Wednesday 14 March 2018

ಸಮುದಾಯ ವಿಭಜಿಸುತ್ತಿರುವ ಪ್ರತ್ಯೇಕ ಧರ್ಮ ಹೋರಾಟ!

ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ?
ತನಗಾದ ಆಗೇನು? ಅವರಿಗಾದ ಚೇಗೇನು?
ತನುವಿನ ಕೋಪ ತನ್ನ ಹಿರಿತನದ ಕೇಡು.
ಮನದ ಕೋಪ ತನ್ನ ಅರಿವಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರಮನೆಯ ಸುಡದು ಕೂಡಲ ಸಂಗಮದೇವಾ.
ಪ್ರತ್ಯೇಕ ಧರ್ಮಕ್ಕಾಗಿ ವೀರಶೈವ ಮತ್ತು ಲಿಂಗಾಯತರ ನಡುವೆ ನಡೆದಿರುವ ಹೋರಾಟದ ಈ ಸಂದರ್ಭಕ್ಕೆ ಬಸವಣ್ಣನವರ ಈ ವಚನ ಬಹಳ ಚೆನ್ನಾಗಿ ಹೋಲುತ್ತದೆ. ರಾಜಕಾರಣಿಗಳಿಂದ, ರಾಜಕೀಯ ಕಾರಣಗಳಿಗಾಗಿ, ಪಕ್ಷ ರಾಜಕಾ ರಣದ ಹುನ್ನಾರದಿಂದ ಉತ್ತೇಜಿತವಾಗಿರುವ ಈ ಹೋರಾಟವು ತನ್ನ ಪಾಡಿಗೆ ತಾನಿದ್ದ ಸಮುದಾಯದಲ್ಲಿ ಕೊಳ್ಳಿ ಹಚ್ಚಿದೆ. ಇಲ್ಲಿ ಧರ್ಮಗುರುಗಳು, ಪೀಠಾಧಿ ಪತಿಗಳು, ಸಾಹಿತಿಗಳು, ಶಿಕ್ಷಣ ತಜ್ಞರು, ವಿಚಾರವಂತರು, ಜನಪ್ರತಿನಿಧಿಗಳು ಇಬ್ಭಾಗವಾಗಿ ಹೋಗಿದ್ದಾರೆ. ಅವರೊಡನೆ ಸಮುದಾಯವೂ ಅಡ್ಡಡ್ಡ, ಉದ್ದುದ್ದ ವಿಭಜನೆಯಾಗಿದೆ. ಸೈದ್ಧಾಂತಿಕ ನೆಲೆಗಟ್ಟನ್ನು ಪಕ್ಕಕ್ಕಿರಿಸಿ, ಸ್ವತಂತ್ರ ಧರ್ಮ ವಿಚಾರದ ಸುತ್ತ ಸ್ವಾರ್ಥ, ಪ್ರಲೋಭನೆಯ ಜೇಡರ ಬಲೆ ನೇಯ್ದಿರುವ ರಾಜಕಾರಣಿಗಳ ಒಳಮರ್ಮ ಅರಿಯದ ಸಮುದಾಯದ ಒಳಗೆ ಹೊತ್ತಿರುವ ಕಿಚ್ಚು ಬಸವಣ್ಣನವರ ಮೇಲಿನ ವಚನದ ಕೊನೆಯ ಎರಡು ಸಾಲಿನ ಪ್ರತೀಕವಾಗಿ ನಿಂತಿದೆ.
ನಿಜ, ಲಿಂಗಾಯತ ಮತ್ತು ವೀರಶೈವ ಬಣಗಳ ನಡುವೆ ಲಾಗಾಯ್ತಿನಿಂದಲೂ ಸಾಕಷ್ಟು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇದ್ದವು. ಈ ಚರ್ಚೆಗೆ ಶತಮಾನಗಳ ಇತಿಹಾಸವಿದೆ. ಇಲ್ಲಿ ವೈಚಾರಿಕ ಸ್ಪಷ್ಟತೆಗಾಗಿ ವಾದ, ಪ್ರತಿವಾದ, ಸಂವಾದ ನಡೆಯುತ್ತಾ ಬಂದಿತ್ತು. ಆದರೆ ಯಾವಾಗ ಇದಕ್ಕೆ ರಾಜಕೀಯ ಲೇಪ ಹಚ್ಚಿಕೊಂಡಿತೋ ಸೈದ್ಧಾಂತಿಕ ಭಿನ್ನಾಭಿಪ್ರಾಯದಲ್ಲೂ ಮತಗಳ ಅನ್ವೇಷಣೆ ಶುರುವಾಯಿತು. ಈ ಮತಗಳ ಅನ್ವೇಷಣೆ ಶುರುವಾಗುತ್ತಿದ್ದಂತೆ ವಾದ, ಪ್ರತಿವಾದ, ಸಂವಾದದ ಜಾಗವನ್ನು ಜಗಳ ಆಕ್ರಮಿಸಿಕೊಂಡಿತು. ಹೀಗಾಗಿ ಈಗ ದಿನಬೆಳಗಾದರೆ ಬರೀ ಜಗಳ, ಜಗಳ, ಜಗಳ. ಸಮುದಾಯಕ್ಕೆ ಒಳಿತು ಮಾಡಬೇಕು ಎನ್ನುವ ಹೃದಯ ವೈಶಾಲ್ಯ ಯಾವ ರಾಜಕೀಯ ಪಕ್ಷಕ್ಕೂ ಇಲ್ಲ, ಯಾವ ರಾಜಕಾರಣಿಗೂ ಇಲ್ಲ. ಬರೀ ಮತ ಹುಡುಕುವುದಷ್ಟೇ. ಇಂಥ ರಾಜಕೀಯ ನಿರತರಲ್ಲಿ ಬಹುತೇಕರು ಸಮುದಾಯದವರೇ ಆಗಿದ್ದಾರೆ ಎನ್ನುವುದು ಇನ್ನೂ ದುರಂತದ ವಿಷಯ.
ಈವರೆಗೂ ಈ ರಾಜಕಾರಣಿಗಳು ಸಮುದಾಯ ಹಿತದ ವಿಚಾರ ಬಂದಾಗ ರಾಜಕೀಯ ಪಕ್ಕಕ್ಕಿಟ್ಟು ಒಗ್ಗೂಡುತ್ತಿದ್ದರು. ಅವರು ಯಾವುದೇ ಪಕ್ಷದಲ್ಲಿರಲಿ ಸಮುದಾಯ ಮೊದಲು, ನಂತರ ರಾಜಕೀಯ ಎನ್ನುತ್ತಿದ್ದರು. ಹೀಗಾಗಿ ಅದು ಸಮುದಾಯ ಪ್ರಾತಿ ನಿಧ್ಯದ ಸಿದ್ದಗಂಗಾ ಮಠವಿರಲಿ, ಸುತ್ತೂರು ಮಠವಿರಲಿ, ಮೂರು ಸಾವಿರ ಮಠವಿರಲಿ, ಮುರುಘಾ ಮಠವಿರಲಿ, ತರಳಬಾಳು ಮಠವಿರಲಿ, ಬೇರಾವುದೇ ಮಠವಿರಲಿ, ಕೊನೆಗೆ ಅಖಿಲ ಭಾರತ ವೀರಶೈವ ಮಹಾಸಭಾ ಇರಲಿ – ಪಕ್ಷಬೇಧ ಮರೆತು ಎಲ್ಲಿ ಎಲ್ಲರೂ ಒಗ್ಗೂಡುತ್ತಿದ್ದರು. ಆಚಾರ-ವಿಚಾರಗಳು ಏನೇ ಇರಲಿ ಒಗ್ಗಟ್ಟಿನ ವಿಚಾರ ಬಂದಾಗ ಎಲ್ಲರ ಕೈಗಳೂ ಜತೆಯಾಗುತ್ತಿದ್ದವು. ಆದರೆ ಇತ್ತೀಚೆಗೆ ಲಿಂಗಾಯತ ಪ್ರಾಬಲ್ಯವಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಮರುಚುನಾವಣೆಯಲ್ಲಿ ಈ ಸಮುದಾಯದ ಮತಗಳನ್ನು ಯಶಸ್ವಿಯಾಗಿ ವಿಭಜಿಸಿ ಗೆಲವು ದಾಖಲಿಸಿದ ಕಾಂಗ್ರೆಸ್ ತಲೆಯಲ್ಲಿ ಬೇರೆಯದೇ ವಿಚಾರ ಅರಳಲು ಶುರುಮಾಡಿತು.
ಅಷ್ಟೊತ್ತಿಗಾಗಲೇ ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋ ಹಾಕುವ ಆದೇಶ, ವಿಜಯಪುರ ಮಹಿಳಾ ವಿವಿಗೆ ಅಕ್ಕಮಹಾದೇವಿ ನಾಮಕರಣ, ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ನಿರ್ಧಾರದ ಮೂಲಕ ಲಿಂಗಾಯತ ಸಮುದಾಯವನ್ನು ಸೆಳೆಯಲು ಯತ್ನಿಸಿದ್ದ ಸಿದ್ದರಾಮಯ್ಯ ಸರಕಾರಕ್ಕೆ ನಂಜನಗೂಡು, ಗುಂಡ್ಲುಪೇಟೆ ಮರುಚುನಾವಣೆ ಗೆಲವು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ತಂತ್ರ ಹೆಣೆಯಲು ಪ್ರೇರಣೆ ನೀಡಿತು. ಮರುಚುನಾವಣೆಯಲ್ಲಿ ಯಡಿಯೂರಪ್ಪ ಏನೆಲ್ಲ ತಂತ್ರ ಮಾಡಿದರೂ ಬಿಜೆಪಿಗೆ ಗೆಲವು ತಂದುಕೊಡಲು ಆಗಿರಲಿಲ್ಲ. ಇದನ್ನೇ ಮುಂದಿನ ಚುನಾವಣೆಗೂ ರಣತಂತ್ರ ಹೆಣೆಯಲು ಬುನಾದಿ ಮಾಡಿಕೊಂಡ ಕಾಂಗ್ರೆಸ್ ಸರಕಾರ ಕೈ ಹಾಕಿದ್ದೇ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಇಂಬುಗೊಡುವ ವಿಚಾರಕ್ಕೆ. ಅದಾದ ನಂತರ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎನ್ನದೇ ಎಲ್ಲ ರಾಜಕೀಯ ಪಕ್ಷಗಳ ಒಳಗೆ ಮತ್ತು ಹೊರಗೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವೇ ಮತರಾಜಕಾರಣದ ಕೇಂದ್ರಬಿಂದುವಾಗಿ ಪರಿಣಮಿಸಿದೆ.
ಇದರಿಂದ ಯಾರಿಗೆ ಎಷ್ಟು ಲಾಭವಾಗುತ್ತದೋ ಬಿಡುತ್ತದೋ ಅದು ಬೇರೆ ವಿಚಾರ. ಆದರೆ ಸಮುದಾಯ ಮಾತ್ರ ಇದೇ ಮೊದಲ ಬಾರಿಗೆ ವಿಭಜನೆಯ ಹಾದಿಯಲ್ಲಿದೆ.  ತತ್ಪರಿಣಾಮ ದಿನ ಬೆಳಗಾದರೆ ವೀರಶೈವ ಪ್ರತಿಪಾದಕರು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಗಾರರ ಮೇಲೆ, ಅವರು ಇವರ ಮೇಲೆ ವಾಗ್ಮಳೆ ಸುರಿಸುತ್ತಿದ್ದಾರೆ. ಪಕ್ಷಗಳ ಆಧಾರದ ಮೇಲೆ ರಾಜಕೀಯ ನಡೆಯುತ್ತಿರು ವುದು ಒಂದು ಕಡೆಯಾದರೆ, ನಿರ್ದಿಷ್ಟ ಪಕ್ಷದೊಳಗೂ ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್‌ನೊಳಗೆ ವೀರಶೈವ, ಲಿಂಗಾಯತ ಬಣ ನಾಯಕರು ಪರಸ್ಪರ ಕೆಸರೆರಾಚಾಟದಲ್ಲಿ ನಿರತರಾಗಿದ್ದಾರೆ. ಪರಸ್ಪರ ನಿಂದನೆಯೇ ಪ್ರಾತಃಸ್ತುತಿ ಎನ್ನುವಂತಾಗಿದೆ. ಧರ್ಮ ಶ್ರದ್ಧಾ ಕೇಂದ್ರಗಳ ಅಧಿಪತಿಗಳಾದ ಮಠಾಧೀಶರು ಕೂಡ ಇದರ ಭಾಗವಾಗಿ ಹೋಗಿರುವುದು ಇನ್ನೂ ನೋವಿನ ವಿಚಾರ.
ಧರ್ಮ ಮತ್ತು ರಾಜಕೀಯ ಬೆರೆಸಬಾರದು, ಹೆಚ್ಚೆಂದರೆ ಒಂದಕ್ಕೊಂದು ಪೂರಕವಾಗಿರಬೇಕು ಅನ್ನೋದು ಶತ-ಶತಮಾಗಳಿಂದ ಕೇಳಿ ಬಂದಿರುವ ವಿಚಾರ. ಇದು ಹೇಳೋದಿಕ್ಕೆ ಮತ್ತು ಕೇಳೋದಿಕ್ಕೆ ಬಹಳ ಚೆನ್ನಾಗಿದೆ. ಆದರೆ ಅನುಷ್ಠಾನದ ವಿಚಾರಕ್ಕೆ ಬಂದಾಗ ಮಾತ್ರ ಮಾತು ಮತ್ತು ಕೃತಿಗೆ ಎಣ್ಣೆ ಸೀಗೆಕಾಯಿ ಸಂಬಂಧ. ಧರ್ಮ ಮತ್ತು ರಾಜಕೀಯ ಬೆರೆಸಬಾರದು ಎಂದು ಹೇಳ-ಹೇಳುತ್ತಲೇ ಎರಡನ್ನೂ ಕಲಸಿ ಮೇಲೊಗರ ಮಾಡಿ ಅದರಲ್ಲಿ ರಾಜಕೀಯ ಬೆಳೆ ತೆಗೆವ ವಿಕ್ಷಿಪ್ತ ಮನೋಭಾವ ಹಿಂದೆಯೂ ಇತ್ತು, ಈಗಲೂ ಇದೆ. ಆದರೆ ಇದರ ಫಲಾಫಲ ಇಂಥ ಪ್ರಯತ್ನಗಳಿಗೆ ವಸ್ತು-ಅಸ್ತ್ರವಾಗುವವರ ಮನಸ್ಥಿತಿಯ ಮೇಲೆ ಅವಲಂಬಿತ ಆಗುತ್ತಿತ್ತು. ದುರ್ಬಲ ಮನಸ್ಸುಗಳು ಬಲಿಪಶುಗಳಾಗುತ್ತಿದ್ದವು, ಗಟ್ಟಿ ಮನಸ್ಸುಗಳು ಬಲಿಪಶು ಮಾಡಲು ಬಂದವರನ್ನೇ ಬಲಿ ಹಾಕಿ ಅವರ ಸ್ಥಾನ ಏನೆಂಬುದನ್ನು ತೋರಿಸಿಕೊಡುತ್ತಿದ್ದವು.
ಆದರೆ ಯಾವಾಗ ಧರ್ಮ ಮತ್ತು ರಾಜಕೀಯ ವಾರಸುದಾರರು ಪರಸ್ಪರ ಪೊಡಮೊಡಲು ಶುರುಮಾಡಿದರೋ, ಕೊಡುಕೊಳ್ಳುವಿಕೆ ಎಂಬುದು ಎರಡರ ನಡುವಣ ಅಂತರವನ್ನು ಕತ್ತರಿಸಿಬಿಸಾಕಿದೆ. ಹೀಗಾಗಿ ಧರ್ಮದಲ್ಲಿ ರಾಜಕಾರಣಿಗಳು, ರಾಜಕೀಯದಲ್ಲಿ ಧರ್ಮಗುರುಗಳು ಸಲೀಸಾಗಿ ಕೈ ಆಡಿಸುತ್ತಿದ್ದಾರೆ. ಜತೆಗೆ ಒಬ್ಬರ ಮೇಲೊಬ್ಬರು ಸವಾರಿಯನ್ನೂ ಮಾಡುತ್ತಿದ್ದಾರೆ. ಮುಲಾಜು ರಿವಾಜನ್ನು ಪಕ್ಕಕ್ಕೆ ಸರಿಸಿದೆ. ರೀತಿನೀತಿಗಳು ದಾಕ್ಷಿಣ್ಯದ ಆಡಿಯಾಳಾಗಿವೆ. ಹೀಗಾಗಿ ಧರ್ಮ ಮತ್ತು ರಾಜಕಾರಣ ಬೇರ್ಪಡಿಸಿ ನೋಡಲಾಗದಷ್ಟು ಮಿಳಿತವಾಗಿದ್ದು, ತಮ್ಮ ಸ್ವಂತಿಕೆಯನ್ನು ಕಳೆದುಕೊಂಡಿವೆ.
ಯಾರೋ ಇಬ್ಬರು ಜಗಳ ಮಾಡಿಕೊಳ್ಳುವಾಗ ಮೂರನೇ ವ್ಯಕ್ತಿ ಲಾಭ ಮಾಡಿಕೊಳ್ಳುವುದನ್ನು ಕಂಡಿದ್ದೇವೆ, ಕೇಳಿದ್ದೇವೆ. ಆದರೆ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಹಾನಿ ಆಗುವುದೂ ನಡೆದು ಹೋಗಿದೆ. ನೂರತ್ತು ವರ್ಷ ಪೂರೈಸಿರುವ ತುಮಕೂರು ಸಿದ್ದಗಂಗಾ ಶ್ರೀಗಳು ನಡೆದಾಡುವ ದೇವರು ಎಂದೇ ಪ್ರಸಿದ್ಧರು. ಸಮುದಾಯ ಅವರಲ್ಲಿಯೇ ಬಸವಣ್ಣನವರನ್ನು ಕಂಡಿದೆ. ಬರೀ ಸಮುದಾಯಕ್ಕಷ್ಟೇ ಅಲ್ಲ, ಎಲ್ಲರಿಗೂ ಅವರ ಬಗ್ಗೆ ಪೂಜ್ಯ ಭಾವನೆ, ಅನನ್ಯ ಗೌರವ. ಅಂತಹ ಶ್ರೀಗಳನ್ನು ಅವರ ಪಾಡಿಗೆ ಅವರಿರಲು ಬಿಡದೆ ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಎಳೆದು ತಂದಿರುವ ರಾಜಕಾರಣಿಗಳ ಕೆಲಸ ಕ್ರೌರ್ಯದ ಪ್ರತೀಕವಾಗಿ ಕಂಡಿದೆ. ಅದು ಕಾಂಗ್ರೆಸ್ ಆದರೂ ಆಗಿರಲಿ, ಬಿಜೆಪಿಯಾದರೂ ಆಗಿರಲಿ ಶ್ರೀಗಳನ್ನು ತಮ್ಮ ಧರ್ಮ ಸಂಘರ್ಷಕ್ಕೆ ಎಟುಕಿಸಿಕೊಳ್ಳಬಾರದಿತ್ತು.
ಅವರ ಪಾಡಿಗೆ ಅವರು ಅನ್ನ, ಅಕ್ಷರ ದಾಸೋಹ ಮಾಡಿಕೊಂಡು ಹೋಗುತ್ತಿದ್ದಾರೆ. ಲಕ್ಷಾಂತರ ಮಂದಿಯ ಬಾಳಿಗೆ ಬೆಳಕಾಗಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅಂಥವರನ್ನು ಅಸ್ತ್ರ ಮಾಡಿಕೊಳ್ಳಲು ಯೋಚಿಸುವುದೇ ತಪ್ಪು. ಅಂತಾದ್ದರಲ್ಲಿ ಅವರನ್ನು ಅನಗತ್ಯ ವಿವಾದಕ್ಕೆ ಸಿಲುಕಿಸಿದ್ದು ಅಕ್ಷಮ್ಯ. ವಯೋಸಹಜ ನೆನಪು ಮತ್ತು ಬುದ್ದಿಶಕ್ತಿ ಸವಾಲಾಗಿರುವ ಸಂದರ್ಭದಲ್ಲಿ ಅನ್ಯರು ಅವರನ್ನು ದುರ್ಬಳಕೆ ಮಾಡಿಕೊಳ್ಳಲು ಮಠದ ಕಿರಿಯ ಸ್ವಾಮೀಜಿಗಳು ಹಾಗೂ ಆಡಳಿತಾಧಿಕಾರಿಗಳೂ ಸಹ ಅವಕಾಶ ಮಾಡಿಕೊಡಬಾರದಿತ್ತು.
ಈ ವಿಚಾರ ಪಕ್ಕಕ್ಕಿರಲಿ, ಇದೀಗ ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕೆನ್ನುವ ರಾಜಕಾರಣಿಗಳಲ್ಲಿ ಕಾಂಗ್ರೆಸ್ಸಿಗರದೇ ಸಿಂಹಪಾಲು. ಮುಂದಿನ ಚುನಾವಣೆಯಲ್ಲಿ ಸಮುದಾಯದ ಮತಗಳನ್ನು ಸ್ವಲ್ಪ ಮಟ್ಟಿಗಾದರೂ ಸೆಳೆಯಬಹುದೆಂಬ ಚಿಂತನೆ ಇವರದು. ಆದರೆ ಬಿಜೆಪಿಯದ್ದು ವ್ಯತಿರಿಕ್ತ ನಿಲುವು. ವೀರಶೈವ-ಲಿಂಗಾಯತ ಹಿಂದೂ ಧರ್ಮದ ಭಾಗ ಎನ್ನೋದು ಅವರ ವಾದ. ಇಲ್ಲಿ ವ್ಯಕ್ತಿಗತ ಯೋಚನೆಗಿಂಥ ಪಕ್ಷಗತ ಚಿಂತನೆಯದೇ ಮೇಲುಗೈ. ಬಿಜೆಪಿ ಪ್ರತಿಪಾದಿಸುವ ಹಿಂದೂ ಧರ್ಮ, ಹಿಂದೂ ರಾಷ್ಟ್ರ, ಹಿಂದುತ್ವದ ಹೊರಗೆ ವೀರಶೈವ-ಲಿಂಗಾಯತ ಧರ್ಮವನ್ನು ನೋಡಲು ಅವರಿಗೆ ಆಗುತ್ತಿಲ್ಲ. ಅವರಿಗೆ ಆಗುತ್ತಿಲ್ಲ ಎನ್ನುವು ದಕ್ಕಿಂತ ಅದಕ್ಕೆ ಅವಕಾಶವಾಗುತ್ತಿಲ್ಲ. ಅದು ಸ್ವತಂತ್ರ ಧರ್ಮವಾದರೆ ಹಿಂದೂ ಧರ್ಮದ ಭಾಗ ಎನ್ನುವುದರ ಕಿಮ್ಮತ್ತು ಕಳೆದು ಹೋಗುತ್ತದೆ. ಈ ಸೂಕ್ಷ್ಮವನ್ನು ರಾಜಕೀಯವಾಗಿ ಅರ್ಥ ಮಾಡಿಕೊಂಡಿರುವ ಎದುರಾಳಿ ಗುಂಪು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಇಳಿದಿದೆ. ಅಲ್ಲಿಯೂ ಮತರಾಜಕೀಯವೇ ರಾರಾಜಿಸುತ್ತಿದೆ.
ಹಿಂದೆ ಪ್ರತ್ಯೇಕ ಧರ್ಮ ಪ್ರತಿಪಾದಿಸಿದ ವೀರಶೈವರು ಮೂರು ಬಾರಿ ಕೋರ್ಟ್‌ನಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಹೀಗಾಗಿ ಲಿಂಗಾಯತರಿಗೆ ಇವರನ್ನು ಒಟ್ಟಿಗೆ ಕರೆದುಕೊಂಡು ಹೋದರೆ ಬೆನ್ನಿಗೆ ಕಲ್ಲು ಕಟ್ಟಿಕೊಂಡು ಹೊಳೆಗೆ ಹಾರಿದಂತೆ ಎಂಬ ಭಾವ. ಪ್ರತ್ಯೇಕ ಧರ್ಮ ಸ್ಥಾನಮಾನ ಸಿಗದು ಎಂಬ ನಂಬಿಕೆ. ಹೀಗಾಗಿ ಹನ್ನೆರಡನೇ ಶತಮಾನಕ್ಕೂ ಮೊದಲೇ ಇತ್ತು ಎಂಬ ವೀರಶೈವರ ವಾದವನ್ನು ಅವರಿಗೇ ತಿರುಗಿಸಿದ್ದಾರೆ. ನಮ್ಮದು ಬಸವಣ್ಣನವರ ನಂತರ ಅಂದರೆ ಹನ್ನೆರಡನೇ ಶತಮಾನದಿಂದೀಚೆಗೆ ಶುರುವಾದದ್ದು. ನಿಮ್ಮದು ಪುರಾತನ. ನಿಮ್ಮ ತತ್ವ, ಸಿದ್ಧಾಂತ ಧಿಕ್ಕರಿಸಿದ ಬಸವತತ್ವ ನಮ್ಮದು. ಹೀಗಾಗಿ ನಿಮ್ಮ ಪಾಡಿಗೆ ನೀವಿರಿ, ನಿಮ್ಮ ಉಸಾಬರಿ ನಮಗೆ ಬೇಡ. ಒಂದೊಮ್ಮೆ ಬರುವುದಾದರೆ ನಾವು ಪ್ರತಿಪಾದಿಸುವ ಬಸವತತ್ವ ಒಪ್ಪಿ ನಮ್ಮೊಳಗೆ ಒಂದಾಗಿ ಎಂಬ ಷರತ್ತು ಹಾಕುತ್ತಿದ್ದಾರೆ. ಆದರೆ ಇದು ವೀರಶೈವರಿಗೆ ಸಹ್ಯವಾಗುತ್ತಿಲ್ಲ. ಈ ವೈರುಧ್ಯಗಳನ್ನೇ ಹಿಡಿದುಕೊಂಡಿರುವ ರಾಜಕಾರಣಿಗಳು ಪಕ್ಷ ರಾಜಕಾರಣದ ಆಧಾರದ ಮೇರೆಗೆ ಸಮುದಾಯವನ್ನು ವಿಭಜಿಸಿ ಅದರಲ್ಲಿ ಮತಗಳನ್ನು ಎಣಿಸುವ ಕಾಯಕದಲ್ಲಿ ನಿರತರಾಗಿದ್ದಾರೆ!
ನಿಜ, ಸಿದ್ದರಾಮಯ್ಯ ಸರಕಾರದ ಪ್ರತಿನಿಧಿಗಳಿಂದಲೇ ಮುನ್ನಲೆಗೆ ಬಂದ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಯಡಿ ಯೂರಪ್ಪ, ಜಗದೀಶ ಶೆಟ್ಟರ್ ಸೇರಿದಂತೆ ಬಿಜೆಪಿ ನಾಯಕರಾರೂ ಆರಂಭದಲ್ಲಿ ಉಸಿರೇ ಎತ್ತಲಿಲ್ಲ. ಬರೀ ಇದೊಂದೇ ವಿಚಾರ ಅಲ್ಲ. ದೇಶಭಕ್ತಿ, ದೇಶಭಾಷೆ ಜತೆ ಥಳಕು ಹಾಕಿಕೊಂಡ ನಾಡಧ್ವಜ, ಹಿಂದಿ ಹೇರಿಕೆ ವಿಷಯದಲ್ಲೂ ದಿಲ್ಲಿಯಿಂದ ಹೇರಲ್ಪಟ್ಟ ಮೌಖಿಕ ಆದೇಶ ಅವರ ಬಾಯಿಯನ್ನು ಕಟ್ಟಿಹಾಕಿತ್ತು. ಆದರೆ ಈ ಸನ್ನಿವೇಶ ಸದ್ಬಳಕೆ ಮಾಡಿಕೊಂಡ ಕಾಂಗ್ರೆಸ್ ನಾಯಕರು ಲಿಂಗಾಯತ ಪ್ರತ್ಯೇಕ ಧರ್ಮ ಪ್ರತಿಪಾದನೆ ಮೂಲಕ ಬಿಜೆಪಿಯ ಲಿಂಗಾಯತ ಮತಕಣಜಕ್ಕೆ ಕೈ ಹಾಕಿದರು. ಈಗ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರಿಗೆ ಸುಮ್ಮನಿರಲಾಗಲಿಲ್ಲ.
ತಾವು ಹೀಗೇ ಮುಂದುವರಿಸುವ ಮೌನಯಾತ್ರೆ ಕಾಂಗ್ರೆಸ್ ಮತಯಾತ್ರೆಗೆ ದಾರಿಯಾಗುತ್ತದೆ ಎಂದೆಣಿಸಿ ಕಾಂಗ್ರೆಸ್ ಮುಖಂಡರು ಅಖಾಡ ಮಾಡಿಕೊಂಡ ಸಿದ್ದಗಂಗಾ ಮಠದಿಂದಲೇ ಪ್ರತಿಹೋರಾಟಕ್ಕೆ ಧುಮುಕಿದ್ದಾರೆ. ಯಡಿಯೂರಪ್ಪನವರು ಇಳಿದ ನಂತರವಷ್ಟೇ ಹೋರಾಟ ಕಾವು ಪಡೆದುಕೊಂಡಿದೆ. ಸಿದ್ದಗಂಗಾ ಮಠದಿಂದಲೂ ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂಬ ಪ್ರಕಟಣೆ ಹೊರಬಿದ್ದಿದೆ. ಇಲ್ಲಿ ವೀರಶೈವ ಬಣ ಪ್ರತಿಪಾದಕರಾಗಲಿ, ಲಿಂಗಾಯತ ಬಣ ಹೋರಾಟಗಾರರಾಗಲಿ ಒಂದು ವಿಚಾರ ಅರ್ಥ ಮಾಡಿಕೊಳ್ಳಬೇಕು. ಬೆಂದ ಮನೆಯಲ್ಲಿ ಗಳ ಹಿರಿಯುವ ರಾಜಕೀಯ ಹುನ್ನಾರವನ್ನು ಅರ್ಥ ಮಾಡಿಕೊಳ್ಳಬೇಕು. ಈಗಾಗಲೇ ಲಿಂಗಾಯತ ಮತ್ತು ವೀರಶೈವ ಪ್ರತ್ಯೇಕ ಧರ್ಮ ವಿಚಾರ ಕುರಿತು ಒಂದು ನಿಲುವಿಗೆ ಬರಲು ರಾಜ್ಯ ಸರಕಾರ ರಚಿಸಲು ಹೊರಟಿರುವ ತಜ್ಞರ ಸಮಿತಿಯನ್ನು ಮೊದಲು ಒಪ್ಪಿಕೊಳ್ಳಬೇಕು. ಇದರಲ್ಲಿ ವೀರಶೈವ ಮತ್ತು ಲಿಂಗಾಯತ ಪರಂಪರೆ, ತತ್ವ-ಸಿದ್ಧಾಂತವನ್ನು ಆಳವಾಗಿ ಅಧ್ಯಯನ ಮಾಡಿರುವ ಪರಿಣಿತರಿರುತ್ತಾರೆ.
ರಾಜಕೀಯ, ಧರ್ಮ, ವರ್ಣ ಸಂಘರ್ಷದಿಂದಾಚೆಗೆ ವಿಚಾರವನ್ನು ಪರಾಮರ್ಶಿಸುವ ಬುದ್ದಿಮತ್ತೆ ಈ ಸಮಿತಿಗಿರುತ್ತದೆ. ಆ ಸಮಿತಿ ವರದಿ ಕೊಡುವವರೆಗಾದರೂ ಸುಮ್ಮನಿರಬೇಕು. ವರದಿ ಬಂದ ನಂತರ ಆ ಬಗ್ಗೆ ವಾದ-ಪ್ರತಿವಾದ, ಸಂವಾದ ಇರಲಿ. ಆದರೆ ಅದಕ್ಕಿಂತ ಮಿಗಿಲಾಗಿ ಸಂಯಮ ಮೆರೆಯಲಿ. ಇದರಿಂದ ಸಮುದಾಯಕ್ಕೂ ಒಳಿತು. ಸಮಾಜಕ್ಕೂ ಒಳಿತು. ಇಲ್ಲದಿದ್ದರೆ, ಬಸವಣ್ಣನವರು ಹೇಳಿದಂತೆ ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರಮನೆಯ ಸುಡದು!
ಲಗೋರಿ : ಅಕ್ರೋಶ ಗೆಲ್ಲದ್ದನ್ನು ಸಂಯಮ ಮಲಗಿಸುತ್ತದೆ.

No comments:

Post a Comment

सिध्देश्वर स्वामीजी चराचरात

२० जानेवारी २०२३  बालगाव आश्रमात गुरुवंदना  ज्ञानयोगी श्री सिद्धेश्वर स्वामीजी लिंगैक्य झाल्यानिमित्त बालगाव - कात्राळ (ता. जत) येथील श्री ग...