Saturday 25 February 2017

ವೀರಶೈವ ಸಂಪ್ರದಾಯ: ಕೆಲವು ಒಗಟುಗಳು

 – ಚೈತ್ರ, ಕುವೆಂಪು ವಿಶ್ವವಿದ್ಯಾನಿಲಯ.
ಕರ್ನಾಟಕದಲ್ಲಿ ವೀರಶೈವ ಸಮುದಾಯವು ಹಲವಾರು ಚರ್ಚೆಗೆ ಒಳಪಟ್ಟಿದೆ. ತಮ್ಮ ಅಸ್ಮಿತೆಯ ಹುಡುಕಾಟಕ್ಕಾಗಿ ಶತಮಾನಗಳಿಂದ ಹೆಣಗಾಡುತ್ತಿರುವಂತೆ ಈ ಸಮುದಾಯ ಮೇಲ್ನೋಟಕ್ಕೆ ಕಂಡುಬಂದರೂ ಸಹ ಅದು ಭಾಗಶಃ ಸತ್ಯವಾದುದು. ಕಾರಣ, ಸಮುದಾಯಗಳೇ ಸ್ವಯಂ ಪ್ರೇರಣೆಯಿಂದ ತಮಗೊಂದು ಅಸ್ಮಿತೆ ಬೇಕೆಂಬ ಹಂಬಲದಿಂದ ನಡೆಸಿರುವ ಹೋರಾಟದಂತೆ ಅದು ಗೋಚರಿಸುವುದಿಲ್ಲ. ಬದಲಿಗೆ, ಸಮುದಾಯದ ನಾಯಕರುಗಳು, ವಿದ್ವಾಂಸರು, ರಾಜಕೀಯ ನೇತಾರರು, ಹಾಗೂ ಸಾಹಿತಿಗಳು ಇಂತಹ ಹೋರಾಟದ ಮಂಚೂಣಿಯಲ್ಲಿರುವುದು ಕಣ್ಣಿಗೆ ಕಾಣುವ ಸತ್ಯ. ಅವರ ಹೋರಾಟ ಅಸ್ಮಿತೆಗಾಗಿಯೋ ಅಥವಾ ಮತ್ಯಾವುದಾದರೂ ಉದ್ದೇಶಕ್ಕಾಗಿಯೋ ಎಂಬುದನ್ನು ಅರ್ಥೈಸಿಕೊಳ್ಳುವ ಮುನ್ನ ಆ ಸಮುದಾಯದ ಕುರಿತು ಯಾವ ನೆಲೆಗಳಲ್ಲಿ ಚರ್ಚೆಗಳಾಗಿವೆ ಎಂಬುದನ್ನು ನೋಡಬೇಕಾಗುತ್ತದೆ.
ಪ್ರಸ್ತುತ ಲೇಖನದಲ್ಲಿ ವೀರಶೈವ ಸಮುದಾಯದ ಕುರಿತ ವಿವರಣೆಗಳನ್ನು ಪರೀಶಿಲಿಸುವ ಮೂಲಕ ಆ ಸಮುದಾಯವು ನಮ್ಮ ಅರ್ಥಗ್ರಹಿಕೆಗೆ ಬರಲು ಸಾಧ್ಯವೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು. ಈವರೆಗಿನ ವಿವರಣೆಗಳನ್ನು ಮೆಲುಕುಹಾಕಿದರೆ, ಅವುಗಳು ಪರಸ್ಪರ ವಿರುದ್ಧವಾಗಿಯೂ, ವಿಭಿನ್ನವಾಗಿಯೂ ಮತ್ತು ಕೆಲವು ಬಾರಿ ಒಂದಕ್ಕೊಂದು ಸಂಬಂಧವೇ ಇಲ್ಲದ ರೀತಿಯಲ್ಲಿ ನಿರೂಪಿತವಾಗಿರುವುದು ಗೋಚರಿಸುತ್ತದೆ. ಅಂದರೆ ಸ್ಪಷ್ಟವಾಗಿ ಅದೊಂದು ಒಗಟಾಗಿ ನಮ್ಮ ಮುಂದೆ ಬಂದು ನಿಲ್ಲುತ್ತದೆ. ಆ ಒಗಟಿನ ಸ್ವರೂಪವನ್ನು ಅರ್ಥೈಸುವ ಪ್ರಯತ್ನವನ್ನು ಮಾಡಲಾಗುವುದು. ವೀರಶೈವ ಅಧ್ಯಯನಗಳು ಹಲವು ಆಯಾಮಗಳಲ್ಲಿ ವಿವಿಧ ಬಗೆಯಲ್ಲಿ ವೀರಶೈವರನ್ನು ನಿರೂಪಿಸುತ್ತವೆ. ಅಂತಹ ಚರ್ಚೆಗಳಲ್ಲಿ ಬಹುಮುಖ್ಯ ವಿಷಯವೆಂದರೆ, ವೀರಶೈವರನ್ನು ಎರಡು ರೀತಿಯಲ್ಲಿ ಗುರುತಿಸುತ್ತಿರುವುದಾಗಿದೆ. ಅಂದರೆ ವೀರಶೈವ ಧರ್ಮವು ಹಿಂದೂ ಧರ್ಮದ ಭಾಗವೆಂದು ಒಂದು ಗುಂಪು ಪ್ರತಿಪಾದಿಸಿದರೆ, ಅದಕ್ಕೆ ಪ್ರತಿಯಾಗಿ, ವೀರಶೈವ ಧರ್ಮ ಹಿಂದೂ ಧರ್ಮವನ್ನು ಪ್ರತಿಭಟಿಸಿ ಹುಟ್ಟಿರುವ ಧರ್ಮವಾಗಿದ್ದು, ಇದು ಪ್ರತ್ಯೇಕವಾದ ಸ್ವತಂತ್ರವಾದ ಧರ್ಮವಾಗಿದೆ ಎಂದು ಇನ್ನೊಂದು ಗುಂಪು ಪ್ರತಿಪಾದಿಸುತ್ತದೆ. ಈ ಎರಡು ರೀತಿಯ ಚಿಂತನೆಗಳನ್ನು ಹಲವಾರು ಚಿಂತಕರು ವಿಭಿನ್ನ ನೆಲೆಗಳಲ್ಲ್ಲಿ ತಮ್ಮ ವಾದವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಮೇಲೆ ತಿಳಿಸಿದ ಎರಡು ರೀತಿಯ ಸಮರ್ಥನೆಗಳನ್ನು(ವಾದಗಳನ್ನು) ತೀರ ಸಂಕ್ಷಿಪ್ತವಾಗಿ ಉದಾಹರಣೆಯ ಮೂಲಕ ನೋಡುವುದಾದರೆ, ಲಿಂಗಾಯತ ಅಧ್ಯಯನಕಾರರಾದ ಚಿದಾನಂದ ಮೂರ್ತಿಯವರು: ವೀರಶೈವ ಧರ್ಮವು ಹಿಂದೂ ಧರ್ಮದ ಒಂದು ಭಾಗ. ವೀರಶೈವರು ಹಿಂದೂಗಳಲ್ಲ ಎಂದು ನಿರ್ಧಿಷ್ಟ ಪಡಿಸಲು ಸಾಧ್ಯವಿಲ್ಲ.(2000: ಪು-4). ವೀರಶೈವ ಲಿಂಗಾಯತ ಧರ್ಮದ ಆಚರಣೆಯೂ ಹಿಂದೂ ಧರ್ಮದ ಅಡಿಯಲ್ಲೇ ಇದೆ. ಬಸವಣ್ಣ ಹಿಂದೂ ಧರ್ಮದ ಕೊರತೆಗಳ ವಿರುದ್ಧ ಹೋರಾಡಿದವರು. ಹಿಂದೂ ಧರ್ಮವನ್ನು ಎಂದೂ ಅವರು ವಿರೋದಿಸಿಲ್ಲ. ತಾವೂ ಕೂಡ ಹಿಂದೂ ಎಂದು ಹೇಳಿಕೊಂಡಿದ್ದಾರೆ(ವಿಜಯವಾಣಿ,5/10/2013:ಪು-6) ಎಂದು ವಿವರಿಸುತ್ತಾರೆ. ಹಾಗೆಯೇ ವಚನ ಪಿತಮಹಾರಾದ ಫ.ಗು ಹಳಕಟ್ಟಿಯವರು ಕೂಡ ವಚನಕಾರರು ಹಿಂದೂ ಧರ್ಮದಲ್ಲಿಯ ಒಂದು ಬಗೆಯ ವಿಚಾರವಾದಿಗಳು(2007,ಪು-11)  ಬಿಂಬಿಸುತ್ತಾರೆ. ಚಂದ್ರಶೇಖರ ನಾಗರಾಳ ಮಠರವರು ಇನ್ನೂ ಕೆಲವು ಚಿಂತಕರು ವೀರಶೈವ ಧರ್ಮ ಹಿಂದೂ ಧರ್ಮದ ಒಂದು ಸಹ ಧರ್ಮ ಅಥವಾ ಅಂಗ ಧರ್ಮ. ಎಂದು ಹೇಳುವ ಮೂಲಕ ವೀರಶೈವರನ್ನು ಹಿಂದೂ ಧರ್ಮದ ಭಾಗವಾಗಿ ಗುರುತಿಸುತ್ತಾರೆ.
ಈ ಮೇಲಿನ ವಾದಕ್ಕೆ ವ್ಯತಿರಿಕ್ತವಾಗಿ ಕಲಬುರ್ಗಿ ಯವರು ಲಿಂಗಾಯತರು ಧಾರ್ಮಿಕವಾಗಿ ನೂರಕ್ಕೆ ನೂರು ಹಿಂದೂಗಳಲ್ಲ… ಲಿಂಗಾಯತವು ಹಿಂದೂ ಜನ್ಯವಲ್ಲ(2010, ಪು-123) ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಾರೆ. ಹಾಗೆಯೇ ಮಾತೆ ಮಹಾದೇವಿಯವರು: ಲಿಂಗಾಯತ ಧರ್ಮವು ಹಿಂದೂ ಹಾಗೂ ವೀರಶೈವರಿಂದ ಹೊರತಾಗಿದೆ. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗಬೇಕು.. ಲಿಂಗಾಯತ ಒಂದು ಸ್ವತಂತ್ರ್ಯ ಧರ್ಮವಾಗಿದ್ದು, ಹಿಂದು ಧರ್ಮದೊಳಗಿನ ಜಾತಿ, ಮತ, ಪಂಥದಂತಿಲ್ಲ. ಬಸವಣ್ಣ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದಾರೆ(ವಿಜಯವಾಣಿ, 16/2/2014, ಪು-7) ಎಂಬುದಾಗಿ ತಿಳಿಸುತ್ತಾರೆ. ಇದರಂತೆಯೇ ವೀರಶೈವ ಸಭೆಗಳು ಸಂಘಗಳು ಮತ್ತು ಲಿಂಗಾಯತ ಮಠಗಳು, ಮಠದ ಸ್ವಾಮೀಜಿಗಳು (ಸಿರಿಗೆರೆಯ ಬೃಹನ್ಮಠ, ಸುತ್ತೂರಿನ ವೀರಸಿಂಹಾಸನ ಮಠ, ಕೊಟ್ಟೂರೇಶ್ವರ ಸಂಸ್ಥಾನ ಮಠ, ಹೇಮಕೂಟ, ನಾಗನೂರು ರುದ್ರಾಕ್ಷಿಮಠ), ಸ್ವಾಮೀಜಿಗಳು (ಶ್ರೀ ಶಿವಮೂರ್ತಿ ಶಿವಚಾರ್ಯ ಮಹಾಸ್ವಾಮೀಜಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಸಂಗನ ಬಸವ ಮಹಾಸ್ವಾಮಿ, ಶ್ರೀ ಮ.ನಿ.ಪ್ರ. ಸಿದ್ದರಾಮಪ್ಪ ಮಹಾಸ್ವಾಮಿಗಳು) ಇನ್ನೂ ಇತರರು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕು. ವೀರಶೈವರು ಹಿಂದುಗಳಲ್ಲ ಎಂಬುದಾಗಿ ಕರೆ ನೀಡುತ್ತಾರೆ. ಅಂತೆಯೇ ವೀರಶೈವ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಘೋಷಿಸಬೇಕಾಗಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುತ್ತಿದ್ದಾರೆ.
ಒಂದೇ ಆಧಾರವನ್ನು ಇಟ್ಟುಕೊಂಡು ಬೆಳೆದು ಬಂದ ಒಂದು ಪರಂಪರೆಯ ಕುರಿತಾಗಿ ಇರುವ ವಿವರಣೆಗಳು ಎರಡು ಅಥವಾ ಅದಕ್ಕಿಂತ ಹೆಚ್ಚಿನದಾಗಿ ಕಂಡುಬರುತ್ತಿವೆ. ಅಂದರೆ, ಪಂಚಪೀಠದವರು, ಫ.ಗು.ಹಳಕಟ್ಟಿ, ಚಿದಾನಂದ ಮೂರ್ತಿ, ತಿಪ್ಪೆರುದ್ರಸ್ವಾಮಿ, ಎಲ್ ಬಸವರಾಜು ಕೆಲವು ಸಾಹಿತಿಗಳು ಮುಂತಾದವರ ವಾದ ಒಂದು ರೀತಿಯದಾದರೆ, ಇದಕ್ಕೆ ವಿರುದ್ಧವಾಗಿ ವಿರಕ್ತ ಪೀಠದವರು, ಕಲಬುರ್ಗಿ, ಹಿರೇಮಲ್ಲೂರು ಈಶ್ವರನ್, ಮುಂತಾದ ಚಿಂತಕರದು ಅದಕ್ಕೆ ವಿರುದ್ಧವಾದ ಮತ್ತೊಂದು ರೀತಿಯ ವಾದವಾಗಿದೆ. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಹೇಳುವಾಗ ಕೊಡುವ ಸಮರ್ಥನೆಗಳೆಂದರೆ, ವೀರಶೈವ ಧರ್ಮದ ಸ್ಥಾಪಕ ಬಸವಣ್ಣ. ಈ ಧರ್ಮವು ಹಿಂದೂ ಧರ್ಮದ ವೇದ, ಶಾಸ್ತ್ರಗಳನ್ನು, ಜಾತಿವ್ಯವಸ್ಥೆ, ವರ್ಣವ್ಯವಸ್ಥೆಯನ್ನು, ಪುರೋಹಿತಶಾಹಿತ್ವವನ್ನು, ಆಶ್ರಮ ವ್ಯವಸ್ಥೆಯನ್ನು ವಿರೋಧಿಸಿ ಬೆಳೆದು ಬಂದಿರುವ ಧರ್ಮ. ಆದ್ದರಿಂದ ಇದು ಸ್ವತಂತ್ರವಾದ ಪ್ರತ್ಯೇಕವಾದ ಧರ್ಮ ಎಂಬುದಾಗಿ ತಮ್ಮ ವಾದಗಳನ್ನು ಮಂಡಿಸುತ್ತಾ ಬಂದಿದ್ದಾರೆ ಮತ್ತು ಈ ರೀತಿಯ ಚಚರ್ೆಗಳು ನಡೆಯುತ್ತಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ.
ಇತ್ತೀಚೆಗೆ ವೀರಶೈವಿಸಂನ್ನು ಪ್ರತ್ಯೇಕವಾದ ಧರ್ಮ(ರಿಲಿಜನ್) ಎಂಬ ಸಮರ್ಥನೆಯಲ್ಲಿ ಹೊಸತೊಂದು ವಾದ ಪ್ರಚಲಿತಕ್ಕೆ ಬಂದಿದೆ. ಅದೆಂದರೆ, ಹಿಂದೂ ಧರ್ಮ ಎನ್ನುವುದೇ ಅಸ್ತಿತ್ವದಲ್ಲಿ ಇಲ್ಲ. ಈ ಧರ್ಮದ ಅಸ್ತಿತ್ವಕ್ಕೆ ಯಾವುದೇ ಐತಿಹಾಸಿಕ ಆಧಾರಗಳಿಲ್ಲ ಎಂಬುದಾಗಿ ಹೇಳುವ ಮೂಲಕ ವೀರಶೈವಿಸಂನ್ನು ಒಂದು ಸ್ವತಂತ್ರ ಧರ್ಮವನ್ನಾಗಿಸುವ ಪ್ರಯತ್ನ ನಡೆದಿದೆ. ವೀರಶೈವರು ಮತ್ತು ಹಿಂದೂಗಳ ಸಂಬಂಧದ ಕುರಿತಾಗಿ ಮಾತಾನಾಡುವಾಗ ಚಿಂತಕರು ಹಿಂದೂ ಧರ್ಮ ಎನ್ನುವುದೊಂದು ಇದೆಯೆ? ಹಿಂದೂ ಧರ್ಮದ ಕುರಿತ ಸರ್ವಾನುಮತವಾದ ವ್ಯಾಖ್ಯೆ ಯಾವುದಾದರು ಇದೆಯೆ? ಎಂಬಂತಹ ಪ್ರಶ್ನೆಗಳನ್ನು ತೆಗೆದುಕೊಂಡು, ಆ ಪ್ರಶ್ನೆಗಳಿಗೆ ನಕಾರಾತ್ಮಕವಾದ ಉತ್ತರವನ್ನು ನೀಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. (ಹೆಚ್.ಎಸ್.ಶಿವಪ್ರಕಾಶ್, 17/1/2014, ಪ್ರಜಾವಾಣಿ) ಆ ವಾದದಲ್ಲಿ ಇರುವ ಅಭಿಪ್ರಾಯಗಳನ್ನು ಸಾರಾಂಶೀಕರಿಸಿ ಈ ರೀತಿಯಾಗಿ ಹೇಳಬಹುದು.
ಹಿಂದೂ ಎಂಬ ಶಬ್ದವು ವಸಾಹತುಕಾಲದಲ್ಲಿ ಹೇರಲ್ಪಟ್ಟಿರುವಂತದ್ದು, ಇದನ್ನು ಕೆಲವು ವಿದ್ವಾಂಸರು ತಮ್ಮ ಬರಹಗಳಲ್ಲಿ ಹೇಳಿದ್ದಾರೆ. ವೇದ, ಶಾಸ್ತ್ರ, ಪುರಾಣಗಳು, ಉಪನಿಷತ್ತು, ದಿವ್ಯಾಗಮಗಳು ಯಾವುದರಲ್ಲಿಯೂ ಹಿಂದೂ ಧರ್ಮದ ಕುರುಹು ಇಲ್ಲ. ಕವಿಗಳ ಯಾವ ಕಾವ್ಯ ಶಾಸ್ತ್ರಗಳಲ್ಲಿಯೂ ಹಿಂದೂ ಪದದ ಪ್ರಯೋಗವಿಲ್ಲ. ಬಹುಸ್ತರೀಯ ಜನಗಳಿಗೆ ಸಮಾನ, ಸಾಮಾನ್ಯವಾದ ಆಚರಣೆಗಳು ಇಲ್ಲ.ವಸಹಾತುಶಾಹಿಗಳು, ಹಲ್ಲೆಕೊರರು, ಆಡಳಿತಗಾರರು ಹೇರಿರುವ ಶಬ್ದವನ್ನು ನಾವು ನಮ್ಮದೇ ಎಂಬಂತೆ ಭಾವಿಸಿದ್ದೇವೆ. ಆಧುನಿಕ ಭಾರತದಲ್ಲಿ ಹಲವು ಜನ ತಮ್ಮದೇ ಆದ ರೀತಿಯಲ್ಲಿ ಹಿಂದೂ ಧರ್ಮದ ವ್ಯಾಖ್ಯಾನವನ್ನು ಮಾಡಿದ್ದಾರೆ. ಅಂದರೆ, ಇದು ಅವರ ನಿರ್ಮಾಣವಾಗಿದೆ.ಆದಿವಾಸಿ ಬುಡಕಟ್ಟು ಜನಗಳ ಆಚರಣೆಗಳು ಹಿಂದೂ ಧರ್ಮದ ಆಚರಣೆಗಳಿಗಿಂತ ಭಿನ್ನವಾಗಿವೆ ಹಾಗೆಯೆ ವೀರಶೈವರಿಗೂ ತಮ್ಮದೇ ಆದ ಸ್ಪಷ್ಟವಾದ ಆಚಾರ ವಿಚಾರಗಳಿವೆ. ಇದರ ಜೊತೆಗೆ ಕಬೀರಪಂಥ, ರಾಯ್ ದಾಸ್ ಪಂಥ ಭೀಮಾಭಾಯಿ ಮುಂತಾದ ಪಂಥಗಳಿಗೂ ತಮ್ಮದೆ ಆದ ಆಚಾರ ವಿಚಾರಗಳಿವೆ. ಆದ್ದರಿಂದ ಇಂತಹ ಪಂಥಗಳನ್ನೂ ಸ್ವತಂತ್ರ ಧರ್ಮವೆಂದು ಗುರುತಿಸಬೇಕು ಎಂಬಂತಹುಗಳಾಗಿವೆ. ಇದರ ಮೂಲಕವಾಗಿ ಹಿಂದೂ ಧರ್ಮವಿಲ್ಲ ಎಂಬ ತೀರ್ಮಾನಕ್ಕೆ ಬರುತ್ತಾರೆ.
ಇಂತಹ ಸಮರ್ಥನೆಗಳಲ್ಲಿ ಹಲವಾರು ಸಮಸ್ಯೆಗಳಿವೆ. ಮೊದಲನೆಯದಾಗಿ, ವೇದ, ಶಾಸ್ತ್ರ, ಪುರಾಣಗಳು, ಉಪನಿಷತ್ತು, ದಿವ್ಯಾಗಮಗಳು ಯಾವುದರಲ್ಲಿಯೂ ಹಿಂದೂ ಧರ್ಮದ ಕುರುಹು ಇಲ್ಲ. ಕವಿಗಳ ಯಾವ ಕಾವ್ಯ ಶಾಸ್ತ್ರಗಳಲ್ಲಿಯೂ ಹಿಂದೂ ಪದದ ಪ್ರಯೋಗವಿಲ್ಲ. ಹಾಗಾಗಿ ಹಿಂದೂ ಧರ್ಮದ ಅಸ್ತಿತ್ವ ಇಲ್ಲ ಎಂದು ಹೇಳುವ ಚಿಂತಕರು ವಚನ ಚಳುವಳಿಯ ಕುರಿತಾಗಿ ಮಾತನಾಡುವಾಗ ಮಾತ್ರ, ವಚನ ಚಳುವಳಿಯು ಜಾತಿ ವಿರೋಧಿ ಹೋರಾಟವಲ್ಲ ಎಂಬುದನ್ನು ತೀರ್ಮಾನಿಸಲು ವಚನಗಳಲ್ಲಿ ಎಷ್ಟುಬಾರಿ ಜಾತಿ, ಕುಲ ಎಂಬ ಶಬ್ದಗಳನ್ನು ಬಳಸಿದ್ದಾರೆ ಎಂಬುದು ಆಧಾರವಾಗುವುದಿಲ್ಲ ಎನ್ನುತ್ತಾರೆ. ಅವುಗಳ ಸಂಖ್ಯೆ ವಿರಳವೆಂಬುದು ಅವುಗಳ ಪ್ರಾಮುಖ್ಯತೆಯನ್ನು ಕುಂದಿಸುವುದಿಲ್ಲ. ಹಾಗೂ ಅಧಿಕ ಸಂಖ್ಯೆಯ ವಚನಗಳಲ್ಲಿ ಜಾತಿ ಜಗಳಕ್ಕೆ ತೊಡಗಿಲ್ಲವೆಂದ ಮಾತ್ರಕ್ಕೆ ಅವರಿಗೆ ಆ ಬಗ್ಗೆ ಕಾಳಜಿಯೆ ಇಲ್ಲ ಎಂಬ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದು ವಾದಿಸುತ್ತಾರೆ. ಆಧಾರಗಳ ಮೇಲೆ ನಿಂತ ಐತಿಹಾಸಿಕ ದೃಷ್ಟಿ ಒಂದು ಮಟ್ಟದವರೆಗೆ ಮಾತ್ರ ಮುಖ್ಯ ಎಂಬುದಾಗಿಯೂ ಹೇಳುತ್ತಾರೆ. ಆದರೆ ಇಲ್ಲಿ ಹಿಂದೂ ಧರ್ಮದ ಅಸ್ತಿತ್ವದ ಬಗ್ಗೆ ಮಾತನಾಡುವಾಗ ಮಾತ್ರ ಹಿಂದೂ ಎಂಬ ಪದ ಎಷ್ಟುಬಾರಿ ಪದ ಪ್ರಯೋಗವಾಗಿದೆ, ಎಂಬುದರ ಮೂಲಕ ಅಂಕಿ ಸಂಖ್ಯೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾ ಹಿಂದೂ ಧರ್ಮ ಇಲ್ಲ ಎಂಬ ತೀರ್ಮಾನಕ್ಕೆ ಬರುತ್ತಿದ್ದಾರೆಂದರೆ ಅವರ ವಾದದ ಗ್ರಹಿಕೆಯಲ್ಲಿಯೆ ವಿರೋಧಭಾಸವಿರುಂತೆ ಕಾಣುತ್ತಿದೆ. ವಚನಗಳು ಜಾತಿವಿರೋಧ ಮಾಡಿವೆ ಎಂದು ತೋರಿಸಲು ಜಾತಿಯ ಕುರಿತ ಅಂಕಿಸಂಖ್ಯೆಗಳು ಅಗತ್ಯವಿಲ್ಲ ಎಂದು ಒಂದು ಕಡೆ, ಹಿಂದೂ ಧರ್ಮದ ಅಸ್ತಿತ್ವ ಇಲ್ಲ ಎಂದು ಹೇಳಲು ಹಿಂದೂ ಶಬ್ದದ ಬಳಕೆಯ ಅಂಕಿ ಸಂಖ್ಯೆಗಳು ಅಗತ್ಯ ಎಂದು ಇನ್ನೊಂದು ಕಡೆ ಪ್ರತಿಪಾದಿಸುವುದು ವಿಪಯರ್ಾಸವಲ್ಲವೆ?
ಎರಡನೆಯದಾಗಿ, ಅವರ ವಾದದಂತೆ ಹಿಂದೂಯಿಸಂ ಇಲ್ಲ ಎಂಬುದನ್ನೇ ಒಪ್ಪಿಕೊಂಡರೂ ಕೂಡ, ಹಿಂದೂಯಿಸಂ ಇಲ್ಲ ಎಂದ ಮಾತ್ರಕ್ಕೆ ವೀರಶೈವಿಸಂ ಇದೆ ಎಂಬ ತೀರ್ಮಾನಕ್ಕೆ ಬರುವುದು ಎಷ್ಟು ಉಚಿತವಾದದ್ದು? ಉದಾಹರಣೆಗೆ: ಒಂದು ಲೋಟದಲ್ಲಿ ನೀರಿಲ್ಲ ಎಂದಮಾತ್ರಕ್ಕೆ ಆ ಲೋಟದಲ್ಲಿ ಹಾಲಿದೆ ಎಂದು ಭಾವಿಸಲು ಸಾಧ್ಯವೆ? ಇಲ್ಲ ಎನ್ನುವ ವಸ್ತು ಅಸ್ತಿತ್ವದಲ್ಲಿರುವ ವಸ್ತುವಿಗೆ ಆಧಾರವಾಗುತ್ತದೆಯೆ? ಹಾಗೆಯೇ ಇರುವ ವಸ್ತು ಇಲ್ಲದಿರುವ ವಸ್ತುವಿಗೆ ಆಧಾರವಾಗಲು ಸಾಧ್ಯವೆ? ಹಿಂದೂಯಿಸಂ ಇಲ್ಲವೆಂದ ತಕ್ಷಣ ಅದು ವೀರಶೈವಿಸಂನ ಅಸ್ತಿತ್ವಕ್ಕೆ ಸಾಕ್ಷ್ಯವಾಗಲು ಹೇಗೆ ಸಾಧ್ಯ? ವೀರಶೈವಿಸಂ ಪ್ರತ್ಯೇಕ ಧರ್ಮವಾದ ಪಕ್ಷದಲ್ಲಿ ಹಿಂದೂಯಿಸಂನ ಅಸ್ತಿತ್ವ ಇರಲಿ ಅಥವಾ ಇಲ್ಲದೆ ಇರಲಿ ಅದನ್ನು ಹೊರತುಪಡಿಸಿಯೂ ವೀರಶೈವಿಸಂನ ಅಸ್ತಿತ್ವವನ್ನು ತೋರಿಸಲು ಸಾಧ್ಯವಾಗಬೇಕು, ಇಲ್ಲವೆಂದರೆ ವೀರಶೈವಿಸಂನ ಉಳಿವಿಗೆ ಹಿಂದೂಯಿಸಂ ಅಸ್ತಿತ್ವ ಅಥವಾ ಅಸ್ತಿತ್ವರಹಿತತೆಯು ಆಧಾರವಾಗುತ್ತದೆ ಎನ್ನುವುದನ್ನಾದರೂ ಸಾಧಿಸಿ ತೋರಿಸಬೇಕಾಗುತ್ತದೆ.
ವೀರಶೈವರಿಗೂ ತಮ್ಮದೇ ಆದ ಸ್ಪಷ್ಟವಾದ ಆಚಾರ ವಿಚಾರಗಳಿವೆ. ಆದ್ದರಿಂದ ಪ್ರತ್ಯೇಕ ಧರ್ಮವೆಂದು ಗುರುತಿಸಬೇಕು, ಹಿಂದೂ ಧರ್ಮದಲ್ಲಿರುವುದನ್ನು ಒಪ್ಪಿ ನಡೆಯಲು ಸಾಧ್ಯವಿಲ್ಲ ಎಂಬುದಾಗಿ ತಿಳಿಸುತ್ತಾರೆ. ಆದರೆ ನಮ್ಮ ಭಾರತೀಯ ಸಂಸ್ಕೃತಿಯ ತುಂಬೆಲ್ಲ ಹಲವು ಸಂಪ್ರದಾಯಗಳಿರುವುದನ್ನು ನಾವು ಕಾಣುತ್ತೇವೆ. ಬಹು ಸಂಸ್ಕೃತಿಗಳ ದೇಶವಾಗಿ ಭಾರತವನ್ನು ಗುರುತಿಸುತ್ತೇವೆ. ಈ ಒಂದೊಂದು ಸಂಪ್ರದಾಯಗಳಿಗೂ ತಮ್ಮದೇ ಆದ ನಿರ್ಧಿಷ್ಟವಾದ ಆಚಾರ-ವಿಚಾರಗಳಿವೆ. ಪ್ರತಿಯೊಂದು ಇನ್ನೊಂದರಿಂದ ಬೇರ್ಪಡಿಸಿಕೊಳ್ಳಲು ಇಚ್ಚಿಸುತ್ತವೆ. ಹಲವಾರು ಆಧ್ಯಾತ್ಮಿಕ ಸಂಪ್ರದಾಯಗಳಿದ್ದಂತೆ ವೀರಶೈವ ಸಂಪ್ರದಾಯವು ಇದೆ ಎಂದು ಹೇಳಿದರೆ ಅದರ ಕುರಿತು ಹೊಸ ಒಳನೋಟಗಳು ಉಗಮವಾಗಬಹುದು. ಆದರೆ ಈ ಮಾರ್ಗವನ್ನು ಬಿಟ್ಟು, ಹಿಂದೂ ಧರ್ಮದ ಭಾಗ ಅಥವಾ ಅಲ್ಲವೆಂದು ವಾದಿಸುವ ಮೂಲಕ ಏನನ್ನು ಸಾಧಿಸಲು ಸಾಧ್ಯ? ಈಗಾಗಲೇ ಮಠಗಳ ಸ್ವಾಮಿಗಳು ಸೇರಿದಂತೆ ಹಲವು ಚಿಂತಕರು ವೀರಶೈವಿಸಂನ್ನು ಪ್ರತ್ಯೇಕ ಧರ್ಮವೆಂದು(ರಿಲಿಜನ್) ಗುರುತಿಸಿದ್ದಾರೆ. ಹಾಗೆಯೆ ಇನ್ನೊಂದು ಕಡೆ ಅನೇಕ ಸಮ್ಮೇಳನಗಳನ್ನು ಮಾಡುವ ಮೂಲಕ, ವೀರಶೈವರನ್ನು ಪ್ರತ್ಯೇಕಗೊಳಿಸಬೇಕು, ಸ್ವತಂತ್ರ ಧರ್ಮವೆಂದು ಘೋಷಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿರುವುದನ್ನು ಕಾಣುತ್ತೇವೆ. ಒಂದು ವೇಳೆ ಮೇಲೆ ನೋಡಿದ ವಾದವನ್ನೇ(ಹಿಂದೂಯಿಸಂ ಅಸ್ತಿತ್ವದಲ್ಲಿ ಇಲ್ಲ) ಮುಂದೊತ್ತಿದರೆ, ಈ ಮುಂದಿನ ಮತ್ತೊಂದು ಸಂದಿಗ್ದ ನಮ್ಮ ಮುಂದೆ ಬರುತ್ತದೆ. ಹಿಂದೂ ಧರ್ಮವೇ ಇಲ್ಲದ ಮೇಲೆ ಮತ್ತು ವೀರಶೈವಿಸಂ ಸ್ವತಂತ್ರ ಧರ್ಮವೇ ಆದಮೇಲೆ ಅದನ್ನು ಯಾವುದರಿಂದ ಪ್ರತ್ಯೇಕಗೊಳಿಸಬೇಕು? ಹಾಗೂ ಯಾವುದರ ಭಾಗವಲ್ಲ ಎಂದು ನಡೆಯುತ್ತಿರುವ ಚರ್ಚೆಯ ಸ್ವರೂಪವೇನು? ಎಂಬುದೇ ಮತ್ತಷ್ಟು ಕಗ್ಗಾಂಟಾಗುತ್ತದೆ.
ವೀರಶೈವರ ಕುರಿತಾಗಿ ಮಾತನಾಡುತ್ತಿರುವ ಎರಡು ಕಡೆಯ ಚಿಂತಕರು ಅಂದರೆ ವೀರಶೈವರನ್ನು ಹಿಂದೂ ಧರ್ಮದ ಭಾಗವಾಗಿ ಮತ್ತು ಅದೊಂದು ಸ್ವತಂತ್ರ ಧರ್ಮವಾಗಿ ಚರ್ಚೆಗೊಳಗಾಗಿರುವ ಎರಡುವಾದಗಳು ಪರಸ್ಪರ ವಿರುದ್ಧವಾಗಿ ಕಂಡರೂ, ಅವೆರಡು ಒಂದೇ ಹಾದಿಯಲ್ಲಿಯೆ ಇವೆ ಎಂದು ಹೇಳಬಹುದು. ಪ್ರಸ್ತುತ ಚರ್ಚೆಯಲ್ಲಿ ವಿರೋಧಿ ಗುಂಪುಗಳು ತೆಗೆದುಕೊಳ್ಳುವ ಕಾರಣಗಳು, ತೋರಿಸುತ್ತಿರುವ ಲಕ್ಷಣಗಳನ್ನು ಗಮನಿಸಿದರೆ, ಇವುಗಳು ಸೆಮೆಟಿಕ್ ರಿಲಿಜನ್ಗಳನ್ನು ಮಾದರಿಯಾಗಿಟ್ಟುಕೊಂಡು ರಿಲಿಜನ್ ಚೌಕಟ್ಟಿನ ನೆಲೆಯಲ್ಲಿಯೆ ಮಾತನಾಡುತ್ತಿದ್ದಾರೆ ಎಂಬುದು ಮನವರಿಕೆಯಾಗುತ್ತದೆ. ಉದಾ: ಧರ್ಮಸ್ಥಾಪಕ, ಧರ್ಮಗ್ರಂಥ, ಆಚಾರ-ವಿಚಾರ ಮುಂತಾದವು. ಈ ಮೂಲಕವಾಗಿ ಎರಡು ಗುಂಪುಗಳು ಒಂದೇ ಮಾರ್ಗದಲ್ಲಿಯೆ ಇವೆ ಎಂಬುದು ಸ್ಪಷ್ಟ. ಇದರಿಂದ ಸಂಪ್ರದಾಯಗಳು ಮತ್ತು ಅವುಗಳ ಮೌಲ್ಯಗಳ ಕುರಿತು ಚರ್ಚೆಗಳು ಹೆಚ್ಚೆಚ್ಚು ಅಸ್ಪಷ್ಟವಾಗುತ್ತಾ ಹೋಗುತ್ತವೆ.
ಸಾಮಾನ್ಯ ಜನರ ಬದುಕಿಗೂ ಬೌದ್ಧಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳಿಗೂ ನಡುವೆ ಸಂಬಂಧವಿದೆಯೇ ಎಂದು ನೋಡಿದರೆ ಅದೂ ಸಹ ನಮಗೆ ಕಾಣಿಸುವುದಿಲ್ಲ. ಲಿಂಗಾಯತ ಸಮುದಾಯದ ಶ್ರೀ ಸಾಮಾನ್ಯರ ದಿನ ನಿತ್ಯ ಬದುಕಿನಲ್ಲಿ ತಮ್ಮ ಧರ್ಮದ ಕುರಿತಾಗಿ ಯಾವುದೇ ಪ್ರಶ್ನೆಗಳು ಮೂಡಿ ಗೊಂದಲಕ್ಕೊಳಗಾಗಿಲ್ಲ. ಮತ್ತು ಅವರ ಬದುಕಿಗೆ ಯಾವ ತರದ ತೊಂದರೆಯು ಆಗಿಲ್ಲ. ಅವರ ಬಳಿ ಹೋಗಿ ಲಿಂಗಾಯತ ಧರ್ಮ ಹಿಂದೂ ಧರ್ಮಕ್ಕಿಂತ ಭಿನ್ನವೇ? ನೀವು ಯಾವ ಧರ್ಮದವರು ನಿಮ್ಮದು ಜಾತಿಯೋ? ಧರ್ಮವೋ? ಎಂದು ಕೇಳಿದರೆ ಅವರು ಧರ್ಮ, ಜಾತಿ, ಮತ, ಕುಲ ಮುಂತಾದವಾಗಿ ವಿವರಿಸುತ್ತಾರೆ. ಇವ್ಯಾವ ವಿಷಯಗಳು ಅವರ ಬದುಕನ್ನು ಅವರ ಆಚಾರ ವಿಚಾರಗಳ ಮುಂದುವರಿಕೆಗೆ ಅಡ್ಡಿ ಪಡಿಸುತ್ತಿಲ್ಲ. ಆದರೂ ಬೌದ್ಧಿಕ ವಲಯದಲ್ಲಿ ಚರ್ಚೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಅಂದಮೇಲೆ ಇಲ್ಲಿ ಜನ ಸಾಮಾನ್ಯರ ಅನುಭವಕ್ಕೂ ಬೌದ್ಧಿಕ ವಲಯದ ಚರ್ಚೆಗಳ ನಡುವೆ ಎಲ್ಲೊ ಅಂತರವಿರುವಂತೆ ಕಾಣುತ್ತದೆ.
 ಒಟ್ಟಿನಲ್ಲಿ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಅನೇಕ ರೀತಿಯ ಗೊಂದಲಗಳು ಕಂಡು ಬರುತ್ತಿವೆ. ಆದರೆ, ಈ ಗೊಂದಲಗಳಿಗೆ ಕಾರಣವೇನು ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ.  ಈ ಗೊಂದಲಗಳು, ವಿರೋಧಭಾಸಗಳು, ದೋಷಗಳು ಏನೇ ಇದ್ದರೂ, ಹಿಂದೂಯಿಸಂನ ಅಸ್ತಿತ್ವದ ಕುರಿತು ಗಮನಹರಿಸಬೇಕಾಗಿದೆ. ಏಕೆಂದರೆ, ಈಗಾಗಲೇ ಕೆಲವು ಜನ ಚಿಂತಕರು ಮತ್ತು ಎಸ್.ಎನ್.ಬಾಲಗಂಗಾಧರರವರು ತಮ್ಮ ಸಿದ್ಧಾಂತದಲ್ಲಿ ಹಿಂದೂಯಿಸಂ ಎಂಬ ಒಂದು ರಿಲಿಜನ್ ಇಲ್ಲ. ಹಿಂದೂಯಿಸಂ ರಿಲಿಜನ್ ಅಲ್ಲ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸಿದ್ದಾರೆ. ಹೀಗಿದ್ದರೂ ಕೂಡ ವೀರಶೈವ ಲಿಂಗಾಯತರ ಕುರಿತಾಗಿ ನಡೆಯುತ್ತಿರುವ ಚರ್ಚೆಗಳು ಮಾತ್ರ ಏಕೆ ಹಿಂದುಯಿಸಂನ ಸುತ್ತವೆ ನಡೆಯುತ್ತಿವೆ? ಏಕೆ ಹಿಂದೂಯಿಸಂನ್ನು ಆಧಾರವಾಗಿಟ್ಟುಕೊಂಡೆ ವೀರಶೈವಿಸಂನ್ನು ಅಥವಾ ಲಿಂಗಾಯಿತಿಸಂನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ? ಹಿಂದೂಯಿಸಂ ಮತ್ತು ವೀರಶೈವಿಸಂನ ನಡುವೆ ಇವುಗಳ ಸಂಬಂಧಗಳ ಕುರಿತು ನಡೆಯುತ್ತಿರುವ ಚರ್ಚೆಗಳು ಏನನ್ನು ಸಮರ್ಥಿಸಲು ಹೊರಟಿವೆ? ಎಂಬುದು ಕೇವಲ ಪ್ರಶ್ನೆಗಳಾಗಿ ಉಳಿಯದೆ ಒಗಟಾಗಿಯೂ ಬದಲಾಗುತ್ತಿವೆ.

No comments:

Post a Comment

सिध्देश्वर स्वामीजी चराचरात

२० जानेवारी २०२३  बालगाव आश्रमात गुरुवंदना  ज्ञानयोगी श्री सिद्धेश्वर स्वामीजी लिंगैक्य झाल्यानिमित्त बालगाव - कात्राळ (ता. जत) येथील श्री ग...