Saturday, 25 February 2017

ಮುಸ್ಲಿಮ್ ಆಕ್ರಮಣಕಾರರ ದಾಳಿಗೊಳಗಾದ ಶರಣ ಕ್ಷೇತ್ರಗಳು

ಹಿಂದೂಗಳ ಪವಿತ್ರ ಕ್ಷೇತ್ರಗಳಾದ ವಾರಣಾಸಿ (ಕಾಶಿ), ಅಯೋಧ್ಯೆ (ಔಧ್), ನೇಪಾಳದ ಕಠ್ಮಂಡು ಇತ್ಯಾದಿ ಕಡೆ ಹಿಂದೂ ಪವಿತ್ರ ಸ್ಥಾನಗಳನ್ನು ಮುಸ್ಲಿಮರು ಹಾಳು ಮಾಡಿ ಅಪವಿತ್ರಗೊಳಿಸಿರುವ ಸಾವಿರಾರು ಉದಾಹರಣೆಗಳಿವೆ. ಕರ್ನಾಟಕದಲ್ಲಿಯೇ ಹಂಪಿಯಂತಹ ನೂರಾರು ಕಡೆ ಅಂತಹ ಕೃತ್ಯಗಳು ನಡೆದಿವೆ. ಇದೆಲ್ಲ ಎಲ್ಲರಿಗೂ ಗೊತ್ತಿರುವ ವಿಷಯಗಳು; ಬಹಿರಂಗವಾಗಿ ಹೇಳಲು ಹಿಂಜರಿಯುವ ಸಂಗತಿಗಳು. ಕರ್ನಾಟಕದಲ್ಲಿ ವೀರಶೈವರಿಗೆ ಪೂಜ್ಯವಾದ ಹಲವು ಶರಣ ಕ್ಷೇತ್ರಗಳೂ ಹಾಗೆ ಆಕ್ರಮಣಕ್ಕೊಳಗಾಗಿರುವ ಸಂಗತಿ ಬಹಳ ಜನಕ್ಕೆ ತಿಳಿಯದು. ಶರಣ ಕ್ಷೇತ್ರಗಳ ಬಗ್ಗೆ ಕ್ಷೇತ್ರ ಕಾರ್ಯ ಮಾಡಿ ರಚಿಸಿರುವ ಡಾ. ಜಯಶ್ರೀ ನಂಡೆ ಮತ್ತು  ಡಾ. ವೀರಣ್ಣ ದೀಡೆಯವರ "12ನೇ ಶತಮಾನದ ಶರಣ ಸ್ಮಾರಕಗಳು (ಬಸವ ಕಲ್ಯಾಣದಿಂದ ಕೂಡಲಸಂಗಮದವರೆಗೆ)" ಕೃತಿಯಲ್ಲಿ ಅಲ್ಲಲ್ಲಿ ಉಲ್ಲೇಖವಾಗಿರುವ ಚಿತ್ರಸಮೇತ ಮಾಹಿತಿಯನ್ನು ಆಧರಿಸಿ ಈ ಕಿರುಲೇಖನ ರಚಿತವಾಗಿದೆ.
1. ಪರುಷಗಟ್ಟೆ: ಬೀದರ್ ಜಿಲ್ಲೆಯ ಬಸವಕಲ್ಯಾಣದ ಕೇಂದ್ರದಲ್ಲಿರುವ ಪರುಷಗಟ್ಟೆ ಎಂಬಲ್ಲಿ ಬಸವಣ್ಣ ಬಡವರಿಗೆ ಧನಸಹಾಯ ಮಾಡುತ್ತಿದ್ದರೆಂಬ ನಂಬಿಕೆ ಇದೆ. ಪರುಷಗಟ್ಟೆಯು ಮೊದಲು ಬಸವೇಶ್ವರ ದೇವಸ್ಥಾನದ ವಶದಲ್ಲಿದ್ದುದ್ದನ್ನು ಮುಸ್ಲಿಮರು ನ್ಯಾಯಾಲಯದಲ್ಲಿ 1948ರಲ್ಲಿ ಪ್ರಶ್ನಿಸಿ ಅದು ತಮಗೆ ಸೇರಬೇಕೆಂದು ದಾವೆ ಹೂಡಿದ್ದುದು ಇನ್ನೂ ಇತ್ಯರ್ಥವಾಗಿಲ್ಲ. ಅಲ್ಲೇ ಪಕ್ಕದಲ್ಲೇ ನಿತ್ಯವೂ ಗೋವಧೆ, ಪ್ರಾಣಿಬಲಿ, ಮಾಂಸಮಾರಾಟ ನಿರಂತರವಾಗಿ ನಡೆದಿದೆ. ಮೊದಲು ಪರುಷಗಟ್ಟೆಯು ದೊಡ್ಡ ಮಂಟಪವಾಗಿದ್ದು ಅದನ್ನು ಕಿತ್ತು ಅದರ ಕಲಾತ್ಮಕ ಕಂಬಗಳನ್ನು ಅಲ್ಲೇ ಚಲ್ಲಲಾಗಿದೆ. ಬಸವ ಕಲ್ಯಾಣಕ್ಕೆ ಹೋದಾಗ ಆ ಜಾಗದಲ್ಲಿ ನಾನು ತೀವ್ರ ಒಳನೋವು ಅನುಭವಿಸಿದೆ. ಸ್ಪಷ್ಟವಾಗಿದೆ-ಮೂಲತಃ ಪರುಷಕಟ್ಟೆ ಒಂದು ಶರಣ ಕ್ಷೇತ್ರ.
2. ಪೀರ ಪಾಶಾ ಬಂಗಲಾ: ಬಸವ ಕಲ್ಯಾಣದ ಬಸವೇಶ್ವರ ಗುಡಿ ಹಿಂದಿರುವ 'ಪೀರ ಪಾಶಾ ಬಂಗಲಾ'ವು ಹಿಂದೊಮ್ಮೆ ಶೈವ ಕ್ಷೇತ್ರವಾಗಿದ್ದಿತು. ಅಲ್ಲಿದ್ದ ನಂದಿ ವಿಗ್ರಹಕ್ಕೆ ಹಸಿರು ಬಟ್ಟೆ ಹೊದಿಸಿ ಮರೆಮಾಡಲಾಗಿದೆ. ನೆಲದ ಮೇಲೆ ಕನ್ನಡ ಅಂಕಿಗಳನ್ನು ಕೆತ್ತಲಾಗಿದೆ. ಅಲ್ಲಿನ ಮಂಟಪವು ಚಾಲುಕ್ಯ ಶೈಲಿಯ ಕೆತ್ತನೆಯದು. ಬಹುಶಃ ಹನ್ನೆರಡನೇ ಶತಮಾನದ್ದು. ಅಲ್ಲೇ ಮಂಟಪಕ್ಕೆ ಹೊಂದಿಕೊಂಡಂತೆ ಒಂದು ಚಾಲುಕ್ಯರ ಶಿಲಾಶಾಸನವಿದೆ.
3. ಬಸವಕಲ್ಯಾಣದ ಪಕ್ಕದಲ್ಲೇ ಕೋಟೆ ಇರುವ ಬೆಟ್ಟವಿದೆ. ಅಲ್ಲಿದ್ದ ಒಂದು ದೇವಾಲಯದ ಶಿವಲಿಂಗವನ್ನು ಕೆಲವು ವರ್ಷಗಳ ಹಿಂದೆ ಕಿತ್ತು ಹಾಕಲಾಗಿದೆ. (ನಾನು ಪ್ರತ್ಯಕ್ಷ ನೋಡಿರುವಂತೆ ಕೋಟೆಯ ಕಲ್ಲಿನ ಗೋಡೆ ಕಟ್ಟಲು ಭಗ್ನ ದೇವಾಲಯಗಳ ಅವಶೇಷಗಳನ್ನು ಬಳಸಲಾಗಿದೆ. ಚಾಲುಕ್ಯರ ಕಾಲದ ದೇವಾಲಯಗಳನ್ನು ಒಡೆದು ಅವುಗಳ ಅವಶೇಷಗಳನ್ನು ಬಳಸಲಾಗಿದೆ).
4. ವಚನಕಾರ ಒಕ್ಕಲಿಗ ಮುದ್ದಯ್ಯನ ಗುಡಿಯು ಬಸವಕಲ್ಯಾಣ ಸಮೀಪದ ನಾರಾಯಣಪುರದಲ್ಲಿದ್ದು ಅದೇ ಅವನ ಸಮಾಧಿ ಎಂದು ಜನ ನಂಬುತ್ತಾರೆ. ಅವನ ಶಿಷ್ಯ ಮೃತ್ಯುಂಜಯನ ಸಮಾಧಿಯೂ ಅಲ್ಲಿದೆ. ಮೃತ್ಯುಂಜಯನ ಗುಡಿ ಅಥವಾ ಸಮಾಧಿಯನ್ನು ಮುಸ್ಲಿಮರು ದರ್ಗಾವನ್ನಾಗಿ ಮಾಡಿಕೊಂಡಿದ್ದಾರೆ. ಮೃತ್ಯುಂಜಯ ಮಂದಿರವು 'ಮರ್ತುಜಾ ದರ್ಗಾ' ಎಂಬ ನಾಮಕರಣ ಪಡೆದಿದೆ. (ಮೃತ್ಯುಂಜಯ- ಮರ್ತುಜಾ).
5. ಬಸವಕಲ್ಯಾಣ ತಾಲೂಕಿನ ಹುಲಸೂರಿನಲ್ಲಿ ವಚನಕಾರ ಲದ್ಪೆಯ ಸೋಮನ ಸಮಾಧಿ ಇದೆ. ಅಲ್ಲಿ ಗುಡಿಯ ಹಿಂದೆ ಭಗ್ನ ಉಮಾ ಮಹೇಶ್ವರ ಶಿಲ್ಪವಿದ್ದು ಅದು ನಿಜಾಮರ ಕಾಲದಲ್ಲಿ ರಜಾಕಾರರ ಹಾವಳಿಯಿಂದ ನಾಶವಾದ ದೇವಾಲಯದ ಭಾಗವಾಗಿದೆ.
6. ಬೀದರ್ ತಾಲೂಕಿನ ಅಷ್ಟೂರಿನಲ್ಲಿ ಅಲ್ಲಮ ಪ್ರಭುವಿನ ಸ್ಮಾರಕವು ಸುಲ್ತಾನ ಅಹ್ಮದ್ ಶಹಾವಲಿ ಬಹಮನಿ ದರ್ಗಾ ಆಗಿ ಪರಿಣಮಿಸಿದೆ. ಅಲ್ಲಿ ಸಾಂಪ್ರದಾಯಕವಾಗಿ ಹಿಂದಿನಂತೆ ಹಿಂದೂಗಳು ಪೂಜೆ ಮಾಡುತ್ತಾರೆ; ಮುಸಲ್ಮಾನರ ವಶದಲ್ಲಿರುವ ಆ ದರ್ಗಾದಲ್ಲಿ ಮುಸ್ಲಿಮರು ನಮಾಜ್ ಮಾಡುತ್ತಾರೆ. (ಇಂಥವನ್ನು ಹಿಂದೂಮುಸ್ಲಿಮರ ಭಾವೈಕ್ಯತೆಯ ಸಂಕೇತವೆಂದೂ ಭಾವಿಸುವುದು ಉಚಿತವಲ್ಲ. ಅಂತಹ 'ಭಾವೈಕ್ಯ'ದ ಸ್ಥಳಗಳೆಂದು ಕೆಲವು ಹಿಂದೂಗಳು ಹೆಮ್ಮೆ ಪಡುವ ಜಾಗಗಳೆಲ್ಲ ಮುಸ್ಲಿಂ ಆಕ್ರಮಿತ ಹಿಂದೂ ಪವಿತ್ರ ಸ್ಥಾನಗಳು).
7. ಸುರಪುರ ತಾಲೂಕಿನ ಮುದನೂರು ಜೇಡರ ದಾಸಿಮಯ್ಯನಿದ್ದ ಜಾಗ. ಹಿಂದೆ ಅಗ್ರಹಾರವಾಗಿದ್ದು ಅಲ್ಲಿ 1001 ಲಿಂಗಗಳು ಹಲವು ತೀರ್ಥಗಳು ಇವೆ. ದಾಸಿಮಯ್ಯ ಹುಟ್ಟಿದ ಮನೆಯೆಂದು ಒಂದು ಮನೆಯನ್ನು ಜನ ತೋರಿಸುತ್ತಾರೆ. ಅವನ ಆರಾಧ್ಯ ದೈವ 'ರಾಮನಾಥನ ದೇವಾಲಯದ ಮಗ್ಗುಲಿಗೆ 101 ಕಂಬಗಳ ಸಂಗಮನಾಥ ದೇವಾಲಯವಿದೆ. ಅದರ ಮೇಲೆ ಗುಡಿಯ ಸೌಂದರ್ಯವನ್ನು ಹಾಳು ಮಾಡಿ ಹೇಗೆ ಬಂತು ಹಾಗೆ ಕೆಡವಿ ಮುಸ್ಲಿಮರು ಸುಮಾರು 250ಕ್ಕೂ ಮೇಲ್ಪಟ್ಟು ಮನೆ ಮಾಡಿಕೊಂಡಿದ್ದಾರೆ.'
8. ಸೊಲ್ಲಾಪುರ ಜಿಲ್ಲೆಯ ಮಂಗಳ ವೇಡೆಯು ಬಿಜ್ಜಳನ ಮೊದಲ ರಾಜಧಾನಿ. ಅಲ್ಲೇ ಬಸವಣ್ಣ ಮೊದಲು ಭಂಡಾರಿಯಾಗಿ ಕೆಲಸ ಮಾಡಿದ್ದು. ಅಲ್ಲಿನ ಕೋಟೆ ಸಮೀಪದ ಒಂದು ದರ್ಗಾವು ಮೂಲತಃ ಹಿಂದೂ ದೇವಾಲಯ. ಆ ದರ್ಗಾಕ್ಕೂ ಮುಸ್ಲಿಮರಂತೆ ಹಿಂದೂಗಳು ನಡೆದುಕೊಳ್ಳುತ್ತಾರೆ. ಸ್ಥಳೀಯರ ಪ್ರಕಾರ ದರ್ಗಾವು ಹಿಂದೆ ಮಂಗಳಾ ದೇವಿಯ ಗುಡಿ ಆಗಿತ್ತು. ದರ್ಗಾದಲ್ಲಿ ಈಗಲೂ ಚಾಲುಕ್ಯ ಶೈಲಿಯ ಶಿಲ್ಪಗಳಿವೆ ('ಮಂಗಳಾ ದೇವಿ' ಯಿಂದಲೇ ಆ ಊರಿಗೆ ಮಂಗಳವಾಡ ವೇಡೆ ಎಂಬ ಹೆಸರು ಬಂದಿರುವುದು).
9. ಸೊಲ್ಲಾಪುರದಲ್ಲಿ ವಚನಕಾರ ಸಿದ್ಧರಾಮ ಕೋಟೆಯಲ್ಲಿ ಕಟ್ಟಿಸಿದ ಮಲ್ಲಿಕಾರ್ಜುನ ದೇವಾಲಯವನ್ನು ಆ ಕೋಟೆ ವಶಪಡಿಸಿಕೊಂಡ ಮುಸ್ಲಿಮ್ ಅರಸರು ಅದನ್ನು ಸ್ಥಳಾಂತರಿಸಲು ಆಜ್ಞೆ ಮಾಡಿದರು. ಅದನ್ನು ಕಿತ್ತು ಬೇರೆಡೆ ಕಟ್ಟಲಾಗಿದೆಯಾದರೂ ಮೂಲ ದೇವಾಲಯದ ಕೆಲ ಭಾಗ ಕೋಟೆಯಲ್ಲಿ ಇನ್ನೂ ಉಳಿದುಕೊಂಡಿವೆ. (ಟಿಪ್ಪು ಕೂಡ ಶ್ರೀರಂಗಪಟ್ಟಣದ ಕೋಟೆ ಒಳಗಿನ ಆಂಜನೇಯ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಿದ).
ಇನ್ನು ಮೇಲೆ ಹೇಳಿದ ಕೃತಿಯಲ್ಲಿನ ಒಂದಿಷ್ಟು ಮಾಹಿತಿ. ಕರ್ನಾಟಕದಾದ್ಯಂತ ಈ ಸಾವಿರ ವರ್ಷಗಳಲ್ಲಿ ಮುಸ್ಲಿಂ ದೊರೆಗಳಿಂದ ಹಿಂದೂ ದೇವಾಲಯಗಳ ನಾಶ ನಡೆದಿದೆ. ಬಿಜಾಪುರದ ಕಲೆಕ್ಟರ್ ಬಂಗಲೋ ಆವರಣದ ಕರೀಮುದ್ದೀನ್ ಮಸೀದಿ, ಗುಲ್ಬರ್ಗಾದ ಕಲಾಂ ಮಸೀದಿ, ದೊಡ್ಡಬಳ್ಳಾಪುರದ ಜಿಷ್ಮಾದರ್ಗಾ, ಬೆಳಗಾವಿಯ ಕೋಟೆ ಮಸೀದಿ, ಜಾಮಿ ಮಸೀದಿ ಇತ್ಯಾದಿಗಳೆಲ್ಲ  ಹಿಂದೂ ದೇವಾಲಯಗಳ ಕಲ್ಲುಗಳಿಂದ ನಿರ್ಮಿತವಾಗಿವೆ. (ವಿವರಗಳಿಗೆ, ಸೀತಾರಾಮ ಗೋಯಲ್ರ ''Hindu Temples:What happened to them (The Islamic evidence. ಬಾಬಾಬುಡನ್ಗಿರಿಯ ದತ್ತಾತ್ರೇಯ ಪೀಠವನ್ನು ಮುಸ್ಲಿಮರು ವಿರೂಪಗೊಳಿಸಲು ಯತ್ನಿಸಿದ್ದಾರೆ. ಬಿಜಾಪುರದ ಜಗತ್ ಪ್ರಸಿದ್ಧ ಇಬ್ರಾಹಿಂ ರೋಜಾ ಆವರಣದಲ್ಲಿ ಹಿಂದೂ ದೇವಾಲಯದ ಅವಶೇಷಗಳಿರುವುದನ್ನು ನಾನು ಗುರುತಿಸಿದ್ದೇನೆ. ಅದನ್ನು ಯಾರೂ ಗಮನಿಸಿಲ್ಲ. ಹಂಪಿಯ ಈರಣ್ಣನ ಗುಡಿಯು ಹೊನ್ನಾರ್ಸಾಬಿ ದರ್ಗಾ ಆಗಿದೆ.
ಇದನ್ನು ತಡೆಗಟ್ಟಲು ಇರುವ ಏಕೈಕ ಪರಿಹಾರ-ಹಿಂದೂಗಳ ಒಳಎಚ್ಚರ ಮತ್ತು ದೃಢಸಂಕಲ್ಪ. ಭಾರತದ ಒಳಗೆ, ಸುತ್ತಮುತ್ತ, ವಿಶ್ವದಾದ್ಯಂತ ಏನಾಗಿದೆ, ಏನಾಗುತ್ತಿದೆ ಎಂಬುದರ ಬಗ್ಗೆ ಜಾಗೃತವಾಗಿ ಮುಂದಿನ ಭವಿಷ್ಯದ ಬಗ್ಗೆ ಕಾತರ ಮೂಡಿಸಿಕೊಳ್ಳಬೇಕು. ತಮ್ಮ ರಾಷ್ಟ್ರ, ಧರ್ಮಗಳ ಬಗ್ಗೆ ನಿಜವಾದ ಅಭಿಮಾನ ಅವರಲ್ಲಿ ಮೂಡಬೇಕು; ಸತ್ಯವನ್ನು ನುಡಿಯುವುದರಲ್ಲಿ ಅಂತೆಯೇ ನಡೆಯುವುದರಲ್ಲಿ ನಿರ್ಭೀತರಾಗಬೇಕು.
ಸಹನೆ ಪ್ರಶಂಸನೀಯ; ಅಸಹನೆ ಅಕ್ಷಮ್ಯ; ಅತಿ ಸಹನೆ ಅತಿ ಅಕ್ಷಮ್ಯ. ಹಿಂದೂಗಳ ಇಂದಿನ ಅಸಹನೆಯು ಮುಂದುವರಿದರೆ ಮುಂದಿನ ಶತಮಾನದ ಭಾರತದ ಅಥವಾ 'ಇಂಡಿಯ'ದ ಅಲ್ಪಸಂಖ್ಯಾತ ಹಿಂದೂಗಳು ಮೇಲಿನ ಸತ್ಯವನ್ನು ಮನಗಾಣಲಿದ್ದಾರೆ- ಆದರೆ ಅವರು ಆ ಹೊತ್ತಿಗೆ ಸಂಪೂರ್ಣ ನಿಸ್ಸಾಹಯಕರೂ ಆಗಿರುತ್ತಾರೆ.
ಇದೇ ಪರಿಸ್ಥಿತಿ ಮುಂದುವರಿದರೆ ಹಿಂದೂಧರ್ಮ, ಭಾರತೀಯ ಸಂಸ್ಕೃತಿ ಕೇವಲ ಇತಿಹಾಸದ ಅಧ್ಯಯನ ವಸ್ತುವಾಗುವ ಕಾಲ ಬಂದೇ ಬರುತ್ತದೆ. ಇದು ನನ್ನ ನೋವಿನ, ಮನದಾಳದ, ಸಾತ್ವಿಕ ಆಕ್ರೋಶದ ಘೋಷಣೆ.
- ಡಾ. ಎಂ. ಚಿದಾನಂದಮೂರ್ತಿ
Published: 25 Jun 2013 02:00 AM IST

No comments:

Post a Comment

ಬಸವ ಮೂಲ, ಸನಾತನ ಶೈವ ಮೂಲ!

  "ಷಣ್ಮುಖನಿಗೆ ಪ್ರಸಾದ ಕೊಡುವುದನ್ನು ಮರೆತ ವೃಷಭನೆನ್ನುವ ಗಣನನ್ನು ಶಿವನು ಬಸವನಾಗಿ ಭೂಮಿಯಲ್ಲಿ ಜನಿಸಿ ಶಿವಭಕ್ತ ಜಂಗಮರಿಗೆ ಪ್ರಸಾದ ವಿನಿಯೋಗಿಸಿ ಪ್ರಾಯಶ್ಚಿತ್ತ...