ದಿನಾಂಕ
25.6.2013ರಂದು 'ಕನ್ನಡಪ್ರಭ'ದಲ್ಲಿ ಪ್ರಕಟವಾದ "ಮುಸ್ಲಿಮ್ ಆಕ್ರಮಣಕಾರರ ದಾಳಿಗೊಳಗಾದ
ಶರಣ ಕ್ಷೇತ್ರಗಳು" ಎಂಬ ಡಾ. ಎಂ. ಚಿದಾನಂದಮೂರ್ತಿಯವರ ಲೇಖನ ಪ್ರಕಟವಾಗಿದೆ. ಆ
ಲೇಖನದಲ್ಲಿ ಡಾ. ಜಯಶ್ರೀನಂಡೆ ಮತ್ತು ಡಾ. ವೀರಣ್ಣ ದೀಡೆಯವರ "12ನೇ ಶತಮಾನದ ಶರಣ
ಸ್ಮಾರಕಗಳು" ಎಂಬ ಕೃತಿಯನ್ನು ಆಧರಿಸಿ ಕರ್ನಾಟಕದಲ್ಲಿ ವೀರಶೈವರಿಗೆ ಪೂಜ್ಯವಾದ ಹಲವು
ಶರಣ ಕ್ಷೇತ್ರಗಳು ಮುಸ್ಲಿಮ್ ಆಕ್ರಮಣಕಾರರ ದಾಳಿಗೊಳಗಾಗಿರುವ ವಿಚಾರವನ್ನು ಅವರು
ಉಲ್ಲೇಖಿಸಿದ್ದಾರೆ. ಚಿದಾನಂದಮೂರ್ತಿಗಳ ಶರಣ ಕ್ಷೇತ್ರಗಳ ಬಗೆಗಿನ ಪ್ರೀತಿ, ಕಳಕಳಿ
ಪ್ರಶ್ನಾತೀತವಾದುದು ಹಾಗೂ ಪ್ರಶಂಸನೀಯವಾದುದು. ನಮ್ಮ ಮಂದಿರ ಮತ್ತು ಸ್ಮಾರಕಗಳ
ಮೇಲೆ ಮುಸ್ಲಿಂ ಆಕ್ರಮಣಕಾರರು ದಾಳಿ ಮಾಡಿದ ಕರಾಳ ಅಧ್ಯಾಯಗಳ ಮೇಲೆ ಅನೇಕ ಇತಿಹಾಸಕಾರರು
ಬೆಳಕು ಚೆಲ್ಲಿದ್ದಾರೆಂಬುದು ನಿಜ. ಆದರೆ ಆ ಆಕ್ರಮಣ ಅಂದಿಗೇ ಕೊನೆಯಾಯಿತು ಎಂದು ಹೇಳುವ
ಹಾಗಿಲ್ಲ. ಏಕೆಂದರೆ ಅದೇ ರೀತಿಯ, ಆದರೆ ಭಿನ್ನ ರೂಪದ ದಾಳಿಗಳು ಈಗಲೂ ನಿರಂತರವಾಗಿ
ನಡೆಯುತ್ತಿವೆ. ಅಂದು ಸ್ಮಾರಕಗಳ ಮೇಲೆ ದಾಳಿಯಾದರೆ, ಇಂದು ನಮ್ಮ ಸಂಸ್ಕೃತಿಯ ಮೇಲೆ
ದಾಳಿಯಾಗುತ್ತಿದೆ, ಅದೂ ಸಾಹಿತ್ಯದ ರೂಪದಲ್ಲಿ! ಈ ನಾಡಿನ ಪ್ರಾತಃಸ್ಮರಣೀಯರ ಬಗ್ಗೆ ಆಧಾರ
ರಹಿತ ವಿಚಾರಗಳನ್ನು ಬರೆದು ನಿರಂತರವಾಗಿ ತೇಜೋವಧೆ ಮಾಡಲಾಗುತ್ತಿದೆ. ನಾಡಿನ ಖ್ಯಾತ
ಸಂಶೋಧಕರಾದ ಚಿದಾನಂದಮೂರ್ತಿಯವರು ಇಂತಹ ಸಾಹಿತ್ಯಿಕ ದಾಳಿಗಳಿಗೆ ಸರಿಯಾದ ಉತ್ತರ
ಕೊಡಬೇಕು ಎಂಬ ಆಶಯದಿಂದ, ಕೆಲವು ವಿಚಾರಗಳನ್ನು ಅವರ ಗಮನಕ್ಕೆ ತರಲು ಬಯಸುತ್ತೇನೆ. ಬೀದರ್
ತಾಲೂಕಿನ ಅಷ್ಟೂರಿನಲ್ಲಿ ಅಲ್ಲಮಪ್ರಭುವಿನ ಸ್ಮಾರಕವು ಸುಲ್ತಾನ್ ಅಹ್ಮದ್ ಶಹಾವಲಿ
ಬಹಮನಿ ದರ್ಗಾ ಆಗಿ ಬದಲಾಗಿದೆ ಎಂದು ಡಾ. ಚಿದಾನಂದಮೂರ್ತಿ ತಮ್ಮ ಲೇಖನದಲ್ಲಿ
ತಿಳಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ ರಹಮತ್
ತರೀಕೆರೆಯವರ 'ಕರ್ನಾಟಕದ ಸೂಫಿಗಳು' ಕೃತಿಯಲ್ಲಿ ರಹಮತ್ ಅವರು 'ಬಿಜಾಪುರದ
ಅಷ್ಟೂರಿನಲ್ಲಿ ವಚನಕಾರ ಅಲ್ಲಮನ ಗೋರಿ ಇದೆ. ಬಹಮನಿ ಸುಲ್ತಾನರು ಅಭಿಮಾನದಿಂದ ಗೋರಿ
ಕಟ್ಟಿಸಿದರೆಂದು ಒಬ್ಬ ಶಾಲಾ ಮಾಸ್ತರ ಪುಸ್ತಕದಲ್ಲಿ ಬರೆದುದು ಗೊಂದಲ ಹೆಚ್ಚಾಗಲು
ಕಾರಣವಾಯಿತು' ಎಂದು ಹೇಳಿದ್ದಾರೆ. ಒಬ್ಬ ಅನಾಮಧೇಯ ಶಾಲಾ ಶಿಕ್ಷಕನ ಅನಾಮಧೇಯ ಕೃತಿಯ
ಆಧಾರದ ಮೇಲೆ ಬಿಜಾಪುರದ ಅಷ್ಟೂರಿನಲ್ಲಿ ಅಲ್ಲಮಪ್ರಭುವಿನ ಗೋರಿ ಇದೆ ಎಂದು
ಉಲ್ಲೇಖಿಸುವುದರ ಮೂಲಕ ರಹಮತ್- 'ಅಲ್ಲಮಪ್ರಭು ತಾನು ಶ್ರೀಶೈಲದ ಕದಳಿಯಲ್ಲಿ
ಐಕ್ಯವಾಗುತ್ತೇನೆಂದು ತನ್ನ ವಚನದ ಮೂಲಕ ಸಾರಿರುವುದು ಸುಳ್ಳು' ಎಂದು ಹೇಳುತ್ತಿದ್ದಾರಾ?
ಇಂತಹ ಸಂಗತಿಯನ್ನು ಬೇರೆ ಯಾವ ಮುಸ್ಲಿಮ ಗ್ರಂಥ ಹೇಳುತ್ತಿಲ್ಲ. ನಮ್ಮ ಕನ್ನಡನಾಡಿನ
ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಕೃತಿ ಸಾರುತ್ತಿದೆ!ಹಾವೇರಿ ಜಿಲ್ಲೆಯ
ಕರಜಗಿ ಗ್ರಾಮ ಹಿಂದೆ ಬ್ರಿಟಿಷರ ಕಾಲದಲ್ಲಿ ತಾಲೂಕು ಕೇಂದ್ರವಾಗಿದ್ದ ಸ್ಥಳ. ಅಲ್ಲಿ
ಗಾಂಧೀಜಿಯವರ ಚಿತಾಭಸ್ಮವಿರುವ ಒಂದು ಪವಿತ್ರ ಸ್ಥಾನವಿದೆ. ಆ ಗ್ರಾಮ ಧಾರ್ಮಿಕ
ಆಧ್ಯಾತ್ಮಿಕ ಕೇಂದ್ರವೆನ್ನುವುದಕ್ಕೆ ಸಾಕ್ಷಿಯಾಗಿ ಅಲ್ಲಿ ಸುಮಾರು ಮೂವತ್ತಕ್ಕಿಂತಲೂ
ಹೆಚ್ಚು ದೇವಸ್ಥಾನಗಳಿವೆ, ಅನೇಕ ಮಠಗಳಿವೆ. ಅಷ್ಟೇ ಅಲ್ಲದೇ ಸುತ್ತಮುತ್ತಲೂ ಯಾವ
ಗ್ರಾಮಗಳಲ್ಲಿ ಇಲ್ಲದ 'ನಾಥ' ಪಂಥಕ್ಕೆ ಸೇರಿದ ಸದ್ಭಾವನಾ ಮಠವಿದೆ. ಈ ಮಠಕ್ಕೆ
ಸಂಬಂಧಿಸಿದಂತೆ ರಹಮತ್ ತರೀಕೆರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ
ಪ್ರಕಟಿಸಿರುವ ತಮ್ಮ 'ಕರ್ನಾಟಕದ ನಾಥ ಪಂಥ' ಕೃತಿಯಲ್ಲಿ "ಹಿರಿಗ್ಲಜಾದೇವಿಯಿರುವ ಕರಜಗ
ನಾಥ ಮಠದಲ್ಲಿ ಈಗಲೂ ಚಕ್ರಪೂಜೆಯಿದೆ. ಒಬ್ಬ ಯೋಗಿನಿಯ ಸಮಾಧಿಯಿದೆ. ನಾಥರು ಭೈರವಚಕ್ರ
ಎಂಬ ಚಕ್ರಪೂಜೆ ಮಾಡುತ್ತಿದ್ದರು. ಚಕ್ರ ಸಾಧನೆಯಲ್ಲಿ ಜಾತಿ ಭೇದವಿಲ್ಲ. ಗಂಡು ಹೆಣ್ಣುಗಳ
ಭೇದವಿಲ್ಲ. ಇದರಲ್ಲಿ 8 ಅಥವಾ 10 ಗಂಡು ಹೆಣ್ಣುಗಳ ಜೋಡಿ ಭಾಗವಹಿಸಬಹುದು. ಚಕ್ರ
ಪೂಜೆಯಲ್ಲಿ ಗಂಡು ಹೆಣ್ಣುಗಳು ಭೈರವ ಭೈರವಿಯಾಗುತ್ತಾರೆ. ಭೈರವಿಯ ಪೂಜೆ ನಂತರ ಭೈರವ
ತನ್ನನ್ನು ತಾನೇ ಪೂಜಿಸಿಕೊಳ್ಳುತ್ತಾನೆ. ಮದ್ಯ, ಮಾಂಸ ಮುಂತಾದ ಸೇವನೆಯಾಗುತ್ತದೆ. ನಂತರ
ಭೈರವನು ಭೈರವಿಗೆ ನಮಸ್ಕರಿಸಿ 'ತಾಯಿ, ಬ್ರಹ್ಮಾನಂದಕ್ಕೆ ಅವಕಾಶ ಮಾಡಿಕೊಡು' ಎಂದು
ಪ್ರಾರ್ಥಿಸುತ್ತಾನೆ. ಆನಂತರ 9 ಬಗೆಯ ರತಿಕ್ರೀಡೆಗಳು ನಡೆಯುತ್ತವೆ ಎಂದು ಹೇಳುತ್ತಾರೆ.
ಆದರೆ ಕರಜಗಿ ಸದ್ಭಾವನಾ ನಾಥ ಪಂಥ ಮಠದ ಗುರುಗಳಾದ ಶ್ರೀ ಯೋಗಿ ರಾಮನಾಥರವರು 'ಅಂತಹ
ಚಕ್ರಪೂಜೆ ನಮ್ಮ ಮಠದಲ್ಲಿ ಹಿಂದೆಯೂ ನಡೆದಿಲ್ಲ ಈಗಲೂ ನಡೆಯುತ್ತಿಲ್ಲ' ಎಂದು ದಿನಾಂಕ
10.06.2013ರಂದು ಕರಜಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ
ಸ್ಪಷ್ಟವಾಗಿ ತಿಳಿಸಿದ್ದಾರೆ. ಮಹಾತ್ಮ ಗಾಂಧೀಜಿಯ ಚಿತಾಭಸ್ಮದ ಸ್ಥಾನವಿರುವ ಸರ್ವಜನಾಂಗದ
ಧಾರ್ಮಿಕ, ಆಧ್ಯಾತ್ಮಿಕ, ಆರಾಧನೆಯ ಕೇಂದ್ರವಾದ ಕರಜಗಿಯಲ್ಲಿ 'ಚಕ್ರಪೂಜೆ" ಯಂತಹ
ಅನಾಗರಿಕ ಸಂಸ್ಕೃತಿಯ ಆಚರಣೆ ಈಗಲೂ ನಡೆಯುತ್ತಿದೆ ಎಂದು ಹಂಪಿ ಕನ್ನಡ ವಿ.ವಿ. ತನ್ನ
ಕೃತಿಯ ಮೂಲಕ ಸಾರಿ ಆ ಗ್ರಾಮದ ಸಂಸ್ಕೃತಿಗೆ ಕಳಂಕ ತರುತ್ತಿದೆ. ಕನ್ನಡನಾಡು, ನುಡಿ,
ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ವಿಶ್ವಕ್ಕೆ ಪರಿಚಯಿಸುವ ಹೆಬ್ಬಯಕೆಯಿಂದ ಜನ್ಮ ತಾಳಿದ
ಹಂಪಿ ಕನ್ನಡ ವಿ.ವಿ. ಮಾಡುತ್ತಿರುವ ಕೆಲಸವಿದು.ಹಂಪಿ ಪರಿಸರದ ಕಮ್ಮಟದುರ್ಗ
(ಕಂಪ್ಲಿ) ಕಂಪಿಲರಾಯನ ಮಗ ಕುಮಾರರಾಮ ಕನ್ನಡದ ಒಬ್ಬ ಗಂಡುಗಲಿ, ಇಂತಹ ಕುಮಾರ ರಾಮನನ್ನು
ಒಬ್ಬ ರಾಕ್ಷಸ ಎಂದು ಕೃತಿಯ ಮೂಲಕ ರಹಮತ್ ತರೀಕೆರೆ (ಕರ್ನಾಟಕದ ಸೂಫಿಗಳು) ಸಾಹಿತ್ಯ
ಪ್ರಪಂಚಕ್ಕೆ ಸಾರುತ್ತಿದ್ದಾರೆ. ಈ ಕೃತಿಯನ್ನು ಹಂಪಿ ವಿ.ವಿ.ಯೇ ಪ್ರಕಟಿಸಿದೆ. ರಹಮತ್
ತರೀಕೆರೆ 'ಕರ್ನಾಟಕದ ಸೂಫಿಗಳು' ಕೃತಿಯಯಲ್ಲಿ 'ಕುಮಾರ ರಾಮನನ್ನು ಕೊಂದುದು ಸೂಫಿ
ಸರ್ಮಸ್ಥನ ಮಗಳು ತರ್ಕಿಷ್‌ಬಿ ಎಂಬ ಮುಸ್ಲಿಮ್ ಮಹಿಳೆ' ಎನ್ನುತ್ತಾರೆ. ಲೇಖಕರ ಈ ಅಲಿಖಿತ
ಹೇಳಿಕೆ ಚರಿತ್ರೆಗೆ ಪೂರವಾಗಿದೆಯೋ? ಮಾರಕವಾಗಿದೆಯೋ?ಇನ್ನು ಇದೇ ವಿ.ವಿ.
ಪ್ರಕಟಿಸಿರುವ 'ಕರ್ನಾಟಕ ನಾಥ ಪಂಥ' ಎಂಬ ಕೃತಿಯಲ್ಲಿ ಡಾ. ರಹಮತ್ ತರೀಕೆರೆಯವರು
"ಕೊಲ್ಲೂರು (ಕುಂದಾಪುರ), ಕೋಲಾರ, ಕೊಲ್ಲಾಪುರ ಮುಂತಾದ ಶಕ್ತಿ ದೇವತೆಗಳ ಜಾಗಗಳಿಗೂ
ಕೌಳಪಂಥಕ್ಕೂ ಸಂಬಂಧವಿದೆ. ಶಂಕರರು ಕೊಲ್ಲೂರಿನಲ್ಲಿ ಚಕ್ರ ಪೂಜೆ ಆರಂಭಿಸಿದರು' ಎಂದು
ಉಲ್ಲೇಖಿಸಿದ್ದಾರೆ. ವೈಷ್ಣ ಪಂಥಾನುಯಾಯಿ ಜಗದ್ಗುರು ಶಂಕರಾಚಾರ್ಯರು ಅದ್ವೈತ
ಸಿದ್ಧಾಂತದವರು. ಇವರು ಶೈವ ಪಂಥದ ಅನುಯಾಯಿಯಾದ ನಾಥಪಂಥದ ಆಚರಣೆಯಾದ ಚಕ್ರಪೂಜೆ
ಆರಂಭಿಸಿದರು ಎನ್ನಲಾಗುತ್ತಿದೆ ಎಂಬುದು ನಂಬಲರ್ಹ ಸಂಗತಿಯೇ?! ಹೀಗೆ ಒಂದು ಪಂಥ ಅಥವಾ
ಸಿದ್ಧಾಂತದಲ್ಲಿ ಇಲ್ಲದೇ ಇರುವ ಆಚರಣೆಯನ್ನು ಇದೇ ಎಂದು ಸಾರುತ್ತಿರುವ ಇಂತಹ ಕೃತಿ
ಪ್ರಕಟಣೆಯ ಬಗೆಗೆ ಮತ್ತು ಆಧಾರರಹಿತವಾಗಿ ಜಗದ್ಗುರು ಶಂಕರಾಚಾರ್ಯರ ಹೆಸರಿಗೆ ಕಳಂಕ
ತರುತ್ತಿರುವ ರಹಮತ್ ತರೀಕೆರೆಯವರಿಗೆ ಏನನ್ನಬೇಕು?ಕರ್ನಾಟಕದ ನಾಥಪಂಥ
ಕೃತಿಯಲ್ಲಿ ರಹಮತ್, 'ಶರಣರು, ಆರೂಢರು, ಸೂಫಿಗಳು, ಗುರು ಪಂಥಗಳಿಗೆ ಸೇರಿದವರಾದರೂ
ಸಂಸಾರಿಗಳು. ಸಂಸಾರಿಗಳಾದರೂ ಸಂಸಾರ ವಿರೋಧಿ ನೆಲೆಯುಳ್ಳವರು. ಗುರುಪಂಥಗಳಲ್ಲಿ ಸಂಸಾರ,
ಹೆಣ್ಣು, ಲೌಕಿಕಗಳ ಬಗೆಗೆ ಅನುಮಾನ ದ್ವಂದ್ವ ಕಡೆಗೂ ಉಳಿದು ಬಿಡುತ್ತವೆ"
ಎನ್ನುತ್ತಿದ್ದಾರೆ. ಅಂದರೆ ಶರಣರು ಸಂಸಾರಿಗಳಾದರೂ ಅವರು ಸಂಸಾರ ವಿರೋಧಿ
ನೆಲೆಯುಳ್ಳವರಾಗಿದ್ದರು ಎಂಬ ಹೊಸ ವಿಚಾರವನ್ನು ಹುಟ್ಟುಹಾಕುತ್ತಿದ್ದಾರೆ ಇವರು. ಹೀಗೆ
ಮಾಡುವುದು ಶರಣರ ವ್ಯಕ್ತಿತ್ವದ ತೇಜೋವಧೆಯಾಗುವುದಿಲ್ಲವೆ? 'ಕರ್ನಾಟಕದ
ಸೂಫಿಗಳು' ಕೃತಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಮೂರು ಆವೃತ್ತಿಗಳಲ್ಲಿ
ಪ್ರಕಟಿಸಿದೆ. ಎರಡನೇ ಆವೃತ್ತಿಯಲ್ಲಿ, 'ಮಡಿಕೇರಿಯಲ್ಲಿ ಕೊಡಗಿನ ಅರಸು 2ನೇ ಲಿಂಗರಾಜನು
ಕಟ್ಟಿಸಿದ ಓಂಕಾರೇಶ್ವರ ಗುಡಿಯು ಥೇಟ್ ಮಸೀದಿಯಂತೆ ಇದೆ' ಎನ್ನುತ್ತಾರೆ ಲೇಖಕರು. ಈ
ಬಗ್ಗೆ ಆಧಾರ ನೀಡುವಂತೆ ಪತ್ರ ಬರೆದಾಗ, ಅದಕ್ಕೆ ಉತ್ತರಿಸಿದ ರಹಮತ್, 'ನಾನು ಅದನ್ನು
ಮಸೀದಿಯೆಂದು ಕರೆದಿಲ್ಲ, ಮಸೀದಿಯಂತೆ ತೋರುತ್ತದೆ' ಎಂದು ಬರೆದಿದ್ದೇನೆಂದು ತಿಳಿಸಿದರು.
ಆದರೆ ಅವರದೇ ಮೂರನೇ ಆವೃತ್ತಿಯಲ್ಲಿ 'ಮಸೀದಿ ಆಕಾರದಲ್ಲಿದೆ' ಎಂದು ಉಲ್ಲೇಖಿಸಿದ್ದಾರೆ.
'ಓಂಕಾರೇಶ್ವರ ಗುಡಿಯನ್ನು' ಥೇಟು ಮಸೀದಿಯಂತೆ ಇದೆ, ಮಸೀದಿಯಂತೆ ಕಾಣಿಸುತ್ತದೆ, ಮಸೀದಿ
ಆಕಾರದಲ್ಲಿದೆ ಎನ್ನುವುದರ ಮೂಲಕ ಆ ಭವ್ಯವಾದ ಮಂದಿರವನ್ನು ಮಸೀದಿ ಮಾಡಲು
ಹೊರಟಿದ್ದಾರೆ. ಇಂತಹ ಕೃತಿಯನ್ನು ಯಾವುದೇ ಮುಸ್ಲಿಮ್ ವಿಶ್ವವಿದ್ಯಾಲಯವಾಗಲಿ, ಅಥವಾ
ಮುಸ್ಲಿಮ್ ಸಂಘಟನೆಗಳಾಗಲಿ ಪ್ರಕಟಿಸಿಲ್ಲ. ನಮ್ಮ ಹಂಪಿ ಕನ್ನಡ ವಿ.ವಿ. ಪ್ರಕಟಿಸಿದೆ! ನಮ್ಮ
ವಿಶ್ವವಿದ್ಯಾಲಯದ ಒಬ್ಬ ಪ್ರಾಧ್ಯಾಪಕ ತನ್ನ ಕೃತಿಯಲ್ಲಿ 'ಕರ್ನಾಟಕ ಚರಿತ್ರೆಕಾರರ,
ಕನ್ನಡ ಸಂಸ್ಕೃತಿ, ಚಿಂತಕರ ಶೈಲಿ ಅಳುಮೋರೆ ಶೈಲಿ' ಎಂದು ಜರಿಯುತ್ತಿರುವ, 'ಕುಮಾರರಾಮ
ಒಬ್ಬ ರಾಕ್ಷಸ', 'ಲಿಂಗದೀಕ್ಷೆ ನೀಡುವುದು ಮತಾಂತರಿಸಲು', 'ಶಂಕರಾಚಾರ್ಯರು
ಕೊಲ್ಲೂರಿನಲ್ಲಿ ಚಕ್ರ ಪೂಜೆ ಆರಂಭಿಸಿದರು', 'ತರೀಕೆರೆ ಒಂದು ಹಳ್ಳಿಯಲ್ಲಿ 'ಕಾರ್ಯ'
ಎಂಬ ಅಸಂಸ್ಕೃತ ಆಚರಣೆ ಇದೆ' ಮುಂತಾದ ಅಚಾರಿತ್ರಿಕ, ಅಸಾಂಸ್ಕೃತಿಕ ವಿಚಾರಗಳನ್ನು
ಪ್ರಜಾಪ್ರಭುತ್ವದ ಈ ಕಾಲದಲ್ಲಿ ಬಿತ್ತಿ ಸಾಮರಸ್ಯಕ್ಕೆ ಭಂಗ ಉಂಟು ಮಾಡುತ್ತಿದ್ದಾರೆ.
ಅಂದು ಆಕ್ರಮಣಕಾರರು ನಮ್ಮ ಸ್ಮಾರಕಗಳ ಮೇಲೆ ದಾಳಿ ಮಾಡಿದರು, ಇಂದು ಇಂಥ ಲೇಖಕರು ನಮ್ಮ
ಸಂಸ್ಕೃತಿಯ ಮೇಲೆ ಸಾಹಿತ್ಯದ ಮೂಲಕ ದಾಳಿ ಮಾಡುತ್ತಿದ್ದಾರೆ. -ಎಸ್. ಮಲ್ಲಿಕಾರ್ಜುನಪ್ಪಸಂಚಾಲಕ, ಕನ್ನಡ ಜಾಗೃತಿ ಕೇಂದ್ರ, ದಾವಣಗೆರೆ
No comments:
Post a Comment