Wednesday 14 March 2018

ವೀರಶೈವ ಲಿಂಗಾಯತ ಹಿಂದೂಸಂಸ್ಕೃತಿಯ ಭಾಗ

ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟ ಸದ್ಯಕ್ಕೆ ತಣ್ಣಗಾಗುವ ಲಕ್ಷಣವಿಲ್ಲ. ಪ್ರತ್ಯೇಕ ಧರ್ಮದ ಬೇಡಿಕೆಯು ಧರ್ಮವನ್ನು ಇಬ್ಭಾಗಗೊಳಿಸುವ ಹೋರಾಟಕ್ಕೆ ನಾಂದಿಯಾಗಿದೆ. ವೀರಶೈವ-ಲಿಂಗಾಯತರು ದೇಶದ ನಾನಾ ಭಾಗಗಳಲ್ಲಿದ್ದರೂ ಕರ್ನಾಟಕದಲ್ಲಿ ಹೊರತುಪಡಿಸಿದರೆ; ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ವೀರಶೈವ ಲಿಂಗಾಯತರಿದ್ದಾರೆ. ಈ ಎರಡೂ ರಾಜ್ಯಗಳಲ್ಲೂ ಅಪಾರ ಭಕ್ತರನ್ನು ಹೊಂದಿರುವಂಥದ್ದು ಮಹಾರಾಷ್ಟ್ರದ ಕೊಲ್ಲಾಪುರ ಸಮೀಪದ ಕನ್ಹೇರಿ ಶ್ರೀ ಸಿದ್ಧಗಿರಿ ಮಹಾಸಂಸ್ಥಾನಮಠ. ಈ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರೊಂದಿಗೆ ಪ್ರತ್ಯೇಕ ಧರ್ಮದ ಕುರಿತಾಗಿ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.
| ಪ್ರಶಾಂತ ರಿಪ್ಪನ್​ಪೇಟೆ
ವೀರಶೈವ – ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಕರ್ನಾಟಕದಲ್ಲಿ ಜೋರಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ?
ಧರ್ಮದ ಹೆಸರಿನಲ್ಲಿ ಭಾರತೀಯ ಸಂಸ್ಕೃತಿಯ ಪ್ರವಾಹದಿಂದ ಪ್ರಬಲ ಸಮುದಾಯಗಳನ್ನು ದೂರ ಕೊಂಡೊಯ್ಯುವ ಕೆಲಸವನ್ನು ಹಿಂದಿನಿಂದಲೂ ಕೆಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಸುಪ್ತವಾಗಿ ಮಾಡುತ್ತಲೇ ಇವೆ. ಅದರಂತೆ ದೇಶದ ಅಲ್ಲಲ್ಲಿ ಇಂತಹ ಹೋರಾಟಗಳು ನಡೆಯುತ್ತಲೇ ಇರುತ್ತವೆ. ರಾಷ್ಟ್ರದ ಪಾರಂಪರಿಕ ಸಂಸ್ಕೃತಿಯನ್ನು ಛಿದ್ರಗೊಳಿಸುವ ದುರುದ್ದೇಶ ಇಲ್ಲಿ ಹೆಚ್ಚಾಗಿದ್ದು, ಅದನ್ನು ಕೆಲವರು ಅರ್ಥಮಾಡಿಕೊಳ್ಳುತ್ತಿಲ್ಲ. ಯಾವುದೋ ಮೀಸಲಾತಿಯ ಆಮಿಷಕ್ಕೆ ಮುಗ್ಧ ಜನರನ್ನು ಹೋರಾಟಕ್ಕೆ ಇಳಿಸುತ್ತಿದ್ದಾರೆ, ಆಂದೋಲನಗಳನ್ನು ಮಾಡುತ್ತಾರೆ. ಆದರೆ ದೀರ್ಘಕಾಲೀನ ಪರಿಣಾಮವನ್ನು ಮನಗಂಡಾಗ, ಇದು ಕೂಡ ರಾಷ್ಟ್ರದ್ರೋಹದ ಭಾಗವೇ ಆಗುತ್ತದೆಯೇ ಹೊರತಾಗಿ ಮತ್ತೇನೂ ಅಲ್ಲ. ವೀರಶೈವ ಅಥವಾ ಲಿಂಗಾಯತ ಎನ್ನುವುದು ಸಹ ಒಂದು ಮತವೇ ಹೊರತು ಹಿಂದೂಧರ್ಮದಿಂದ ಪ್ರತ್ಯೇಕಿಸುವುದಕ್ಕೆ ಬೇಕಾದ ಯಾವುದೇ ಸಮರ್ಥ ಪರಿಕರಗಳು, ಪುರಾವೆಗಳು ಇಲ್ಲ.
ಬಸವಾದಿ ಶರಣರು ಹಿಂದೂಧರ್ಮದ ಪ್ರಮಾಣ ಗ್ರಂಥಗಳಾದ ವೇದ ಆಗಮ ಉಪನಿಷತ್ತುಗಳನ್ನು ವಿರೋಧಿಸಿದ್ದಾರೆ. ಹಾಗಿದ್ದಮೇಲೆ ಹಿಂದೂಧರ್ಮದ ಭಾಗ ಲಿಂಗಾಯತ ಎನ್ನೋದು ಹೇಗೆ ಸರಿ?
ಬಸವಣ್ಣನವರ ಹೆಸರನ್ನು ಹೇಳಿಕೊಂಡು ಪ್ರತ್ಯೇಕ ಧರ್ಮದ ಬೇಡಿಕೆ ಇಡುವವರು ಕೇವಲ 10-12 ವಚನಗಳನ್ನು ಆಧಾರವಾಗಿ ಇಟ್ಟುಕೊಂಡಿದ್ದಾರೆಯೇ ವಿನಾ ಬಸವಣ್ಣನವರ ಮತ್ತು ಶಿವಶರಣರ ಸಾವಿರಾರು ವಚನಗಳನ್ನು ಬುದ್ಧಿಪೂರ್ವಕವಾಗಿ ಮರೆಮಾಚುತ್ತಿದ್ದಾರೆ. ಬಸವಣ್ಣನವರ ಬಹುತೇಕ ವಚನಗಳು ವೈದಿಕ ಸಾಹಿತ್ಯದ ಕನ್ನಡ ಅನುವಾದದಂತಿವೆ. ಭಾಷೆ ಬದಲಾದ ಮಾತ್ರಕ್ಕೆ ಭಾವನೆ ಬದಲಾಗುವುದಕ್ಕೆ ಸಾಧ್ಯವಿಲ್ಲ. ಭಾರತದ ಅಧ್ಯಾತ್ಮ, ಧಾರ್ವಿುಕ ರೀತಿ-ನೀತಿ ಎಲ್ಲವುಗಳನ್ನು ಪೋಷಿಸುವಂತಹ ಸಾಹಿತ್ಯ ವಚನಸಾಹಿತ್ಯದಲ್ಲಿದೆ. ಅವುಗಳನ್ನು ಉದ್ದೇಶಪೂರ್ವಕವಾಗಿಯೇ ಮರೆಮಾಚುವ ಪ್ರಯತ್ನ ನಡೆದಿದೆ. ಶರಣತತ್ವವನ್ನು ಕೇವಲ ಬಾಯಲ್ಲಿ ಹೇಳುವ ನಮ್ಮ ಕೆಲವು ಸ್ವಾಮಿಗಳು ಸಮಗ್ರ ಅಧ್ಯಯನವನ್ನು ಮಾಡಬೇಕು. ಆಗ ಮಾತ್ರ ಸಮನ್ವಯವನ್ನು ಸ್ಥಾಪಿಸಲು ಸಾಧ್ಯ.
ಹಿಂದೂಧರ್ಮದಲ್ಲಿ ಇಂದಿಗೂ ವರ್ಣಾಶ್ರಮ ವ್ಯವಸ್ಥೆ, ಸಾಮಾಜಿಕ ಶೋಷಣೆ, ಪುರೋಹಿತಶಾಹಿ ಬಲವಾಗಿದೆ. ಹಾಗಿದ್ದ ಮೇಲೆ ಅವುಗಳನ್ನು ಧಿಕ್ಕರಿಸಿದ ಶರಣತತ್ವಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಕೇಳುವುದು ಸರಿಯಾಗಿದೆ ಅನ್ನಿಸೋದಿಲ್ವೇ?
ಹಿಂದೂಧರ್ಮದಲ್ಲಿ ಇರುವ ನಮ್ಮ ಜಾತಿಗಳಲ್ಲಿ ವರ್ಣಗಳಿವೆ. ಆದರೆ ವರ್ಣಗಳಲ್ಲಿ ಜಾತಿಗಳನ್ನು ಆರೋಪಿಸುತ್ತಿದ್ದಾರೆ ಅಷ್ಟೆ. ಎಲ್ಲ ಜಾತಿಗಳಲ್ಲೂ ಗುರುಕುಲವಿದ್ದವು, ಎಲ್ಲ ಜಾತಿಗಳಲ್ಲೂ ರಾಜಮಹಾರಾಜರಿದ್ದರು,


ಎಲ್ಲ ಜಾತಿಯವರು ವ್ಯಾಪಾರ ಮಾಡುತ್ತಿದ್ದರು. ಎಲ್ಲ ಜಾತಿಯವರು ಶುಶ್ರೂಷೆಗಳಲ್ಲಿ ತೊಡಗಿದ್ದರು. ಲಿಂಗಾಯತ ಸಮಾಜದ ಹಲವು ನಾಯಕರು, ಮಠಗಳು ಶಿಕ್ಷಣಸಂಸ್ಥೆಗಳನ್ನು ಕಟ್ಟಿ ಸಮಾಜದಲ್ಲಿ ಇತರರನ್ನು ಶೋಷಣೆ ಮಾಡಿದ್ದಾರೆ. ಸ್ವತಃ ಲಿಂಗಾಯತರನ್ನು ಶೋಷಿಸುತ್ತ ಬಂಡವಾಳಶಾಹಿಗಳಾಗಿದ್ದು ಇದೀಗ ಬಸವತತ್ವವನ್ನು ಜಪಿಸುತ್ತಿರುವುದು ಎಷ್ಟು ಸರಿ? ಪುರೋಹಿತಶಾಹಿ ಅನ್ನೋದನ್ನ ಯಾವ ರೀತಿಯಲ್ಲಿ ಹೇಳ್ತಾ ಇದ್ದಾರೋ ನಮಗಂತೂ ಗೊತ್ತಿಲ್ಲ. ವೇದಸಂಹಿತೆಯನ್ನು ರಚಿಸಿದ ಋಷಿಗಳಿರಬಹುದು, ತದನಂತರದ ಉಪನಿಷತ್ ಕಾಲದ ಎಲ್ಲ ಋಷಿಮುನಿಗಳಲ್ಲಿಯೂ ಬಹುತೇಕ ಯಾರೂ ಬ್ರಾಹ್ಮಣರಾಗಿರಲಿಲ್ಲ. ಜೊತೆಗೆ ದೇಶದ ಇಬ್ಬರು ಮಹಾತ್ಮರಾಗಿರುವ ಶ್ರೀಕೃಷ್ಣ ಮತ್ತು ಶ್ರೀರಾಮ ಬ್ರಾಹ್ಮಣರಲ್ಲ. ಹಾಗೆಂದ ಮೇಲೆ ಕೇವಲ ಒಂದು ಸಮುದಾಯವನ್ನು ದೂಷಿಸುವುದು ತಪ್ಪು. ಬ್ರಿಟಿಷರಿಂದ ಅಪೂರ್ಣವಾಗಿದ್ದ ಒಡೆದಾಳುವ ನೀತಿಯನ್ನು ನಮ್ಮವರೇ ಇಂದು ಪೂರ್ಣಗೊಳಿಸಲು ಹೊರಟಿರುವುದು ಆಘಾತಕಾರಿ ಅಂಶ.
ವಚನ ಸಾಹಿತ್ಯವನ್ನೇ ಪ್ರಮಾಣಗ್ರಂಥಗಳಾಗಿ ಹೊಸತೊಂದು ಸಿದ್ಧಾಂತವನ್ನು ಮಾಡಿದರೆ ಸರ್ವಸಮ್ಮತ ಸಮಾಜವನ್ನು ಕಟ್ಟುವುದಕ್ಕೆ ಸಾಧ್ಯವಾಗುತ್ತಲ್ವಾ?
ವಚನಗಳು ಸಮಗ್ರ ಧರ್ಮದ ಸಾಹಿತ್ಯವಾಗಲು ಸಾಧ್ಯವಾಗಲ್ಲ. ಕಾರಣ ಧರ್ಮದಲ್ಲಿ ಅಧ್ಯಾತ್ಮ, ಸಾಮಾಜಿಕ ನೀತಿ, ಪ್ರತಿಯೊಬ್ಬರ ಹಕ್ಕು, ಕರ್ತವ್ಯಗಳು, ಆರ್ಥಿಕ ನೀತಿ, ಕೃಷಿ ನೀತಿ, ಆರೋಗ್ಯ ಮುಂತಾದ ಎಲ್ಲ ಅಂಶಗಳಿರುತ್ತವೆ. ಆದರೆ ವಚನಗಳು ಬಿಡಿಬಿಡಿಯಾಗಿ, ಸಂದರ್ಭಕ್ಕೆ ಅನುಗುಣವಾಗಿ ಮೂಡಿಬಂದಂಥವು. ಕೆಲವೊಂದು ಬಾರಿ ಒಬ್ಬರೇ ವಚನಕಾರರ ಬೇರೆ ಬೇರೆ ವಚನಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಬೇರೆ ಬೇರೆ ವಚನಕಾರರ ವಚನಗಳಲ್ಲೂ ಅಂತಹುದ್ದನ್ನು ಕಾಣಬಹುದು. ಆದರೆ ಅಂತಹ ಕೆಲವೇ ಅಂಶಗಳನ್ನು ಇಟ್ಟುಕೊಂಡು ಒಂದು ಸಿದ್ಧಾಂತವನ್ನು ಕಟ್ಟುತ್ತೇನೆಂದರೆ ಅದು ಅಸಾಧ್ಯದ ಮಾತು. ಉದಾಹರಣೆಗೆ ಬಸವಣ್ಣನವರ ಒಂದು ವಚನದಲ್ಲಿ ‘ಬೇಡುವನಿಲ್ಲದೆ ಬಡವನಾದೆ’ ಅಂತ ಹೇಳಿದ್ದರೆ; ಇನ್ನೊಂದು ವಚನದಲ್ಲಿ ‘ಉಂಬ ಜಂಗಮ ಬಂದರೆ ನಡೆ ಎಂಬರಯ್ಯ’ ಎಂದಿದ್ದಾರೆ. ಹಾಗಿದ್ದರೆ ಯಾವುದನ್ನು ನಾವು ಅನುಸರಿಸಬೇಕು ಎನ್ನೋದು ಪ್ರಶ್ನೆಯಾಗುತ್ತೆ. ಸ್ತ್ರೀಸಮಾನತೆಯ ಬಗ್ಗೆ ಮಾತನಾಡುವ ಬಸವಣ್ಣನವರು ಒಂದು ಸಂದರ್ಭದಲ್ಲಿ ತಮ್ಮ ಪತ್ನಿಗೆ ಅತ್ಯಂತ ಕಠಿಣ ಶಬ್ದದಿಂದ ಬೈಯುವ ವಚನವಿದೆ. ಇದನ್ನು ಹೇಗೆ ಶಾಸ್ತ್ರ, ಸಿದ್ಧಾಂತ ಅಂತ ಮಾಡಲಿಕ್ಕೆ ಸಾಧ್ಯ? ನಮ್ಮಲ್ಲಿ ಇರುವಂತಹ ದೊಡ್ಡ ಸಮಸ್ಯೆ ಎಂದರೆ, ನಮ್ಮ ಜನ ಅಧ್ಯಯನ ಮಾಡ್ತಿಲ್ಲ. ಈ ದೇಶದಲ್ಲಿ ಕ್ರಾಂತಿಗಳು, ಹೋರಾಟಗಳು ಕರ್ನಾಟಕದಲ್ಲಿ ಶರಣರು ಮಾತ್ರ ಮಾಡಿಲ್ಲ. ದೇಶದ ಎಲ್ಲ ಪ್ರಾಂತಗಳಲ್ಲಿ ಬೇರೆ ಬೇರೆ ಕಾಲಘಟ್ಟದಲ್ಲಿ ಇಂತಹ ಹಲವು ಕ್ರಾಂತಿಗಳು, ಹೋರಾಟಗಳು, ಪ್ರತಿಪಾದನೆಗಳು ಆಗಿಹೋಗಿವೆ. ಆ ಎಲ್ಲರ ಪ್ರತಿಪಾದನೆಗಳನ್ನು ಒಂದೊಂದು ಧರ್ಮ ಅಂತ ಕರೆಯೋದಿಕ್ಕೆ ಸಾಧ್ಯವಿಲ್ಲ. ಆ ಇತಿಹಾಸವನ್ನು ನಾವು ಸರಿಯಾಗಿ ತಿಳಿದುಕೊಳ್ಳಬೇಕು.
್ಝಮಾನತೆಗಾಗಿ ಕ್ರಾಂತಿ ಮಾಡಿದ ಶರಣತತ್ವಕ್ಕೆ ಧಾರ್ವಿುಕ ಪ್ರತ್ಯೇಕತೆ ಸಿಗುವುದರಿಂದ ಸಮಾಜದ ಎಲ್ಲ ಸ್ತರದವರಿಗೂ ವಿಶ್ವಾಸ ಮೂಡಿಸಿದಂತಾಗುತ್ತೆ ಅನಿಸಲ್ವಾ?
ಸಮಾನತೆಯ ಬಗ್ಗೆ ಎಲ್ಲರೂ ಬಹಳ ಮಾತಾಡ್ತಾರೆ. ಶರಣರು ಜಾತ್ಯತೀತ ತತ್ವದ ಮೇಲೆ ಮುನ್ನಡೆದವರು ಅಂತ ಹೇಳ್ತಾರೆ. ಹಾಗಾದರೆ ಎಲ್ಲ ಶರಣರನ್ನು ಅವರ ಜಾತಿಯ ಹೆಸರಿನಿಂದ ಗುರುತಿಸಿರುವುದು ಎಷ್ಟು ಸರಿ? ಮಡಿವಾಳ ಮಾಚಯ್ಯ, ಡೋಹರ ಕಕ್ಕಯ್ಯ, ಹಡಪದ ಅಪ್ಪಣ್ಣ – ಹೀಗೆ ಅವರವರ ಜಾತಿಯ ಹೆಸರಿನಿಂದ ಶರಣರನ್ನು ಗುರುತಿಸಲಾಗಿದೆ. ಜಾತಿಯನ್ನು ಮೀರಿದ ಶರಣರಿಗೆ ಜಾತಿಯ ಪಟ್ಟ ಕಟ್ಟುವ ಪ್ರಯತ್ನವೇ ಹೊಸ ಧರ್ಮದ ಬೇಡಿಕೆಯೇ? ಇದರಿಂದ ಸಮಾಜದ ಎಲ್ಲ ವರ್ಗದವರೂ ಪೂಜಿಸುತ್ತಿದ್ದ ಬಸವಾದಿ ಶರಣರನ್ನು ಕೇವಲ ಲಿಂಗಾಯತ ಸಮುದಾಯಕ್ಕೆ ಸೀಮಿತ ಮಾಡಿದ ಹಾಗಾಗುತ್ತದೆ. ಜಾತಿವ್ಯವಸ್ಥೆಯ ಬಗ್ಗೆ ಮಾತನಾಡುವ ಎಷ್ಟು ಜನರು ಕಳೆದ ಎಂಟುನೂರು ವರ್ಷಗಳಲ್ಲಿ ಇತರೆ ಜಾತಿ ಜನಾಂಗದೊಂದಿಗೆ ತಮ್ಮ ಮಕ್ಕಳ ಮದುವೆ ಮಾಡಿದ್ದಾರೆ? ಬಾಯಲ್ಲಿ ಹೇಳುವುದೇ ಒಂದು ತತ್ವ, ನಡೆದುಕೊಳ್ಳುವುದೇ ಇನ್ನೊಂದು ತತ್ವವಾದರೆ ಹೇಗೆ? ಪ್ರತ್ಯೇಕ ಧರ್ಮಕ್ಕಾಗಿ ಧ್ವನಿ ಎತ್ತಿದ ಪ್ರಬಲ ಮಠಗಳಲ್ಲಿ ಎಷ್ಟು ಮಠಗಳು ತಮ್ಮ ಜಾತಿಯವರನ್ನು ಹೊರತುಪಡಿಸಿ ಇತರೆ ಜಾತಿಯವರನ್ನು ಉತ್ತರಾಧಿಕಾರಿಗಳನ್ನಾಗಿ ನೇಮಿಸಿವೆ. ದೇವಾಲಯಗಳನ್ನು ವಿರೋಧಿಸುವವರ ಮಠದ ಅಂಗಳದಲ್ಲಿ ಇಂದಿಗೂ ದೇವಾಲಯಗಳಿವೆ. ಅವರ ಶಾಖಾಮಠಗಳಲ್ಲಿ ಇಂದಿಗೂ ವೇದಪಾಠಶಾಲೆಗಳುನಡೆಯುತ್ತಿವೆ. ವೇದೋಕ್ತ, ರುದ್ರಸಹಿತ ಪೂಜೆಗಳು ನಡೆಯುತ್ತವೆ. ನಡೆಯೊಂದು, ನುಡಿಯೊಂದಾದರೆ ಈ ಸಮಾಜ ಅಂಥವರನ್ನು ನಂಬಲಿಕ್ಕೆ ಸಾಧ್ಯವೇ?
ಪ್ರತ್ಯೇಕ ಧರ್ಮವನ್ನು ಬೆಂಬಲಿಸಿದವರು ಬಸವಾನುಯಾಯಿಗಳು, ಅದನ್ನು ವಿರೋಧಿಸುವವರು ಬಸವದ್ರೋಹಿಗಳು ಅಂತ ಹೇಳ್ತಿದ್ದಾರೆ. ನಿಮ್ಮ ನಿಲುವೇನು?
ತಮ್ಮ ಸ್ವಾರ್ಥ ಸಾಧನೆಗಾಗಿ ಬಸವಣ್ಣನವರ ಹೆಸರನ್ನು ಹೇಳಿಕೊಂಡು, ತಮಗೆ ಅನುಕೂಲವಾಗುವ ವಚನಗಳನ್ನು ಮಾತ್ರ ಉಲ್ಲೇಖ ಮಾಡುತ್ತಿರುವವರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಿಂದೂಧರ್ಮದಲ್ಲಿ ಇಲ್ಲದ ಯಾವ ತತ್ವಗಳೂ ಬಸವಣ್ಣನವರು ಹೇಳಿರುವ ತತ್ವಗಳಲ್ಲಿ ಇಲ್ಲ. ಎನ್ನ ದೇಹವೇ ದೇಗುಲ ಎಂಬ ಬಸವಣ್ಣನವರ ವಚನದ ಅರ್ಥ; ಇದ್ದ ದೇವಾಲಯವನ್ನೆಲ್ಲ ಒಡೆದುಹಾಕಿ ಅಂತಲ್ಲ. ವೇದದಲ್ಲಿರುವ ‘ದೇಹೋ ದೇವಾಲಯ ಪ್ರೋಕ್ತಃ, ಜೀವಭೂತ ಸನಾತನಃ’ ಎಂಬ ಶ್ಲೋಕವನ್ನೇ ಬಸವಣ್ಣನವರು ಹಾಗೆ ಹೇಳಿದ್ದಾರೆ. ಅದೇ ಬಸವಣ್ಣನವರು ಮತ್ತೊಂದು ವಚನದಲ್ಲಿ ‘ಎತ್ತ ನೋಡಿದಡತ್ತತ್ತ ನೀನೇ ದೇವಾ, ಸಕಲ ವಿಸ್ತಾರದ ರೂಹು ನೀನೇ ದೇವಾ’ ಅಂತ ಹೇಳಿದ್ದಾರೆ. ಇದರರ್ಥ ಕೂಡ ಅಣು-ರೇಣು-ತೃಣ-ಕಾಷ್ಠದಲ್ಲೂ ಭಗವಂತನಿದ್ದಾನೆಂಬ ಮೂಲ ಸಿದ್ಧಾಂತದ ರೂಪಾಂತರವೇ ಆಗಿದೆ. ಎಂಟುನೂರು ವರ್ಷಗಳಿಂದ ಇಲ್ಲದ ಪ್ರಗತಿಪರರ ಹಕ್ಕೊತ್ತಾಯ ಕಳೆದ 5-10 ವರ್ಷಗಳಿಂದ ಹೆಚ್ಚಾಗುವುದಕ್ಕೆ; ಕಾಣದ ಕೆಲವು ದುಷ್ಟಶಕ್ತಿಗಳ ಪ್ರಯತ್ನವಿದೆ. ಕರ್ನಾಟಕದಲ್ಲಿ ಮಾತ್ರ ಅಲ್ಲ, ಮಹಾರಾಷ್ಟ್ರದಲ್ಲೂ ಶಿವರಾಷ್ಟ್ರ ಧರ್ಮ ಅಂತ ಹೋರಾಟ ನಡೆಸಿದರು. ಗುಜರಾತ್​ನಲ್ಲಿ ಪಟೇಲರ ಹೋರಾಟ, ರಾಜಸ್ಥಾನದಲ್ಲಿ ಗುಜ್ಜರ್ ಸಮುದಾಯದ ಹೋರಾಟ – ಹೀಗೆ ಇವೆಲ್ಲವೂ ದೇಶವಿರೋಧಿ ಶಕ್ತಿಗಳ ಕುಮ್ಮಕ್ಕಿನಿಂದ ನಡೆಯುತ್ತಿವೆ. ಇದರಿಂದ ಯಾವ ಪ್ರಯೋಜನವೂ ಆಗೋದಿಲ್ಲ.
 ಹಂತದಲ್ಲಿ ವೀರಶೈವ ಮಹಾಸಭೆಯ ನಿಲುವು ಏನಾಗಿರಬೇಕು?
ನಮ್ಮಲ್ಲಿ ಒಂದು ಪದ್ಧತಿ ಇದೆ. ಏನಾದರೂ ಒಂದು ಬದಲಾವಣೆಯನ್ನು ತರಬೇಕು ಅಂದ್ರೆ ಮೊದಲು ಜನಸಾಮಾನ್ಯರಿಗೆ ಆ ಬಗ್ಗೆ ತಿಳಿವಳಿಕೆ ನೀಡಬೇಕು. ನಂತರ ಅದರ ಸಾಧಕ-ಬಾಧಕಗಳ ಚರ್ಚೆ ನಡೆಯಬೇಕು. ಶಾಸ್ತ್ರಾರ್ಥ ನಡೀಬೇಕು. ಇದರ ಸಂಬಂಧ ಸಮಾಜದ ಮುಖಂಡರು, ಧರ್ಮಗುರುಗಳನ್ನು ಕರೆದು ಮಾತನಾಡಬೇಕು. ಈ ಯಾವ ಪ್ರಕ್ರಿಯೆಗಳಿಲ್ಲದೆ ಮುಂದುವರಿದ ಪರಿಣಾಮವಾಗಿ ಸಮಾಜದಲ್ಲಿ ಇಂತಹ ವಿವಾದ, ಗದ್ದಲ ಸೃಷ್ಟಿಯಾಗಿದೆ. ಮುಂದಿನ ದಿನಮಾನಗಳಲ್ಲಿ ಮಹಾಸಭೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ. ಕಾರಣ ಮಹಾಸಭೆಯು ಇದುವರೆಗೂ ಸಮಾಜದ ಮಾತೃಸಂಸ್ಥೆ ಎಂದು ಗುರುತಿಸಲ್ಪಟ್ಟಿದೆ. ಮಾತೆ ಎಲ್ಲರನ್ನೂ ಮಮತೆಯಿಂದ ಕಾಣಬೇಕು. ಯಾರೊಬ್ಬರ ದಾಕ್ಷಿಣ್ಯಕ್ಕೂ ಒಳಗಾಗಬಾರದು.
ರಾಷ್ಟ್ರೀಯತೆ, ಒಕ್ಕೂಟ ವ್ಯವಸ್ಥೆಯ ಬಲವರ್ಧನೆಗೆ ಚಿಂತಿಸಬೇಕಾದ ಸರ್ಕಾರವಾಗಲೀ, ಸಮಾಜವಾಗಲೀ – ಹೀಗೆ ಆಂತರಿಕ ಧರ್ಮಸಂಘರ್ಷಕ್ಕೆ ಒತ್ತು ನೀಡ್ತಿರೋದು ಎಷ್ಟು ಸರಿ?
ಎಲ್ಲ ಧರ್ಮಗಳಿಗಿಂತ ರಾಷ್ಟ್ರಧರ್ಮ ಅತ್ಯಂತ ಮುಖ್ಯ ಎನ್ನೋದು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕು. ದೇಶದ ಆಂತರಿಕ ಸಮಸ್ಯೆಗಳನ್ನು ದುರುಪಯೋಗ ಮಾಡಿಕೊಳ್ಳುವ ಅಂತಾರಾಷ್ಟ್ರೀಯ ವ್ಯವಸ್ಥೆ ಕೆಲಸ ಮಾಡ್ತಾ ಇದೆ. ಈಗಾಗಲೇ ಮತಾಂತರದಂತಹ ದೊಡ್ಡ ಸಮಸ್ಯೆ ನಮ್ಮ ಮುಂದಿದೆ. ನಮ್ಮ ಸ್ವಾಮಿಗಳಾದವರು ಒಂದು ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು. ಲಿಂಗಾಯತರೇ ಸಾಕಷ್ಟು ಜನ ಲಿಂಗಾಯತರೇತರ ಸಂಪ್ರದಾಯಗಳಿಗೆ ಹೋಗ್ತಾ ಇದ್ದಾರೆ. ಈ ಬಗ್ಗೆ ಚಿಂತಿಸಬೇಕು. ಆಡಳಿತ ನಡೆಸುವವರು ಸಹ ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಇಬ್ಭಾಗ ಮಾಡುವ ಕೆಲಸವನ್ನು ನಿಲ್ಲಿಸಬೇಕು. ಸಮಾಜವನ್ನು ಯಾರೂ ಚೆಂಡಿನಂತೆ ಬಳಸಿಕೊಳ್ಳಬಾರದು.
ಒಂದುವೇಳೆ ಸರ್ಕಾರ ಅಂತಿಮವಾಗಿ ಸ್ವತಂತ್ರ ಧರ್ಮವನ್ನು ಘೊಷಿಸಿದರೆ ಆಗ ಏನಾಗಬಹುದು?
ಯಾವುದೇ ಕಾರಣಕ್ಕೂ ಇದು ಆಗೋದಿಲ್ಲ. ಹಾಗೇನಾದರೂ ಪ್ರತ್ಯೇಕ ಧರ್ಮ ಆದರೆ ಸಮಾಜ ಸಂಕುಚಿತಗೊಳ್ಳುತ್ತೆ. ಬಸವಣ್ಣನವರ ‘ಇವ ನಮ್ಮವ, ಇವ ನಮ್ಮವ’ ಎಂಬ ವಚನಕ್ಕೆ ವಿರುದ್ಧವಾದ ಪರಿಸ್ಥಿತಿ ನಿರ್ವಣವಾಗುತ್ತೆ. ಇತರೆ ಸಮಾಜದವರು ನಮ್ಮನ್ನು ನೋಡುವ ದೃಷ್ಟಿ ಕೂಡ ಬದಲಾಗುತ್ತೆ. ಅಂತಹ ಪರಿಸ್ಥಿತಿಯಿಂದಾಗಿ ಈಗಾಗಲೇ ಬೇರೆ ಬೇರೆ ಮತಗಳು ಧರ್ಮಗಳಾಗಿ ಮಾನ್ಯಗೊಂಡಿದ್ದರ ಪರಿಣಾಮವಾಗಿ ನಮ್ಮ ರಾಷ್ಟ್ರ ಮತ್ತು ಸಂಸ್ಕೃತಿಗೆ ಬಹು ದೊಡ್ಡ ಹಾನಿಯಾಗಿದೆ. ಇದು ಹೀಗೆಯೇ ಛಿದ್ರವಾಗುತ್ತ ಸಾಗಿದರೆ ಮುಂದೊಂದು ದಿನ ರಾಷ್ಟ್ರದ ಅಖಂಡತೆಗೆ ಕೂಡ ಪೆಟ್ಟು ಬೀಳದಿರದು.
ವೀರಶೈವ ಲಿಂಗಾಯತ ಹಿಂದೂಸಂಸ್ಕೃತಿಯ ಭಾಗ
ಪ್ರತ್ಯೇಕ ಧರ್ಮದ ಕೂಗಿನ ವಿಚಾರದಿಂದ – ವೀರಶೈವರೇ ಬೇರೆ, ಲಿಂಗಾಯತರೇ ಬೇರೆ ಎಂಬ ವಾದಕ್ಕೆ ನಾಂದಿಯಾಗಿದೆ. ಈ ಆಂತರಿಕ ಭಿನ್ನಾಭಿಪ್ರಾಯದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಇದು ಕೇವಲ ಎರಡು ಸಂಪ್ರದಾಯದ ಮಠಾಧೀಶರ ಒಣಪ್ರತಿಷ್ಠೆಗೆ ಎದ್ದಿರುವ ಆಂತರಿಕ ಬೇಗುದಿ. ತಮಗೆ ತಾವೇ ಎತ್ತರದಲ್ಲಿ ಕುಳಿತುಕೊಂಡು ತಾವೇ ದೊಡ್ಡವರೆಂದು ಬೀಗುವವರ ಮತ್ತು ಬಸವಣ್ಣನವರನ್ನು ಮುಂದಿಟ್ಟುಕೊಂಡು ತಮ್ಮ ಹಿಡಿತ ಸಾಧಿಸಬೇಕೆಂಬುವವರ ಸಮಾಜವಿರೋಧಿ ನಿಲುವಿನಿಂದ ದೊಡ್ಡ ಅಪಾಯ ಕಾದಿದೆ. ಈ ಬಗ್ಗೆ ಎರಡೂ ವರ್ಗದ ಮಠಾಧೀಶರು ಚಿಂತನೆ ಮಾಡಬೇಕಾದ ಅಗತ್ಯವಿದೆ. ನಮ್ಮ ಧಾರ್ವಿುಕ ಆಚಾರ-ವಿಚಾರಗಳಲ್ಲಿ ಏನಾದರೂ ಅನಿಷ್ಟಗಳು ಒಳಸೇರಿದ್ದರೆ ಅವುಗಳನ್ನಷ್ಟೇ ದೂರಿಕರಿಸುವ ಕಾರ್ಯ ಆಗಬೇಕು. ಆದರೆ ಮನೆಯೊಳಗೆ ವಿಷಸರ್ಪ ಬಂದಿದೆ ಎಂದ ಮಾತ್ರಕ್ಕೆ ಸರ್ಪವನ್ನು ಹೊರಹಾಕುವುದಕ್ಕಾಗಿ ಮನೆಗೆ ಬೆಂಕಿ ಕೊಡುವಂತಹ ಕೆಲಸ ನಡೆಯುತ್ತಿದೆ. ಇದು ಆಗಬಾರದು. ವೀರಶೈವ ಮತ್ತು ಲಿಂಗಾಯತ ಅನ್ನೋದು ಒಂದೇ ನಾಣ್ಯದ ಎರಡು ಮುಖವಿದ್ದ ಹಾಗೆ. ಇಬ್ಬರಿಗೂ ತತ್ವತ್ರಯಗಳು ಒಂದೇ ಇವೆ. ಧರ್ವಚರಣೆಯ ರೀತಿ-ನೀತಿಗಳು ಒಂದೇ ಇವೆ ಅಂದಮೇಲೆ ವೈಯಕ್ತಿಕ ಪ್ರತಿಷ್ಠೆಗಾಗಿ ಸಮಾಜವನ್ನು ಒಡೆಯುವ ಕೆಲಸಕ್ಕೆ ಯಾರೂ ಕೈ ಹಾಕಬಾರದು ಎನ್ನೋದು ನನ್ನ ವಿನಂತಿ. ಜನ ಬಹಳ ಬುದ್ಧಿವಂತರಿದ್ದಾರೆ. ಇವರ ಯಾವ ಕೂಗಿನಿಂದಲೂ ನಮ್ಮ ಭಕ್ತರು ಬದಲಾಗುವುದಿಲ್ಲ. ತಮ್ಮ ಕೌಟಂಬಿಕ ಪರಂಪರೆಯಂತೆ, ಈ ಹಿಂದಿನಿಂದ ನಡೆದುಕೊಂಡು ಬಂದಿರುವಂತೆಯೇ ಜನ ಧರ್ವಚರಣೆಗಳನ್ನು ಮಾಡುತ್ತಾರೆ.

No comments:

Post a Comment

सिध्देश्वर स्वामीजी चराचरात

२० जानेवारी २०२३  बालगाव आश्रमात गुरुवंदना  ज्ञानयोगी श्री सिद्धेश्वर स्वामीजी लिंगैक्य झाल्यानिमित्त बालगाव - कात्राळ (ता. जत) येथील श्री ग...