Wednesday 14 March 2018

ಲಿಂಗಾಯತ, ವೀರಶೈವ, ಹಿಂದೂ ಪದಗಳ ಸುತ್ತಮುತ್ತ…

ಎಲ್ಲ ವೀರಶೈವರು ವೇದಗಳಲ್ಲಿ ಶ್ರದ್ಧೆ ಹೊಂದಿದ್ದು, ಹಲವು ದೈವಗಳಲ್ಲಿ ಭಕ್ತಿಯಿರುವವರು. ಕರ್ನಾಟಕದಲ್ಲಿ ವೇದ-ಸಂಸ್ಕೃತ ಪಾಠಶಾಲೆಗಳನ್ನು ಹಲವು ವೀರಶೈವ ಮಠಗಳು ನಡೆಸುತ್ತಿವೆ. ಹಿಂದೂಗಳಂತೆ ವೀರಶೈವರು ಗೋವನ್ನು ‘ಮಾತೆ’ ಎಂದು ಭಾವಿಸುತ್ತಾರೆ.
| ಡಾ. ಎಂ. ಚಿದಾನಂದಮೂರ್ತಿ
 ಚಿನ ದಿನಗಳಲ್ಲಿ ಲಿಂಗಾಯತ ಮತ್ತು ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮಾತೆ ಮಹಾದೇವಿಯವರು ಕೆಲವು ವರ್ಷಗಳಿಂದ, ‘ಲಿಂಗಾಯತ’ ಎಂಬುದೇ ಬಸವಣ್ಣ ಸ್ಥಾಪಿಸಿದ್ದು; ಬಸವಣ್ಣ ‘ವೀರಶೈವ’ ಅಲ್ಲ ‘ಲಿಂಗಾಯತ’ ಎಂಬ ವಾದವನ್ನು ತೀವ್ರವಾಗಿ ಮುಂದುವರಿಸಿದ್ದಾರೆ. ಅವರು ಹೇಳಿದ್ದು ನಿಜ ಎಂದು ಹಲವು ಭಕ್ತರು ನಂಬಿದ್ದಾರೆ. ಆದರೆ ಕೆಳಗಿನ ಮಾಹಿತಿ ಗಮನಿಸಿ- ‘ಮಾತೆ ಮಹಾದೇವಿ ಅವರು 5-4-1966ರಂದು ಪೂಜ್ಯ ಲಿಂಗಾನಂದ ಸ್ವಾಮಿಗಳಿಂದ ಜಂಗಮ ದೀಕ್ಷೆಯನ್ನು ಪಡೆದ ಸಂದರ್ಭದಲ್ಲಿ ‘ಆದರ್ಶ ಸಾಧನೆಗೆ ವೀರಶೈವ ಧರ್ಮಪ್ರಚಾರಕ್ಕೆ ಸದಾ ಹೋರಾಡುತ್ತೇನೆ. ಶರಣ ಧರ್ಮ ಪ್ರಚಾರ ಮಾಡಲು ಪರದೇಶಕ್ಕೆ ಹೋಗುವೆ. ನಾನು ಇನ್ನೂ ಹೆಚ್ಚಿನ ಶಕ್ತಿಯನ್ನು ಗಳಿಸುವೆ. ನಂತರ ವೀರಶೈವ ಮಿಷನರಿಯಾಗಿ ಹೋಗುವೆ’ಎಂದು ಪ್ರತಿಜ್ಞೆ ಮಾಡಿರುತ್ತಾರೆ (‘ಲಿಂಗಾಯತ ವೀರಶೈವ: ಒಂದೆಯೂ ಹೌದು, ಹಿಂದೂವೂ ಹೌದು’- ಡಾ. ಮಹಾಂತ ಲಿಂಗ ಶಿವಾಚಾರ್ಯ ಸ್ವಾಮಿಗಳು, ಶ್ರೀಮದ್ ವಿಭೂತಿಪುರ, ವೀರ ಸಿಂಹಾಸನ ಮಠ ಬೆಂಗಳೂರು, ‘ರೇಣುಕ ಸೌಭಾಗ್ಯ ಸಿರಿ’ ಗ್ರಂಥದಲ್ಲಿ ಪು. 141).
ಮಾತೆ ಮಹಾದೇವಿಯವರೇ ರಚಿಸಿರುವ ‘ಮಾತೃವಾಣಿ’ ಕೃತಿಯಲ್ಲಿ ಈ ಉಲ್ಲೇಖವಿದೆ-‘ದಾವಣಗೆರೆ ವಿಶ್ವಕಲ್ಯಾಣ ಮಂಟಪ ಸ್ಥಾಪಕ, ಧೀರ ಗುರುವರ್ಯ ವೈರಾಗ್ಯಪರ, ವೀರಶೈವ ಧರ್ಮದೀಪ್ತಿ …. ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಯವರ ಪಾದಾಂಬುಜದಲ್ಲಿ … ಅರ್ಪಿಸುವೆ ನಾಂ ಮಹಾದೇವೀ ಪ್ರಿಯ ಸಚ್ಚಿದಾನಂದ ಸತಿಯಾಗಿ’( ಮಾತೃವಾಣಿ. ದಾವಣಗೆರೆ. 1965) ಅದೇ ಕೃತಿಯಲ್ಲಿ ‘ವೀರಶೈವರ ಲಾಂಛನ ’ ಎಂಬ ಹೆಸರಿನ ಲೇಖನದಲ್ಲಿ ಈ ವಾಕ್ಯಗಳಿವೆ-‘ವಿಭೂತಿ ರುದ್ರಾಕ್ಷಿ ಧಾರಣೆಯ ಕಂಡು ಹೀನೈಸಿ ನಗುವರ| ನೋಡೆನ್ನ ಮನದೊಳು ಸಿಗ್ಗದು ಸಂಚರಿಸಿವೆ| ತ್ರಿಪುಂಡ್ರವದು ವೀರಶೈವರ ವಿಷಯ ಭಸ್ಮದಾ ಲಾಂಛನ| ರುದ್ರಾಕ್ಷಿಯದು ಲಿಂಗಪತಿಯಕ್ಷಿಯಿಂ ಹೊಮ್ಮಿ ಕಟ್ಟಲ್ಪಟ್ಟ ಮಂಗಲಸೂತ್ರ| ಇಂಥಪ್ಪ ವಿಭೂತಿ ರುದ್ರಾಕ್ಷಿ ಧರಿಸಿದ ಸದ್ಭಕ್ತರಂ ಕಂಡು| ಹೀಯಾಳಿಪರ ಅಡೆತಡೆಯಿಲ್ಲದ ಜ್ಞಾನಕ್ಕೆ ಮನನೊಂದು ನಕ್ಕೆನೋ ಸಚ್ಚಿದಾನಂದ’ (ಮಾತೆ ಮಹಾದೇವಿ: ಮಾತೃವಾಣಿ ಪು. 42). ಈ ಕೃತಿಗೆ ಹಿರಿಯ ವಿದ್ವಾಂಸ ಡಾ. ಎಚ್. ತಿಪ್ಪೇರುದ್ರಸ್ವಾಮಿಯವರು ‘ಮೆಚ್ಚುನುಡಿ’ ಬರೆದಿರುವುದು ಉಚಿತವಾಗಿದೆ. ಮಾತೆ ಮಹಾದೇವಿಯವರು ಹಿಂದೆ ಬಳಸಿದ್ದ ‘ವೀರಶೈವ’ ಪದವನ್ನು ಕೈಬಿಟ್ಟು ಈಗ ‘ಲಿಂಗಾಯತ’ ಪದವನ್ನು ಬಳಸಿ, ಬಸವಣ್ಣ ಸ್ಥಾಪಿಸಿದ್ದು ‘ಲಿಂಗಾಯತ’ ಧರ್ಮವನ್ನು ಎಂದು ಹೇಳುತ್ತಿರುವುದು ಅವರೇ ಕೈಗೊಂಡ ಪ್ರತಿಜ್ಞಾವಿಧಿಗೆ ವಿರುದ್ಧವಾಗಿದೆ.
ವಾಸ್ತವವೆಂದರೆ ಬಸವಣ್ಣ ಎಲ್ಲಿಯೂ ‘ಲಿಂಗಾಯತ’ ಪದ ಬಳಸಿಲ್ಲ; ಅವನು ಬಳಸಿರುವುದು ‘ವೀರಶೈವ’ ಪದ ಮಾತ್ರ. ಉದಾಹರಣೆಗೆ-‘ ಎನ್ನ ಬಂದ ಭವಂಗಳನು ಪರಿಹರಿಸಿ… ಎನ್ನ ಹೊಂದಿದ ಶೈವ ಮಾರ್ಗಂಗಳ ನೆಲೆಗಳೆದು ನಿಜ ವೀರಶೈವಾಚಾರವರುಹಿ ತೋರಿ… ಶೈವ ಕರ್ಮವ ಕಳೆದು…’: ‘ಶೈವ’ನಾಗಿದ್ದ ತಾನು ಚೆನ್ನಬಸವಣ್ಣನ ಸೂಚನೆ ಪ್ರಕಾರ ‘ವೀರಶೈವ’ನಾದೆ ಎಂದು ಬಸವಣ್ಣನವರೇ ಹೇಳಿಕೊಂಡಿದ್ದಾರೆ (ವಚನ 1098). ಅವರು 930ರ ವಚನದಲ್ಲಿ ಉಲ್ಲೇಖಿಸಿರುವ ತಮಗಿಂತ ಹಿಂದಿನ ಸಂಸ್ಕೃತ ಶ್ಲೋಕವೊಂದರಲ್ಲಿ ‘ವೀರಶೈವ’ ಪದವಿದೆ. ಅಕ್ಕಮಹಾದೇವಿ ಬಳಸಿಕೊಂಡಿರುವ ಸಂಸ್ಕೃತ ಶ್ಲೋಕವೊಂದರಲ್ಲಿ ‘ವೀರಶೈವ’ ಪದವಿದೆ. ಕ್ರಿ.ಶ. 1110ರ ಕೊಂಡಗುಳಿ ಕೇಶಿರಾಜನ ‘ಶೀಲ ಮಹತ್ವದ ಕಂದ’ ಕೃತಿಯಲ್ಲಿ ‘ವೀರಶೈವ’ ಪದ ಬಂದಿದೆ. ಅಲ್ಲಿ ಬಂದಿರುವ ‘ಲಿಂಗಾಯತ’ ಪದಕ್ಕೆ ಲಿಂಗವನ್ನು ಮೈಮೇಲೆ ಧರಿಸುವ ಒಂದು ಪದ್ಧತಿ ಎಂಬ ಅರ್ಥವಿದೆ. ಬಸವಣ್ಣ ಎಲ್ಲಿಯೂ ‘ಲಿಂಗಾಯತ’ ಪದ ಬಳಸಿಲ್ಲ. ಚಿತ್ರ ಸ್ಪಷ್ಟವಾಗಿದೆ- ‘ವೀರಶೈವ’ ಹೆಸರಿನ ಧರ್ಮ ಬಸವಪೂರ್ವ ಯುಗದ್ದು- ಮೇಲೆ ಹೇಳಿದ ಆಧಾರಗಳಿಂದ ಇಷ್ಟು ಸ್ಪಷ್ಟವಾಗುತ್ತವೆ. ಈ ಬಗ್ಗೆ ಮಾತೆ ಮಹಾದೇವಿಯವರು ಏನು ಹೇಳುತ್ತಾರೆ?
ವೀರಶೈವ- ಲಿಂಗಾಯತವು ‘ಹಿಂದೂಧರ್ಮ’ದ ಭಾಗವಾಗಿರದೆ ಅದೇ ಒಂದು ಸ್ವತಂತ್ರ ಧರ್ಮ ಎಂದು ಅಖಿಲ ಭಾರತ ವೀರಶೈವ ಮಹಾಸಭೆಯು ನಿರ್ಣಯಿಸಿ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಲಿದೆ. ವೀರಶೈವವು ಸ್ವತಂತ್ರ ಧರ್ಮವೆಂದು ಕೇಂದ್ರ ಸರ್ಕಾರವು ಅಧಿಕೃತವಾಗಿ ಮಾನ್ಯ ಮಾಡಿದರೆ ಅಲ್ಪಸಂಖ್ಯಾತರಿಗೆ ದೊರಕುವ ಸೌಲಭ್ಯಗಳು ಲಿಂಗಾಯತರಿಗೆ ದೊರಕುತ್ತವೆ ಎಂಬ ಆಸೆ ಮಹಾಸಭೆಯದು. ವೀರಶೈವ ಮಹಾಸಭೆಗೆ ಹಿಂದೂಧರ್ಮ ಎಂದರೇನು, ಅದರ ವ್ಯಾಪ್ತಿಯೆಷ್ಟು ಎಂಬುದರ ಅರಿವು ಇರಬಹುದು. ಸ್ವಾಮಿ ವಿವೇಕಾನಂದ, ಬಾಲಗಂಗಾಧರನಾಥ ತಿಲಕರಂತಹ ಎಲ್ಲ ಶ್ರೇಷ್ಠರು ತಾವು ಹಿಂದೂಗಳೆಂದೇ ಬಹಿರಂಗವಾಗಿ ಘೋಷಿಸಿಕೊಂಡಿದ್ದಾರೆ. ಭಾರತದ ಸವೋಚ್ಚ ನ್ಯಾಯಾಲಯದ ಪೂರ್ಣಪೀಠವು 1995ರಲ್ಲಿ ನೀಡಿರುವ ಒಂದು ತೀರ್ಪಿನಲ್ಲಿ ಹಿಂದೂ ಧರ್ಮದ ಲಕ್ಷಣವನ್ನು ಈ ರೀತಿ ಸ್ಪಷ್ಟಪಡಿಸಿದೆ- ‘Acceptence of the Vedas with reverence, recognition of the fact that the means or ways to salvation are diverse; and realisation of the truth that the gods to be worshipped is large: that indeed is the distinguishing features of Hinduism’ – ‘ವೇದಗಳಲ್ಲಿ ಶ್ರದ್ಧೆಯಿಡುವವರು, ಬಹುದೇವತಾರಾಧಕರು; ದೈವ ಸಾಕ್ಷಾತ್ಕಾರಕ್ಕೆ ಹಲವು ಮಾರ್ಗಗಳಿವೆ ಎಂದು ನಂಬಿರುವವರೆಲ್ಲರೂ ಹಿಂದೂಗಳು.’
ಇಂದಿಗೂ ಎಲ್ಲ ವೀರಶೈವರು ವೇದಗಳಲ್ಲಿ ಶ್ರದ್ಧೆಯಿಟ್ಟಿರುವವರು; ‘ಓಂಕಾರ’ (‘ಓಂ’) ಅವರಿಗೆ ಪ್ರಿಯವಾದ ಮಂತ್ರ. ಹಲವು ದೈವಗಳಲ್ಲಿ ಭಕ್ತಿಯಿರುವವರು. ಕರ್ನಾಟಕದಲ್ಲಿ ವೇದ-ಸಂಸ್ಕೃತ ಪಾಠಶಾಲೆಗಳನ್ನು ಹಲವು ವೀರಶೈವ ಮಠಗಳು ನಡೆಸುತ್ತಿವೆ. ಉದಾಹರಣೆಗೆ ತುಮಕೂರಿನ ಸಿದ್ದಗಂಗೆಯ ವೇದ ಸಂಸ್ಕೃತ ಪಾಠಶಾಲೆ. ಅಲ್ಲಿ ಇಂದಿಗೂ ಸಂಜೆಯ ಪ್ರಾರ್ಥನಾಸಭೆಗಳು ವೇದಘೋಷದಿಂದ ಆರಂಭವಾಗುತ್ತವೆ. ಲಿಂಗಾಯತರಿಗೆ ಶಿವನೇ ಪರಮದೈವ ಎಂಬ ಶ್ರದ್ಧೆಯಿದ್ದರೂ ಅವರಲ್ಲಿ ಹಲವರು ತಿರುಪತಿಯ ವೆಂಕಟೇಶ್ವರನ ಭಕ್ತರೂ ಆಗಿದ್ದಾರೆ. ಹಿಂದೂಗಳಂತೆ ವೀರಶೈವರು ಗೋವನ್ನು ‘ಮಾತೆ’ ಎಂದು ಭಾವಿಸುತ್ತಾರೆ- ನಂದಿ ಶಿವನ ವಾಹನ. ಊರುಗಳಲ್ಲಿ ಕರಿಯವ್ವ, ಕಾಳವ್ವ ದೇವತೆಗಳ ಪೂಜೆಯಲ್ಲಿ ಭಾಗವಹಿಸುತ್ತಾರೆ. ಆದರೆ ಅಲ್ಲಿ ನಡೆಯುವ ಪ್ರಾಣಿಬಲಿಯಿಂದ ದೂರವಿರುತ್ತಾರೆ- ಇದು ಸಹಜವೇ.
ಬಸವಣ್ಣನವರ ವಚನಗಳಲ್ಲಿ- ‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನ್ನಿಕ್ಕುವೆ….’ ಇಂತಹ ಮಾತುಗಳು ವೇದ ವಿರುದ್ಧವೆಂಬ ವ್ಯಾಖ್ಯಾನ ಸತ್ಯದೂರವಾದುದು. ಅದು ವೇದಘೋಷ ಮಾಡುತ್ತ ಜಾತಿಭೇದವನ್ನು ಪರಿಗಣಿಸುತ್ತ ಇತರ ವರ್ಗದವರನ್ನು ಹೀನಾಯವಾಗಿ ಕಾಣುತ್ತ ಯಜ್ಞ ಯಾಗಾದಿಗಳನ್ನು ನಡೆಸುತ್ತಿದ್ದ ಬ್ರಾಹ್ಮಣ ವರ್ಗದ ವಿರುದ್ಧವಾದುದು. ಅದೇ ಬಸವಣ್ಣನ ಈ ಮುಂದಿನ ವಚನ ಅತ್ಯಂತ ಗಮನಾರ್ಹ-‘ ವೇದಾಗಮಂಗಳ ಹೇಳಿದ ಹಾಗೆ ನಡೆವುದು/ ಹೇಳಿದಂತೆ ನುಡಿವುದು| ಮೀರಿ ನಡೆಯಲಾಗದು| ಮೀರಿ ನುಡಿಯಲಾಗದೆ ಮುಕ್ತಿಪದವನೈದುವಾತ’(ವ. 239). ವೇದಗಳು ಹೇಳಿದ ಹಾಗೆ ನಡೆಯಬೇಕು; ಅವು ಹೇಳಿದ್ದನ್ನು ಮೀರಿ ನಡೆಯಲಾಗದು ಎಂಬ ಅವರ ಮಾತು ಸ್ಪಷ್ಟಾತಿಸ್ಪಷ್ಟ.
1950ರಲ್ಲಿ ರೂಪಿತವಾದ ಭಾರತದ ಸಂವಿಧಾನವು ವೀರಶೈವವನ್ನು ಹಿಂದೂ ಧರ್ಮದ ಭಾಗವೆಂಬುದನ್ನು ಮಾನ್ಯಮಾಡಿದೆ. ಕಾನೂನು ಪ್ರಕಾರ, ವೀರಶೈವ, ಲಿಂಗಾಯತ, ಹಿಂದೂ ಧರ್ಮದ ಸಂರಕ್ಷಣೆಗಾಗಿ ಹತ್ತೊಂಬತ್ತನೇ ಶತಮಾನದಲ್ಲಿ ಉದಯವಾದ ಬ್ರಹ್ಮ, ಆರ್ಯ, ಪ್ರಾರ್ಥನಾ ಸಮಾಜದ ಅನುಯಾಯಿಗಳು. ಇವರೆಲ್ಲರೂ ಒಂದು ವರ್ಗಕ್ಕೆ ಸೇರುತ್ತಾರೆ. ಬೌದ್ಧ, ಜೈನ, ಸಿಖ್ ಸಮಾಜದ ಅನುಯಾಯಿಗಳು ಹಿಂದೂಗಳು ಅಲ್ಲದಿದ್ದರೂ ಅವರಿಗೂ ಹಿಂದೂ ವಿವಾಹ ಕಾನೂನು ಅನ್ವಯವಾಗುತ್ತದೆ. ಕಾನೂನಿನಲ್ಲಿ ವೀರಶೈವ, ಲಿಂಗಾಯತರನ್ನು ಹಿಂದೂಧರ್ಮದ ಭಿನ್ನ ವರ್ಗದವರೆಂದು ಭಾವಿಸಿರುವುದು ಕಾನೂನು ಮಾಡಿದವರಿಗೆ ಇದ್ದ ವಾಸ್ತವದ ಕೊರತೆ. ತಾನೇ ಸ್ವತಃ ವೀರಶೈವನೆಂದು ಬಸವಣ್ಣ ಹೇಳಿಕೊಂಡಿರುವಾಗ ಲಿಂಗಾಯತರೆಂದರೆ ಯಾರು? ಬಸವಣ್ಣನ ಅನುಯಾಯಿಗಳೆಲ್ಲ ವೀರಶೈವರೂ ಹೌದು; ಲಿಂಗಾಯತರೂ ಹೌದು.
ಮೇಲಿನ ಕಾನೂನು ತಿದ್ದುಪಡಿಯಾಗಿ ವೀರಶೈವ (ಲಿಂಗಾಯತ) ವರ್ಗವು ಹಿಂದೂಧರ್ಮದ ಒಂದು ಭಾಗವಲ್ಲ, ಅದೊಂದು ಪ್ರತ್ಯೇಕ ಧರ್ಮ ಎಂದು ಮಾರ್ಪಾಡು ಆಗಬೇಕಾದರೆ ಅದು ಲೋಕಸಭೆಯಲ್ಲಿ, ರಾಜ್ಯಸಭೆಯಲ್ಲಿ ಅಂಗೀಕೃತವಾಗಬೇಕು. ಅದು ಸದ್ಯಕ್ಕೆ ಅಸಾಧ್ಯವಾದ ಮಾತು. ಕಾನೂನು ತಿದ್ದುಪಡಿ ಮಾಡಲು ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ಪತ್ರ ಬರೆದರೂ ಅದು ಲೋಕಸಭೆಯಲ್ಲಿ ಬಹುಮತದಿಂದ ಒಪ್ಪಿತವಾಗುವುದು ಅಸಾಧ್ಯ. ಹಾಗೆ ಪತ್ರ ಬರೆದು ವಿಫಲವಾದರೆ ಅದು ಮುಖ್ಯಮಂತ್ರಿಯವರಿಗೆ ಅವರ ಪಕ್ಷಕ್ಕೆ ಆಘಾತವನ್ನು ನೀಡುವ ಸಾಧ್ಯತೆ ಇದೆ. ಸಿದ್ಧಗಂಗೆಯ ಪೂಜ್ಯರ ಹೇಳಿಕೆಯಿದು-‘ ವೀರಶೈವ ಧರ್ಮ ಹಿಂದೂ ಧರ್ಮದ ಅರ್ಥಾತ್ ಶೈವ ಧರ್ಮದ ಒಂದು ಶಾಖೆ, ದ್ವೈತ ಅದ್ವೈತ ಪಂಥಗಳಿದ್ದಂತೆ…. ಬ್ರಾಹ್ಮಣ ಜಾತಿಯೊಡನೆ ಅದರ ಸಮೀಕರಣ ಸರಿಯಲ್ಲ’; ಪಂಚಪೀಠಗಳ ಪೂಜ್ಯರ ಅಭಿಪ್ರಾಯ ಇದು-‘ ವೀರಶೈವ ಧರ್ಮ ಹಿಂದೂ ಧರ್ಮದ ಆಗಮ- ವೇದಗಳನ್ನು ಒಪ್ಪಿಕೊಂಡಿದೆ. ಈಗ ವೀರಶೈವರು ಹಿಂದೂಗಳಲ್ಲ ಎಂಬ ಭಾವನೆ ಸರಿಯಲ್ಲ’. ಇವರಂತೆಯೇ ಫ.ಗು. ಹಳಕಟ್ಟಿ, ನ್ಯಾ. ಟಿ,ಎನ್. ಮಲ್ಲಪ್ಪ, ‘ಕರ್ನಾಟಕದ ಗಾಂಧಿ’ ಹರ್ಡೆಕರ್ ಮಂಜಪ್ಪ, ಪಾವಟೆ ಸಿದ್ಧರಾಮಪ್ಪ ಇತ್ಯಾದಿ ಮಹನೀಯರು ಲಿಂಗಾಯತ- ವೀರಶೈವರು ಹಿಂದೂಗಳು ಎಂಬುದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.
ಲಿಂಗಾಯತ (ವೀರಶೈವ)ರು ತಾವು ಹಿಂದೂಗಳಲ್ಲ ಎಂದು ಘೋಷಿಸಿಕೊಂಡಂತೆಯೇ ಒಕ್ಕಲಿಗರು, ಬೇಡರು, ಕುರುಬರು, ಕುಂಚಿಟಿಗರು, ದಲಿತರೂ ಹಾಗೆ ಘೋಷಿಸಿಕೊಂಡರೆ ಆಗ ಇಡೀ ಭಾರತದ ಜನಗಣತಿಯಲ್ಲಿ ಯಾರ ಸಂಖ್ಯೆ ಹೆಚ್ಚಾಗಿರುತ್ತದೆ? ಕ್ರೌರ್ಯ, ಮತಾಂಧತೆ, ಮತಾಂತರಗಳಿಂದ ನಲುಗಿರುವ ಭಾರತದ ಭವಿಷ್ಯವೇನು? ಪ್ರಾಜ್ಞರು ಈ ಬಗ್ಗೆ ಚಿಂತಿಸುವ ಅಗತ್ಯವಿದೆ. ನಾನು ಹುಟ್ಟಿನಿಂದ ಲಿಂಗಾಯತನಾದರೂ ನನ್ನನ್ನು ‘ಹಿಂದೂ’ ಎಂದು ಕರೆಸಿಕೊಳ್ಳಲು ಹೆಮ್ಮೆಪಡುತ್ತೇನೆ.
(ಲೇಖಕರು ಹಿರಿಯ ಸಂಶೋಧಕರು)
Saturday, 06.01.2018, विजयवाणी  

No comments:

Post a Comment

सिध्देश्वर स्वामीजी चराचरात

२० जानेवारी २०२३  बालगाव आश्रमात गुरुवंदना  ज्ञानयोगी श्री सिद्धेश्वर स्वामीजी लिंगैक्य झाल्यानिमित्त बालगाव - कात्राळ (ता. जत) येथील श्री ग...