ ಎನ್ನುವುದು ಸದ್ಯದ ಪ್ರಶ್ನೆ.

ಅಂದು ಯಾವ ಬಸವಣ್ಣ ಸಮಾಜ ಜಾಗರಣೆಗಾಗಿ ಅಧಿಕಾರತ್ಯಾಗ ಮಾಡಿದ್ದನೋ ಅದೇ ಬಸವಣ್ಣ ಇಂದು ರಾಜಕಾರಣದಲ್ಲಿ ಎಲ್ಲರಿಗೂ ಪ್ರಬಲ ಅಸ್ತ್ರ. ತನ್ನ ಹುಟ್ಟನ್ನೇ ಆಡಿಕೊಂಡ ಬಸವಣ್ಣನ ಹುಟ್ಟು ಇಂತಿಂಥ ಜಾತಿಯಲ್ಲಾಯಿತು ಎನ್ನುವುದು ಇಂದು ವಿಶ್ವವಿದ್ಯಾಲಯಗಳ ಪಿಎಚ್ಡಿ ಸರಕು. ಸಮಾನತೆಯನ್ನು ಸಾರಿದ ಅದೇ ಬಸವಾದಿ ಶರಣರಿಂದು ಒಂದೊಂದು ಜಾತಿಗಳ ನಾಯಕರಾಗಿ ಪ್ರತಿಮೆಗಳಾಗಿ ನಿಂತಿದ್ದಾರೆ. ಭಕ್ತಿ ಬರಡಾಗಿದೆಯೆಂದು ದೇವವಾಣಿಯನ್ನು ಜನವಾಣಿಗಿಳಿಸಿ ಭಕ್ತಿಯಿಂದಲೇ ವ್ಯಕ್ತಿನಿರ್ಮಾಣವೆಂದವರೆಲ್ಲರೂ ಇಂದು ನಾಸ್ತಿಕ ಬುದ್ಧಿಜೀವಿಗಳು ಉಲ್ಲೇಖಿಸಲ್ಪಡುವ ಹೆಸರುಗಳು. ಅಂದು ಮೌಢ್ಯವನ್ನು ಕಟುವಾಗಿ ಟೀಕಿಸಿದವರೆಲ್ಲರೂ ಇಂದು ಪರಂಪರೆಯನ್ನೇ ಟೀಕಿಸಲ್ಪಟ್ಟವರೆಂದು ಹಣೆಪಟ್ಟಿ ಹೊತ್ತು ನಿಂತಿದ್ದಾರೆ! ಹಾಗಾದರೆ ೧೨ನೇ ಶತಮಾನದಲ್ಲಿ ನಡೆದಿದ್ದು ಮಹಾ ಸಾಮಾಜಿಕ ಪರಿವರ್ತನೆ ಎಂಬುದು ಸುಳ್ಳೇ? ಸುಳ್ಳಲ್ಲ ಎಂದಾದರೆ ಈ ವೈರುಧ್ಯಗಳೆಲ್ಲಾ ಯಾಕಿವೆ? ಉತ್ತರ ಸರಳ ಮತ್ತು ಸ್ಪಷ್ಟ. ೧೨ನೇ ಶತಮಾನದವರು ಮೆಟ್ಟು ಹೊಲಿಯುತ್ತಾ, ಬಟ್ಟೆ ನೇಯುತ್ತಾ, ಬುಟ್ಟಿ ಮಾಡುತ್ತಾ, ಹಗ್ಗ ಹೊಸೆಯುತ್ತಾ, ಸೌದೆ ಮಾರುತ್ತಾ, ದನ ಕಾಯುತ್ತಾ ಸಾಮಾನ್ಯರಲ್ಲಿ ಸಾಮಾನ್ಯರಂತಿದ್ದು ಜೀವನಾನುಭವವನ್ನು ಪಡೆದು ಸಮಾಜಕ್ಕೆ ಮಾರ್ಗದರ್ಶನ ಮಾಡಿದವರು. ಅವರಲ್ಲಿ ಅನ್ಯಾಯವನ್ನು ಪ್ರತಿಭಟಿಸುವ ಗುಣವಿತ್ತು, ಬದಲಾವಣೆ ತರಲೇಬೇಕೆಂಬ ಛಲವಿತ್ತು. ಪರಿಣಾಮ ಕ್ರಾಂತಿಯಾಯಿತು. ಕ್ರಾಂತಿ ಇತಿಹಾಸವಾಯಿತು. ಆದರೆ ಈ ೨೧ನೇ ಶತಮಾನದಲ್ಲಿ ಖಾದಿ ಮತ್ತು ಕಾವಿಗಳನ್ನು ಉದ್ದಿಮೆ ಮಾಡಿಕೊಂಡ ಕೆಲವೇ ಕೆಲವರು ಅತ್ತ ಶರಣರಂತೆ ಬದುಕಲೂ ಆಗದೆ, ಆ ಕ್ರಾಂತಿಯ ಆಶಯಗಳನ್ನು ಉಳಿಸಿಕೊಳ್ಳಲೂ ಆಗದೆ ದಿಕ್ಕುತಪ್ಪಿಸುವ ಪ್ರವೃತ್ತಿಯವರಾಗಿ, ಅನ್ಯಾಯವನ್ನು ಪ್ರತಿಭಟಿಸುವ ಬದಲು ವೋಟ್ ಬ್ಯಾಂಕಿನ ಅಸ್ತ್ರಗಳಾಗಿ, ಪರಿವರ್ತನೆಯ ಬದಲು ಜನಾಂಗದ ನಾಯಕರಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಹಾಗಾಗಿ ಕ್ರಾಂತಿ ಇತಿಹಾಸದಲ್ಲಿ ಬಂಧಿಯಾಗಿದೆ. ಅಷ್ಟೇ ಅಲ್ಲ, ಅವರಿಗೆ ೧೨ನೇ ಶತಮಾನದ ಸುಧಾರಕರ ಬಗ್ಗೆ ಪ್ರಾಮಾಣಿಕ ಪ್ರೀತಿ-ಭಕ್ತಿಗಳೂ ಇಲ್ಲ. ಶರಣಾದಿಗಳನ್ನು ಅನುಕೂಲಸಿಂಧುವಾಗಿ ಬಳಸಿಕೊಳ್ಳುವ ರಾಜಕೀಯ ಬುದ್ಧಿ ಇಂದು ೧೨ನೇ ಶತಮಾನದ ಕ್ರಾಂತಿಯ ಆಶಯಗಳನ್ನೂ ಮಣ್ಣುಪಾಲು ಮಾಡುತ್ತಿವೆ. ಅದರ ಪರಿಣಾಮ ಪ್ರತ್ಯೇಕ ಧರ್ಮ, ಹಗೆತನ ಮತ್ತು ಪರರ ಬಗೆಗಿನ ಅಸಹನೆ.


ಗದಗಿನ ಸದಾಶಿವಾನಂದ ಸ್ವಾಮಿಗಳ ಸಂಪಾದಕತ್ವದಲ್ಲಿ ಹೊರತಂದಿರುವ “ವಚನ ದರ್ಶನ” ಕೃತಿಗೆ ವ್ಯಕ್ತವಾದ ಕೆಲವರ ವಿರೋಧ ಈ ಮಾನಸಿಕತೆಯವರದ್ದು. ಹಾಗಾಗಿ ಅಸಂಗತವೆನಿಸುವಂತೆ ಕಾಣುವ ಎರಡು ಶತಮಾನಗಳ ವ್ಯತ್ಯಾಸದ ಪ್ರಶ್ನೆ ಯಥೋಚಿತವಾದುದೇ! ಆ ಪ್ರಶ್ನೆಗೆ ಅತ್ಯಂತ ಸರಳ ಉತ್ತರ, ೧೨ನೇ ಶತಮಾನದ್ದು ಕ್ರಾಂತಿಯಾದರೆ, ೨೧ನೇ ಶತಮಾನದ್ದು ಭ್ರಾಂತಿ! “ವಚನ ದರ್ಶನ’ ಪುಸ್ತಕದ ಮುಖಪುಟದಲ್ಲಿ ಬಸವಣ್ಣನನ್ನು ಯೋಗಿಯಂತೆ ಚಿತ್ರಿಸಲಾಗಿದೆ, ವೇದೋಪನಿಷತ್‌ಗಳ ಅಡಿಪಾಯದಲ್ಲಿ ವಚನಗಳು ರಚನೆಯಾಗಿರುವುದು ಸುಳ್ಳು ಎನ್ನುವುದು ವಿರೋಗಳ ಕೂಗು. ಇದೇನೂ ಮೊದಲಲ್ಲ, ತಮ್ಮ ಸುಳ್ಳಿನ ಕೋಟೆ ಅಲುಗಾಡುತ್ತಿದೆ ಎಂದಾಗಲೆಲ್ಲಾ ಇಂಥವರು ವಿರೋಧ ಮಾಡುತ್ತಲೇ ಬಂದಿದ್ದಾರೆ. ಹಿಂದೊಮ್ಮೆ ಬಸವಣ್ಣನವರನ್ನು ಬ್ರಾಹ್ಮಣ ಮೂಲವಲ್ಲ ಎಂದರೆಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಪುಸ್ತಕವನ್ನೇ ನಿಷೇಧಿಸಿದವರೂ ಇವರೇ. ಈಗ ವಚನಗಳನ್ನು ಬ್ರಾಹ್ಮಣೀಕರಣ ಮಾಡಲಾಗುತ್ತಿದೆ ಎನ್ನುತ್ತಿರುವವರೂ ಇವರೇ! ಜೊತೆಜೊತೆಯಲ್ಲಿ ವಚನಗಳ ಅಂಕಿತವನ್ನು ಬದಲಿಸುವುದು, ವಚನಗಳ ಆಧಾರದಲ್ಲಿ ಪ್ರತ್ಯೇಕ ಧರ್ಮಕ್ಕೆ ಬೇಡಿಕೆ ಇಡುತ್ತಿರುವವರೂ ಇವರೇ! ಇದೇನವಸ್ಥೆ? ರಾಜಕಾರಣಿಗಳ ಕೈಗೊಂಬೆಗಳಂತಾಡುವ ಕೆಲವು ಮಠಾಶರನ್ನು ಗುರಾಣಿ ಮಾಡಿ ಪ್ರತಿಭಟಿಸುವ ಇವರು ತಕ್ಕ ಮಟ್ಟಿಗೆ ಯಶಸ್ವಿಯಾಗುತ್ತಲೂ ಇದ್ದಾರೆ. ಇದೀಗ ಅವರ ಗುರಿ “ವಚನ ದರ್ಶನ”. ಯಾವಾಗ ರಾಜಕಾರಣದಲ್ಲಿ ಸಂತರಂತೆ, ಅವಧೂತರಂತೆ, ಪ್ರವಾದಿಗಳಂತೆ, ಮಹಾ ಸುಧಾರಕರಂತೆ ವೇಷ ಹಾಕುವ ಜನರು ತುಂಬತೊಡಗಿದರೋ ಆಗ ರಾಜಕಾರಣದಲ್ಲಿದ್ದ ಕೊಳೆ ಸಮಾಜಕ್ಕೂ ಹರಿಯಲಾರಂಭಿಸಿತು. ರಾಜಕಾರಣಿಗಳ ನಂಟನ್ನು ಮಠಾಶರುಗಳು ’ರಾಜಾಶ್ರಯ’ ಎಂದುಕೊಳ್ಳಲಾರಂಭಿಸಿದರು. ಇವೆರಡೂ ಕಾಂಬಿನೇಶನ್‌ಗಳು ಸಮಾಜದಲ್ಲಿ ಏನೇನು ಅಪಸವ್ಯಗಳನ್ನು ಸೃಷ್ಟಿಸುತ್ತವೆ ಎಂಬುದಕ್ಕೆ ಪುಸ್ತಕಕ್ಕೆ ವ್ಯಕ್ತವಾಗುತ್ತಿರುವ ವಿರೋಧವೇ ಸಾಕ್ಷಿ.


ವಚನಗಳು ತಾವು ವ್ಯಾಖ್ಯಾನಿಸಿದಂತೆ ಮಾತ್ರ ಇರಬೇಕು, ನಮ್ಮ ವಚನಗಳನ್ನು ಪ್ರಕಟಿಸಲು ಇವರಾರು?, ವಚನ ಮತ್ತು ಬಸವತತ್ತ್ವಗಳು ವೇದ ವಿರೋಧದಿಂದ ಹುಟ್ಟಿದವುಗಳು. ಬ್ರಾಹ್ಮಣಶಾಹಿಗಳು ವಚನವನ್ನು ತಿರುಚುತ್ತಿದ್ದಾರೆ ಎಂದು ಹುಯಿಲಿಡುವವರಿಗೆ ಉತ್ತರ ಕೊಡಲು ಒಂದೊಂದು ವಚನಗಳನ್ನು ವೇದೋಪನಿಷತ್ತಿನ ಉಲ್ಲೇಖದೊಂದಿಗೆ ವಿವರಿಸಿ ಮುಖಕ್ಕೆ ಹಿಡಿಯಬಹುದು. ಆದರೆ ಇದರಿಂದ ಅವರೇನೂ ತಿದ್ದಿಕೊಳ್ಳುವವರಲ್ಲ. ಏಕೆಂದರೆ ಶೈವ ಪಂಥದ ನಾನಾ ಶಾಖೆಗಳ ಬಗ್ಗೆ ಹಿಂದಿನಿಂದಲೂ ಬರೆದಿದ್ದಾರೆ. ವೀರಶೈವ ಪಂಥದ ಕುರಿತ ಪುಸ್ತಕಗಳೂ ಹಲವಾರಿವೆ. ಅದರ ಬಗೆಗೆ ಚರ್ಚೆ-ವಿಶ್ಲೇಷಣೆಗಳು ಸಾಕಷ್ಟಾಗಿವೆ. ಅವೆಲ್ಲವೂ ಸರ್ವರಿಗೂ ಸಿಗುವಂತಿವೆ. ಆದರೆ ಇದೇ ಮಾತನ್ನು ವಚನಗಳ ಬಗ್ಗೆ ಹೇಳಬಹುದೇ ಎಂದರೆ ಹಲವರು “ವಚನಗಳ ಬಗ್ಗೆ ನಡೆದಷ್ಟು ಚರ್ಚೆ, ವಿಶ್ಲೇಷಣೆಗಳು ಯಾವ ಸಾಹಿತ್ಯ ಪ್ರಾಕಾರಗಳ ಮೇಲೂ ನಡೆದಿಲ್ಲ” ಎನ್ನಬಹುದು. ವಚನ ಸಂಗ್ರಹಗಳ ಉದ್ದದ ಪಟ್ಟಿಯನ್ನೂ ಕೊಡಬಹುದು. ಶ್ರೀಮಂತ ಮಠಗಳಿಂದ ಹಿಡಿದು ಕಾಲಕಾಲಕ್ಕೆ ಸರ್ಕಾರಗಳೂ ವಚನಗಳ ಸಂಗ್ರಹ ಮತ್ತು ಸಂಪಾದನೆಯನ್ನು ಮಾಡಿವೆ. ವಿಚಿತ್ರವೆಂದರೆ ೨೧ನೇ ಶತಮಾನದ ವಚನಗಳೆಂಬ ಚುಟುಕಗಳಂತಿರುವ, ಕಮ್ಯುನಿಸ್ಟ್ ಸಾಹಿತ್ಯಗಳೂ ಪ್ರಕಟವಾಗಿ ವಚನ ಎಂಬ ಆದರ್ಶವಾಣಿಯನ್ನು ಅಣಕಿಸಿದ್ದೂ ಇದೆ. ಇಷ್ಟೆಲ್ಲಾ ಇದ್ದರೂ ವಚನಗಳು ಸಂಪೂರ್ಣವಾಗಿ ಸಂಗ್ರಹವಾಗಿವೆಯೇ ಎಂದರೆ ಸಂಶೋಧಕರು ಕೆಲವು ಲುಪ್ತವಾಗಿರಬಹುದು ಎನ್ನುತ್ತಾರೆ. ಲುಪ್ತವಾಗಿರುವುದಲ್ಲ, ಲಭ್ಯವಾಗಿರುವುದೆಲ್ಲವೂ ಸಾಮಾನ್ಯರ ಕೈಗೆ ಸಿಗುವಂತಿದೆಯೇ ಎಂದರೆ ಜಾರಿಕೊಳ್ಳುತ್ತಾರೆ. ಏಕೆಂದರೆ ಸಂಪಾದನೆಯ ಹೆಸರಿನಲ್ಲಿ ಅಂಕಿತಗಳನ್ನೇ ಬದಲಿಸಿದವರಿದ್ದಾರೆಂದರೆ ಕೈಯಾಡಿಸಿದವರು ಇರಲಿಕ್ಕಿಲ್ಲವೇ? ಇವಲ್ಲದೆ ಮರೆಮಾಚಿದ ಅನೇಕ ವಚನಗಳಿವೆ ಎಂಬುದು ಹಲವರ ಅಭಿಪ್ರಾಯ. ಕೆಲವರ ಮನಸ್ಥಿತಿಯನ್ನು ನೋಡಿದರೆ ನಿಜವಿರಬಹುದೆನಿಸುತ್ತದೆ. ಉದಾಹರಣೆಗೆ ಬಸವಣ್ಣನವರ “ಶ್ರುತಿ ತತಿ ಶಿರದ ಮೇಲೆ ಅತ್ಯತಿಷ್ಠದಶಾಂಗುಲಂ ನಾನೇನೆಂಬೆನಯ್ಯಾ ಮಹಾದಾನಿ ಕೂಡಲ ಸಂಗಮದೇವಾ” ಎಂಬ ವಚನವೊಂದಿದೆ (ವಚನ ಸಾಹಿತ್ಯ ದರ್ಶನ-ಷಣ್ಮುಖಯ್ಯ ಅಕ್ಕೂರಮಠ). ಆದರೆ ಅದೇಕೆ ಯಾವ ವಚನ ಸಂಪುಟಗಳಲ್ಲೂ ಕಾಣಿಸುವುದಿಲ್ಲ? ಸಾಮಾನ್ಯ ಪಠ್ಯಪುಸ್ತಕಗಳಲ್ಲಿರುವ ವಚನಗಳನ್ನೇ ಸಂಪುಟಗಳಲ್ಲೂ ಪ್ರಕಟಿಸುವ ಉದ್ದೇಶವೇನು? ಬಂಡಾಯದ ಧ್ವನಿಯಿರುವ ವಚನಗಳಷ್ಟೇ ಸಮಾಜಕ್ಕೆ ತಿಳಿದರೆ ಸಾಕು, ಇಂಥದ್ದರ ಅಗತ್ಯವಿಲ್ಲ ಎಂದು ಭಾವಿಸುವವರ ಅಸಲು ಉದ್ದೇಶವೇನು? ಈ “ಅತ್ಯತಿಷ್ಠದಶಾಂಗುಲಂ…” ವಚನವೊಂದನ್ನೇ ತೆಗೆದುಕೊಂಡರೂ ೧೨ನೇ ಶತಮಾನದ ವಚನಕಾರರ ಉದ್ದೇಶವನ್ನು ವಿವರವಾಗಿ ವರ್ಣಿಸಿಬಿಡಬಹುದು. ಏಕೆಂದರೆ ಈ ’ಅತ್ಯತಿಷ್ಠದಶಾಂಗುಲಂ’ ಎನ್ನುವ ಪದ ಪುರುಷಸೂಕ್ತದಲ್ಲಲ್ಲದೆ ಬೇರೆಲ್ಲೂ ಉಲ್ಲೇಖವಿಲ್ಲ. ಪುರುಷಸೂಕ್ತವು ವೈದಿಕರಲ್ಲಿ ಪೂಜಾನುಷ್ಠಾನಗಳಲ್ಲಿ ಇಂದಿಗೂ ಬಳಕೆಯಾಗುತ್ತಿರುವ ವೇದಮಂತ್ರ ಭಾಗ. ಇಂದೂ ವೇದಾಧ್ಯಯನದ ಆರಂಭ ಪುರುಷಸೂಕ್ತದಿಂದಲೇ ಆರಂಭಿಸುವ ಕ್ರಮವಿದೆ. ‘ಪುರುಷಸೂಕ್ತವು ಜಿಜ್ಞಾಸುಗಳ ಜ್ಞಾನಯಜ್ಞಕ್ಕೆ, ಮುಮುಕ್ಷುಗಳಿಗೆ ಕಾಮಧೇನುವೂ ಆಗಿದೆ‘ (ಪುರುಷಸೂಕ್ತ ಭಾಷ್ಯ-ಆಧ್ಯಾತ್ಮ ಪ್ರಕಾಶನ, ಹೊಳೆನರಸೀಪುರ). ವೇದ ನಿರಾಕರಣೆ ಮಾಡಿದ ಬಸವಣ್ಣನವರು ವಚನದಲ್ಲಿ ಪುರುಷಸೂಕ್ತವನ್ನು ಬಳಸಿದ್ದೇಕೆಂಬುದಕ್ಕೆ ಅವರು ಸ್ವತಃ ಮುಮುಕ್ಷುಗಳಾಗಿದ್ದರೆಂಬುದೇ ಸಾಕ್ಷಿ. ಅದರಲ್ಲಿ ಆಶ್ಚರ್ಯವೇನಿದೆ? ಪ್ರಜ್ಞಾ ಪ್ರವಾಹ ಹೊರತಂದ “ವಚನದರ್ಶನ’ದಲ್ಲಿ ಅಂಥದ್ದನ್ನೇನಾದರೂ ಛಾಪಿಸಿಬಿಟ್ಟಿದ್ದಾರೆಯೇ ಎಂಬ ಭಯವೂ ಪುಸ್ತಕ ವಿರೋಧಕ್ಕೆ ಕಾರಣವಿರಬಹುದು. ಬಸವಧರ್ಮವೆಂಬುದು ಹಿಂದುತ್ವದ ಶಾಖೆಯಲ್ಲ ಎನ್ನುವ ಮನಸ್ಥಿತಿ ೧೯ನೆ ಶತಮಾನದ ಆದಿಯಿಂದಲೇ ಆರಂಭವಾಗಿದೆ. ಅಂದರೆ ಶೈವ ಪಂಥಕ್ಕೂ ಬಸವ ಪಂಥಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವವರು ಶತಮಾನಗಳಿಂದಲೂ ಇದ್ದಾರೆ! ಶೈವ ಎಂಬುದಿದ್ದರೆ ವೇದ ಉಲ್ಲೇಖವಾಗಬೇಕು. ಬಸವಣ್ಣನನ್ನು ಕಾಮ್ರೆಡ್ ಮಾಡಲು ಮತ್ತು ಪ್ರತ್ಯೇಕತೆಯನ್ನು ಬಿಂಬಿಸಲು ಈ ಶೈವ ಎಂಬುದೇ ದೊಡ್ಡ ಅಡ್ಡಿ ಎನ್ನುತ್ತಿದ್ದವರು ಕ್ರಮೇಣ ವೀರಶೈವ ಎನ್ನುವುದನ್ನೇ ತಮ್ಮದಲ್ಲ ಎನ್ನತೊಡಗಿದರು! ನಿಜಕ್ಕೂ ಅವರ ಮೊದಲ ವಿರೋಧವಿರುವುದು ಬ್ರಾಹ್ಮಣರ ಮೇಲಾ ಅಥವಾ ವೀರಶೈವ ಪಂಚಪೀಠಗಳ ಮೇಲಾ ಎನ್ನುವ ಅನುಮಾನ ಮೂಡುತ್ತವೆ. ಹಾಗಾದರೆ ಶತಮಾನಗಳ ಹಿಂದೆ ಇವೆರಡು ಬೇರೆಯಲ್ಲ, ಒಂದೇ ಎಂದವರಿರಲಿಲ್ಲವೇ ಎಂದರೆ ಇದ್ದೇ ಇದ್ದರು. ಆ ಕಾರಣಕ್ಕಾಗಿಯೇ ಹಾನಗಲ್ ಕುಮಾರಸ್ವಾಮಿಗಳು ವೀರಶೈವ ಮಹಾಸಭಾವನ್ನು ಸ್ಥಾಪಿಸಿದ್ದರು. ಬಸವಾದಿ ಶರಣರೇ ಲಿಂಗಧಾರಣೆಯನ್ನು ಅನುಷ್ಠಾನಕ್ಕೆ ತಂದರೆಂದು ವಾದಿಸುವವರು ಅಂದಿನಿಂದಲೂ ವೀರಶೈವ ಸಾಹಿತ್ಯವನ್ನು ಅಲ್ಲಗೆಳೆಯುತ್ತಲೇ ಬಂದಿದ್ದಾರೆ. ವಿಚಿತ್ರವೆಂದರೆ ಕನ್ನಡದಲ್ಲಿ ವೀರಶೈವ ಸಾಹಿತ್ಯಗಳು ವಿಫುಲವಾಗಿವೆ. ಮರಾಠಿ ಮತ್ತು ತೆಲುಗುಗಳಲ್ಲಿಯೂ ವೀರಶೈವ ಸಾಹಿತ್ಯಗಳಿವೆ. ಅವೆಲ್ಲವೂ ಶರಣರು ಮತ್ತು ವಚನಗಳನ್ನು ವೇದಮೂಲಕ್ಕೆ ಕೊಂಡೊಯ್ಯುತ್ತವೆ. ಅಷ್ಟೇ ಏಕೆ ಕರ್ನಾಟಕದ ಕೆಲವು ವಿರಕ್ತ ಮಠಗಳು ಸಿದ್ಧಾರೂಢ ಮಠವನ್ನು, ಮೂರುಸಾವಿರ ಮಠವನ್ನು ತಮ್ಮದಲ್ಲ ಎಂದು ನಿರಾಕರಿಸುತ್ತಾರೆ. ಸಿದ್ದೇಶ್ವರ ಸ್ವಾಮಿಗಳನ್ನು ವಿರೋಧಿಸಲೂ ಕೆಲವರು ಹಿಂಜರಿಯಲಿಲ್ಲ! ಈಗ ಅಂಥವರೆಲ್ಲರೂ “ವಚನ ದರ್ಶನ” ಕೃತಿಯನ್ನು ವಿರೋಧಿಸುತ್ತಿದ್ದಾರೆ. ಇವೆಲ್ಲವೂ ಹೇಗೆ ತಾನೇ ಪ್ರಾಂಜಲ ಬಸವ ಭಕ್ತಿಯಾಗುತ್ತದೆ? “ವಚನ ದರ್ಶನ”ದ ಬಗ್ಗೆ ಕೆಲವು ಮಠಾಧೀಶರುಗಳು ರಾಜಕಾರಣಿಗಳಂತೆ ಹೇಳಿಕೆ ನೀಡುವುದನ್ನು ನೋಡಿದರೆ ಬಸವಾದಿ ಶರಣರನ್ನೆಲ್ಲಾ ಇವರು ಯಾವತ್ತೋ ಬೀಗ ಹಾಕಿಟ್ಟಿದ್ದಾರೆ ಎನಿಸದಿರದು. ಆ ಕಾರಣಕ್ಕೆ ಇಂದು ಲಿಂಗಾಯತ-ವೀರಶೈವದಲ್ಲಿರುವ ಹೆಚ್ಚುಕಡಿಮೆ ನೂರರಷ್ಟಿರುವ ಒಳಪಂಗಡಗಳ ಒಳಜಗಳಗಳನ್ನು ಯಾವ ಮಠಾಧೀಶರಿಗೂ ಇತ್ಯರ್ಥ ಮಾಡಲಾಗುತ್ತಿಲ್ಲ. ಬಸವಭಕ್ತಿ, ಲಿಂಗಭಕ್ತಿಯೊಂದೇ ಇದ್ದಿದ್ದಿದರೆ ಯಾವ ಭೇದವೂ ಇರುತ್ತಿರಲಿಲ್ಲ. ಅದನ್ನು ಮುಚ್ಚಿಡಲು ಆಯ್ದ ವಚನಗಳನ್ನು ಮಾತ್ರ ಹರಡಲು ಹೊರಟರೇ? ಅದಕ್ಕಾಗಿ “ವಚನ ದರ್ಶನ”ಕ್ಕೆ ವಿರೋಧವೇ?


ಹಾಗಾದರೆ ಬಸವಾದಿ ಶರಣರು ಮೇಲ್ಜಾತಿಯವರೆನಿಸಿಕೊಂಡಿದ್ದವರನ್ನು ಕಟುವಾಗಿ ಟೀಕಿಸಿಲ್ಲವೇ ಎಂಬ ಪ್ರಶ್ನೆಯೂ ಮೂಡುತ್ತವೆ. ಖಂಡಿತವಾಗಿಯೂ ಬಸವಾದಿ ಶರಣರು ಮಡಿ-ಮೈಲಿಗೆ ಎನ್ನುವವರನ್ನು, ಜಾತಿಯ ಕಾರಣಕ್ಕೆ ದೂರ ಇಡುವ ಮಾನಸಿಕತೆಯವರನ್ನು ವಿರೋಧಿಸಿದ್ದರು. ಅದರಲ್ಲಿ ತಪ್ಪೇನಿದೆ? ಇಂದೂ ಕೆಲವರ ಗುಣವನ್ನು ನೋಡಿದರೆ ನಾವೂ ವಚನ ಕಟ್ಟಿ ಹಾಡಬೇಕೆನಿಸುತ್ತದೆ! ಅದು ಇಡೀ ಸಮುದಾಯವನ್ನೇ ವಿರೋಧಿಸಿದಂತಲ್ಲ. ವಿಜಯನಗರದ ಸಾಮ್ರಾಜ್ಯ ಉತ್ತುಂಗದಲ್ಲಿದ್ದಾಗಲೇ ದಾಸರು ಲೊಳಲೊಟ್ಟೆ ಎಂದು ಹಾಡಲಿಲ್ಲವೇ? ಹಾಗಾದರೆ ವಿಜಯನಗರದಲ್ಲಿ ಎಲ್ಲವೂ ಲೊಳಲೊಟ್ಟೆಯಾಗಿತ್ತೇ? ವ್ಯವಸ್ಥೆಯನ್ನು ವಿರೋಧಿಸುವ ಮುನ್ನ ಬಸವಣ್ಣನೇ ಅದನ್ನು ಪಾಲಿಸಿದ. ತನ್ನ ಮನೆಯಿಂದಲೇ ಅಂತರ್ಜಾತಿ ವಿವಾಹವನ್ನು ಮಾಡಿಸಿದ. ಲಿಂಗಪೂಜೆಗೆ ಸರ್ವರೂ ಅರ್ಹರು ಎಂದು ಲಿಂಗಧಾರಣೆ ಕೂಡ ಮಾಡಿಸಿದ. ದೂರ ಉಳಿದವರನ್ನೂ ಶರಣರನ್ನಾಗಿಸಿದ. ಹಾಗಾಗಿ ವಚನಗಳಲ್ಲಿ ಜಾತಿ ನಿರ್ಮೂಲನೆಯ ವಚನಗಳೇ ಹೆಚ್ಚಿವೆ. ಲಿಂಗತಾರತಮ್ಯದ ಬಗೆಗೆ ಆ ಕಾಲದಲ್ಲಿ ಹೋರಾಡುವ ಛಾತಿ ಕೇವಲ ಶರಣರಿಗೆ ಮಾತ್ರ ಇತ್ತು. ಇಂದು “ವಚನ ದರ್ಶನ’ ವಿರೋಧಿಸುತ್ತಿದ್ದವರಿಗೆ ಸುಳ್ಳನ್ನು ಅಪ್ಪಿಕೊಳ್ಳುವ ಗುಣವೊಂದುಳಿದು ಇನ್ಯಾವ ಛಾತಿ ಇದೆ? ಪ್ರತ್ಯೇಕ ಬಸವ ಧರ್ಮ ಆಗಲೇಬೇಕೆಂದು ರಾಜಕಾರಣದ ದಾಳ ಉದುರಿಸುವ ಮಂತ್ರಿಯೊಬ್ಬರ ಪತ್ನಿ ಯೂಟ್ಯೂಬ್ ವಾಹಿನಿಯೊಂದಕ್ಕೆ “ನನ್ನ ಗಂಡನಿಗೆ ಚಿಕನ್ ಫ್ರೈ ಎಂದರೆ ತುಂಬಾ ಇಷ್ಟ” ಎಂದು ಸಂದರ್ಶನ ಕೊಡುತ್ತಾಳೆ, ಈಗ ವಿರೋಧಪಕ್ಷದಲ್ಲಿರುವ ಹಿಂದು ಭಾಷಣಕಾರರೊಬ್ಬರು ತಾವು ಇಷ್ಟಪಡದ ಕೆಲವು ಮಠಗಳಿಗೆಂದೂ ಕಾಲಿಡದ ತಾಲಿಬಾನಿಗಳಾಗಿದ್ದಾರೆ. ಇನ್ನೊರ್ವ ಸಚಿವರು ತಾವು ನಾಮ ಧರಿಸುವ ರೆಡ್ಡಿ ಲಿಂಗಾಯತರಾಗಿದ್ದರೂ ವೇದಿಕೆ ಏರುವ ಮುನ್ನ ತ್ರಿಫುಂಡ್ರ ಭಸ್ಮಾಧಾರಣೆ ಮಾಡುತ್ತಾರೆ! ಇವೆಲ್ಲವೂ ಅದೇ ವೇದಿಕೆಯಲ್ಲಿರುವ ಖಾವಿಧಾರಿಗೂ ತಿಳಿದಿರುತ್ತವೆ. ಆದರೂ ಇವನಾರವ ವಚನ ಪಠಿಸಿ ಆಶೀರ್ವಚನ ಮುಗಿಸಿ ಕಾರೇರುತ್ತಾರೆ. ಇಂಥವರಲ್ಲಿ ಶರಣ ಗುಣವೆಷ್ಟಿದ್ದೀತು? ಎಲ್ಲರಲ್ಲೂ ದೇವರನ್ನು ಕಾಣು ಎಂದ ಶರಣ ಪರಂಪರೆಗೇ ದ್ರೋಹ ಎಸಗುವ ಇಂಥವರು ಆರೆಸ್ಸೆಸ್ಸಿನವರು ’ವಚನ ದರ್ಶನ’ ಮಾಡಿಸುತ್ತಿದ್ದಾರೆಂದರೆ ವಿರೋಧಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ವಚನ ಎಂದಾಗ ಅದರ ಪ್ರಸಾರಕ್ಕಿಂತ ಅದನ್ನು ಸಂಪಾದಿಸಿದವರು, ಪ್ರಕಟಿಸಿದವರು ಮುಖ್ಯವಾಗುವ ಮನೋಧರ್ಮ ಆಳವಾಗಿ ಬೇರೂರಿಬಿಟ್ಟಿದೆ. ಹೇಗೆ ದಲಿತರ, ಅಂಬೇಡ್ಕರರ ಬಗ್ಗೆ ಪುಸ್ತಕವೊಂದು ಬರೆದರೆ ದಲಿತರ ಬವಣೆಯನ್ನು ನೀವೆಷ್ಟು ಅನುಭವಿಸಿದ್ದೀರಿ ಎಂದು ಪ್ರಶ್ನಿಸುವಂತೆ ಇಂದು ವಚನಾಧ್ಯಯನ ಮಾಡುವವರನ್ನು ಲಿಂಗಾಯತರಾ? ವೀರಶೈವರಾ? ಎಂದು ಹುಡುಕುವ ಜಾಯಮಾನ ಅನೇಕರಲ್ಲಿದೆ. ಅದೂ ದೊಡ್ಡವರಲ್ಲೇ ಇದೆ! ಅದರಲ್ಲೂ ಆರೆಸ್ಸೆಸ್ಸಿಗರು ಕಳಬೇಡ ಕೊಲಬೇಡ ಎಂದರಂತೂ ಮುಗಿಯಿತು. ಅಷ್ಟಕ್ಕೇ ವಚನಗಳ ಕೇಸರೀಕರಣವಾಗಿಹೋಯಿತೆಂಬ ಆರ್ಭಟ ಆರಂಭವಾಗುತ್ತದೆ. ಶರಣರು ಮತ್ತು ವಚನಗಳೇನು ಒಂದು ಜಾತಿಯ ಸ್ವತ್ತೇ? ಯಾವುದೇ ಒಂದು ಸಮುದಾಯವನ್ನು ವ್ಯವಸ್ಥೆ ವೋಟ್ ಬ್ಯಾಂಕಾಗಿ ಕಾಣುವುದೇನೂ ಆ ಸಮಾಜಕ್ಕೆ ಹೆಗ್ಗಳಿಕೆಯ ವಿಷಯವಲ್ಲ. ವೋಟ್ ಬ್ಯಾಂಕಾಗಿ ನೋಡುವ ಸಮುದಾಯವನ್ನು ರಾಜಕೀಯ ಚೆನ್ನಾಗಿ ಮಂಗ ಮಾಡುತ್ತಿದೆ, ಹೊನ್ನಶೂಲಕ್ಕೇರಿಸುತ್ತಿದೆ ಎಂದೇ ಅರ್ಥ. ಎಲ್ಲಿ ಓಲೈಕೆ ಮಿತಿಮೀರಿರುತ್ತದೋ ಅಲ್ಲಿ ನೈಜ ಗೌರವ ಇರುವುದಿಲ್ಲವೆಂಬ ವಚನಗಳ ಮೂಲ ಧೋರಣೆಯನ್ನು ಸಮಾಜ ಅರಿತುಕೊಂಡಿದ್ದರೆ ೧೨ನೇ ಶತಮಾನದ ಕ್ರಾಂತಿ ಇಂದಿಗೂ ಮುಂದುವರಿಯುತ್ತಿದೆ ಎನ್ನಬಹುದಿತ್ತು. ಆ ಮೂಲಕ ಬಸವಾದಿ ಶರಣರಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದಂತಾಗುತ್ತಿತ್ತು. ಅದು ಬಿಟ್ಟು ಪುಸ್ತಕ ಪ್ರಕಟಣೆಯನ್ನು ವಿರೋಧಿಸುವುದು, ಅದಕ್ಕೆ ಶರಣರನ್ನು ಎಳೆದುತರುವುದು ಶರಣ ಸಂಸ್ಕೃತಿಗೆ ಸಮಾ ತೋಡಿದಂತೆ. ಎಲ್ಲೋ ಕೆಲವು ರಾಜಕಾರಣಿಗಳ ಮತ್ತು ಮಠಾಶರ ಸ್ವಾರ್ಥಕ್ಕೆ ಇಡೀ ಸಮುದಾಯದ ಮಾನಸಿಕತೆಯನ್ನು ಕೆಡಿಸುವುದು ಬಸವಣ್ಣನನ್ನು ಮತ್ತೆಮತ್ತೆ ಕೊಂದಂತೆ.

ಇಂಥವರಿಗೆ ಅರಿವು ಮೂಡಿಸಲು ವಿಶಾಲಮನಸ್ಸಿನವರೇ ವಚನವನ್ನು ಪುನಃ ಸಮಾಜದೊಳಗೆ ತರುವ ಪ್ರಯತ್ನವನ್ನು ಮಾಡುವ ಅನಿವಾರ್ಯತೆಯಿದೆ. ಆ ಕಾರ್ಯವನ್ನು ಪ್ರಜ್ಞಾಪ್ರವಾಹ ಮಾಡಿದೆ. ಅದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಆದರೆ ಬಸವಣ್ಣನಿಗೇ ವಿರೋಧ ಮಾಡಿದವರಿದ್ದರಲ್ಲ ಎಂದುಕೊಂಡು ಪ್ರಜ್ಞಾಪ್ರವಾಹ ವಿರೋಧವನ್ನು ಲೆಕ್ಕಿಸದೆ ತನ್ನ ಕೆಲಸ ತಾನು ಮಾಡುತ್ತಿದೆ. ಆದರೆ ಇಂಥ ವಿರೋಧಗಳು ಸಮಾಜದಲ್ಲಿ ಸದ್ದಿಲ್ಲದೆ ಅನೇಕ ಗಂಡಾಂತರಗಳನ್ನು ಸೃಷ್ಟಿಮಾಡುವುದರಲ್ಲಿ ಸಮರ್ಥವಾಗುತ್ತವೆ. ವಚನಗಳ ಹೆಸರಿನಲ್ಲಿ ಬ್ರಾಹ್ಮಣೀಕರಣ ಎನ್ನುವ ಆಲಾಪ ಎರಡು ವರ್ಗಗಳಲ್ಲಿ ಕಂದಕ ನಿರ್ಮಾಣ ಮಾಡುತ್ತವೆ. ಸಮಾಜಕ್ಕೆ ಮೇಲ್ಪಂಕ್ತಿಯಾಗಬೇಕಿದ್ದ ಪ್ರಬಲ ಮತ್ತು ಬುದ್ದಿವಂತ ಸಮುದಾಯಗಳಿಂದ ಉಳಿದ ಸಮುದಾಯಗಳು ನೀತಿ ಕಲಿಯುವಂತಿರಬೇಕೇ ಹೊರತು ಸಂಕುಚಿತತೆಯನ್ನು ಹರಡುವಂತಿರಬಾರದು. ಸಂಕುಚಿತ ಮಾನಸಿಕತೆ ಉಳಿದ ಸಣ್ಣ ಸಮುದಾಯಗಳಿಗೂ ಪ್ರೇರಣೆ ಎನಿಸಿಬಿಡುವ ಅಪಾಯವೂ ಇದೆ. ಲಿಂಗಾಯತ-ಬ್ರಾಹ್ಮಣರ ಜಾತಿ ಪ್ರೇಮದಿಂದ ನಾವೆಲ್ಲರೂ ಕಲಿಯುವುದು ಸಾಕಷ್ಟಿದೆ ಎನಿಸುವ ಆತಂಕವೂ ಇದೆ. ಅದು ಈಗಾಗಲೇ ದಟ್ಟವಾಗುತ್ತಿವೆ. ಅವರು ತಮ್ಮ ವಚನಗಳನ್ನು ಕೇವಲ ತಮ್ಮದು ಎನ್ನುತ್ತಾರೆ. ನಾವೇಕೆ ನಮ್ಮ ಕಾವೇರಿಯನ್ನು ಕೇವಲ ತಮ್ಮದು ಎಂದುಕೊಳ್ಳಬಾರದು? ನಾರಾಯಣಗುರುಗಳನ್ನೇಕೆ ನಮ್ಮ ಜಾತಿಯ ನಾಯಕನೆಂದು ಪರಿಗಣಿಸಬಾರದು ಎನ್ನುವ ಮಾನಸಿಕತೆಯೂ ಹೆಚ್ಚುತ್ತವೆ. ಪ್ರತಿ ಜಾತಿಗಳೂ ಬುಡಕಟ್ಟು, ನಾಡು ಕಟ್ಟಿದವರೆಂಬ ಕಾರಣಗಳನ್ನು ಹುಡುಕಿ ಫೆನೆಟಿಕ್ ಆಗಲು ತೊಡಗುವ ಸಂದರ್ಭಗಳೂ ಹೆಚ್ಚುತ್ತವೆ. ಅದರ ನಡುವೆ ಇನ್ಯಾರೋ ಕ್ರಿಕೇಟ್ ತಂಡದಲ್ಲಿ ಬ್ರಾಹ್ಮಣ ಆಟಗಾರರೇ ಹೆಚ್ಚಿರುವುದಕ್ಕೆ ವಿಶ್ವಕಪ್ ಗೆದ್ದರು ಎಂದು ಆಲಾಪಿಸುತ್ತಾರೆ. ಇನ್ನೆಲ್ಲೋ ಸಂಸ್ಕೃತ ಶ್ಲೋಕ ಉಲ್ಲೇಖಿಸಿದವರನ್ನು ಶೂದ್ರ ಮುಂಡೇದು ಬಾಯಲ್ಲಿ ಸಂಸ್ಕೃತ ಎಂಬ ಬಯ್ಗಳಗಳು ಕಿವಿಗೆ ಬಿದ್ದಿರುತ್ತವೆ. ಈ ಮಾನಸಿಕತೆ ರೋಗಗ್ರಸ್ಥ ಸಮಾಜವನ್ನು ನಿರ್ಮಾಣ ಮಾಡುವುದರಲ್ಲಿ ಯಶಸ್ವಿಯಾಗುತ್ತವೆ. ರೋಹಿತ್ ಶರ್ಮಾನಲ್ಲೂ ಜಾತಿ ಕಾಣುವವರು ಹೆಡಗೇವಾರರಲ್ಲೂ ಜಾತಿಯನ್ನು ಕಾಣದಿರುತ್ತಾರಾ ಎಂಬ ಗಂಭೀರ ಪ್ರಶ್ನೆಗಳು ಆಗ ಹುಟ್ಟುತ್ತವೆ!


ಇವನ್ನೆಲ್ಲಾ ನೋಡಿದರೆ ಸಮಾಜದಲ್ಲಿ ಸಮನ್ವಯ ಸಾಧಿಸಬೇಕಾಗಿದ್ದ ವಚನಗಳಿಂದ ೨೧ನೆಯ ಶತಮಾನ ಅರಿಯುವುದು ಸಾಕಷ್ಟಿದೆ. ವೇದ ನಮ್ಮದು, ಅದರ ವಾರಿಸುದಾರರು ನಾವೇ ಎಂಬ ಮೌಢ್ಯ ಒಂದೆಡೆಯಾದರೆ, ವಚನ ನಮ್ಮದೆಂಬ ಮೌಢ್ಯ ಇನ್ನೊಂದೆಡೆ! ಈ ಮೌಢ್ಯಗಳನ್ನು ತೊಲಗಿಸಲು ಸರಳ ಪರಿಹಾರ ವೇದಗಳಂತಿರುವ ವಚನ ಮತ್ತು ವಚನಗಳಂತಿರುವ ವೇದಗಳನ್ನು ‘ವಾರಿಸುದಾರರ’ ಕಪಿಮುಷ್ಠಿಯಿಂದ ಬಿಡಿಸಿ ಸ್ವತಂತ್ರಗೊಳಿಸುವುದೊಂದೇ. ಯಾವ ಆದರ್ಶಗಳೂ ಯಾರ ಸ್ವತ್ತೂ ಅಲ್ಲ. ಸಕಲವೂ ಸರ್ವರದ್ದು. ಸರ್ವವೂ ಸಕಲರಿಗೆ ಸಲ್ಲಬೇಕಾಗಿರುವಂಥದ್ದು. ಅದು ಇಂದಿನ ಕಾಲಘಟ್ಟದ ಪ್ರಜ್ಞೆಯಷ್ಟೇ ಅಲ್ಲ. ಎಲ್ಲಾ ಕಾಲಘಟ್ಟದಲ್ಲೂ ಅದು ಸಹಜವಾಗಿದ್ದ ಪ್ರಕೃತಿ ನಿಯಮ. ಏಕೆಂದರೆ ಯಾವ ಕಾಲದಲ್ಲೂ ಯಾವ ಮೌಲ್ಯಗಳೂ ಒಬ್ಬರಿಗಾಗಿ ಹುಟ್ಟಿದವುಗಳಲ್ಲ. ಎಲ್ಲಾ ಮೌಲ್ಯಗಳ ಅಂತಿಮ ಉದ್ದೇಶ ಲೋಕಕಲ್ಯಾಣವೇ. ಲೋಕಕಲ್ಯಾಣದ ಯಾವುದಕ್ಕೂ ಕಟ್ಟೆ ಕಟ್ಟಬಾರದು. ಅದರ ಸಾಕಾರಕ್ಕಾಗಿ ಇಂದು ಪ್ರಜ್ಞೆಯ ಪ್ರವಾಹವೇ ಹರಿಯಬೇಕಿದೆ. ಇಲ್ಲದಿದ್ದರೆ ಶಿಲೆಯೊಳಗಣ ಪಾವಕದಂತೆ ಸಮಾಜ ಕುದಿಯುತ್ತಲೇ ಇರುತ್ತದೆ.

ಗ್ರಂಥಋಣ:

ವಚನಶಾಸ್ತ್ರ ಸಾರ-ಫ.ಗು ಹಳಕಟ್ಟಿ

ಮ‘ಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ-ಡಾ.ಎಂ. ಚಿದಾನಂದಮೂರ್ತಿ

No comments:

Post a Comment

ಬಸವ ಮೂಲ, ಸನಾತನ ಶೈವ ಮೂಲ!

  "ಷಣ್ಮುಖನಿಗೆ ಪ್ರಸಾದ ಕೊಡುವುದನ್ನು ಮರೆತ ವೃಷಭನೆನ್ನುವ ಗಣನನ್ನು ಶಿವನು ಬಸವನಾಗಿ ಭೂಮಿಯಲ್ಲಿ ಜನಿಸಿ ಶಿವಭಕ್ತ ಜಂಗಮರಿಗೆ ಪ್ರಸಾದ ವಿನಿಯೋಗಿಸಿ ಪ್ರಾಯಶ್ಚಿತ್ತ...