Tuesday, 28 February 2017

ಕೋಲ್ಹಾರ ದೇಸಗತಿ


ರಾಷ್ಟ್ರೀಯ ಹೆದ್ದಾರಿ ೨೧೮ರ ಮೇಲೆ, ಕೃಷ್ಣೆಯ ಬಲದಂಡೆಯಲ್ಲಿ ಕಾಣಸಿಗುವ ಕೊಲ್ಹಾರ ಬಸವನ ಬಾಗೇವಾಡಿಯಿಂದ ೩೦ ಕಿ.ಮೀ. ದೂರವಿರುವ ಪ್ರಮುಖ ಹೋಬಳಿ ಕೇಂದ್ರವಾಗಿದ್ದು, ಇದನ್ನು ಕೊರ್ತಿ-ಕೊಲ್ಹಾರ, ಹೊಳಿ-ಕೊಲ್ಹಾರ, ದೇಸಾಯರ-ಕೊಲ್ಹಾರ, ಮಸರಿನ-ಕೊಲ್ಹಾರ ಎಂದೆಲ್ಲಾ ಕರೆಯುತ್ತಾರೆ. ಈಗ ಕೊಲ್ಹಾರ ಗ್ರಾಮವು ಕೃಷ್ಣಾ ಮೇಲ್ದಂಡೆ ಯೋಜನೆಯ ಹಿನ್ನಿರಿನಲ್ಲಿ ಮುಳುಗಡೆಯಾಗಿದ್ದು, ಹತ್ತಿರದಲ್ಲಿಯೇ ಪುನರ್ ವಸತಿಗಳು ನಿರ್ಮಾಣವಾಗುತ್ತಿವೆ.
ಕೊಲ್ಹಾರದ ಪ್ರಾಚೀನತೆ 
  ಕೊಲ್ಹಾರ ಗ್ರಾಮದ ಇತಿಹಾಸವು ಬಹು ಪ್ರಾಚೀನಕಾಲದಿಂದಲೂ ಇರುವುದನ್ನು ಕಾಣುತ್ತೇವೆ. ಕೊಲ್ಹಾರದ ದೇಸಾಯಿಯಾಗಿದ್ದ, ಭೋಜನಾಯಕನ ಮನೆಯಮುಂದೆ ದೊರೆತ ಶಿಲಾಶಾಸನವು ಕ್ರಿ.ಶ. ೧೨೨೩ರ ಕಾಲಕ್ಕೆ ಅಂದರೆ ಯಾದವ ದೊರೆ ಸಿಂಗನನ ಕಾಲದ್ದಾಗಿದೆ. ಈ ಶಾಸನವು ಕೊಲ್ಹಾರ ಗ್ರಾಮವನ್ನು ”ಸರ್ವನಮಸ್ಯದ ಅಗ್ರಹಾರ ಹಾಗೂ ದಕ್ಷಿಣವಾರಣಾಸಿ” ಎಂದು ಉಲ್ಲೇಖಿಸುತ್ತದೆ. ಮುಂದೆ ೧೫೨೫ರಲ್ಲಿ ಅದೃಶ್ಯಕವಿಯಿಂದ ರಚಿಸಲ್ಪಟ್ಟ ಪ್ರೌಢರಾಯನ ಕಾವ್ಯದಲ್ಲಿ ಈ ಗ್ರಾಮವನ್ನು ‘ತೊರೆಸಾಲ ಪರಗಣೆಯ ಕೊಲ್ಹಾಪುರ್’ ಎಂದು ಉಲ್ಲೇಖಿಸಲಾಗಿದೆ. ಕೊಲ್ಹಾರ ಪರಗಣೆಯು ಚಿಕ್ಕಗರಸಂಗಿ, ಹಿರೆಗರಸಂಗಿ, ರೋಣಿಹಾಳ, ಹಳ್ಳದ ಗೆಣ್ಣೂರ, ಮುತ್ತಲದಿನ್ನಿ, ಹಂಗರಗಿ, ಹಾಗೂ ಕೊಲ್ಹಾರ ಎಂಬ ಏಳು ಗ್ರಮವನ್ನು ಒಳಗೊಂಡಿದ್ದು ಈ ಪರಗಣೆಯ ಆಡಳಿತವು ಕೊಲ್ಹಾರ ದೇಸಾಯಿಯವರಿಗೆ ಸೇರಿದ್ದಾಗಿತ್ತು.
ದೇಸಗತಿಯ ಮೂಲ 
 ವಿಜಯನಗರದ ಕಾಲಕ್ಕೆ ಪ್ರಮುಖ ಪರಗಣಾ ಕೇಂದ್ರವಾಗಿದ್ದ ಕೊಲ್ಹಾರ ದೇಸಗತಿಯು ಮೊದಲು ಕ್ಷತ್ರೀಯ ವಂಶದ ಭೋಜನಾಯಕ ಎಂಬ ದೇಸಾಯಿಯ ವಶದಲ್ಲಿತ್ತು. ಮುಳಗಡೆಗೊಂಡ ಕೊಲ್ಹಾರ ಗ್ರಾಮದಲ್ಲಿ ಭೋಜನಾಯಕನ ಮನೆ ಇದ್ದದ್ದು, ಕ್ಷತ್ರೀಯ ವಂಶದ ಆಳ್ವಿಕೆಯನ್ನು ದೃಢಪಡಿಸುತ್ತದೆ. ಈ ಭೋಜನಾಯಕ ವಿಜಯನಗರದ ಅರಸ ಪ್ರೌಢದೇವರಾಯನ (ಕ್ರಿ.ಶ. ೧೪೨೪ ರಿಂದ ೧೪೪೬) ಮಾಂಡಲಿಕನಾಗಿದ್ದನು. ಈ ಗ್ರಾಮದ ಕ್ಷತ್ರೀಯ ವಂಶದ ದೇಸಗತಿಯು ಗಾಣಿಗ ವಂಶದ ದೇಸಗತಿಗೆ ವರ್ಗಾವಣೆಗೊಂಡ ಕುತೂಹಲಕರವಾದ ಘಟನೆಯೊಂದು ಸ್ಥಳೀಯ ಐತಿಹ್ಯಗಳ ರೂಪದಲ್ಲಿ ಪ್ರಸಿದ್ಧಿಪಡೆದಿದೆ.
ಕೊಲ್ಹಾರದಿಂದ ೨೫ ಮೈಲು ಅಂತರದಲ್ಲಿ ನಾಲತವಾಡ ಎಂಬ ಗ್ರಾಮವಿದ್ದು, ಆ ಊರಿನ ಗೌಡ ಅಲ್ಲಿರುವ ಗಾಣಿಗ ಅಣ್ಣೇಂದ್ರನಿಗೆ ಒಂದೇ ದಿನದಲ್ಲಿ ಏಳು ಚೀಲ ಕುಸುಬೆಯನ್ನು ಗಾಣ ಮಾಡಿಕೊಡಲು ಆದೇಶಿಸಿದನು. ಅಷ್ಟು ಬೃಹತ್‌ ಪ್ರಮಾಣದ ಕುಸುಬೆಯನ್ನು ಒಂದೇ ದಿನದಲ್ಲಿ ಗಾಣ ಹಾಕಲು ಅಸಾಧ್ಯವಾದ ಕಾರಣ ತನ್ನ ಆಜ್ಞೆಯ ಉಲ್ಲಂಘನೆಗಾಗಿ ಕೋಪಿಷ್ಟ ಗೌಡನು ಗಾಣಿಗನ ಎತ್ತು ಹಾಗೂ ಗಾಣವನ್ನು ಕಸಿದುಕೊಂಡನು. ಹೀಗೆ ಉದ್ಯೋಗ ಕಳೆದುಕೊಂಡ ಗಾಣಿಗ ತನ್ನ ಗರ್ಭಿಣಿ ಪತ್ನಿಯೊಂದಿಗೆ ನಾಲತವಾಡ ಬಿಟ್ಟು ಕೊಲ್ಹಾರ ಗ್ರಾಮಕ್ಕೆ ಬಂದು, ಊರ ಮುಂದಿರುವ ಬಯಲು ಜಾಗದಲ್ಲಿ ಬಿಡಾರಹೂಡಿದನು.
ಇದೇ ಸಂದರ್ಭಕ್ಕೆ ಪ್ರೌಢರಾಯನು ಮಂತ್ರಿ ಜಕ್ಕಣ್ಣಾರ್ಯರೊಡನೆ ಕೃಷ್ಣಾನದಿಯ ನಡುಗಡ್ಡೆಯಲ್ಲಿ ಬೀಡುಬಿಟ್ಟಿದ್ದನು. ತಮ್ಮ ದೇಸಗತಿಯ ವ್ಯಾಪ್ತಿಯಲ್ಲಿ ರಾಜನ ಆಗಮನವಾದಾಗ ಅವರ ಆಧರಾತಿಥ್ಯ ಅಲ್ಲಿರುವ ದೇಸಾಯಿ ನೋಡಿಕೊಳ್ಳಬೇಕಿತ್ತು. ಇದು ಒಂದು ರೀತಿಯಲ್ಲಿ ಶಾಸನವು ಹಾಗೂ ಸಂಪ್ರದಾಯವು ಆಗಿತ್ತು. ಆದರೆ ದೊರೆ ಪ್ರೌಢರಾಯನಿಗೆ ಕೊಲ್ಹಾರದ ದೇಸಾಯಿ ಬೋಜನಾಯಕನಿಂದ ಕನಿಷ್ಠ ಶಿಷ್ಟಾಚಾರಗಳು ಸಲ್ಲಲಿಲ್ಲ. ಏಕೆಂದರೆ ಭೋಜನಾಯಕನು ತನ್ನ ನಿಷ್ಠೆಯನ್ನು ವಿಜಯನಗರಕ್ಕೆ ಬದಲಾಗಿ ಬಹಮನಿ ಸುಲ್ತಾನರತ್ತ ವರ್ಗಾಯಿಸಿಕೊಂಡಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಡಾ. ಎಸ್. ಶೆಟ್ಟರವರು ಅಭಿಪ್ರಾಯಪಟ್ಟಂತೆ ‘ಚಿಕ್ಕಪುಟ್ಟ ಸಂಸ್ಥಾನಿಕರಾದ ಈ ದೇಸಾಯಿಗಳು ತಮ್ಮ ಅನುಕೂಲತೆಗಾಗಿ ನಿಷ್ಠೆ ಬದಲಿಸಿಕೊಳ್ಳುತ್ತಿದ್ದರು. ಇಲ್ಲಿ ಹಿಂದೂ, ಮುಸ್ಲಿಂ, ಎಂಬ ಮತ ಸಂಬಂಧ ಮುಖ್ಯವಾಗಿರದೆ, ತಮ್ಮ ರಾಜಕೀಯ ಅಸ್ಥಿತ್ವ ಮಾತ್ರ ಪ್ರಮುಖವಾಗಿತ್ತು’ ಎಂದಿದ್ದಾರೆ. (ಕಿತ್ತೂರಿನ ದೇಸಾಯಿ ಮಲ್ಲಸರ್ಜ ೧೮೧೭ರಲ್ಲಿ ಮರಾಠಾ ಬ್ರಿಟೀಷರ ಸಂಘರ್ಷದಲ್ಲಿ ತನ್ನ ಲಾಭಕ್ಕಾಗಿ ಬ್ರಿಟೀಷರತ್ತವಾಲಿದ್ದು).
ಈ ಕ್ಷಿಪ್ರ ಬೆಳವಣಿಗೆಯಿಂದ ಕ್ರೋಧಗೊಂಡ ದೊರೆ ಪ್ರೌಢದೇವರಾಯನು ಭೋಜನಾಯಕನ ಶಿರಚ್ಛೇಧನಕ್ಕೆ ಆದೇಶವಿತ್ತನು. ರಾಜಾಜ್ಞೆಯನ್ನು ಹೊತ್ತ ವಿಜಯನಗರ ಸೈನಿಕರು ಕೊಲ್ಹಾರ ಗ್ರಾಮವನ್ನು ಸುತ್ತಿ ಗಲಭೆಯನ್ನುಂಟುಮಾಡಿದರು. ಭೋಜನಾಯಕನನ್ನು ಶೋಧಿಸುತ್ತ, ಆವೇಶದಲ್ಲಿ ಬಂದ ರಾಯನ ಸೈನಿಕರು, ಊರಮುಂದಿರುವ ಗಾಣಿಗ ಅಣ್ಣೇಂದ್ರನನ್ನೆ ವೇಶ ಮರಿಸಿಕೊಂಡ ದೇಸಾಯಿ ಎಂಬ ತಪ್ಪು ಗ್ರಹಿಕೆಯಿಂದ ಕೊಲೆಗೈದರು. ಈ ವಾರ್ತೆಯನ್ನರಿತ ದೊರೆ ಪ್ರೌಢದೇವರಾಯನು ಸ್ಥಳಕ್ಕೆ ಆಗಮಿಸಿದಾಗ ತುಂಬು ಗರ್ಭಿಣಿ ಅಣ್ಣೇಂದ್ರನ ಪತ್ನಿಯಿಂದ ಅವರ ಪೂರ್ವ ವೃತ್ತಾಂತವನ್ನ ಆಲಿಸಿ, ತನ್ನ ಸೈನಿಕರ ತಪ್ಪಿನಿಂದಾಗಿ ನಡೆದ ಘಟನೆಗೆ ವ್ಯಥೆಪಟ್ಟನಲ್ಲದೇ ಪರಿಹಾರವೆಂಬಂತೆ ಅವಳಿಗೆ ಹೀಗೆ ಆಶ್ವಾಸನೆ ಇತ್ತನು. ‘ನಿನಗೆ ಹೆಣ್ಣು ಹುಟ್ಟಿದರೆ ರಾಜನೊಬ್ಬನಿಗೆ ಮದುವೆ ಮಾಡಿಕೊಡುತ್ತೇನೆ. ಗಂಡು ಹುಟ್ಟಿದರೆ ಕೊಲ್ಹಾರದ ದೇಸಗತಿಯನ್ನು ಉಂಬಳಿಯಾಗಿ ನೀಡುತ್ತೇನೆ.’ ಎಂದು ಭರವಸೆ ಇತ್ತನು. ಕಾಕತಾಳೀಯವೆಂಬಂತೆ ಗಾಣಿಗ ಅಣ್ಣೆಂದ್ರನ ಮಡದಿ ಗಂಡು ಮಗುವಿಗೆ ಜನ್ಮವಿತ್ತಳು. ತಾಯಿಯ ಉದರದಲ್ಲಿ ಅದೃಶ್ಯವಾಗಿದ್ದುಕೊಂಡು ದೇಸಗತಿಯನ್ನು ಸಂಪಾದಿಸಿಕೊಂಡಿದ್ದರಿಂದ ಅದೃಶ್ಯಪ್ಪನೆಂದು ಹೆಸರಿಡಲಾಯಿತು. ಕ್ರಿ.ಶ. ೧೪೪೫ರ ಸುಮಾರಿಗೆ ಈ ದೇಸಗತಿಯು ಆರಂಭಗೊಂಡಿತೆಂಬ ಅಂಶವು ಲಭ್ಯವಿರುವ ದಾಖಲೆಗಳಿಂದ ತಿಳಿದುಬರುತ್ತದೆ.

No comments:

Post a Comment

ಬಸವ ಮೂಲ, ಸನಾತನ ಶೈವ ಮೂಲ!

  "ಷಣ್ಮುಖನಿಗೆ ಪ್ರಸಾದ ಕೊಡುವುದನ್ನು ಮರೆತ ವೃಷಭನೆನ್ನುವ ಗಣನನ್ನು ಶಿವನು ಬಸವನಾಗಿ ಭೂಮಿಯಲ್ಲಿ ಜನಿಸಿ ಶಿವಭಕ್ತ ಜಂಗಮರಿಗೆ ಪ್ರಸಾದ ವಿನಿಯೋಗಿಸಿ ಪ್ರಾಯಶ್ಚಿತ್ತ...